ರಾಜೀವ್ ಗಾಂಧೀ ನನ್ನ ರೋಲ್ ಮಾಡೆಲ್: ಈಶ್ವರ ಖಂಡ್ರೆ
ಸಂಪರ್ಕ ಕ್ರಾಂತಿಯ ಮೂಲಕ ಆಧುನಿಕ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ್ದೇ ದಿವಂಗತ ಪ್ರಧಾನಿ ರಾಜೀವ್ ಗಾಂಧೀ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟರು.
ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧೀ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ದಿನದ ಅಂಗವಾಗಿ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಸದ್ಭಾವನಾ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜೀವ್ ಗಾಂಧೀ ಅವರು ಸ್ಯಾಮ್ ಪಿಟ್ರೋಡೋ ಜೊತೆಗೂಡಿ ಸಂಪರ್ಕ ಕ್ರಾಂತಿಗೆ ನಾಂದಿ ಹಾಡದಿದ್ದರೆ, ಇಂದು ನಾವು 4 ಜಿ, 5ಜಿ ಬಳಸಲು ಆಗುತ್ತಿರಲಿಲ್ಲ ಎಂದರು.
ಪಂಚಾಯತ್ ರಾಜ್ ಇಲಾಖೆಯಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಅವರು ಪ್ರಯತ್ನಿಸಿದರು. ಮಹಾತ್ಮಾ ಗಾಂಧೀ ಅವರ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ನನಸು ಮಾಡಲು ಸಾಂವಿಧಾನಿಕ ತಿದ್ದುಪಡಿಗೆ ಪ್ರಯತ್ನಿಸಿದ್ದರು. ಲೈಸನ್ಸ್ ರಾಜ್ ಸಂಕಷ್ಟದಿಂದ ಜನರನ್ನು ಪಾರು ಮಾಡಿದರು ಎಂದರು.
ಜನರು ಸುಗಮ ಜೀವನ ನಡೆಸಲು ಅನುಕೂಲ ಕಲ್ಪಿಸುವಂತಹ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದ ಕೀರ್ತಿ ರಾಜೀವ್ ಗಾಂಧೀ ಅವರಿಗೆ ಸಲ್ಲುತ್ತದೆ ದೇಶದ ಆರ್ಥಿಕ ನೀತಿಗಳಿಗೆ ಮತ್ತು ಹಲವು ರಾಷ್ಟ್ರಗಳ ಬಾಂಧವ್ಯವರ್ಧನೆಗೆ ರಾಜೀವ್ ಗಾಂಧೀ ಕೊಟ್ಟ ಕೊಡುಗೆ ಅಪಾರವಾದ್ದು ಎಂದು ಹೇಳಿದರು.
ಕೋಲ್ಕತ್ತಾದಲ್ಲಿ ನಡೆದ ಸೇವಾದಳದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ, ರಾಜೀವ್ ಗಾಂಧೀ ಅವರಿಂದ ಪ್ರಭಾವಿತರಾಗಿ ರಾಜಕೀಯ ಜೀವನ ಪ್ರವೇಶಿಸಿದ್ದಾಗಿ ತಿಳಿಸಿದ ಈಶ್ವರ ಖಂಡ್ರೆ, ರಾಜೀವ್ ಗಾಂಧೀ ತಮ್ಮ ರೋಲ್ ಮಾಡೆಲ್ ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಹರಿಕಾರ ಎಂದೇ ಖ್ಯಾತರಾಗಿದ್ದ ದೇವರಾಜ ಅರಸು ಅವರ ಕೊಡುಗೆಯನ್ನೂ ಖಂಡ್ರೆ ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಚಿವರುಗಳಾದ ಕೆ.ಜೆ. ಜಾರ್ಜ್, ಶಾಸಕ ತನ್ವಿರ್ ಸೇಠ್, ಮಾಜಿ ಸಚಿವ ಬೋಸರಾಜ್ ಮೊದಲಾದವರು ಭಾಗಿಯಾಗಿದ್ದರು.


