ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಗಾಯತ್ರಿ ಭವನದಲ್ಲಿ ಬ್ರಾಹ್ಮಣ ಸಮುದಾಯದ ಏಳಿಗೆ ಮತ್ತು ಮಹಾಸಭೆಯ ಶ್ರೇಯೋಭಿವೃದ್ಧಿಗಾಗಿ ಮೂರು ದಿನಗಳ ಕಾಲ ವಿಶೇಷ ಪೂಜೆ ಹಾಗೂ ಹೋಮ ಕಾರ್ಯಕ್ರಮ ನಡೆಯುತ್ತಿದೆ.
ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್ ಅವರ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವರದಾಚಾರ್ ತಂತ್ರಿಗಳು, ಸುಧಾಮಚಾರ್, ನರಸಿಂಹಚಾರ್ ಮತ್ತು ಇತರ ಅರ್ಚಕರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಹಾ ಸುದರ್ಶನ ಹೋಮ, ಅಘೋರಾಸ್ತ್ರ ಹೋಮ, ಜಾತವೇದಸ್ ಹೋಮ, ಭಾಗ್ಯಸೂಕ್ತ ಹೋಮ, ಐಕ್ಯಮತ್ಯ ಸೂಕ್ತ ಹೋಮ ಮತ್ತು ಗಾಯತ್ರಿ ಹೋಮಗಳನ್ನು ನಡೆಸಲಾಗುತ್ತಿದೆ. ಇದರೊಂದಿಗೆ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆಯೂ ನಡೆಯುತ್ತಿದೆ.
ಮಹಾಸಭೆಯ ವತಿಯಿಂದ ನೀಡಿದ ಮಾಹಿತಿಯಂತೆ, ಮಹಾ ಸುದರ್ಶನ ಹೋಮವನ್ನು ಯಾವುದೇ ತಂತ್ರಗಳು ಅಥವಾ ಕೆಟ್ಟ ದೃಷ್ಟಿ ಬೀಳದಂತೆ ಹಾಗೂ ದುಷ್ಟ ಶಕ್ತಿಗಳ ದೋಷ ಪರಿಹಾರಕ್ಕಾಗಿ ನಡೆಸಲಾಗುತ್ತಿದೆ. ಅಘೋರಾಸ್ತ್ರ ಹೋಮವನ್ನು ಪ್ರೇತ-ಭೂತ ಬಾಧೆಯಿಂದ ಮುಕ್ತಿಗಾಗಿ, ಭಾಗ್ಯಸೂಕ್ತ ಹೋಮವನ್ನು ಲಕ್ಷ್ಮೀದೇವಿಯ ಕೃಪೆಗಾಗಿ ಹಾಗೂ ಐಕ್ಯಮತ್ಯ ಸೂಕ್ತ ಹೋಮವನ್ನು ಸಂಘಟನೆಯಲ್ಲಿ ಐಕ್ಯತೆ ಮತ್ತು ಸಹೋದರತ್ವ ಬೆಳೆಸಲು ನಡೆಸಲಾಗುತ್ತಿದೆ. ಗಾಯತ್ರಿ ಹೋಮವನ್ನು ಸಂಕಷ್ಟ ನಿವಾರಣೆಗಾಗಿ ಮಾಡಲಾಗುತ್ತಿದೆ.
“ಎಲ್ಲ ಸಮಾಜ ಸುಖ-ಶಾಂತಿ-ನೆಮ್ಮದಿಯಿಂದಿರಲಿ, ಲೋಕಸಮಸ್ತಃ ಸುಖಿನೋ ಭವಂತು ಎಂಬ ಭಾವನೆಯಿಂದ ಬ್ರಾಹ್ಮಣ ಸಮುದಾಯ ಶ್ರಮಿಸುತ್ತಿದೆ. ಸಮುದಾಯದ ಸಂಕಷ್ಟಗಳು ದೂರವಾಗಲಿ ಮತ್ತು ಮಹಾಸಭೆ ಸದೃಢವಾಗಿ ಬೆಳೆಯಲಿ ಎಂಬ ಉದ್ದೇಶದಿಂದ ಈ ವಿಶೇಷ ಪೂಜೆ-ಹೋಮಗಳನ್ನು ನಡೆಸಲಾಗುತ್ತಿದೆ” ಎಂದು ಮಹಾಸಭಾ ಮೂಲಗಳು ತಿಳಿಸಿವೆ.
ಕಾರ್ಯಕ್ರಮದಲ್ಲಿ ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮೀಕಾಂತ್, ವಿಪ್ರ ಮುಖಂಡರಾದ ಎನ್.ಎಲ್. ಚಿದಾನಂದ, ಸತ್ಯಪ್ರಕಾಶ್, ಪ್ರಹ್ಲಾದ್ ಬಾಬು, ಎಲ್. ಪುರುಷೋತ್ತಮ್, ಜಿಲ್ಲಾ ಪ್ರತಿನಿಧಿಗಳಾದ ಕೆ.ಎನ್. ರವಿಕುಮಾರ್, ಎಸ್.ಎಸ್. ಪ್ರಸಾದ್, ಪಿ.ಆರ್. ಪ್ರಕಾಶ್, ನಾಗೇಶ್, ರಾಜಶೇಖರ್, ದಿಲೀಪ್, ಸತೀಶ್ ಉರಾಳ್, ರಾಮ್ ಪ್ರಸಾದ್, ಜೆ.ಹೆಚ್. ಅನಿಲ್ ಕುಮಾರ್, ರಥಯಾತ್ರೆ ಸುರೇಶ್ ಸೇರಿದಂತೆ ಹಲವು ವಿಪ್ರ ಬಾಂಧವರು ಭಾಗವಹಿಸಿದ್ದರು.


