ಕ್ಷೇತ್ರ ಪುನರ್‌ವಿಂಗಡಣೆಗೆ 1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು, ಮುಂದಿನ 25 ವರ್ಷಗಳವರೆಗೆ ಲೋಕಸಭೆಯ ಈಗಿರುವ 543 ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವಂತೆ ಹಾಗೂ ಇದೇ 543 ಸ್ಥಾನಗಳ ವ್ಯಾಪ್ತಿಯಲ್ಲಿ ಮಹಿಳಾ ಮೀಸಲಾತಿಯನ್ನು ಕಲ್ಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ದಕ್ಷಿಣ ವಲಯ ಮಂಡಳಿ ಅಂಗೀಕರಿಸಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಆಗ್ರಹಿಸಿದರು.
ಮಹಾಬಲಿಪುರo ನಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ 31ನೇ ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್, ಜನಸಂಖ್ಯೆ ನಿಯಂತ್ರಿಸುವಲ್ಲಿ ದಕ್ಷಿಣ ರಾಜ್ಯಗಳು ಸಾಧಿಸಿರುವ ಯಶಸ್ಸು ಅವುಗಳ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡಲು ಕಾರಣವಾಗಬಾರದು ಎಂದು ಹೇಳಿದರು.
“ಯಾವುದೇ ದಕ್ಷಿಣ ರಾಜ್ಯ ತನ್ನ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಪ್ರಾತಿನಿಧ್ಯ ಎಂಬುದು ಕೇವಲ ಸಂಖ್ಯೆಗಳ ವಿಚಾರವಲ್ಲ. ಅದು ಪ್ರಭಾವ ಮತ್ತು ಧ್ವನಿಯ ವಿಚಾರವೂ ಹೌದು,” ಎಂದು ತಿಳಿಸಿದರು.
ಜನಸಂಖ್ಯೆ ಸ್ಥಿರೀಕರಣಕ್ಕೆ ದೇಶ ನೀಡಿದ ಕರೆಯನ್ನು ದಕ್ಷಿಣ ರಾಜ್ಯಗಳು ಶಿಸ್ತು ಮತ್ತು ಯಶಸ್ಸಿನೊಂದಿಗೆ ಅನುಸರಿಸಿವೆ. ಕ್ಷೇತ್ರ ಪುನರ್‌ವಿಂಗಡಣೆ ಸಂದರ್ಭದಲ್ಲಿ ಈ ಸಾಧನೆಗಾಗಿ ಅವುಗಳನ್ನು ಶಿಕ್ಷಿಸಬಾರದು ಎಂದು ಶಿವಕುಮಾರ್ ಹೇಳಿದರು.
“ನಮ್ಮ ಈ ಯಶಸ್ಸು ನಮ್ಮ ಧ್ವನಿಯನ್ನು ದುರ್ಬಲಗೊಳಿಸಲು ಎಂದಿಗೂ ಕಾರಣವಾಗಬಾರದು. ನಮ್ಮ ಆರ್ಥಿಕ ಪ್ರಭಾವಕ್ಕೆ ತಕ್ಕಂತೆ ರಾಜಕೀಯ ಧ್ವನಿಯೂ ಇರಬೇಕು,” ಎಂದರು.
1971ರ ಜನಸಂಖ್ಯೆಯನ್ನು ಆಧಾರವಾಗಿ ಗೌರವಿಸಬೇಕು ಮತ್ತು ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಬದಲಾಯಿಸಬಾರದು ಎಂದು ಮುಖ್ಯಮಂತ್ರಿ ಸ್ಪಷ್ಟವಾಗಿ ಆಗ್ರಹಿಸಿದರು.
“ನಾನು ಹೇಳುತ್ತಿರುವುದನ್ನು ಇಲ್ಲಿರುವ ಎಲ್ಲ ಮುಖ್ಯಮಂತ್ರಿಗಳು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ. 1971ರ ಆಧಾರವನ್ನು ಗೌರವಿಸೋಣ ಮತ್ತು ನಮ್ಮ ಧ್ವನಿಯ ಬಲವನ್ನು ರಕ್ಷಿಸೋಣ,” ಎಂದು ಅವರು ಹೇಳಿದರು.
ಕ್ಷೇತ್ರ ಪುನರ್‌ವಿಂಗಡಣೆ ವಿಚಾರವನ್ನು ಮಹಿಳಾ ಮೀಸಲಾತಿಯೊಂದಿಗೆ ಜೋಡಿಸಿದ ಶಿವಕುಮಾರ್, ಹೊಸ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯ ಕಾರಣಕ್ಕೆ ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ವಿಳಂಬ ಮಾಡಬಾರದು ಎಂದು ಹೇಳಿದರು.
“ಮಹಿಳೆಯರು ತಮ್ಮ ನ್ಯಾಯಯುತ ಪ್ರಾತಿನಿಧ್ಯಕ್ಕಾಗಿ ಸಾಕಷ್ಟು ಕಾಲ ಕಾದಿದ್ದಾರೆ. ಜನಸಂಖ್ಯೆಯ ಲೆಕ್ಕಾಚಾರಕ್ಕಾಗಿ ಅವರ ಮೀಸಲಾತಿ ಕಾಯಬಾರದು. ಮುಂದಿನ 25 ವರ್ಷಗಳವರೆಗೆ ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಈಗಿರುವ 543ಕ್ಕೆ ಸೀಮಿತಗೊಳಿಸುವಂತೆ ಹಾಗೂ ಇದೇ 543 ಸ್ಥಾನಗಳ ವ್ಯಾಪ್ತಿಯಲ್ಲಿ ಮಹಿಳಾ ಮೀಸಲಾತಿಯನ್ನು ಕಲ್ಪಿಸುವಂತೆ ನಿರ್ಣಯ ಅಂಗೀಕರಿಸಬೇಕೆಂದು ಅವರು ದಕ್ಷಿಣ ವಲಯ ಮಂಡಳಿಯನ್ನು ಒತ್ತಾಯಿಸಿದರು.
“ಆದ್ದರಿಂದ ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಈಗಿರುವ ಸಂಖ್ಯೆಯಲ್ಲೇ ಸ್ಥಿರಗೊಳಿಸಿ, ಇದೇ ಸಂಖ್ಯೆಯೊಳಗೆ ಮಹಿಳಾ ಮೀಸಲಾತಿ ಒದಗಿಸುವಂತೆ ಈ ಮಂಡಳಿ ನಿರ್ಣಯ ಕೈಗೊಳ್ಳಬೇಕು ಎಂದು ನಾನು ಒತ್ತಾಯಿಸುತ್ತೇನೆ. ನಮ್ಮ ಈ ಸಾಮೂಹಿಕ ನಿಲುವಿನ ಹಿಂದೆ ಒಗ್ಗಟ್ಟಾಗಿ ನಿಲ್ಲುವಂತೆ ನನ್ನ ಸಹ ಮುಖ್ಯಮಂತ್ರಿಗಳನ್ನು ಕೋರಿಕೊಳ್ಳುತ್ತೇನೆ,” ಎಂದು ಅವರು ಹೇಳಿದರು.
ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯು ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾಗಿರುವ ರಾಜ್ಯಗಳು ಮತ್ತು ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯಗಳ ನಡುವಿನ ಸಂಸತ್ ಪ್ರಾತಿನಿಧ್ಯದ ಸಮತೋಲನವನ್ನು ಬದಲಾಯಿಸಬಹುದು ಎಂಬ ಆತಂಕ ದಕ್ಷಿಣ ರಾಜ್ಯಗಳಲ್ಲಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಶಿವಕುಮಾರ್ ಈ ವಿಚಾರವನ್ನು ಪ್ರಸ್ತಾಪಿಸಿದರು.
ದಕ್ಷಿಣ ಭಾರತದ ರಾಜಕೀಯ ಧ್ವನಿಯನ್ನು ರಕ್ಷಿಸುವುದು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ನ್ಯಾಯಸಮ್ಮತತೆಯನ್ನು ಖಚಿತಪಡಿಸುವ ಪ್ರಮುಖ ಭಾಗವಾಗಿದೆ ಎಂದು ಅವರು ಹೇಳಿದರು.
“ನಮ್ಮ ಧ್ವನಿಯಲ್ಲಿ ನ್ಯಾಯ ಎಂಬುದು ಒಂದು ಭಾಗ. ನಮ್ಮ ಸಂಪನ್ಮೂಲಗಳಲ್ಲಿ ನ್ಯಾಯ ಎಂಬುದು ಮತ್ತೊಂದು ಭಾಗ,” ಎಂದರು.


