Homeಕರ್ನಾಟಕವಿಬಿಜಿ ರಾಮ್ ಜಿ: ಗ್ರಾಮೀಣರಿಗೆ ಗರಿಷ್ಠ ಉದ್ಯೋಗ ನೀಡಲು ಈಶ್ವರ ಖಂಡ್ರೆ ಸೂಚನೆ

ವಿಬಿಜಿ ರಾಮ್ ಜಿ: ಗ್ರಾಮೀಣರಿಗೆ ಗರಿಷ್ಠ ಉದ್ಯೋಗ ನೀಡಲು ಈಶ್ವರ ಖಂಡ್ರೆ ಸೂಚನೆ

  • ಉದ್ಯೋಗ ಖಾತ್ರಿ: ಗ್ರಾ.ಪಂ.ಗೆ ಎಸ್ಓಪಿ, ಮಾರ್ಗಸೂಚಿ ಕಳಿಸಿ – ಈಶ್ವರ ಖಂಡ್ರೆ

ಮಳೆ ಕೊರತೆಯ ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲ ಅರ್ಹ ಗ್ರಾಮೀಣರಿಗೆ ಉದ್ಯೋಗ ಖಾತ್ರಿಪಡಿಸಲು ಮತ್ತು ನಿತ್ಯ 5 ಲಕ್ಷ ಮಾನವ ದಿನ ಸೃಜನೆಗಾಗಿ ಗರಿಷ್ಠ ಉದ್ಯೋಗ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, ಮನ್ರೇಗಾದ ಬದಲಾದ ರೂಪ ವಿಬಿಜಿ ರಾಮ್ ಜಿಯನ್ನು ಆರ್ಥಿಕ ಹೊರೆಯ ನಡುವೆಯೂ ರಾಜ್ಯ ಸರ್ಕಾರ ಬಡವರ, ವಂಚಿತರ ಹಿತದೃಷ್ಟಿಯಿಂದ ಜಾರಿಗೆ ತಂದಿದ್ದು, ಪ್ರಮಾಣಿತ ಕಾರ್ಯಾಚರಣೆ ಮಾನದಂಡ, ಆಡಳಿತಾತ್ಮಕ, ತಾಂತ್ರಿಕ ಮಾರ್ಗಸೂಚಿಗಳನ್ನು ಎಲ್ಲ ಗ್ರಾ.ಪಂ.ಗಳಿಗೆ ಕಳುಹಿಸಿ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ನೀಡಿ, ಶಾಶ್ವತ ಮತ್ತು ಗುಣಮಟ್ಟದ ಆಸ್ತಿ ಸೃಷ್ಟಿಸುವಂತೆ ಆದೇಶಿಸಿದ್ದಾರೆ.

ಕೆಲವು ಪಿಡಿಓಗಳು ವಿಬಿಜಿ ರಾಮ್ ಜಿ ಸ್ಪಷ್ಟ ಮಾರ್ಗಸೂಚಿ ಇಲ್ಲದ ಕಾರಣ ಅನುಷ್ಠಾನಕ್ಕೆ ತೊಡಕಾಗಿದೆ ಎಂದು ತಿಳಿಸಿದ್ದು, ವಿಬಿಜಿ ರಾಮ್ ಜಿಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಓ.ಪಿ.), ತಾಂತ್ರಿಕ ಮತ್ತು ಆಡಳಿತಾತ್ಮಕ ಮಾರ್ಗಸೂಚಿ, ಮಾದರಿ, ಅಂದಾಜು, ಕಾಮಗಾರಿ, ವೆಚ್ಚದ ಮಿತಿ, 60:40 ಕೂಲಿ-ಸಾಮಗ್ರಿ ಅನುಪಾತ, ಯುಕ್ತಧಾರಾ ಪೋರ್ಟಲ್ ಕಾರ್ಯವಿಧಾನ ಹಾಗೂ ಹೊಣೆಗಾರಿಕೆ ನಕ್ಷೆ, ಕ್ರಿಯಾ ಯೋಜನೆ ಸ್ವರೂಪ ಕುರಿತಂತೆ ಸ್ಪಷ್ಟ ಮಾಹಿತಿ ನೀಡಲು ಸೂಚನೆ ನೀಡಿದ್ದಾರೆ.

ಮುಖ್ಯಕಾರ್ಯದರ್ಶಿಗಳ ಸಮ್ಮುಖದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗಳ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಯಾವುದೇ ಸಿಇಓ ವಿಬಿಜಿ ರಾಮ್ ಜಿ ಅನುಷ್ಠಾನದಲ್ಲಿ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿಲ್ಲವಾದರೂ, ಕೆಲವೆಡೆ ಗೊಂದಲ ಇದ್ದು, ಇದನ್ನು ನಿವಾರಿಸಿ ಎಂದು ತಿಳಿಸಿದ್ದಾರೆ.

ಮಳೆ ಕೊರತೆಯಿಂದ ರೈತರು, ಗ್ರಾಮೀಣರು ಸಂಕಷ್ಟದಲ್ಲಿರುವ ಪ್ರಸಕ್ತ ಸನ್ನಿವೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಮೀಣ ಬಡವರಿಗೆ, ವಂಚಿತರಿಗೆ, ಶೋಷಿತರಿಗೆ, ವಿಶೇಷ ಚೇತನರಿಗೆ, ಮಹಿಳೆಯರಿಗೆ, ದಲಿತರಿಗೆ ಉದ್ಯೋಗ ದೊರಕದಿದ್ದರೆ ಯೋಜನೆಯ ಉದ್ದೇಶವೇ ಅರ್ಥ ಕಳೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ವಾರಾಂತ್ಯದೊಳಗೆ ಮಾರ್ಗಸೂಚಿ ಕಳಿಸಿ, ಮನೆ ಮನೆ ಪ್ರಚಾರ ಮಾಡಿ

ವಿಬಿಜಿ ರಾಮ್ ಜಿ ಅಡಿಯಲ್ಲಿ ಅನುಮೋದಿಸಲಾಗಿರುವ 318 ಕಾಮಗಾರಿಗಳ ವಿವರ, ಮಾದರಿ, ವಿನ್ಯಾಸ, ಬಿಓಸಿ ದರಪಟ್ಟಿ, ಪ್ರಮಾಣಿತ ಮಾನದಂಡ, ತಾಂತ್ರಿಕ ಟಿಪ್ಪಣಿ ಇತ್ಯಾದಿ ಸ್ಪಷ್ಟ ಮಾರ್ಗಸೂಚಿಯನ್ನು ಈ ವಾರಾಂತ್ಯದೊಳಗೆ ವಿಬಿಜಿ ರಾಮ್ ಜಿ ಯ ಎಲ್ಲ ಅನುಷ್ಠಾನಾಧಿಕಾರಿಗಳಿಗೆ ರವಾನಿಸಿ, ಕಟ್ಟುನಿಟ್ಟಾಗಿ ಯೋಜನೆಯನ್ನು ಜಾರಿ ಮಾಡಲು ಸೂಚನೆ ನೀಡಿದ್ದಾರೆ.

ಐಪಿಸಿ ಅಂದರೆ ಅಂತರ ವ್ಯಕ್ತಿ ಸಂವಹನಕ್ಕೆ ಹೆಚ್ಚಿನ ಒತ್ತು ನೀಡಿ ಮನೆ ಮನೆ ಪ್ರಚಾರ ಮಾಡಿ ಗ್ರಾಮೀಣ ಜನರಿಗೆ ಹೊಸ ಯೋಜನೆ ಅಡಿಯಲ್ಲಿ ನೀಡುವ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ, ರಾಜ್ಯದಲ್ಲಿ ಪ್ರತಿ ನಿತ್ಯ ಕನಿಷ್ಠ 5 ಲಕ್ಷ ಜನರಿಗೆ ಉದ್ಯೋಗದ ಖಾತ್ರಿ ಒದಗಿಸಲು ಮತ್ತು ಪ್ರತಿ ತಿಂಗಳು ಕನಿಷ್ಠ 1.5 ಕೋಟಿ ಮಾನವ ದಿನ ಹಾಗೂ ಶಾಶ್ವತವಾದ ಗುಣಮಟ್ಟದ ಗ್ರಾಮೀಣ ಆಸ್ತಿ ಸೃಜನೆಗೆ ಕ್ರಮ ವಹಿಸಲು ಈಶ್ವರ ಖಂಡ್ರೆ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments