Homeಕರ್ನಾಟಕಮೋಹನ್ ಭಾಗವತ್ ರಿಂದ ವಿದೇಶದಲ್ಲಿ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಸಂದೇಶ ಹೇಗೆ ನೋಡಬೇಕು: ಬಿ ಕೆ ಹರಿಪ್ರಸಾದ್...

ಮೋಹನ್ ಭಾಗವತ್ ರಿಂದ ವಿದೇಶದಲ್ಲಿ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಸಂದೇಶ ಹೇಗೆ ನೋಡಬೇಕು: ಬಿ ಕೆ ಹರಿಪ್ರಸಾದ್ ಪ್ರಶ್ನೆ

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ನಡೆದ ಸರ್ವಧರ್ಮ ಸಂವಾದದಲ್ಲಿ, “ಮುಸ್ಲಿಮರಿಲ್ಲದ ಭಾರತವನ್ನು ಬಯಸುವವನು ನಿಜವಾದ ಹಿಂದೂ ಆಗಿರಲು ಸಾಧ್ಯವಿಲ್ಲ” ಎಂಬ ಅರ್ಥದ ಮಾತುಗಳನ್ನು ಆಡಿದ್ದಾರೆ. ಈಗ ಆರ್ ಎಸ್ ಎಸ್ ನನ್ನ ಪ್ರಶ್ನೆಗೆ ಉತ್ತರ ಕೊಡಬೇಕು. ಭಾರತದಲ್ಲಿ ಅಲ್ಪಸಂಖ್ಯಾತರ ಬಗ್ಗೆ ನಿರ್ಮಿಸಲಾಗುತ್ತಿರುವ ರಾಜಕೀಯ ವಾತಾವರಣಕ್ಕೂ, ವಿದೇಶದಲ್ಲಿ ಪ್ರತಿಪಾದಿಸಲಾಗುತ್ತಿರುವ ಭಾವೈಕ್ಯತೆಯ ಸಂದೇಶಕ್ಕೂ ಇಷ್ಟೊಂದು ವ್ಯತ್ಯಾಸ ಏಕೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಕಾನೂನಿನ ಮುಂದೆ ಸಮಾನ ರಕ್ಷಣೆಯ ಭರವಸೆ ನೀಡಿದೆ. ಆದ್ದರಿಂದ ಮುಸ್ಲಿಮರಾಗಲಿ, ಕ್ರೈಸ್ತರಾಗಲಿ ಅಥವಾ ಯಾವುದೇ ಧರ್ಮದವರಾಗಲಿ, ಅವರನ್ನು ಎರಡನೇ ದರ್ಜೆಯ ನಾಗರಿಕರಂತೆ ಕಾಣುವ ಯಾವುದೇ ರಾಜಕೀಯ ಅಥವಾ ಸಾಮಾಜಿಕ ದೃಷ್ಟಿಕೋನವು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಅಲ್ಪಸಂಖ್ಯಾತರನ್ನು ರಾಜಕೀಯ ಧ್ರುವೀಕರಣದ ಕೇಂದ್ರಬಿಂದುವನ್ನಾಗಿ ಮಾಡುವ ರಾಜಕಾರಣ ದೇಶದೊಳಗೆ ಮುಂದುವರಿಯುತ್ತಿರುವಾಗ, ವಿದೇಶದಲ್ಲಿ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಸಂದೇಶ ನೀಡುವುದನ್ನು ಹೇಗೆ ನೋಡಬೇಕು? ಇದು ಕೇವಲ ಭಾಷಣದ ಪ್ರಶ್ನೆಯಲ್ಲ, ಇದು ಆರ್ ಎಸ್ ಎಸ್ ಸಿದ್ದಾಂತದಲ್ಲಿನ ಪ್ರಾಮಾಣಿಕತೆಯ ಪ್ರಶ್ನೆಯೂ ಆಗಿದೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಪ್ರಸಿದ್ಧವಾಗಿರುವ ಕೊಲಂಬೊ ಘಟನೆಯನ್ನೂ ನೆನಪಿಸಿಕೊಳ್ಳಬೇಕು. 1977–79ರ ಜನತಾ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ, ಕೊಲಂಬೊದಲ್ಲಿ ನಡೆದ ಭೋಜನ ಕೂಟದಲ್ಲಿ ವಾಜಪೇಯಿ ಅವರು ಗೋಮಾಂಸ ಸೇವಿಸಿದರೆಂಬ ಘಟನೆ ಹಿರಿಯ ಪತ್ರಕರ್ತ ಬಿ.ಆರ್.ಪಿ. ಭಾಸ್ಕರ್ ಅವರ ಬರಹದಲ್ಲಿ ದಾಖಲಾಗಿದೆ. ಆ ಖಾದ್ಯ ಗೋಮಾಂಸವೇ ಎಂದು ಕೇಳಿದಾಗ, “This is not Indian cow” ಎಂದು ವಾಜಪೇಯಿ ಹಾಸ್ಯಮಿಶ್ರಿತವಾಗಿ ಉತ್ತರಿಸಿದರೆಂದು ಅವರು ದಾಖಲಿಸಿದ್ದಾರೆ. ಇದನ್ನು ಕೇವಲ ವೈಯಕ್ತಿಕ ಆಹಾರ ಪದ್ಧತಿಯ ಘಟನೆ ಎಂದು ನೋಡಿದರೆ ವಿಷಯ ಅಲ್ಲಿಗೇ ಮುಗಿಯುತ್ತದೆ. ಆದರೆ ಭಾರತದಲ್ಲಿ ‘ಗೋಮಾತೆ’ಯನ್ನು ಧಾರ್ಮಿಕ–ರಾಜಕೀಯ ಸಂಕೇತವನ್ನಾಗಿ ಬಳಸುವ ರಾಜಕಾರಣದ ಹಿನ್ನೆಲೆಯಲ್ಲಿ, ದೇಶದೊಳಗಿನ ಭಾಷೆ ಮತ್ತು ವಿದೇಶದ ಸಂದರ್ಭದಲ್ಲಿನ ವರ್ತನೆಯ ನಡುವಿನ ವ್ಯತ್ಯಾಸವನ್ನು ಪ್ರಶ್ನಿಸುವುದು ರಾಜಕೀಯವಾಗಿ ಅಪ್ರಸ್ತುತವಾಗುವುದಿಲ್ಲ ಎಂದು ಹೇಳಿದ್ದಾರೆ.

ಇದೇ ಪ್ರಶ್ನೆಯನ್ನು ಇಂದು ಮೋಹನ್ ಭಾಗವತ್ ಅವರ ಮಾತುಗಳಿಗೂ ಅನ್ವಯಿಸಬಹುದು. ಭಾರತದಲ್ಲಿ ಅಲ್ಪಸಂಖ್ಯಾತರನ್ನು ಅನುಮಾನ, ಭಯ ಮತ್ತು ಧ್ರುವೀಕರಣದ ರಾಜಕೀಯಕ್ಕೆ ಒಳಪಡಿಸುವ ವಾತಾವರಣವನ್ನು ಪ್ರಶ್ನಿಸದೆ, ವಿದೇಶದ ವೇದಿಕೆಯಲ್ಲಿ ಭಾವೈಕ್ಯತೆಯ ಮಾತುಗಳನ್ನು ಆಡುವುದರಿಂದ ಭಾಗವತ್ ಮಾತುಗಳು ವಿಶ್ವಾಸಾರ್ಹವಾಗುವುದಿಲ್ಲ ಎಂದು ಕುಟುಕಿದ್ದಾರೆ.

ಆರ್‌ಎಸ್‌ಎಸ್ ನಿಜವಾಗಿಯೂ ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧವಲ್ಲ ಎಂದಾದರೆ, ಅಲ್ಪಸಂಖ್ಯಾತರು ಪದೇಪದೇ ಆರ್ ಎಸ್ ಎಸ್ ಬಿಜೆಪಿ ರಾಜಕೀಯದ ಗುರಿಯಾಗುವುದೇಕೆ? ಧರ್ಮದ ಆಧಾರದ ಮೇಲೆ ಮತದಾರರನ್ನು ವಿಭಜಿಸುವ ರಾಜಕೀಯ ನಿರೂಪಣೆಗಳು ಏಕೆ ಬೆಳೆಸಲ್ಪಡುತ್ತವೆ ಬಹುಸಂಖ್ಯಾತ–ಅಲ್ಪಸಂಖ್ಯಾತ ಎಂಬ ವಿಭಜನೆಯ ಮೂಲಕ ಸಾಮಾಜಿಕ ಅಸಮಾನತೆಗಳ ಮೂಲ ಪ್ರಶ್ನೆಗಳನ್ನು ಏಕೆ ಮರೆಮಾಚಲಾಗುತ್ತದೆ ಎಂದು ಕೇಳಿದ್ದಾರೆ.

ಆರ್‌ಎಸ್‌ಎಸ್ ತನ್ನನ್ನು ನೇರವಾಗಿ ಅಲ್ಪಸಂಖ್ಯಾತರ ವಿರೋಧಿ ಸಂಘಟನೆ ಎಂದು ಕರೆಯುತ್ತದೆಯೇ ಎಂಬುದು ಇಲ್ಲಿ ಮುಖ್ಯವಲ್ಲ. ಅದರ ರಾಜಕೀಯ ಚಿಂತನೆ ಮತ್ತು ಅದರೊಂದಿಗೆ ಗುರುತಿಸಿಕೊಳ್ಳುವ ರಾಜಕೀಯ ಶಕ್ತಿಗಳ ಕಾರ್ಯವೈಖರಿ ಸಮಾಜದಲ್ಲಿ ಯಾವ ಪರಿಣಾಮವನ್ನು ಉಂಟುಮಾಡುತ್ತಿದೆ ಎಂಬುದೇ ಮುಖ್ಯವಾಗುತ್ತದೆ. ಭಾರತದ ಸಾಮಾಜಿಕ ವಾಸ್ತವದಲ್ಲಿ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳು ಶತಮಾನಗಳಿಂದ ಶಿಕ್ಷಣ, ಉದ್ಯೋಗ, ಸಂಪತ್ತು, ಅಧಿಕಾರ ಮತ್ತು ಪ್ರಾತಿನಿಧ್ಯದಲ್ಲಿ ಅಸಮಾನತೆಯನ್ನು ಎದುರಿಸುತ್ತಿವೆ. ಸಂವಿಧಾನವು ಈ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಮೀಸಲಾತಿ, ಸಮಾನ ಅವಕಾಶ, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಪ್ರಾತಿನಿಧ್ಯದಂತಹ ವ್ಯವಸ್ಥೆಗಳನ್ನು ರೂಪಿಸಿತು.
ಆದರೆ ಸಾಮಾಜಿಕ ನ್ಯಾಯದ ಪ್ರಶ್ನೆಯ ಬದಲು ಧಾರ್ಮಿಕ ಗುರುತಿನ ಪ್ರಶ್ನೆಯನ್ನು ಮುಂಚೂಣಿಗೆ ತಂದಾಗ, ದಲಿತ–OBC ಸಮುದಾಯಗಳ ನಿಜವಾದ ಹಕ್ಕುಗಳ ಪ್ರಶ್ನೆ ಹಿಂದೆ ಸರಿಯುತ್ತದೆ. ಅದಕ್ಕಾಗಿಯೇ ಆರ್ ಎಸ್ ಎಸ್ ಭಾರತದಲ್ಲಿ ಹಿಂದೂ-ಮುಸ್ಲಿಂ- ಕ್ರೈಸ್ತ ಗಲಾಟೆಯನ್ನು ಹುಟ್ಟು ಹಾಕುತ್ತದೆ. ನ್ಯೂಯಾರ್ಕ್ ನಲ್ಲಿ ಭಾಗವತ್ ಮಾಡಿದ ಭಾಷಣವನ್ನು ನಾವು ಹೀಗೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಮೋಹನ್ ಭಾಗವತ್, ಆರ್ ಎಸ್ ಎಸ್ ನ ಇಂತಹ ಪಿತೂರಿಗಳ ಬಗ್ಗೆ ದೇಶದ ಹಿಂದೂ ಮುಸ್ಲೀಮರೆಲ್ಲರೂ ಜಾಗೃತರಾಗಿರಬೇಕು. “ಹಿಂದೂ ವಿರುದ್ಧ ಮುಸ್ಲಿಂ” ಎಂಬ ರಾಜಕೀಯ ಚೌಕಟ್ಟು ಸಮಾಜದ ಗಮನವನ್ನು ಬೇರೆಡೆಗೆ ತಿರುಗಿಸುವ ಸಾಧನವಾಗಬಾರದು. ಸಂವಿಧಾನದ ದೃಷ್ಟಿಯಲ್ಲಿ ಭಾರತದ ನಾಗರಿಕನ ಮೊದಲ ಗುರುತು ಭಾರತೀಯತೆಯೇ ಹೊರತು ಧರ್ಮವಲ್ಲ. ಸರ್ಕಾರದ ಕರ್ತವ್ಯ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ತೃಪ್ತಿಪಡಿಸುವುದಲ್ಲ. ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ಸಮಾನವಾಗಿ ರಕ್ಷಿಸುವುದು .ಹೀಗಾಗಿ ಮೋಹನ್ ಭಾಗವತ್ ಅವರು ವಿದೇಶದಲ್ಲಿ ಆಡಿರುವುದು ಹಿಂದೂ–ಮುಸ್ಲಿಂ ಏಕತೆಯ ಮಾತುಗಳು ಎಂದು ಅಂದುಕೊಳ್ಳಬೇಕಿಲ್ಲ. ಒಂದು ವೇಳೆ ಮೋಹನ್ ಭಾಗವತ್ ಮಾತುಗಳು ಪ್ರಾಮಾಣಿಕವಾಗಿದ್ದೇ ಹೌದಾದಲ್ಲಿ, ಅದೇ ಸಂದೇಶ ಭಾರತದ ರಾಜಕೀಯ ಮತ್ತು ಸಾಮಾಜಿಕ ಬದುಕಿನಲ್ಲೂ ಪ್ರತಿಫಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿದೇಶದ ವೇದಿಕೆಯಲ್ಲಿ ಭಾವೈಕ್ಯತೆ, ದೇಶದೊಳಗೆ ಶತ್ರುತ್ವ, ಈ ದ್ವಂದ್ವವನ್ನು ಭಾರತ ಪ್ರಶ್ನಿಸುತ್ತದೆ. ಮುಸ್ಲಿಮರನ್ನು ಪ್ರೀತಿಸುವಂತೆ ವಿದೇಶದಲ್ಲಿ ಮಾತನಾಡುವುದಷ್ಟೇ ಸಾಕಾಗುವುದಿಲ್ಲ. ಭಾರತದಲ್ಲಿಯೂ ಅವರನ್ನು ಸಹೋದರರಂತೆ ನೋಡುವ ವಾತಾವರಣವನ್ನು ಹಾಳು ಮಾಡಬಾರದು. ವಿದೇಶಿ ವೇದಿಕೆಯಲ್ಲಿ ಕೇಳಿಸುವ ಭಾವೈಕ್ಯತೆಯ ಭಾಷೆ, ಭಾರತದ ಬೀದಿಗಳಲ್ಲೂ ಕೇಳಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments