ಎಲ್ ನಿ ನೋ ಪ್ರಭಾವದಿಂದ ಎದುರಾಗಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ಜಲ ಸಂಕಷ್ಟ ಅರಿತು ಗ್ರಾಮೀಣ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಪಿರಿಯಾಪಟ್ಟಣದಲ್ಲಿಂದು ನಡೆದ ಪ್ರಜಾಸೇವೆ -ಮನೆ ಬಾಗಿಲಿಗೆ ಸರ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 207 ತಾಲೂಕುಗಳಲ್ಲಿ ಬರಪರಿಸ್ಥಿತಿ ಇದ್ದು, ಮಳೆಗಾಲದಲ್ಲೇ ಕೊಳವೆ ಬಾವಿ, ತೆರೆದ ಬಾವಿ ಬತ್ತಿ ಹೋಗುತ್ತಿದೆ. ನದಿ, ಸರೋವರ, ಕೆರೆಗಳು ಬರಿದಾಗುತ್ತಿವೆ. ಮುಂಬರುವ ಮೇ ತಿಂಗಳವರೆಗೆ ಗ್ರಾಮೀಣ ಪ್ರದೇಶದಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ಮನಗಂಡು ಈಗಿನಿಂದಲೇ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 117 ಕೋಟಿ ರೂ. ಬಿಡುಗಡೆ ಮಾಡಿದ್ದರು. ಈಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ ತಲಾ 1 ಕೋಟಿ ರೂ.ನಂತೆ 189 ಕೋಟಿ ರೂ. ಹಂಚಿಕೆ ಮಾಡಿದ್ದು ಗ್ರಾಮೀಣ ಕುಡಿಯುವ ನೀರಿಗೆ ಒಟ್ಟಾರೆ 306 ಕೋಟಿ ರೂ. ಲಭ್ಯವಿದೆ. ಹಲವು ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ, ಕುಡಿಯುವ ನೀರಿನ ಪೂರೈಕೆಗೆ ಹಣದ ಕೊರತೆ ಇಲ್ಲ ಎಂದು ತಿಳಿಸಿದರು.
ಯಾವುದೇ ಗ್ರಾಮದಲ್ಲಿ ಕೊಳವೆ ಬಾವಿ ಬತ್ತಿ ಹೋಗಿದ್ದರೆ, ನೀರು ಪೂರೈಕೆಯಲ್ಲಿ ಅಡಚಣೆ ಆಗಿದ್ದರೆ 24 ಗಂಟೆಗಳ ಒಳಗಾಗಿ ನೀರಿನ ಸಮಸ್ಯೆ ಪರಿಹರಿಸುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣ ಇದ್ದು, ಸರ್ಕಾರ ಬರ ಪರಿಸ್ಥಿತಿ ಎದುರಿಸಲು ಸಂಪೂರ್ಣ ಸನ್ನದ್ಧವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಗುಳೆ ತಡೆಯುವಲ್ಲಿ ವಿಬಿಜಿ ರಾಮ್ ಜಿ ಕೆಲಸ
ಬರ ಪರಿಸ್ಥಿತಿಯ ಸಂದರ್ಭದಲ್ಲಿ ಯಾರೂ ಉದ್ಯೋಗ ಅರಸಿ ನಗರಗಳಿಗೆ ಗುಳೆ ಹೋಗದಂತೆ ತಡೆಯಲು ಗ್ರಾಮೀಣ ಉದ್ಯೋಗ ಖಾತ್ರಿ ವಿಬಿಜಿ ರಾಮ್ ಜಿ ಅಡಿ ಇರುವಲ್ಲೇ ಕೆಲಸ ನೀಡಲಾಗುತ್ತಿದೆ ಎಂದು ತಿಳಿಸಿದ ಈಶ್ವರ ಖಂಡ್ರೆ, ಕೇಂದ್ರ ಸರ್ಕಾರ ಹಿಂದೆ ಇದ್ದ ಮನ್ರೇಗಾದಲ್ಲಿ ಮಹಾತ್ಮಾ ಗಾಂಧೀ ಹೆಸರೇ ತೆಗೆದುಹಾಕಿದೆ. ಜೊತೆಗೆ ಮನ್ರೆಗಾದಲ್ಲಿದ್ದ 90:10ಅನುಪಾತ ಕೈಬಿಟ್ಟು, 60:40 ಅನುಪಾತ ಮಾಡಿದೆ. ಇದರಿಂದ ರಾಜ್ಯ ಸರ್ಕಾರಗಳ ಮೇಲೆ ಹೊರೆ ಆಗುತ್ತಿದೆ. ಆದಾಗ್ಯೂ ಗ್ರಾಮೀಣ ದಲಿತರು, ವಂಚಿತರು, ದುರ್ಬಲ ಮಹಿಳೆಯರು, ಭೂರಹಿತ ಕೂಲಿ ಕಾರ್ಮಿಕರ ನೆರವಿಗೆ ನಿಲ್ಲಲು ರಾಜ್ಯ ಸರ್ಕಾರ ವಿಬಿಜಿ ರಾಮ್ ಜಿ ಜಾರಿಗೆ ತಂದಿದೆ ಎಂದರು.
ಹಿಂದೆ ರಾಜ್ಯ ಸರ್ಕಾರ 500 ಕೋಟಿ ಕೊಟ್ಟರೆ ಕೇಂದ್ರದಿಂದ 5000 ಕೋಟಿ ಬರುತ್ತಿತ್ತು. ಈಗ ಕೇಂದ್ರ ಸರ್ಕಾರ 5900 ಕೋಟಿ ರೂ. ಕೊಟ್ಟರೆ, ರಾಜ್ಯ ಸರ್ಕಾರ 3800 ಕೋಟಿ ರೂ. ನೀಡಬೇಕಾಗುತ್ತದೆ. ಇದರಿಂದ ಹೆಚ್ಚಿನ ಹೊರೆ ಆಗುತ್ತಿದೆ. ಆದಾಗ್ಯೂ ಮುಖ್ಯಮಂತ್ರಿಗಳು 3800 ಕೋಟಿ ರೂ. ಅನುದಾನ ನೀಡಿ ಯೋಜನೆ ಜಾರಿಗೆ ಸಹಕರಿಸಿದ್ದಾರೆ ಎಂದು ಹೇಳಿದರು.
ಕೇಂದ್ರದ ಬೆಲೆ ಏರಿಕೆ ಹೊರೆಗೆ ಗ್ಯಾರಂಟಿ ಯೋಜನೆ ಆಸರೆ:
ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಳ ಮಾಡಿದ್ದು, ಜನ ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ಆರ್ಥಿಕ ಶಕ್ತಿ ನೀಡಲು ಗ್ಯಾರಂಟಿ ಯೋಜನೆ ಆರಂಭಿಸಲಾಗಿದ್ದು, ಕೇಂದ್ರದ ಬೆಲೆ ಏರಿಕೆ ನಿಭಾಯಿಸಲು ನಮ್ಮ ಗ್ಯಾರಂಟಿಗಳು ಆಸರೆಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರುಗಳಾದ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.


