Homeಕರ್ನಾಟಕಅಭಿವೃದ್ಧಿ ಕಾರ್ಯಗಳಲ್ಲಿ ಒಗ್ಗಟ್ಟು ಮುಖ್ಯ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಅಭಿವೃದ್ಧಿ ಕಾರ್ಯಗಳಲ್ಲಿ ಒಗ್ಗಟ್ಟು ಮುಖ್ಯ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಆಯುಷ್ಮಾನ್ ಆರೋಗ್ಯ ಕೇಂದ್ರ ಗುಣಮಟ್ಟದ ಸೇವೆ ಒದಗಿಸಲಿ

ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಶಾಸಕರು-ಸಂಸದರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿಯಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಹರವಿ ಗ್ರಾಮದಲ್ಲಿ ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಘೋಷಣೆ ಹಾಗೂ ಪರಿಹಾರ ವಿತರಣೆಯಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು. ಕೃಷಿ ಹಾಗೂ ಬೆಳೆ ನಷ್ಟದಂತಹ ತುರ್ತು ಸಂದರ್ಭಗಳಲ್ಲಿ ರೈತರಿಗೆ ಕೂಡಲೇ ಸ್ಪಂದಿಸಿ, ರಾಜಕೀಯವನ್ನು ಬದಿಗಿಟ್ಟು ತ್ವರಿತವಾಗಿ ಪರಿಹಾರ ಅನುದಾನ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಆರೋಗ್ಯ ಸೇವೆಗಳ ಪ್ರಾಮುಖ್ಯತೆ

ನೂತನವಾಗಿ ಉದ್ಘಾಟನೆಗೊಂಡಿರುವ ಆಯುಷ್ಮಾನ್ ಆರೋಗ್ಯ ಕೇಂದ್ರವು ಸ್ಥಳೀಯ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸಲಿ ಎಂದು ಹಾರೈಸಿದ ಬೊಮ್ಮಾಯಿ, ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂದು ಹೇಳಿದರು. ‘‘ಬದುಕಿನಲ್ಲಿ ಎಷ್ಟೇ ಭಾಗ್ಯಗಳಿದ್ದರೂ ಆರೋಗ್ಯವಿಲ್ಲದಿದ್ದರೆ ಜೀವನ ಕಷ್ಟವಾಗುತ್ತದೆ. ಗ್ರಾಮೀಣ ಜನರಿಗೆ ಸ್ಥಳೀಯ ಮಟ್ಟದಲ್ಲೇ ಉತ್ತಮ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಈ ಕೇಂದ್ರವನ್ನು ಆರಂಭಿಸಲಾಗಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆಯಬೇಕು’’ ಎಂದು ಕರೆ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ 2017ರಲ್ಲಿ ಆರಂಭವಾದ ಆಯುಷ್ಮಾನ್ ಯೋಜನೆಯಡಿ ಬಡವರಿಗೆ 5 ಲಕ್ಷ ರೂ.ವರೆಗೆ ಉಚಿತ ಆರೋಗ್ಯ ಸೇವೆ ಸಿಗುತ್ತಿದೆ ಎಂದು ನೆನಪಿಸಿದ ಅವರು, ಕರ್ನಾಟಕದಲ್ಲಿ ಈಗಾಗಲೇ 2 ಕೋಟಿ ಜನರಿಗೆ ಆಯುಷ್ಮಾನ್ ಕಾರ್ಡ್ ನೀಡಲಾಗಿದ್ದು, ಸುಮಾರು 90 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು.

ಆದರೆ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ದೊಡ್ಡ ವಿಪರ್ಯಾಸವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಬೊಮ್ಮಾಯಿ, ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳು ಮತ್ತು ವೈದ್ಯರು ಕರ್ನಾಟಕದಲ್ಲಿದ್ದರೂ ಗ್ರಾಮೀಣ ಭಾಗಕ್ಕೆ ವೈದ್ಯರ ಕೊರತೆ ನೀಗಿಸುವುದು ಇಂದಿನ ಸವಾಲು ಎಂದರು.

ಆರೋಗ್ಯ ರಕ್ಷಣೆ ಮತ್ತು ವ್ಯಸನ ಮುಕ್ತಿ
ಬಡವರಿಗೆ ಉತ್ತಮ ಚಿಕಿತ್ಸೆ ಸಿಗದೆ ಅನೇಕರು ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಗ್ರಾಮೀಣ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದ ಅವರು, ಸಿಗರೆಟ್, ಬೀಡಿ, ತಂಬಾಕು ಮುಂತಾದ ವ್ಯಸನಗಳನ್ನು ಬಿಟ್ಟರೆ ಕೆಮ್ಮು, ದಮ್ಮು, ಕಫ ಹಾಗೂ ಜ್ವರದಂತಹ ಗಂಭೀರ ರೋಗಗಳು ಹತ್ತಿರ ಬರುವುದಿಲ್ಲ ಎಂದರು. ಅನಾರೋಗ್ಯ ಉಂಟಾದಾಗ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆಯುವಂತೆ ಕರೆ ನೀಡಿದರು.

ಸಿ.ಆರ್.ಎಫ್. ಅನುದಾನದ ಬೇಡಿಕೆ
ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಸಿ.ಆರ್.ಎಫ್. ಅನುದಾನ ನೀಡುವಂತೆ ಈಗಾಗಲೇ ಮನವಿ ಮಾಡಲಾಗಿದ್ದು, ಸುಮಾರು 60 ಕೋಟಿ ರೂ.ಗಳಿಗೂ ಅಧಿಕ ಅನುದಾನವನ್ನು 8 ಕ್ಷೇತ್ರಗಳಿಗೆ ನೀಡುವಂತೆ ಕೇಳಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ, ಮಾಜಿ ಶಾಸಕ ಶಿವರಾಜ ಸಜ್ಜನ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮಾಲತೇಶ ಸೊಪ್ಪಿನ, ಟಾಕನಗೌಡ ಪಾಟೀಲ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಮರಗಡಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಪ್ಪ ಬೈಲವಾಳ, ಭೂದಾನಿಗಳಾದ ಅಂಗಡಿ ಕುಟುಂಬಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಇದೇ ದಿನ ಹಾನಗಲ್ಲ ತಾಲೂಕಿನ ಮಾರನಬೀಡ ಗ್ರಾಮದಲ್ಲಿಯೂ ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡವನ್ನು ಬೊಮ್ಮಾಯಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ ಮಾನೆ, ಮಾಜಿ ಶಾಸಕ ಶಿವರಾಜ ಸಜ್ಜನ, ಬಿಜೆಪಿ ಹಾನಗಲ್ಲ ಮಂಡಳ ಅಧ್ಯಕ್ಷ ಮಹೇಶ ಕಮಡೊಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮಾಲತೇಶ ಸೊಪ್ಪಿನ, ಟಾಕನಗೌಡ ಪಾಟೀಲ, ತಹಶೀಲ್ದಾರ್ ರಾಘವೇಂದ್ರ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಮರಗಡಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಪ್ಪ ಬೈಲವಾಳ ಹಾಗೂ ಕಲ್ಯಾಣಕುಮಾರ ಶೆಟ್ಟರ, ಮಲ್ಲಿಕಾರ್ಜುನ ಅಗಡಿ, ಬಸವಣ್ಣೆಪ್ಪ ಸಂಶಿ, ಪ್ರಕಾಶ ಕೋಳೋರು, ಪುಟ್ಟಪ್ಪ ನರೇಗಲ್, ರಾಜಶೇಖರ ಕಟ್ಟೇಗೌಡ್ರ, ಸಿದ್ದಲಿಂಗಪ್ಪ ಕಮಡೊಳ್ಳಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪ್ರಮುಖರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments