ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ ನಾನು ಮಾತನಾಡಿದಾಗೆಲ್ಲಾ, ಶಿಕ್ಷಕರ ನೇಮಕ ಯಾವಾಗ ಎಂದು ಎಲ್ಲರೂ ನನ್ನನ್ನು ಕೇಳುತ್ತಿದ್ದರು. ಈಗ 15 ಸಾವಿರ ಶಿಕ್ಷಕರ ನೇಮಕಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಂಡಿರುವ ಅವರು, “ಇದರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 6,967 ಹುದ್ದೆಗಳು ಮೀಸಲಾಗಿವೆ. 8,033 ಹುದ್ದೆಗಳು ಉಳಿಕೆ ಮೂಲ ವೃಂದದ ಹುದ್ದೆಗಳಾಗಿವೆ” ಎಂದು ಹೇಳಿದ್ದಾರೆ.
“ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶ ಹೊಂದಿದ್ದ ನಮ್ಮ ಸರ್ಕಾರ, ಶಿಕ್ಷಕರ ನೇಮಕದಲ್ಲಿಯೂ ಕೆಲ ಮಾರ್ಪಾಡು ಮಾಡಲು ನಿರ್ಧರಿಸಿತ್ತು. ಅಲ್ಲದೇ ಒಳ ಮೀಸಲಾತಿ ಜಾರಿ, ನ್ಯಾಯಾಲಯದ ತಡೆಯಾಜ್ಞೆ ಮತ್ತಿತರ ಕಾರಣಕ್ಕೆ ನೇಮಕ ಪ್ರಕ್ರಿಯೆ ಆರಂಭಿಸುವುದು ತಡವಾಗಿತ್ತು. ಆದರೆ ಈಗ ನೇಮಕ ಪ್ರಕ್ರಿಯೆಯನ್ನು ನಾವು ಆರಂಭಿಸಿದ್ದೇವೆ” ಎಂದು ವಿವರಿಸಿದ್ದಾರೆ.
“ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು, ಗಣಕ ವಿಜ್ಞಾನ ಶಿಕ್ಷಕರನ್ನು, ದೈಹಿಕ ಶಿಕ್ಷಣ ಶಿಕ್ಷಕರನ್ನು (ಗ್ರೇಡ್I ಮತ್ತು ಗ್ರೇಡ್II), ಪ್ರೌಢ ಶಾಲಾ ಸಹ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಶೈಕ್ಷಣಿಕ ಜಿಲ್ಲಾವಾರು ಖಾಲಿ ಇರುವ ಹುದ್ದೆಗಳಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿ, ನೇಮಕ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ದಿನಾಂಕ 18-08-2026 ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಅಧಿಸೂಚನೆಯನ್ನು ಸರ್ಕಾರ ಇ-ರಾಜ್ಯಪಾತ್ರ ವೆಬ್ಸೈಟ್ನಲ್ಲಿ(www.erajyapatra.karnataka.gov.in) ಅಧಿಕೃತವಾಗಿ ಪ್ರಕಟಿಸಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.
“ನಿಮ್ಮ ಜಿಲ್ಲೆಯಲ್ಲಿ ಯಾವೆಲ್ಲಾ ಶಿಕ್ಷಕರ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ, ಎಷ್ಟು ಹುದ್ದೆಗಳಿವೆ, ಮೀಸಲಾತಿ ಹಂಚಿಕೆ, ನೇಮಕದಲ್ಲಿ ಆಗಿರುವ ಬದಲಾವಣೆಗಳೇನೇನು ಎಂಬೆಲ್ಲಾ ಮಾಹಿತಿಯನ್ನು ನೀವು ಈ ಅಧಿಸೂಚನೆಗಳಿಂದ ಪಡೆದುಕೊಳ್ಳಬಹುದು. ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್ ಸೈಟ್: https://schooleducation.kar.nic.in ಗೆ ಭೇಟಿ ನೀಡಬಹುದು” ಎಂದಿದ್ದಾರೆ.
ಪಾರದರ್ಶಕವಾಗಿ ಮತ್ತು ಯಾವುದೇ ಗೊಂದಲವಿಲ್ಲದಂತೆ ಈ ನೇಮಕ ಪ್ರಕ್ರಿಯೆ ನಡೆಸಲು ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನು ನೀಡಿದ್ದೇನೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುಲು ನಮ್ಮ ಕಾಂಗ್ರೆಸ್ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.


