Homeಕರ್ನಾಟಕ9 ಗಿಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳ ಅನುಷ್ಠಾನ : ಇಂಧನ ಸಚಿವ ಕೆ.ಜೆ. ಜಾರ್ಜ್...

9 ಗಿಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳ ಅನುಷ್ಠಾನ : ಇಂಧನ ಸಚಿವ ಕೆ.ಜೆ. ಜಾರ್ಜ್ ಹರ್ಷ

ಅನುಷ್ಠಾನ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯುತ್ ಸಾಮರ್ಥ್ಯ ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ರಾಜ್ಯದಲ್ಲಿ 9 ಗಿಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳು ಅನುಷ್ಠಾನದ ಹಂತದಲ್ಲಿದ್ದು, ಈ ಸಾಧನೆಗಾಗಿ ಕರ್ನಾಟಕಕ್ಕೆ 2026ನೇ ಸಾಲಿನ ಪ್ರಶಸ್ತಿ ಲಭಿಸಿದೆ.

ಚೆನ್ನೈನ ಟ್ರೇಡ್ ಸೆಂಟರ್‌ನಲ್ಲಿ ಇಂಡಿಯನ್ ವಿಂಡ್ ಟರ್ಬೈನ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಯೋಜಿಸಿರುವ ‘ವಿಂಡರ್ಜಿ ಇಂಡಿಯಾ 2026’ರ 8ನೇ ಆವೃತ್ತಿಯಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರಿಂದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕ್ರೆಡಲ್) ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಜಿ.ಆರ್.ಜೆ. ಅವರು ಪ್ರಶಸ್ತಿ ಸ್ವೀಕರಿಸಿದರು.

ರಾಜ್ಯದಲ್ಲಿ ಪವನ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸಲು ಕೈಗೊಂಡಿರುವ ನಿರಂತರ ಪ್ರಯತ್ನಗಳು ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ನೀಡಿರುವ ಆದ್ಯತೆಗೆ ಈ ಪ್ರಶಸ್ತಿ ಮಾನ್ಯತೆ ನೀಡಿದೆ.

ಸಾಧನೆಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಹರ್ಷ

ಕರ್ನಾಟಕದ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ ಅನುಷ್ಠಾನ ಹಂತದಲ್ಲಿರುವ ಗರಿಷ್ಠ ಪವನ ವಿದ್ಯುತ್ ಸಾಮರ್ಥ್ಯ ಹೊಂದಿರುವ ರಾಜ್ಯವೆಂಬ ಮಾನ್ಯತೆ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.

ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಬಳಕೆಯ ಬಗ್ಗೆ ರಾಜ್ಯ ಸರ್ಕಾರ ಹೊಂದಿರುವ ಬದ್ಧತೆ ಹಾಗೂ ಈ ವಲಯದಲ್ಲಿ ಹೂಡಿಕೆಗೆ ಪೂರಕವಾದ ಪರಿಸರ ವ್ಯವಸ್ಥೆ ರೂಪಿಸಲು ಕೈಗೊಂಡಿರುವ ಕ್ರಮಗಳು ಈ ಸಾಧನೆಗೆ ಕಾರಣವಾಗಿವೆ. ಇದಕ್ಕಾಗಿ ಕ್ರೆಡಲ್ ಮತ್ತು ಎಲ್ಲ ಪಾಲುದಾರರನ್ನು ಅಭಿನಂದಿಸಿರುವ ಅವರು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸುವ ಪ್ರಯತ್ನಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಹೇಳಿದ್ದಾರೆ.

ಹೂಡಿಕೆದಾರರ ವಿಶ್ವಾಸಕ್ಕೆ ಸಾಕ್ಷಿ

ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಕೈಗೊಂಡಿರುವ ನಿರಂತರ ಪ್ರಯತ್ನಗಳ ಫಲವಾಗಿ ಪ್ರಶಸ್ತಿ ದೊರೆತಿದೆ ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದ್ದಾರೆ.

ರಾಜ್ಯದ ನವೀಕರಿಸಬಹುದಾದ ಇಂಧನ ನೀತಿಗಳು, ಮೂಲಸೌಕರ್ಯ ಮತ್ತು ಹೂಡಿಕೆದಾರರ ವಿಶ್ವಾಸಕ್ಕೆ ಈ ಮಾನ್ಯತೆ ಸಾಕ್ಷಿಯಾಗಿದೆ. ನಿಗದಿತ ಸಮಯದಲ್ಲಿ ಯೋಜನೆಗಳ ಅನುಷ್ಠಾನಕ್ಕೆ ನೆರವಾಗುವುದರ ಜತೆಗೆ ನವೀಕರಿಸಬಹುದಾದ ಇಂಧನ ವಲಯವನ್ನು ಮತ್ತಷ್ಟು ಬಲಪಡಿಸಲು ಇಂಧನ ಇಲಾಖೆ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಜಿ.ಆರ್.ಜೆ. ಮಾತನಾಡಿ, ಇಂಧನ ಸಚಿವರ ಮಾರ್ಗದರ್ಶನ ಮತ್ತು ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಪವನ ವಿದ್ಯುತ್ ವಲಯದಲ್ಲಿ ಹೂಡಿಕೆಗೆ ಆದ್ಯತೆಯ ತಾಣವಾಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಈ ಪ್ರಶಸ್ತಿ ಸಹಕಾರಿಯಾಗಲಿದೆ. ಹೂಡಿಕೆದಾರರು ಮತ್ತು ಯೋಜನೆಗಳಿಗೆ ಅಗತ್ಯ ಸಹಕಾರ ನೀಡುವ ಮೂಲಕ ನವೀಕರಿಸಬಹುದಾದ ಇಂಧನ ಕ್ಷೇತ್ರದ ಗುರಿಗಳನ್ನು ಸಾಧಿಸಲು ಕ್ರೆಡಲ್ ತನ್ನ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದು ಅವರು ಹೇಳಿದ್ದಾರೆ.

ಜಾಗತಿಕ ವೇದಿಕೆಯಲ್ಲಿ ಪವನ ವಿದ್ಯುತ್ ಕ್ಷೇತ್ರದ ಚರ್ಚೆ

ಮೂರು ದಿನಗಳ ‘ವಿಂಡರ್ಜಿ ಇಂಡಿಯಾ 2026’ ಕಾರ್ಯಕ್ರಮವು ನೀತಿ ನಿರೂಪಕರು, ಜಾಗತಿಕ ತಂತ್ರಜ್ಞಾನ ಕ್ಷೇತ್ರದ ನಾಯಕರು, ಹೂಡಿಕೆದಾರರು ಮತ್ತು ಉದ್ಯಮದ ಪಾಲುದಾರರಿಗೆ ಸಂವಾದ ನಡೆಸಲು ವೇದಿಕೆ ಕಲ್ಪಿಸಿತು. 3,000ಕ್ಕೂ ಹೆಚ್ಚು ಜಾಗತಿಕ ಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮವು ಪವನ ವಿದ್ಯುತ್ ಕ್ಷೇತ್ರದ ಬೆಳವಣಿಗೆ, ತಂತ್ರಜ್ಞಾನ ಮತ್ತು ಹೂಡಿಕೆಯ ಅವಕಾಶಗಳ ಕುರಿತು ಚರ್ಚೆಗೆ ಅವಕಾಶ ಮಾಡಿಕೊಟ್ಟಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments