– ಏಕಗ್ರಾಮ ಕುಡಿಯುವ ನೀರು ಯೋಜನೆಗೆ 30000 ಕೋಟಿ ರೂ.
– ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 37000 ಕೋಟಿ ರೂ.
ಗ್ರಾಮೀಣ ಪ್ರದೇಶದಲ್ಲಿ ಮೇಲ್ಮೈ ನೀರಿನಿಂದ ಕುಡಿಯುವ ನೀರು ಪೂರೈಕೆ ಮಾಡಲು ಬಹುಗ್ರಾಮ ಮತ್ತು ಏಕ ಗ್ರಾಮ ಕುಡಿಯುವ ನೀರು ಯೋಜನೆಯನ್ನು ಹಂತ ಹಂತವಾಗಿ ಜಾರಿ ಮಾಡಲಾಗುತ್ತಿದ್ದು, ಹಲವು ಕಾಮಗಾರಿ ಪೂರ್ಣಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಜಲ ಆಸ್ತಿ ನಿರ್ವಹಣೆ ತಂತ್ರಾಂಶ ಮತ್ತು ಆಪ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಏಕಗ್ರಾಮ ಕುಡಿಯುವ ನೀರಿನ ಯೋಜನೆಗೆ 30 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 37 ಸಾವಿರ ಕೋಟಿ ರೂ. ಹಂಚಿಕೆ ಆಗಿದೆ. ಈ ಎರಡೂ ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಸುಮಾರು 67 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, 29 ಸಾವಿರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಈಶ್ವರ ಖಂಡ್ರೆ ವಿವರಿಸಿದರು.


