ಕರ್ನಾಟಕ ಪೊಲೀಸ್ ಇಲಾಖೆಯ ವಾಹನ ವ್ಯವಸ್ಥೆಯನ್ನು ಆಧುನೀಕರಿಸಲು ನೇರ ಖರೀದಿಗೆ ಬದಲಾಗಿ ಬಾಡಿಗೆ ಅಥವಾ ಲೀಸಿಂಗ್ ಮಾದರಿಯನ್ನು ಅಳವಡಿಸಿಕೊಳ್ಳುವ ಸಾಧ್ಯತೆಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ ಎಂದು ಗೃಹ, ಮಾಹಿತಿ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ಸಂಪರ್ಕ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ವಿಭಾಗದ ಅಧಿಕಾರಿಗಳು ಹಾಗೂ ವಿದ್ಯುತ್ ಚಾಲಿತ ಮತ್ತು ಸಾಂಪ್ರದಾಯಿಕ ವಾಹನ ತಯಾರಿಕಾ ಕಂಪನಿಗಳು ಸೇರಿದಂತೆ 20ಕ್ಕೂ ಹೆಚ್ಚು ಆಟೋಮೊಬೈಲ್ ಮತ್ತು ದ್ವಿಚಕ್ರ ವಾಹನ ತಯಾರಕರ ಪ್ರತಿನಿಧಿಗಳೊಂದಿಗೆ ಸಚಿವರು ಸಭೆ ನಡೆಸಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.
ನೇರವಾಗಿ ವಾಹನಗಳನ್ನು ಖರೀದಿಸುವುದರಿಂದ ಸರ್ಕಾರದ ಮೇಲೆ ಒಂದೇ ಬಾರಿಗೆ ದೊಡ್ಡ ಪ್ರಮಾಣದ ಬಂಡವಾಳ ವೆಚ್ಚದ ಹೊರೆ ಬೀಳುತ್ತದೆ. ಬದಲಾಗುತ್ತಿರುವ ಅಗತ್ಯಗಳು ಮತ್ತು ಹೆಚ್ಚುತ್ತಿರುವ ಕಾರ್ಯಾಚರಣಾ ಹೊಣೆಗಾರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಬಾಡಿಗೆ ಮಾದರಿ ಅಳವಡಿಸಿಕೊಂಡರೆ ಸಂಪನ್ಮೂಲಗಳನ್ನು ಹೆಚ್ಚು ಸಮರ್ಥವಾಗಿ ಬಳಸಬಹುದು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
“ಸರ್ಕಾರದ ಉದ್ದೇಶ ಕೇವಲ ವಾಹನಗಳನ್ನು ಖರೀದಿಸುವುದಲ್ಲ. ಸಾರ್ವಜನಿಕರ ಹಣವನ್ನು ವಿವೇಚನೆಯಿಂದ ಬಳಸಿ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ನಮ್ಮ ಆದ್ಯತೆ. ಒಂದೇ ಬಾರಿಗೆ ದೊಡ್ಡ ಮೊತ್ತದ ಬಂಡವಾಳ ವೆಚ್ಚ ಮಾಡುವ ಬದಲು, ಅಗತ್ಯಕ್ಕೆ ಅನುಗುಣವಾಗಿ ವಾಹನಗಳನ್ನು ತ್ವರಿತವಾಗಿ ಸೇರ್ಪಡೆ ಮಾಡಿಕೊಳ್ಳುವ ಮತ್ತು ಅವುಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು” ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಬಾಡಿಗೆ ಅಥವಾ ಲೀಸಿಂಗ್ ಮಾದರಿಯಿಂದ ಪೊಲೀಸ್ ಇಲಾಖೆಯ ವಾಹನಗಳ ಸಂಖ್ಯೆಯನ್ನು ಅಗತ್ಯಕ್ಕೆ ಅನುಗುಣವಾಗಿ ತ್ವರಿತವಾಗಿ ಹೆಚ್ಚಿಸಬಹುದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಗಸ್ತು, ತುರ್ತು ಪ್ರತಿಕ್ರಿಯೆ, ತನಿಖೆ ಮುಂತಾದ ಕರ್ತವ್ಯಗಳಿಗೆ ಅಗತ್ಯವಿರುವ ವಾಹನಗಳನ್ನು ಸುಲಭವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಭೆಯಲ್ಲಿ ವಿದ್ಯುತ್ ಚಾಲಿತ ವಾಹನಗಳು ಸೇರಿದಂತೆ ವಿವಿಧ ಮಾದರಿಗಳನ್ನು ಪೊಲೀಸ್ ಅಗತ್ಯಗಳಿಗೆ ಬಳಸುವ ಬಗ್ಗೆಯೂ ಚರ್ಚಿಸಲಾಯಿತು. ವಾಹನಗಳ ಬಳಕೆಯ ಸ್ವರೂಪ, ಕಾರ್ಯಾಚರಣಾ ಅವಧಿ, ನಿರ್ವಹಣೆ, ದುರಸ್ತಿ, ಬದಲಿ ವಾಹನಗಳ ಲಭ್ಯತೆ, ಸೇವಾ ವೆಚ್ಚ ಮತ್ತು ಒಪ್ಪಂದದ ಅವಧಿ ಸೇರಿದಂತೆ ಹಣಕಾಸು ಹಾಗೂ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
“ಆಧುನಿಕ ಪೊಲೀಸ್ ವ್ಯವಸ್ಥೆಗೆ ಕೇವಲ ಮಾನವ ಸಂಪನ್ಮೂಲ ಸಾಕಾಗುವುದಿಲ್ಲ. ಚಲನಶೀಲತೆ, ತಂತ್ರಜ್ಞಾನ ಮತ್ತು ಮೂಲಸೌಕರ್ಯವೂ ಸಮಾನವಾಗಿ ಮುಖ್ಯ. ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಮತ್ತು ಕಾನೂನು-ಸುವ್ಯವಸ್ಥೆಯ ಸವಾಲುಗಳಿಗೆ ಪೊಲೀಸ್ ಇಲಾಖೆ ಇನ್ನಷ್ಟು ಸಜ್ಜಾಗಬೇಕಿದೆ. ಆದ್ದರಿಂದ ವಾಹನ ವ್ಯವಸ್ಥೆ ಸೇರಿದಂತೆ ಇಲಾಖೆಯ ಪ್ರತಿಯೊಂದು ಕಾರ್ಯಾಚರಣಾ ಮೂಲಸೌಕರ್ಯವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಬದ್ಧವಾಗಿ ಕೆಲಸ ಮಾಡುತ್ತಿದೆ” ಎಂದು ಹೇಳಿದರು.
ಪೊಲೀಸ್ ಇಲಾಖೆಯ ಅಗತ್ಯಗಳಿಗೆ ತಕ್ಕಂತೆ ಸಾರ್ವಜನಿಕ ಹಣದ ಗರಿಷ್ಠ ಸದ್ಬಳಕೆ ಆಗುವ ಮತ್ತು ದೀರ್ಘಾವಧಿಯಲ್ಲಿ ಸರ್ಕಾರಕ್ಕೆ ಆರ್ಥಿಕ ಹಾಗೂ ಆಡಳಿತಾತ್ಮಕವಾಗಿ ಪೂರಕವಾಗುವ ಮಾದರಿಯನ್ನು ರೂಪಿಸಲು ಸರ್ಕಾರ ಬದ್ಧವಾಗಿದೆ. ಬಾಡಿಗೆ ಮಾದರಿಯ ಹಣಕಾಸು ಮತ್ತು ಕಾರ್ಯಾಚರಣಾ ಸಾಧ್ಯತೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪೊಲೀಸ್ ಇಲಾಖೆಯನ್ನು ಹೆಚ್ಚು ಚಲನಶೀಲ, ತಂತ್ರಜ್ಞಾನಾಧಾರಿತ, ಆಧುನಿಕ ಮತ್ತು ಜನಸ್ನೇಹಿ ವ್ಯವಸ್ಥೆಯನ್ನಾಗಿ ರೂಪಿಸುವುದು ಸರ್ಕಾರದ ಆದ್ಯತೆ ಎಂದು ಸಚಿವರು ಹೇಳಿದರು.


