Homeಕರ್ನಾಟಕನಿರಾಶ್ರಿತರ ಪುನರ್ವಸತಿಗೆ ಹೊಸ ಡಿಜಿಟಲ್ ಹೆಜ್ಜೆ: ಸಚಿವ ಮುನಿಯಪ್ಪ

ನಿರಾಶ್ರಿತರ ಪುನರ್ವಸತಿಗೆ ಹೊಸ ಡಿಜಿಟಲ್ ಹೆಜ್ಜೆ: ಸಚಿವ ಮುನಿಯಪ್ಪ

ನಿರಾಶ್ರಿತರು, ನಿರ್ಗತಿಕರು ಹಾಗೂ ದುರ್ಬಲ ವರ್ಗದವರ ಕಲ್ಯಾಣ, ಆರೈಕೆ ಮತ್ತು ಪುನರ್ವಸತಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಕೇಂದ್ರ ಪರಿಹಾರ ಸಮಿತಿ (ಸಿ.ಆರ್.ಸಿ.) ತನ್ನ ಹೊಸ ಅಧಿಕೃತ ವೆಬ್‌ಸೈಟ್‌ಗೆ ಚಾಲನೆ ನೀಡಿದೆ.

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಮಾನ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರು ಶುಕ್ರವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಚಿವರ ಕೊಠಡಿಯಲ್ಲಿ crc.karnataka.gov.in ವೆಬ್‌ಸೈಟ್ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರು ಹಾಗೂ ರಾಜ್ಯ ಸಚಿವ ದರ್ಜೆಯ ಆಗಾ ಸುಲ್ತಾನ್, ಸಿ.ಆರ್.ಸಿ. ಕಾರ್ಯದರ್ಶಿ ಜಗದೀಶ್ ಎಸ್. ಹೆಬ್ಬಳ್ಳಿ (ಕೆಜಿಎಸ್), ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕೆ.ಪಿ. ಮೋಹನ್ ರಾಜ್ (ಐಎಎಸ್), ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ. ಕೆ. ರಾಕೇಶ್ ಕುಮಾರ್ (ಐಎಎಸ್) ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಸಿ.ಆರ್.ಸಿ. ತಂಡದ ಸದಸ್ಯರು ಉಪಸ್ಥಿತರಿದ್ದರು.

ಕಲ್ಯಾಣ ಮತ್ತು ಪುನರ್ವಸತಿಗೆ ಡಿಜಿಟಲ್ ವೇದಿಕೆ

ಹೊಸ ವೆಬ್‌ಸೈಟ್ ಮೂಲಕ ಕೇಂದ್ರ ಪರಿಹಾರ ಸಮಿತಿ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರಗಳ (ಎನ್‌ಪಿಕೆ) ಕುರಿತು ಸಮಗ್ರ ಮಾಹಿತಿಯನ್ನು ಸಾರ್ವಜನಿಕರು ಹಾಗೂ ವಿವಿಧ ಹಿತಾಸಕ್ತಿದಾರರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗಿದೆ.

ಭಿಕ್ಷಾಟನೆ ತಡೆ ಮತ್ತು ಪುನರ್ವಸತಿ, ಆಶ್ರಯ, ಆರೋಗ್ಯ ಸೇವೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ವೃತ್ತಿಪರ ತರಬೇತಿ, ಜೀವನೋಪಾಯ ಬೆಂಬಲ ಹಾಗೂ ಸಾಮಾಜಿಕ ಪುನರ್ಸೇರ್ಪಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಿ.ಆರ್.ಸಿ. ಕೈಗೊಳ್ಳುತ್ತಿರುವ ಕಾರ್ಯಕ್ರಮಗಳು ಮತ್ತು ಸೇವೆಗಳ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ.

ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ-1975ರ ಉದ್ದೇಶಗಳಿಗೆ ಅನುಗುಣವಾಗಿ ಸಿ.ಆರ್.ಸಿ. ಮತ್ತು ಎನ್‌ಪಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಭಿಕ್ಷಾಟನೆ ತಡೆಗಟ್ಟುವುದರ ಜೊತೆಗೆ ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಆರೈಕೆ, ಪರಿಹಾರ ಮತ್ತು ಪುನರ್ವಸತಿ ಒದಗಿಸುವ ಕಾರ್ಯವನ್ನು ಮಾಡುತ್ತವೆ ಎಂದು ಹೇಳಿದರು.

ಗೌರವಯುತ ಬದುಕಿನತ್ತ ಹೆಜ್ಜೆ

ಕಾನೂನು ಚೌಕಟ್ಟಿನ ಅನುಷ್ಠಾನದ ಜೊತೆಗೆ ಆರೈಕೆ, ಪುನರ್ವಸತಿ ಮತ್ತು ಸಾಮಾಜಿಕ ಪುನರ್ಸೇರ್ಪಡೆಗೆ ಆದ್ಯತೆ ನೀಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ನಿರಾಶ್ರಿತರು ಹಾಗೂ ದುರ್ಬಲ ವರ್ಗದವರು ಗೌರವಯುತ, ಸ್ಥಿರ ಹಾಗೂ ಸ್ವಾವಲಂಬಿ ಜೀವನ ನಡೆಸಲು ಅಗತ್ಯ ಬೆಂಬಲ ಒದಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ಸಿ.ಆರ್.ಸಿ, ನಿರಾಶ್ರಿತರು, ನಿರ್ಗತಿಕರು ಹಾಗೂ ದುರ್ಬಲ ವರ್ಗದವರ ಆರೈಕೆ, ರಕ್ಷಣೆ, ಪರಿಹಾರ ಮತ್ತು ಪುನರ್ವಸತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ 15 ನಿರಾಶ್ರಿತರ ಪರಿಹಾರ ಕೇಂದ್ರಗಳ (ಎನ್‌ಪಿಕೆ) ಜಾಲದೊಂದಿಗೆ ಸಮನ್ವಯದಿಂದ ಸಿ.ಆರ್.ಸಿ. ಆಶ್ರಯ, ಆಹಾರ, ಆರೋಗ್ಯ ಸೇವೆ, ಶಿಕ್ಷಣ, ವೃತ್ತಿಪರ ತರಬೇತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಾಮಾಜಿಕ ಪುನರ್ಸೇರ್ಪಡೆ ಸೇರಿದಂತೆ ವಿವಿಧ ಪುನರ್ವಸತಿ ಆಧಾರಿತ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.

ಪಾರದರ್ಶಕತೆ ಮತ್ತು ಸಾರ್ವಜನಿಕ ಸಂಪರ್ಕಕ್ಕೆ ಒತ್ತು

ಸಿ.ಆರ್.ಸಿ. ಅಧ್ಯಕ್ಷ ಆಗಾ ಸುಲ್ತಾನ್ ಅವರ ನಾಯಕತ್ವದಲ್ಲಿ ಹಾಗೂ ಕಾರ್ಯದರ್ಶಿ ಜಗದೀಶ್ ಎಸ್. ಹೆಬ್ಬಳ್ಳಿ ಅವರ ಸಮನ್ವಯದೊಂದಿಗೆ ಸಮಿತಿಯ ಸೌಲಭ್ಯಗಳನ್ನು ಬಲಪಡಿಸುವುದು, ಮೂಲಸೌಕರ್ಯಗಳನ್ನು ಆಧುನೀಕರಿಸುವುದು ಹಾಗೂ ಫಲಾನುಭವಿಗಳಿಗೆ ಒದಗಿಸುವ ಸೇವೆಗಳ ಗುಣಮಟ್ಟವನ್ನು ಸುಧಾರಿಸುವ ಕಾರ್ಯಗಳನ್ನು ಮುಂದುವರೆಸಲಾಗುವುದು ಎಂದರು.

ಹೊಸ ವೆಬ್‌ಸೈಟ್ ಸಿ.ಆರ್.ಸಿ.ಯ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚಿನ ಪಾರದರ್ಶಕತೆ, ಡಿಜಿಟಲ್ ಪ್ರವೇಶ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ನಾಗರಿಕರು, ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಮಾಧ್ಯಮಗಳು ಸೇರಿದಂತೆ ವಿವಿಧ ಹಿತಾಸಕ್ತಿದಾರರು ಸಿ.ಆರ್.ಸಿ. ಮತ್ತು ನಿರಾಶ್ರಿತರ ಪರಿಹಾರ ಕೇಂದ್ರಗಳ ಕಾರ್ಯಕ್ರಮಗಳು, ಸೌಲಭ್ಯಗಳು ಹಾಗೂ ಉಪಕ್ರಮಗಳ ಕುರಿತು ಮಾಹಿತಿ ಪಡೆಯಲು ಈ ಡಿಜಿಟಲ್ ವೇದಿಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

‘ಭಿಕ್ಷುಕ ಮುಕ್ತ ಬೆಂಗಳೂರು’ ಅಭಿಯಾನ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಸಿ.ಆರ್.ಸಿ. ಅಧ್ಯಕ್ಷ ಆಗಾ ಸುಲ್ತಾನ್ ಅವರ ಸಮ್ಮುಖದಲ್ಲಿ ಬೆಂಗಳೂರನ್ನು ಭಿಕ್ಷುಕ ಮುಕ್ತ ನಗರವನ್ನಾಗಿಸುವ ಉದ್ದೇಶದೊಂದಿಗೆ ಜಾಗೃತಿ ಅಭಿಯಾನವನ್ನು ಆರಂಭಿಸಲು ಸಜ್ಜಾಗಿರುವ ಕುರಿತು ತಿಳಿಸಿದರು.

ಬೆಂಗಳೂರನ್ನು ಹೆಚ್ಚು ಘನತೆಯುತ, ಕರುಣಾಮಯಿ ಹಾಗೂ ಎಲ್ಲರನ್ನೂ ಒಳಗೊಂಡ ನಗರವನ್ನಾಗಿಸುವ ನಿಟ್ಟಿನಲ್ಲಿ ಈ ಅಭಿಯಾನ ಮಹತ್ವದ ಹೆಜ್ಜೆಯಾಗಲಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಮತ್ತಷ್ಟು ಉಪಕ್ರಮಗಳು ಮತ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments