Homeಕರ್ನಾಟಕಕೋರಮಂಗಲದಲ್ಲಿ ಘನ ತ್ಯಾಜ್ಯ ನಿರ್ವಹಣಾ ಕಲಿಕಾ ಕೇಂದ್ರ ಉದ್ಘಾಟನೆ : ಸಚಿವ ರಾಮಲಿಂಗಾ ರೆಡ್ಡಿ

ಕೋರಮಂಗಲದಲ್ಲಿ ಘನ ತ್ಯಾಜ್ಯ ನಿರ್ವಹಣಾ ಕಲಿಕಾ ಕೇಂದ್ರ ಉದ್ಘಾಟನೆ : ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮತ್ತು ಬಿಎಸ್‌ಡಬ್ಲ್ಯೂಎಂಎಲ್ ವತಿಯಿಂದ ಕೋರಮಂಗಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ‘ಘನ ತ್ಯಾಜ್ಯ ನಿರ್ವಹಣಾ ಕಲಿಕಾ ಕೇಂದ್ರ’ ಹಾಗೂ ವಿವಿಧ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಇಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ, ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಮತ್ತು ಬಿಬಿಎಂಪಿ ಮಾಜಿ ಸದಸ್ಯ ಚಂದ್ರಪ್ಪ ಚಾಲನೆ ನೀಡಿದರು.

ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026ರ ಅಡಿಯಲ್ಲಿ ಸ್ಥಾಪಿಸಲಾಗಿರುವ ಈ ಕೇಂದ್ರವು ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಸಮಸ್ಯೆಯಾಗಿ ನೋಡದೆ ಸಂಪನ್ಮೂಲವಾಗಿ ಬಳಸುವ ‘ಕಸದಿಂದ ರಸ’ ತತ್ವದಡಿ ಕಾರ್ಯನಿರ್ವಹಿಸಲಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದರು. ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಮರುಬಳಕೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಪಾರ್ಟ್‌ಮೆಂಟ್ ನಿವಾಸಿಗಳು, ವಾಣಿಜ್ಯ ಕಚೇರಿ ಸಿಬ್ಬಂದಿ ಮತ್ತು ಪಾಲಿಕೆ ಪೌರಕಾರ್ಮಿಕರಿಗೆ ನುರಿತ ತಜ್ಞರಿಂದ ವೈಜ್ಞಾನಿಕ ಕಸ ವಿಂಗಡಣೆ ಹಾಗೂ ವಿಲೇವಾರಿ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಆರ್‌ವಿ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಇದಕ್ಕೆ ಸಹಕರಿಸುತ್ತಿವೆ.

ಕೇಂದ್ರದ ಆವರಣದಲ್ಲಿ 13 ಟನ್ ಸಾಮರ್ಥ್ಯದ ಬಯೋ-ಮಿಥನೈಸೇಷನ್ ಘಟಕವನ್ನು ಸ್ಥಾಪಿಸಲಾಗಿದ್ದು, ತ್ಯಾಜ್ಯದಿಂದ ಉತ್ಪತ್ತಿಯಾಗುವ ಬಯೋಗ್ಯಾಸ್‌ನ್ನು ಸುತ್ತಮುತ್ತಲಿನ ಹೋಟೆಲ್‌ಗಳಿಗೆ ಇಂಧನವಾಗಿ ಪೂರೈಸಲಾಗುತ್ತಿದೆ. ಜೊತೆಗೆ 25 ಟನ್ ಸಾಮರ್ಥ್ಯದ ಮಿನಿ ಟ್ರಾನ್ಸ್‌ಫರ್ ಸ್ಟೇಷನ್‌ಗಳು ಕಾರ್ಯನಿರ್ವಹಣೆಯಲ್ಲಿವೆ ಎಂದು ತಿಳಿಸಿದರು.

ಗಾರ್ಮೆಂಟ್ಸ್ ಮತ್ತು ಟೈಲರಿಂಗ್ ಅಂಗಡಿಗಳಿಂದ ಬರುವ ಬಟ್ಟೆ ಚಿಂದಿಗಳಿಂದ ಬ್ಯಾಗ್, ಮ್ಯಾಟ್ ಮತ್ತು ಬೆಡ್‌ಶೀಟ್‌ಗಳನ್ನು ತಯಾರಿಸುವ ಜವಳಿ ಮರುಬಳಕೆ ಘಟಕವೂ ಕಾರ್ಯಾರಂಭಗೊಂಡಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಲಾಗಿದೆ. ನಗರದಲ್ಲಿ ಬಿಸಾಡುತ್ತಿದ್ದ ಥರ್ಮಾಕೋಲ್ ತ್ಯಾಜ್ಯವನ್ನು ಕರಗಿಸಿ ಗಟ್ಟಿ ಪದಾರ್ಥವನ್ನಾಗಿಸಿ ದೆಹಲಿಗೆ ಕಳುಹಿಸಿ ಫೋಟೋ ಫ್ರೇಮ್ ಮತ್ತು ಕಿವಿಯೋಲೆಗಳಂತಹ ವಸ್ತುಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ನಿರುಪಯುಕ್ತ ಹಾಸಿಗೆಗಳನ್ನು ನಾರುಗಳನ್ನಾಗಿ ಮರುಬಳಕೆ ಮಾಡುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದರು.

ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಗಳಲ್ಲಿರುವ ಹಳೆಯ ಸೋಫಾ, ಮಂಚ, ಮೇಜು ಮುಂತಾದ ಬಲ್ಕ್ ವೇಸ್ಟ್‌ನ್ನು ನಾಗರಿಕರು ತಮ್ಮ ಆರ್‌ಡಬ್ಲ್ಯೂಎ ಗುಂಪುಗಳಲ್ಲಿ ಮಾಹಿತಿ ನೀಡಿದರೆ, ಸಾಹಸ್‌ನಂತಹ ಎನ್‌ಜಿಒಗಳು ಮನೆ ಬಾಗಿಲಿಗೆ ತೆರಳಿ ಸಂಗ್ರಹಿಸಿ ಕಸ-ರಸ ಕೇಂದ್ರಕ್ಕೆ ತಲುಪಿಸಲಿದ್ದಾರೆ. ನಂತರ ಪಾಲಿಕೆಯಿಂದ ಅವುಗಳ ಮರುಬಳಕೆಗೆ ಕಳುಹಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.

ಕೇಂದ್ರದ ಆವರಣದಲ್ಲಿ ಸಿಬ್ಬಂದಿ ಮತ್ತು ನಾಗರಿಕರ ಉಪಯೋಗಕ್ಕಾಗಿ ಹೈಟೆಕ್ ಶೌಚಾಲಯವನ್ನು ನಿರ್ಮಿಸಲಾಗಿದ್ದು, ಅದರ ನಿರ್ವಹಣೆಯನ್ನು ಈಜೀ ಸಂಸ್ಥೆಗೆ ವಹಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಜಿಎಂ ಶಶಿಕಲಾ, ಆರ್‌ಡಬ್ಲ್ಯೂಎ ಪ್ರತಿನಿಧಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments