Homeಕರ್ನಾಟಕಅಸಮಾಧಾನ ಬಿಜೆಪಿ ಅವರಿಗಾಗಿದೆ, ಕಾಂಗ್ರೆಸ್ ನಾಯಕರಿಗಲ್ಲ: ಬಿ ಕೆ ಹರಿಪ್ರಸಾದ್ 

ಅಸಮಾಧಾನ ಬಿಜೆಪಿ ಅವರಿಗಾಗಿದೆ, ಕಾಂಗ್ರೆಸ್ ನಾಯಕರಿಗಲ್ಲ: ಬಿ ಕೆ ಹರಿಪ್ರಸಾದ್ 

ನಮ್ಮ ಪಕ್ಷದಲ್ಲಿ ಯಾರಿಗೂ ಅಸಮಾಧಾನ ಆಗಿಲ್ಲ. ಅಸಮಾಧಾನ ಯಾರಿಗಾದರೂ ಆಗಿದ್ದರೆ ಅದು ಬಿಜೆಪಿಯವರಿಗೆ. ಕಾಂಗ್ರೆಸ್ ಪಕ್ಷದಲ್ಲಿ ಶಾಸಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು, ಸಿದ್ದರಾಮಯ್ಯ ಅವರು, ಸಿಎಂ ಡಿ ಕೆ ಶಿವಕುಮಾರ್ ಅವರು ಶೋಷಿತ ಸಮುದಾಯಗಳಿಗೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅವಕಾಶ ನೀಡಿದ್ದಾರೆ. ಈ ತೀರ್ಮಾನದಲ್ಲಿ ಕೆ ಸಿ ವೇಣುಗೋಪಾಲ್ ಹಾಗೂ ಸುರ್ಜೆವಾಲ ಇದ್ದರು ಎಂದರು.

ನಮ್ಮ ಪಕ್ಷದಲ್ಲಿ ನಾಯಕತ್ವದ ಭಂಡಾರವೇ ಇದೆ. ಬಿಜೆಪಿಯವರಂತೆ ನಾಯಕತ್ವದ ಕೊರತೆ ಇಲ್ಲ. ನಮ್ಮಲ್ಲಿ ಬಹುತೇಕರು ನಾಲ್ಕರಿಂದ ಐದು ಬಾರಿ ಶಾಸಕರಾದವರು ಇದ್ದಾರೆ. 140 ಜನರ ಪೈಕಿ ಮೊದಲ ಬಾರಿ ಗೆದ್ದವರು 48 ಜನ, ಉಳಿದವರೆಲ್ಲರೂ ಹಲವು ಬಾರಿ ಗೆದ್ದಿರುವವರೆ” ಎಂದು ವಿವರಿಸಿದರು.

ಪೌರಕಾರ್ಮಿಕರ ದಂಪತಿಗಳ ಮಗನಿಗೆ ಸಚಿವ ಸ್ಥಾನ ನೀಡುವ ಮೂಲಕ ನಾವು ಹೊಸ ಇತಿಹಾಸ ಬರೆದಿದ್ದೇವೆ. ಇಂತಹ ಇತಿಹಾಸ ಬಿಜೆಪಿಯವರಿಂದ ಸಾಧ್ಯವೇ? ಬೊಮ್ಮಾಯಿ ಅವರ ಸರ್ಕಾರದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಇರಲಿಲ್ಲ. ಕೆಲವು ಸಮುದಾಯಗಳನ್ನು ಕೈ ಬಿಟ್ಟಿದ್ದರು. ನಾವು ಬಹುತೇಕ ಎಲ್ಲಾ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಿದ್ದು, ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಮಾನದಂಡ ಹಿನ್ನೆಲೆಯಲ್ಲಿ ಕಳೆದ ಬಾರಿ ಸಚಿವರಾದವರಲ್ಲಿ ಕೆಲವರಿಗೆ ಈ ಬಾರಿ ಅವಕಾಶ ನೀಡಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಕ್ರೈಸ್ತರು, ಒಕ್ಕಲಿಗರು, ಲಿಂಗಾಯತರಿಗೆ ಅವಕಾಶ ಕಲ್ಪಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರನ್ನು ಒಳಗೊಂಡ ಸರ್ಕಾರ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಸರ್ಕಾರ. ಕೆಲವು ಸಂದರ್ಭದಲ್ಲಿ ಬೇಸರ ಆಗುತ್ತದೆ. ನಾವು ಎಲ್ಲರನ್ನು ಒಪ್ಪಿಸುತ್ತೇವೆ. ರಾಜಿನಾಮೆ ಹಿಂಪಡೆದಿದ್ದಾರೆ ಎಂದು ತಿಳಿಸಿದರು.

ನಿಮ್ಮ ಶಾಸಕರೇ ಟೀಕೆ ಮಾಡುತ್ತಿದ್ದಾರೆ ಹೊಸಬರಿಗೆ ಕೊಡುತ್ತೇನೆ ಎಂದು 2-3 ಬಾರಿ ಗೆದ್ದವರಿಗೆ ಅವಕಾಶ ನೀಡಿದ್ದೀರಿ ಎಂದು ಕೇಳಿದಾಗ, “ಕೆಲವು ಸಮುದಾಯಗಳಲ್ಲಿ ಕೆಲವೇ ನಾಯಕರಿದ್ದಾರೆ. ಬೆಳೆದು ನಿಂತಿರುವ ಅವರನ್ನು ಹಾಳು ಮಾಡಲು ಆಗುವುದಿಲ್ಲ. ಮತ್ತೆ ಕೆಲವು ಸಮುದಾಯಗಳಲ್ಲಿ ನಾಯಕರುಗಳ ಭಂಡಾರವೇ ಇದೆ. ಎಲ್ಲರನ್ನು ಸಮಾಧಾನಪಡಿಸಲು ಆಗುವುದಿಲ್ಲ. ಪ್ರಾತಿನಿಧ್ಯ ವಂಚಿತ ಸಮುದಾಯಗಳಿಗೆ ಅವಕಾಶ ಮಾಡಿಕೊಡಲಾಗಿದೆ” ಎಂದರು.

ಇನ್ನು ಮುಂದೆ ನನಗೆ ಹಾಗೂ ಎಂ ಬಿ ಪಾಟೀಲ್ ನಡುವೆ ನೇರ ಯುದ್ಧ ಎಂಬ ರಾಯಗೌಡ ಪಾಟೀಲ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ರಾಯಗೌಡರ ಜೊತೆ ಚರ್ಚೆ ಮಾಡಿ ಬಗೆಹರಿಸುತ್ತೇವೆ” ಎಂದರು.

ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಬೆಂಬಲಿಗರ ಪ್ರತಿಭಟನೆ ಹೆಚ್ಚಾಗಿದೆ. ಸಿಎಂ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ ಎಂದು ಕೇಳಿದಾಗ, “ನಾನು ಅವರೊಂದಿಗೆ ಮಾತನಾಡಿದ್ದು, ಸಮಾಧಾನದಿಂದ ಇರಲು ಮನವಿ ಮಾಡಿದ್ದೇನೆ. ಪುನಃ ಅವರೊಂದಿಗೆ ಚರ್ಚಿಸುವೆ. ಇಬ್ಬರು ಗೆದ್ದಿರುವಾಗ ಅವಕಾಶ ಸಿಗದಿದ್ದಾಗ ಬೇಸರ ಸಹಜ. ಪ್ರಿಯ ಕೃಷ್ಣ ಯುವಕರು ಅವರ ಭವಿಷ್ಯ ಉಜ್ವಲವಾಗಿದೆ” ಎಂದರು.

ಮೈಸೂರು ಭಾಗದಲ್ಲೂ ಇದೇ ರೀತಿ ವಿರೋಧ ಕೇಳಿ ಬರುತ್ತಿದೆ ಎಂದಾಗ, “ತನ್ವಿರ್ ಸೇಠ್ ಅವರಿಗೆ ಅನ್ಯಾಯ ಆಗಿದೆ ಎಂದು ಒಪ್ಪುವೆ. ಆದರೆ ಅವರ ಸಮುದಾಯಕ್ಕೆ ಈಗಿನಷ್ಟು ಪ್ರಾತಿನಿಧ್ಯ ಬೇರೆ ಯಾವ ಸಂದರ್ಭದಲ್ಲೂ ಸಿಕ್ಕಿರಲಿಲ್ಲ” ಎಂದರು.

ಗಾಯತ್ರಿ ಶಾಂತೇಗೌಡರಿಗೆ ಕೊನೆ ಕ್ಷಣದಲ್ಲಿ ಅವಕಾಶ ತಪ್ಪಿದ್ದು ಯಾಕೆ ಎಂದು ಕೇಳಿದಾಗ, “ಅದು ನಾವು ಚರ್ಚೆ ಮಾಡುವ ವಿಚಾರವಲ್ಲ. ಕಾಂಗ್ರೆಸ್ ಪಕ್ಷದ ಕೆಲವು ತೀರ್ಮಾನ ಆಗುತ್ತಿರುತ್ತದೆ. ಎಲ್ಲರಿಗೂ ಅವಕಾಶ ನೀಡಲಾಗುವುದು” ಎಂದರು.

ಬೆನ್ನಿಗೆ ಚೂರಿ ಹಾಕಿದವರಿಗೆ ಅವಕಾಶ ನೀಡಿದ್ದಾರೆ ಎಂದು ಆರ್ ಅಶೋಕ್ ಹೇಳಿದ್ದಾರೆ ಎಂದು ಕೇಳಿದಾಗ “ಸಾಮ್ರಾಟ್ ಅಶೋಕ್ ಅವರಿಗೆ ಎಷ್ಟು ಜನ ಚೂರು ಹಾಕಿದ್ದಾರೆ ಕೇಳಿ. ಈ ಬಗ್ಗೆ ಯತ್ನಾಳ್ ಅವರಿಗೆ ಕೇಳಿದರೆ ಹೇಳುತ್ತಾರೆ. ಯತ್ನಾಳ್ ಅವರು ಹೇಳಿರುವುದನ್ನು ಅವರು ಅರಗಿಸಿಕೊಂಡರೆ ಸಾಕು. ಕಾಂಗ್ರೆಸ್ ಬಗ್ಗೆ ಆಲೋಚನೆ ಮಾಡುವುದು ಬೇಡ” ಎಂದು ಹೇಳಿದರು.

ಮಂಕಾಳ ವೈದ್ಯ ಅವರ ಹೆಸರು ಮೊದಲು ಬಂದಿತ್ತು ಎಂದು ಕೇಳಿದಾಗ, “ಸರ್ವಪಕ್ಷ ಸಭೆ ಬೇರೆ, ಮಂತ್ರಿಮಂಡಲ ಸಭೆ ಬೇರೆ. ಇಲ್ಲಿ ಪಕ್ಷದ ದೃಷ್ಟಿಯಿಂದ ತೀರ್ಮಾನ ಮಾಡಿದ್ದೇವೆ. ಮಂಕಾಳ ವೈದ್ಯ ಅವರಿಗೆ 3 ವರ್ಷಗಳ ಕಾಲ ಅವಕಾಶ ನೀಡಿದ್ದೇವೆ. ಮುಂದೆ ಬೇರೆ ಅವಕಾಶ ನೀಡುತ್ತೇವೆ” ಎಂದರು.

ಕೋಲಾರ, ಚಿಕ್ಕಬಳ್ಳಾಪುರಕ್ಕೆ ಅವಕಾಶ ಸಿಕ್ಕಿಲ್ಲ ಎಂದು ಶಾಸಕರು ಸಭೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಶಾಸಕರು ಸಭೆ ಮಾಡಲು ಎಲ್ಲಾ ಅಧಿಕಾರವಿದೆ. ನಾವು ನಾಗ್ಪುರದಿಂದ ನಿರ್ದೇಶನ ಪಡೆಯುವುದಿಲ್ಲ. ಅವರು ಸಭೆ ಮಾಡಿ ತಮ್ಮ ಅಭಿಪ್ರಾಯವನ್ನು ನಮಗೆ ತಿಳಿಸುತ್ತಾರೆ” ಎಂದು ತಿಳಿಸಿದರು.

ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಬಗ್ಗೆ ಕೇಳಿದಾಗ, “ಮಹಿಳೆಯರಿಗೆ ಅವಕಾಶ ನೀಡಿಲ್ಲ, ಅವರಿಗೆ ಅವಕಾಶ ನೀಡಬೇಕು. ನಮ್ಮ ನಾಯಕರ ಜೊತೆ ಚರ್ಚೆ ಮಾಡುತ್ತೇನೆ” ಎಂದರು.

ಸ್ಪೀಕರ್ ಹಾಗೂ ಸಭಾಪತಿಗಳನ್ನು ಎಐಸಿಸಿ ಅವರು ತೀರ್ಮಾನ ಮಾಡಿರುವ ಬಗ್ಗೆ ಬಿಜೆಪಿಯವರು ಟೀಕೆ ಮಾಡಿದ್ದಾರೆ ಎಂದು ಕೇಳಿದಾಗ, “ಬಿಜೆಪಿಯವರು ಸಂವಿಧಾನ ಪಠಣೆ ಮಾಡುತ್ತಾರೆ ಎಂದರೆ ಅದೇ ದೊಡ್ಡ ಅದ್ಭುತ. ಸಂವಿಧಾನ ಒಪ್ಪದ ಜನ, ಈಗ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ಸಂವಿಧಾನದ 178 ವಿಧಿ ಪ್ರಕಾರ ವಿಧಾನಸಭೆಯ ಸಭಾಧ್ಯಕ್ಷರು ಹಾಗೂ ಉಪಸಭಾಧ್ಯಕ್ಷರನ್ನು ವಿಧಾನಸಭೆ ಆಯ್ಕೆ ಮಾಡುತ್ತದೆ. 192ನೇ ವಿಧಿ ಪ್ರಕಾರ ಸಭಾಪತಿ ಹಾಗೂ ಉಪಸಭಾಪತಿಗಳನ್ನು ವಿಧಾನ ಪರಿಷತ್ ಆಯ್ಕೆ ಮಾಡಲಿದೆ. ಈ ಬಗ್ಗೆ ಕನಿಷ್ಠ ಜ್ಞಾನ ಇಲ್ಲದ ಬಿಜೆಪಿ ಮಾತನಾಡುತ್ತಿದ್ದಾರೆ. ನಾವು ಅವರನ್ನು ಸ್ಫೀಕರ್ ಸ್ಥಾನದಲ್ಲಿ ಕೂರಿಸಿಲ್ಲ. ನಮ್ಮ ಪಕ್ಷದ ವತಿಯಿಂದ ಆ ಸ್ಥಾನಗಳಿಗೆ ಅಭ್ಯರ್ಥಿ ಎಂದು ಹೇಳಿದ್ದೇವೆ. ಚುನಾವಣೆಯಾದರೆ ಇವರು ನಮ್ಮ ಅಭ್ಯರ್ಥಿ ಎಂದು ಹೇಳಿದ್ದಾರೆ. ಬಿಜೆಪಿಯವರು ಕಾಗೇರಿ, ಹೊರಟ್ಟಿ ಅವರನ್ನು ಹೇಗೆ ಮಾಡಿದರು?” ಎಂದರು.

ಹೊರಟ್ಟಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾವು ಅವರನ್ನು ಕೆಳಗಿಳಿಯಿರಿ ಎಂದು ಹೇಳಿಲ್ಲ. ಸದನ ಸಭೆ ಆಯ್ಕೆ ಮಾಡುತ್ತದೆ. ನಾವು ನಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. ಇವರನ್ನು ಆಯ್ಕೆ ಮಾಡುವುದು ಸದನ. ನಮ್ಮನ್ನು ಇಷ್ಟು ಪ್ರಶ್ನೆ ಮಾಡುವ ಮತಗಳ್ಳರು, ಹುಂಡಿ ಕಳ್ಳರು. ಗಾಯತ್ರಿ ಶಾಂತೇಗೌಡರ ಮತ ಕದ್ದು ಮಾನ ಮರ್ಯಾದೆ ಇಲ್ಲದೇ ನಾಲ್ಕು ವರ್ಷ ಆ ಸ್ಥಾನದಲ್ಲಿ ಕೂತು, ಕಾನೂನುಬಾಹಿರವಾಗಿ ಸರ್ಕಾರದ ಸೌಲಭ್ಯ, ಭತ್ಯೆಗಳನ್ನು ಪಡೆದಿದ್ದಾರೆ. ಸುಪ್ರೀಂ ಕೋರ್ಟ್ ಅವರ ಆಯ್ಕೆಯನ್ನೇ ಅಸಿಂಧು ಎಂದು ಹೇಳಿದ ಮೇಲೆ ಇವರು ರಾಜಿನಾಮೆ ನೀಡುವುದೇನಿದೆ? ಈ ದೇಶದಲ್ಲಿರುವವರನ್ನು ಅಂಧಭಕ್ತರು ಎಂದು ಭಾವಿಸಿದ್ದಾರಾ” ಎಂದು ಹರಿಹಾಯ್ದರು.

ಟಿ ಬಿ ಜಯಚಂದ್ರ ಅವರು ಹಂಗಾಮಿ ಸ್ಪೀಕರ್ ಆಗಿದ್ದು, ನನಗೆ ಉಸಿರುಗಟ್ಟಿಸುವಂತಾಗಿದೆ ನನಗೆ ಬೇಡ ಎಂದು ಹೇಳಿದ್ದಾರೆ. ಅವರ ಜೊತೆ ಮಾತನಾಡುತ್ತೀರಾ ಎಂದು ಕೇಳಿದಾಗ, “ನಾನು ಎಲ್ಲರ ಬಳಿಯೂ ಮಾತನಾಡುತ್ತೇನೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಕಾರ್ಯಕರ್ತರಿಂದ ನಾಯಕರವರೆಗೆ ಎಲ್ಲರೊಂದಿಗೆ ಮಾತನಾಡುತ್ತಿರುತ್ತೇನೆ. ನನ್ನನ್ನು ಅದ್ಯಕ್ಷರನ್ನಾಗಿ ಮಾಡಿರುವುದು, ಅವರನ್ನು ಶಾಸಕರನ್ನಾಗಿ ಮಾಡಿರುವುದು ಕಾಂಗ್ರೆಸ್ ಪಕ್ಷ. ಸಮಸ್ಯೆ ಇದ್ದರೆ ಅದನ್ನು ಬಗೆಹರಿಸುವುದು ಕಾಂಗ್ರೆಸ್ ಪಕ್ಷವೇ” ಎಂದು ತಿಳಿಸಿದರು.

ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವವರು ಮಹಿಳೆಯರಿಗೆ ಅವಕಾಶ ನೀಡಿಲ್ಲ ಎಂದು ಕೇಳಿದಾಗ, “ಮಹಿಳೆಯರಿಗೆ ನಾವು ಅವಕಾಶ ಮಾಡಿಕೊಟ್ಟಷ್ಟು ಬೇರೆ ಯಾರೂ ಮಾಡಿಲ್ಲ. ಈಗಲೂ ಒಂದು ಜಾಗ ಖಾಲಿ ಇದ್ದು, ಅದನ್ನು ಮಹಿಳೆಯರಿಗೆ ನೀಡಬೇಕು ಎಂದು ಬೇಡಿಕೆ, ಒತ್ತಡ, ಮನವಿ ಮಾಡಿದ್ದೇನೆ” ಎಂದರು.

33% ಮೀಸಲಾತಿ ನೀಡಬೇಕು ಎನ್ನುತ್ತೀರಾ ಆದರೆ ಕೇವಲ 1 ಸಚಿವ ಸ್ಥಾನ ನೀಡುತ್ತೀರಾ ಎಂದು ಕೇಳಿದಾಗ, “33% ಮೀಸಲಾತಿ ಮಸೂದೆಯನ್ನು ಸೋನಿಯಾ ಗಾಂಧಿ ಅವರ 2010ರಲ್ಲಿ ಮಾಡಿದರು. ಬಿಜೆಪಿಯವರು ಏನು ಮಾಡುತ್ತಿದ್ದಾರೆ? ನಮ್ಮ ಪಕ್ಷದಲ್ಲಿ ಪದಾಧಿಕಾರಿಗಳಿಗೆ 33% ಮೀಸಲಾತಿ ನೀಡುತ್ತಿದ್ದೇವೆ. ಸಂಘಟನೆಯಲ್ಲಿ ಎಲ್ಲಾ ಜಿಲ್ಲೆಯಲ್ಲೂ ಮಹಿಳೆಯರಿಗೆ ಅವಕಾಶ ನೀಡಿದ್ದೇವೆ. ಉಮಾಶ್ರೀ ಅವರನ್ನು ಉಪಸಭಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇವೆ. ಇನ್ನು ಒಂದು ಸ್ಥಾನ ಖಾಲಿ ಇದೆ” ಎಂದರು.

ಉಮಾಶ್ರೀ ಅವರು ಒಪ್ಪುವುದಿಲ್ಲವಲ್ಲ ಎಂದು ಕೇಳಿದಾಗ, “ಪಕ್ಷದ ತೀರ್ಮಾನವನ್ನು ಎಲ್ಲರೂ ಒಪ್ಪಬೇಕು” ಎಂದು ತಿಳಿಸಿದರು.

ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು ಗೈರಾಗಿದ್ದು, ಅವರು ಅಸಮಾಧಾನಗೊಂಡಿದ್ದಾರೆ ಎಂದು ಕೇಳಿದಾಗ, “ನನಗೆ ಅಸಮಾಧಾನದ ಬಗ್ಗೆ ಗೊತ್ತಿಲ್ಲ. ನೀವು ಹಳಿದ್ದೇ ನನಗೆ ವಿಶೇಷ ಸುದ್ದಿ” ಎಂದರು.

ಬ್ರಾಹ್ಮಣ ಸಮುದಾಯಕ್ಕೆ ಮೊದಲ ಬಾರಿಗೆ ಅವಕಾಶ ಸಿಕ್ಕಿಲ್ಲ ಎಂಬ ಬಗ್ಗೆ ಕೇಳಿದಾಗ, “ಒಂದು ಸಮುದಾಯಕ್ಕೆ ಸಿಕ್ಕಿಲ್ಲ ಎಂಬುದಲ್ಲ. ಬಹಳಷ್ಟು ಸಮುದಾಯಗಳಿವೆ. ಯಾವ ಸಮುದಾಯಗಳಿಗೆ ಅವಕಾಶ ಸಿಕ್ಕಿಲ್ಲ ಅವರನ್ನು ಜೋಡಿಸುವ ಕೆಲಸ ಮಾಡಿದ್ದೇವೆ. ಅವಕಾಶ ಸಿಗದೇ ಇರುವ ಅನೇಕ ಸಮುದಾಯಗಳಿವೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments