Homeಕರ್ನಾಟಕಕೆಪಿಎಸ್ಸಿ ಮುಚ್ಚುವ ಸಿಎಂ ಹೇಳಿಕೆ ಬುದ್ಧಿಗೇಡಿತನ, ಹೊಣೆಗೇಡಿತನ, ಅಜ್ಞಾನದ ಪರಮಾವಧಿ: ಎಚ್ ಡಿ ಕುಮಾರಸ್ವಾಮಿ

ಕೆಪಿಎಸ್ಸಿ ಮುಚ್ಚುವ ಸಿಎಂ ಹೇಳಿಕೆ ಬುದ್ಧಿಗೇಡಿತನ, ಹೊಣೆಗೇಡಿತನ, ಅಜ್ಞಾನದ ಪರಮಾವಧಿ: ಎಚ್ ಡಿ ಕುಮಾರಸ್ವಾಮಿ

ಕೆಪಿಎಸ್‌ಸಿಯನ್ನು ಮುಚ್ಚಲು ಕಾನೂನು ತಜ್ಞರ ಜತೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಮುಖ್ಯಮಂತ್ರಿಗೆ ಶಾಸನದ ಮಹತ್ವವೇ ಗೊತ್ತಿಲ್ಲದಂತಿದೆ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಕರ್ನಾಟಕ ಲೋಕಸೇವಾ ಆಯೋಗ (KPSC) ವನ್ನು ಶಾಸನಬದ್ಧವಾಗಿ ಮುಚ್ಚುತ್ತೇವೆ ಎನ್ನುವ ಮುಖ್ಯಮಂತ್ರಿ ಹೇಳಿಕೆ ಕೇವಲ ಹತಾಶೆಯಿಂದಷ್ಟೇ ಕೂಡಿಲ್ಲ, ಅದು ಬುದ್ಧಿಗೇಡಿತನ, ಹೊಣೆಗೇಡಿತನ ಮತ್ತು ಅಜ್ಞಾನದ ಪರಮಾವಧಿ. ಇವರ ವರಸೆ ಹೇಗಿದೆ ಎಂದರೆ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ!’; ‘ನೆಗಡಿ ಬಂದರೆ ಮೂಗಿಗೇ ಕತ್ತರಿ ಹಾಕಿದಂತೆ!!’ ಎಂದು ಲೇವಡಿ ಮಾಡಿದ್ದಾರೆ.

ಕೆಪಿಎಸ್ಸಿ ಸಂಸ್ಥೆ ಚೆನ್ನಾಗಿಯೇ ಇದೆ, ಕೆಟ್ಟ ಜನ ಬಂದು ಕೂತಿದ್ದಾರಷ್ಟೇ. ಬೇಲಿಯೇ ಹೊಲ ಮೇಯುತ್ತಿದೆ. ಅಲ್ಲಿಗೆ ಖದೀಮರನ್ನು ನೇಮಕ ಮಾಡಿದ್ದು ಯಾರು? ವಸೂಲಿಗೆ ಅಂಗಡಿ ತೆರೆಯಲು ಅವಕಾಶ ಕೊಟ್ಟಿದ್ದು ಯಾರು? ವಿಧಾನಸೌಧದ 3ನೇ ಮಹಡಿಯಲ್ಲಿ ಕೂತವರೇ ಎಸಗಿದ ಪಾಪವಲ್ಲವೇ ಇದು? ಆ ಲೆಕ್ಕಕ್ಕೆ ಬಂದರೆ ವಿಧಾನಸೌಧವನ್ನೇ ಮುಚ್ಚಬೇಕು. ನಿಮ್ಮ ಸಾರಥ್ಯದಲ್ಲಿ ಅದೂ ನಡೆದುಹೋಗಲಿ ಎಂದು ಮುಖ್ಯಮಂತ್ರಿಗೆ ಕೇಂದ್ರ ಸಚಿವರು ಟಾಂಗ್ ನೀಡಿದ್ದಾರೆ.

ಬೇಜವಾಬ್ದಾರಿಯಿಂದ ಚಪಲಕ್ಕೆ ನಾಲಿಗೆ ಜಾರುವ ಮೊದಲು ಕೆಪಿಎಸ್ಸಿ ಎಂದರೆ ಏನು? ಅದರ ಸಂರಚನೆ, ಸ್ವರೂಪ ಹೇಗಿರುತ್ತದೆ? ಸಾಂವಿಧಾನಿಕವಾಗಿ ಅದಕ್ಕಿರುವ ರಕ್ಷಣೆ ಏನು? ಆ ಸಂಸ್ಥೆ ನಡೆದುಬಂದ ಹಾದಿ, ಹೆಗ್ಗಳಿಕೆ ಬಗ್ಗೆ ತಿಳಿದುಕೊಳ್ಳಿ. ಹೊಲಕ್ಕೆ ಕಳೆ ಬಿದ್ದರೆ ಅದನ್ನು ಕಿತ್ತೆಸೆಯಬೇಕು, ಹೊಲಕ್ಕೇ ವಿಷವುಣಿಸುವ ಕೆಲಸ ಆಗಬಾರದು ಎಂದು ಕಿವಿಮಾತು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments