ಕುಂಭಕರ್ಣನ ನಿದ್ದೆಯಲ್ಲಿರುವ ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ಬಿಜೆಪಿ ಬಡಿದೆಬ್ಬಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.
5ನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆ ಅಂಗವಾಗಿ ಕಾರಟಗಿಯ ಎಪಿಎಂಸಿ ಯಾರ್ಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ನೆಪವೊಡ್ಡಿ ಗಾಳಿಯಲ್ಲಿ ಗೋಪುರ ಕಟ್ಟುತ್ತಿದೆ. ಇದು ಬಿಟ್ಟರೆ ಬೇರೇನೂ ಕೆಲಸವನ್ನೂ ಈ ಸರ್ಕಾರ ಮಾಡುತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿ ಗ್ಯಾರಂಟಿಗಳ ಬಗ್ಗೆ ಭಾರಿ ಪ್ರಚಾರ ಮಾಡಿದರು. ಇದು ಜನಪ್ರಿಯ ಸರ್ಕಾರ ಅಲ್ಲ ಜಾಹೀರಾತು ಸರ್ಕಾರ ಎಂದು ಹೇಳಿದ್ದೆ ಎಂದು ವ್ಯಂಗ್ಯವಾಗಿ ಮಾತನಾಡಿದರು.
ಮತ್ತೆ ಸರ್ಕಾರದ ಭ್ರಮೆಯಲ್ಲಿ ಕಾಂಗ್ರೆಸ್….
ಮುಂದಿನ ಬಾರಿ ತಮ್ಮದೇ ಸರ್ಕಾರ ಬರುತ್ತೆ ಎಂದು ಕಾಂಗ್ರೆಸ್ ಭ್ರಮೆಯಲ್ಲಿದೆ. ಎಲ್ಲ ವರ್ಗದ ಜನರಿಗೆ ಈ ಸರ್ಕಾರ ಅನ್ಯಾಯ ಮಾಡುತ್ತಿದೆ. ಆಡಳಿತ ಪಕ್ಷದ ಶಾಸಕರೇ ತಮ್ಮ ಸರ್ಕಾರ ಟೇಕಾಪ್ ಆಗಿಲ್ಲ ಅಂತಿದ್ದಾರೆ. ಇನ್ನಾದರೂ ಈ ಸರ್ಕಾರ ಎಚ್ಚೆತ್ತು ಬಡವರ, ರೈತರ ಬಗ್ಗೆ ಕಾಳಜಿಯನ್ನು ಸರ್ಕಾರ ತೋರಿಸಲಿ ಎಂದರು.
ಗೃಹಲಕ್ಷ್ಮಿ ಗ್ಯಾರಂಟಿ ಹಗರಣ…
ಗೃಹಲಕ್ಷ್ಮಿ ಯೋಜನೆಯಲ್ಲಿ ಐದು ಸಾವಿರ ಕೋಟಿ ಹಗರಣದ ಬಗ್ಗೆ ಇಂದಿಗೂ ಸಿಎಂ ಆಗಲಿ, ಸಚಿವರಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಮಹಾಲೇಖಪಾಲರ ವರದಿಯಲ್ಲೂ ಇದರ ಬಗ್ಗೆ ಉಲ್ಲೇಖವಾಗಿದೆ. ಜಿಲ್ಲಾ, ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿ ಮಾಡಿ. ಅದಕ್ಕೆ ಅಧ್ಯಕ್ಷರನ್ನು ನೇಮಿಸಿ ಸಂಪುಟ ದರ್ಜೆ ನೀಡಿ ಜನರ ತೆರಿಗೆ ಹಣದಿಂದ ಖರ್ಚು ಮಾಡುತ್ತಿದ್ದೀರಿ. ಇಷ್ಟು ದೊಡ್ಡ ಮಟ್ಟದ ಅವ್ಯವಹಾರ ನಡೆದರೂ ಈ ಸಮಿತಿ ಅಧ್ಯಕ್ಷರು ಏನು ಕತ್ತೆ ಕಾಯುತ್ತಿದ್ದರೆ ಎಂದು ಪ್ರಶ್ನೆ ಮಾಡಿದರು.
ಸೈಕಲ್ ಇಲ್ಲ. ಬಸ್ ಸಹ ಇಲ್ಲ…
ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ತಲುಪಿಲ್ಲವೆಂದರೆ ಇದಕ್ಕೆ ಯಾರು ಹೊಣೆ. ಇನ್ನು ಶಕ್ತಿ ಯೋಜನೆಗೆ ಭಾರಿ ಪ್ರಚಾರ ನೀಡುತ್ತಾರೆ. ಆದರೆ ಗ್ರಾಮೀಣ ಭಾಗದಲ್ಲಿ ಬಸ್ ಗಳೇ ಇಲ್ಲ. ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಸಿಎಂ ಇದ್ದಾಗ ಮಕ್ಕಳಿಗೆ ಸೈಕಲ್ ನೀಡಿದ್ದರು. ಅದಕ್ಕೂ ಕಾಂಗ್ರೆಸ್ ಕನ್ನ ಹಾಕಿದೆ. ಕೆಂಪು ಬಸ್‍ಗಳಲ್ಲಿ ಪ್ರಯಾಣಿಕರೇ ಇಲ್ಲ. ಇದರಿಂದ ನಷ್ಟವಾಗುತ್ತಿದೆ ಎಂದರು.
ವೈದ್ಯರಿಲ್ಲ.. ಶಿಕ್ಷಕರಿಲ್ಲ. ಕೊರತಯೇ ಎಲ್ಲ…
ದುಡಿಯುವ ಕೈಗಳಿಗೆ ಶಕ್ತಿ ನೀಡಿಲ್ಲ. ದೊಡ್ಡ ದೊಡ್ಡ ಉದ್ದಿಮೆಗಳನ್ನು ಉತ್ತರ ಕರ್ನಾಟಕದಲ್ಲಿ ಸ್ಥಾಪನೆ ಮಾಡುವುದು ಹೋಗಲಿ. ಸಾಕಷ್ಟು ಶಿಕ್ಷಕರನ್ನು ನೇಮಕ ಮಾಡಲಿಲ್ಲ. ಈ ಭಾಗದಲ್ಲಿ ಶಾಲೆ ಇದ್ದರೆ ಶಿಕ್ಷಕರಿಲ್ಲ, ಆಸ್ಪತ್ರೆ ಇದ್ದರೆ ವೈದ್ಯರಿರೊದಿಲ್ಲ ಎಂದು ಟೀಕಿಸಿದರು.
ಬಿಪಿಎಲ್ ಕಾರ್ಡ್ ರದ್ದು….
ಅನ್ನಭಾಗ್ಯ ಯೋಜನೆಯದ್ದು ಮತ್ತೊಂದು ಕಥೆ. ನರೇಂದ್ರ ಮೋದಿ ಅವರು ಪ್ರತಿ ಕುಟುಂಬಕ್ಕೆ ಹತ್ತು ಕೆಜಿ ಅಕ್ಕಿ ನೀಡುತ್ತಿದ್ದರು. ಕಾಂಗ್ರೆಸ್ ಸರ್ಕಾರ ಹತ್ತು ಕೆಜಿ ಅಕ್ಕಿ ಕೊಡ್ತೇವೆ ಅಂದಿದ್ರು. ಅದನ್ನೂ ಸರಿಯಾಗಿ ನೀಡಲಿಲ್ಲ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಲಕ್ಷಾಂತರ ಬಡವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಿದ್ದಾರೆ ಎಂದು ದೂರಿದರು.
ಅನ್ನದಾತರಿಗೆ ಅನ್ಯಾಯ ಮಾಡುತ್ತಿರುವ ಈ ಸರ್ಕಾರ ಮತ್ತೊಂದು ಕಡೆ ಬಡವರಿಗೆ ಬರೆ ಎಳೆಯುತ್ತಿದೆ. ವೃದ್ಧಾಪ್ಯ ವೇತನ, ವಿಕಲಚೇತನರ ಪಿಂಚಣಿಯನ್ನೂ ಸರಿಯಾಗಿ ನೀಡುತ್ತಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ನೀಡುತ್ತಿದ್ದ ಹಾಲಿನ ಸಹಾಯಧನವನ್ನೂ ನೀಡುತ್ತಿಲ್ಲ ಎಂದರು.
ಕುಡುಕರ ರಾಜ್ಯ ಮಾಡಿದ ಕಾಂಗ್ರೆಸ್…
ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಕರ್ನಾಟಕವನ್ನು ಕುಡುಕರ ರಾಜ್ಯವಾಗಿ ಪರಿವರ್ತಿಸಿದ ಕೀರ್ತಿ ಈ ಕಾಂಗ್ರೆಸ್ ಸರ್ಕಾರದ್ದು. ಗಲ್ಲಿಗಲ್ಲಿಯಲ್ಲಿ ಹೆಂಡ ಮಾರಲು ಅವಕಾಶ ನೀಡಿದ್ದಾರೆ. ಗೃಹಲಕ್ಷ್ಮಿಯಡಿ ಎರಡು ಸಾವಿರ ನೀಡಿ ಅದೇ ಕುಟುಂಬದಿಂದ ಎಷ್ಟನ್ನು ದೋಚುತ್ತಿದ್ದೀರಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್‍ಗಿಂತಲೂ ಒಳ್ಳೆಯ ಗ್ಯಾರಂಟಿಗಳನ್ನು ಬಿಜೆಪಿ ನೀಡಿದೆ. ನೀರಾವರಿ ಯೋಜನೆ ನೀಡಿತ್ತು. ಆದರೆ ಈ ಸರ್ಕಾರ ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದೆ. ಯುವಕರಿಗೆ ಉದ್ಯೋಗ ನೀಡಲಿಲ್ಲ. ದಲಿತರ ಹಣವನ್ನೂ ಗ್ಯಾರಂಟಿಗಳಿಗೆ ಬಳಸಿದರು ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಸಾಲಮನ್ನಾ ಮಾಡಲಿ
ರಾಜ್ಯ ಸರ್ಕಾರದ ವ್ಯಾಪ್ತಿಯ ಸಹಕಾರ ಸಂಘದಲ್ಲಿನ ರೈತರ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರ್ಕಾರವೇ ಮುಂದಾಗಬೇಕು. ಆಕಾಶದಲ್ಲಿ ನಕ್ಷತ್ರ ತೋರಿಸುವುದು ಬಿಟ್ಟು ಸರ್ಕಾರ ಹೊಣೆಗಾರಿಕೆ ತೋರಿಸಲಿ. ಸಿಎಂ ಇದರಲ್ಲಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದನ್ನು ಬಿಡಲಿ. ಕೇಂದ್ರದ ಮೇಲೆ ಕೈ ತೋರಿಸುವುದು ಕೆಲಸ ಅಲ್ಲ. ಇಷ್ಟೊಂದು ಸಂಖ್ಯಾಬಲದ ಬಲಿಷ್ಠ ಸರ್ಕಾರ ಜನರಿಗೆ ಆಸರೆಯಾಗದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದರು.
ಬೀದಿ ಬದಿ ವ್ಯಾಪಾರಿಗಳ ಶಾಪ ತಟ್ಟುತ್ತೆ….
ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರದ ಬಹುದೊಡ್ಡ ಸಾಧನೆ ಎಂದರೆ ಬೀದಿ ಬದಿ ವ್ಯಾಪಾರಿಗಳನ್ನು ಖಾಲಿ ಮಾಡಿಸಿದ್ದು. ಎಲ್ಲಾ ಧರ್ಮದ ಜನರನ್ನೂ ಖಾಲಿ ಮಾಡಿಸಿ ಪರ್ಯಾಯ ವ್ಯವಸ್ಥೆ ಮಾಡದೆ ಅವರ ಬದುಕಿಗೆ ಖೆಡ್ಡಾ ತೋರಿದರು. ಅವರಿಗೆ ವ್ಯವಸ್ಥೆ ಮಾಡಲಿ. ಇಲ್ಲದಿದ್ರೆ ಅವರ ಶಾಪ ತಟ್ಟುತ್ತೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಕಾಂಗ್ರೆಸ್ ಯಡಿಯರಪ್ಪ ಅವರ ಮೇಲೆ ಮೂವತ್ತು ಕ್ರಿಮಿನಲ್ ಕೇಸ್ ಹಾಕಿದ್ದರು. ರಾಜಕೀಯವಾಗಿ ಯಡಿಯೂರಪ್ಪ ಅವರನ್ನು ಮುಗಿಸಲು ಷಡ್ಯಂತ್ರ, ಕುತಂತ್ರ ಮಾಡಿದರು. ಸಚಿವ ತಂಗಡಗಿ ಅವರಿಗೆ ಬಿಎಸ್‍ವೈ ಅವರ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ ಎಂದರು.
ಜನಾಂದೋಲವಾಗಿದೆ ನಮ್ಮ ಪಾದಯಾತ್ರೆ…
ದಿನೇ ದಿನೇ ನಮ್ಮ ಪಾದಯಾತ್ರೆ ಜನಾಂದೋಲವಾಗಿ ಪರಿವರ್ತನೆಯಾಗಿದೆ. ನಮ್ಮ ಯಶಸ್ಸು ನೋಡಿ ಪಾಪ ಮುಖ್ಯಮಂತ್ರಿ ಹತಾಶರಾಗಿ ಮಾತನಾಡುತ್ತಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಬರಪೀಡಿತ ಪ್ರದೇಶ ವೀಕ್ಷಣೆ ಮಾಡುತ್ತಿದ್ದಾರೆ. ಜೀವನದಲ್ಲಿ ಒಮ್ಮೆಯೂ ಹಸಿರು ಶಾಲು ಹಾಕದ ಸಿಎಂ ನಮ್ಮ ಪಾದಯಾತ್ರೆ ಪರಿಣಾಮ ಈಗ ಹಸಿರು ಶಾಲು ಧರಿಸಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ನಮ್ಮ ಜಯ ಎಂದರು.
ಮಾಜಿ ಸಚಿವ ಬಿ ಶ್ರೀರಾಮುಲು, ಮಾಜಿ ಶಾಸಕ ಅನಿಲ್ ಬೆನಕೆ, ಪಕ್ಷ ಮುಖಂಡರಾದ ಕೆ ವಿರೂಪಾಕ್ಷ, ಕೊಪ್ಪಳದ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಉಪಸ್ಥಿತರಿದ್ದರು.


