ಆಕಾಶದಿಂದ ಒಣಗಿದ ಭೂಮಿ ನೋಡಿದರೆ ರೈತರ ಕಣ್ಣೀರು ಕಾಣಿಸುತ್ತದೆಯೇ, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ಪ್ರವಾಹ ಬಂದಾಗ, ನೀರು ತುಂಬಿದ ರಸ್ತೆಗಳು, ಮುಳುಗಿದ ಸೇತುವೆಗಳಿದ್ದಾಗ ವೈಮಾನಿಕ ಸಮೀಕ್ಷೆ ಮಾಡುವುದು ಸಹಜ. ಆದರೆ, ಮಳೆಯಿಲ್ಲದೆ ಒಣಗಿ ಬಿರುಕು ಬಿಟ್ಟಿರುವ ಹೊಲಗಳನ್ನು ಹೆಲಿಕಾಪ್ಟರ್‌ನಲ್ಲೇ ಹಾರಾಡಿ ಸಮೀಕ್ಷೆ ನಡೆಸಿದ ವಿಶ್ವದ ಏಕೈಕ ಮುಖ್ಯಮಂತ್ರಿ ಎಂಬ ಕುಖ್ಯಾತಿ ನಿಮಗೇ ಸಲ್ಲಬೇಕು” ಎಂದು ಲೇವಡಿ ಮಾಡಿದ್ದಾರೆ.
ರೈತರ ಒಣಗಿದ ಜಮೀನಿಗೆ ಕಾಲಿಡಲು ಏಕೆ ಈ ಪರಿ ಹಿಂಜರಿಕೆ ಡಿಕೆಶಿ ಅವರೇ? ಒಣಗಿರುವ ಜಮೀನಿನಲ್ಲಿ ನಿಂತು ರೈತನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಭಯವೇ? ನೆರವಿಗೆ ಕಾಯುತ್ತಿರುವ ರೈತರ ಆಕ್ರೋಶದ ಪ್ರಶ್ನೆಗಳಿಗೆ ಉತ್ತರಿಸಲು ನಡುಕವೇ? ನೆಲಕ್ಕಿಳಿದರೆ ನಿಮ್ಮ ಸರ್ಕಾರದ ವೈಫಲ್ಯ ಬಟಾಬಯಲಾಗುತ್ತದೆ ಎಂಬ ಅಂಜಿಕೆಯೇ ಎಂದು ಕೇಳಿದ್ದಾರೆ.
ಬಿಸಿಲಿನಲ್ಲಿ ಒಣಗಿದ ಪೈರಿನ ನೋವು, ಸಾಲದ ಸುಳಿಯಲ್ಲಿ ಸಿಲುಕಿದ ರೈತನ ಕಣ್ಣೀರು ಹೆಲಿಕಾಪ್ಟರ್‌ನ ಎಸಿ ಗಾಳಿಯಲ್ಲಿ ಕುಳಿತು ಗಾಜಿನ ಕಿಟಕಿಯಲ್ಲಿ ಇಣುಕಿ ನೋಡಿದರೆ ಅರ್ಥವಾಗುತ್ತದೆಯೇ ಮುಖ್ಯಮಂತ್ರಿಗಳೇ? ಎಂದು ಕುಟುಕಿದ್ದಾರೆ.
ಹೆಲಿಕಾಪ್ಟರ್ ಹಾರಿತು, ಕ್ಯಾಮೆರಾಗಳು ಕ್ಲಿಕ್ಕಿಸಿದವು, ಪ್ರಚಾರದ ಫೋಟೋ ಶೂಟ್ ಮುಗಿಯಿತು! ಆದರೆ ಬಳ್ಳಾರಿ, ವಿಜಯನಗರ, ಬಾಗಲಕೋಟೆಯ ಬಿಸಿಲಿನಲ್ಲಿ ಬೇಯುತ್ತಿರುವ ರೈತನ ಬದುಕಿಗೆ ಸಿಕ್ಕ ಪರಿಹಾರವೇನು? ಆಕಾಶದಿಂದ ಮಾಡುವ ಕಾಟಾಚಾರದ VIP ಸಮೀಕ್ಷೆಯ ಹೆಲಿಕಾಪ್ಟರ್ ಬಾಡಿಗೆ, ಇಂಧನದ ವೆಚ್ಚದಲ್ಲೇ ನೂರಾರು ಸಂತ್ರಸ್ತ ರೈತ ಕುಟುಂಬಗಳಿಗೆ ಪರಿಹಾರ ನೀಡಬಹುದಿತ್ತು. ರೈತನಿಗೆ ಬೇಕಿರುವುದು ನಿಮ್ಮ ಆಕಾಶದ ಪ್ರವಾಸವಲ್ಲ, ನೆಲಕ್ಕಿಳಿದು ಧೈರ್ಯ ತುಂಬುವ ನಾಯಕ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ ಅವರೇ, ಆಕಾಶದಿಂದ ಆಡಳಿತ ನಡೆಸಲು ಸಾಧ್ಯವಿಲ್ಲ. ಹೆಲಿಕಾಪ್ಟರ್‌ನಿಂದ ಕೆಳಗಿಳಿದು ರೈತನ ಹೊಲಕ್ಕೆ ಬನ್ನಿ, ಅನ್ನದಾತನ ಭುಜ ತಟ್ಟಿ ಆತ್ಮಸ್ಥೈರ್ಯ ತುಂಬಿ ಅವರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ ಎಂದು ಆಗ್ರಹಿಸಿದ್ದಾರೆ.


