Homeಕರ್ನಾಟಕಕೆಪಿಎಸ್‌ಸಿ ಅಕ್ರಮದ ತನಿಖೆಯಲ್ಲಿ ಸತ್ಯ ಹೊರಬರಲಿದೆ : ಲಕ್ಷ್ಮಣ್

ಕೆಪಿಎಸ್‌ಸಿ ಅಕ್ರಮದ ತನಿಖೆಯಲ್ಲಿ ಸತ್ಯ ಹೊರಬರಲಿದೆ : ಲಕ್ಷ್ಮಣ್

ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ನಂತರ ಪ್ರಕರಣದ ಎಲ್ಲ ಸತ್ಯಗಳು ಹೊರಬರಲಿವೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಅವರು ನಿರಂತರವಾಗಿ ಕಾಂಗ್ರೆಸ್‌ ನಾಯಕರ ವಿರುದ್ಧ ಆರೋಪಗಳನ್ನು ಮಾಡುವ ಮೂಲಕ ಜೆಡಿಎಸ್‌ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

“2024ರಿಂದ ಆಗಸ್ಟ್‌ 2026ರವರೆಗೆ ಕುಮಾರಸ್ವಾಮಿ ಅವರು 148 ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ. 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕರನ್ನು ಮೆಚ್ಚಿಸುವ ಹಾಗೂ ಕಾಂಗ್ರೆಸ್‌ ನಾಯಕರನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಡಿ.ಕೆ. ಶಿವಕುಮಾರ್‌ ಸಿಎಂ ಆಗಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ

ಈ ಹಿಂದೆ ಸಿದ್ದರಾಮಯ್ಯ ಅವರ ವಿರುದ್ಧ ಕುಮಾರಸ್ವಾಮಿ ಅವರು ಮಾತನಾಡುತ್ತಿದ್ದರೂ ಸಿದ್ದರಾಮಯ್ಯ ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದೀಗ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಿರುವುದನ್ನು ಕುಮಾರಸ್ವಾಮಿ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಲಕ್ಷ್ಮಣ್ ಹೇಳಿದರು.

ಈಗ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. “ಕೆಪಿಎಸ್‌ಸಿ ಹಗರಣದಲ್ಲಿ ನನ್ನ ಪಾತ್ರ ಕಿಂಚಿತ್ತಾದರೂ ಸಾಬೀತಾದರೆ ನಾನು ಮತ್ತು ನನ್ನ ಕುಟುಂಬದವರು ರಾಜಕೀಯ ನಿವೃತ್ತಿ ಪಡೆಯುತ್ತೇವೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದರು.

ನೇಮಕಾತಿ ಬೊಮ್ಮಾಯಿ ಅವಧಿಯಲ್ಲಿ ನಡೆದಿತ್ತು
24 ಎಇಇ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ. ಅಂದಿನ ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರು ನೇಮಕಾತಿ ಪ್ರಕ್ರಿಯೆ ನಡೆಸಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಅವರನ್ನು ಯಡಿಯೂರಪ್ಪ ಅವರು ನೇಮಕ ಮಾಡಿದ್ದರು ಎಂದು ಲಕ್ಷ್ಮಣ್ ಆರೋಪಿಸಿದರು.

ಬಸವರಾಜ ಕನ್ನಾಳೆ ಎಂಬ ವ್ಯಕ್ತಿಯೊಂದಿಗೆ ಬಿಜೆಪಿ ನಾಯಕರಿಗೆ ಇರುವ ಸಂಬಂಧದ ಬಗ್ಗೆಯೂ ಪ್ರಶ್ನಿಸಿದ ಅವರು, ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಅಶ್ವತ್ಥ್ ನಾರಾಯಣ್ ಸೇರಿದಂತೆ ಹಲವು ನಾಯಕರೊಂದಿಗೆ ಆತ್ಮೀಯವಾಗಿರುವ ಛಾಯಾಚಿತ್ರಗಳಿವೆ ಎಂದರು.

“ಈತನನ್ನು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನನ್ನಾಗಿ ಮಾಡಿದ್ದು ಯಾರು? ಅಶ್ವತ್ಥ್ ನಾರಾಯಣ್ ಅವರೊಂದಿಗೆ ಕೇಕ್ ಕತ್ತರಿಸಿರುವುದು ಸೇರಿದಂತೆ ಹಲವು ಫೋಟೋಗಳಿವೆ. ಈತನಿಗೂ ಬಿಜೆಪಿ ನಾಯಕರಿಗೂ ಇರುವ ಸಂಬಂಧವೇನು ಎಂಬುದನ್ನು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು.ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಸಿಐಡಿ ತನಿಖೆ ಪೂರ್ಣಗೊಂಡ ಬಳಿಕ ಎಲ್ಲ ವಿಚಾರಗಳು ಬಹಿರಂಗವಾಗಲಿವೆ ಎಂದು ಹೇಳಿದರು.

ಪರೀಕ್ಷಾ ಅಕ್ರಮ ಬಿಜೆಪಿ ಸರ್ಕಾರದ ಅವಧಿಯದ್ದು

ಪರೀಕ್ಷಾ ಅಕ್ರಮ ನಡೆದಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂದು ಆರೋಪಿಸಿದ ಲಕ್ಷ್ಮಣ್, ಅಕ್ರಮದ ತನಿಖೆಗಾಗಿ ಮೊದಲು ಮೂವರು ಸದಸ್ಯರ ಸಮಿತಿ ರಚಿಸಲಾಗಿತ್ತು. ಆ ಸಮಿತಿಯಲ್ಲಿ ನ್ಯಾಯಮೂರ್ತಿಯೊಬ್ಬರ ಪುತ್ರ ಕೂಡ ಪರೀಕ್ಷೆ ಬರೆದಿದ್ದ ಹಿನ್ನೆಲೆಯಲ್ಲಿ ಸಮಿತಿಯ ವರದಿಯನ್ನು ತಿರಸ್ಕರಿಸಿ ಐದು ಸದಸ್ಯರ ಸಮಿತಿ ರಚಿಸಲಾಯಿತು. ಆ ಸಮಿತಿ 2026ರ ಜನವರಿಯಲ್ಲಿ ವರದಿ ನೀಡಿದೆ ಎಂದು ತಿಳಿಸಿದರು.

ನ್ಯಾಯಾಲಯ ಆಯ್ಕೆಯಾದ ಅಭ್ಯರ್ಥಿಗಳು ತಪ್ಪಿತಸ್ಥರು ಎಂದು ಎಲ್ಲಿಯೂ ಹೇಳಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದ್ದು, ಅಂತಿಮ ಆದೇಶ ಬರುವವರೆಗೆ ಅಭ್ಯರ್ಥಿಗಳು ಹುದ್ದೆಯಲ್ಲಿ ಮುಂದುವರಿಯಬಹುದು ಎಂದು ನ್ಯಾಯಾಲಯ ಹೇಳಿದೆ ಎಂದು ಹೇಳಿದರು.

ಪೆನ್‌ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದಿದ್ದರು

“ಕುಮಾರಸ್ವಾಮಿ ಅವರು ಪೆನ್‌ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇದುವರೆಗೂ ಬಿಡುಗಡೆ ಮಾಡಿಲ್ಲ. ಅಂದಿನಿಂದ ನಾನೂ ಜೇಬಿನಲ್ಲಿ ಪೆನ್‌ಡ್ರೈವ್ ಇಟ್ಟುಕೊಂಡಿದ್ದೇನೆ. ಅವರು ಪೆನ್‌ಡ್ರೈವ್ ಬಿಡುಗಡೆ ಮಾಡಿದ ನಂತರ ನಾನೂ ಬಿಡುಗಡೆ ಮಾಡುತ್ತೇನೆ,” ಎಂದು ಲಕ್ಷ್ಮಣ್ ವ್ಯಂಗ್ಯವಾಡಿದರು.

“ನಿಮ್ಮ ಬಳಿ ಇಡೀ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲ ಉಂಟುಮಾಡುವ ದಾಖಲೆಗಳಿದ್ದರೆ ಅದನ್ನು ಬಿಡುಗಡೆ ಮಾಡಲು 10 ದಿನಗಳ ಕಾಲಾವಕಾಶ ಏಕೆ ಬೇಕು?” ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರು ಇದೀಗ ಜೆನ್‌ ಜೀ ಯುವಕರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಆದರೆ ಈ ಹಗರಣದ ತನಿಖೆ ಸಿಐಡಿಯಿಂದ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಸತ್ಯ ಹೊರಬರಲಿದೆ ಎಂದು ಹೇಳಿದರು.

ಚುನಾವಣಾ ಆಯೋಗ ಬಿಜೆಪಿ ಏಜೆಂಟ್‌ನಂತೆ ವರ್ತಿಸುತ್ತಿದೆ

ಚುನಾವಣಾ ಆಯೋಗದ ವಿರುದ್ಧವೂ ಆರೋಪ ಮಾಡಿದ ಲಕ್ಷ್ಮಣ್, “ಇಡೀ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಎಎಸ್‌ಡಿಡಿಒ ಅಡಿಯಲ್ಲಿ ಮತದಾರರನ್ನು ಕರ್ನಾಟಕದಲ್ಲಿ ಡಿಲೀಟ್ ಮಾಡಲಾಗಿದೆ. ಸುಮಾರು 16 ಲಕ್ಷ ಮತದಾರರು ಗೈರುಹಾಜರಾಗಿದ್ದಾರೆ. ಬೇರೆಡೆಗೆ ಸ್ಥಳಾಂತರಗೊಂಡ ಮತದಾರರ ಸಂಖ್ಯೆ 66 ಲಕ್ಷದಷ್ಟಿದೆ,” ಎಂದರು.

ಚುನಾವಣಾ ಆಯುಕ್ತರು ಮಾತನಾಡಿದಾಗಲೆಲ್ಲ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಚುನಾವಣಾ ಆಯೋಗ ಬಿಜೆಪಿ ಏಜೆಂಟ್‌ನಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಎಸ್. ಮನೋಹರ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments