ಧಾರವಾಡ- ಬೆಳಗಾವಿ ರೈಲು ಮಾರ್ಗ ಅಭಿವೃದ್ಧಿ ಯೋಜನೆಯನ್ನು ನಾವು ಕ್ಷಿಪ್ರಗತಿಯಲ್ಲಿ ಮುಗಿಸಬೇಕಾಗಿದೆ. ಆದ್ದರಿಂದ ಇದರಲ್ಲಿ ಬಾಕಿ ಇರುವ ಭೂಸ್ವಾಧೀನ ಮತ್ತಿತರ ವಿಚಾರಗಳೇನೆಂದು ಖುದ್ದು ಭೇಟಿ ನೀಡಿ ಬಗೆಹರಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಇಲಾಖೆಯ ಕಾರ್ಯದರ್ಶಿ ಆರ್. ವಿಶಾಲ್ ಅವರಿಗೆ ನಿರ್ದೇಶನ ನೀಡಿದ್ದಾರೆ.
ಅವರು ಮಂಗಳವಾರ ಇಲ್ಲಿ ರೈಲ್ವೆ, ವಿಮಾನ ನಿಲ್ದಾಣ ಮತ್ತಿತರ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಾಮರ್ಶನ ಸಭೆ ನಡೆಸಿದರು.
ಧಾರವಾಡ- ಬೆಳಗಾವಿ ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಂಬಂದಿಸಿದಂತೆ ಧಾರವಾಡದ ಮಮ್ಮಿಗಟ್ಟಿ ಸಮೀಪ ಭೂಸ್ವಾಧೀನದ ಸಮಸ್ಯೆ ಇದೆ. ತಕ್ಷಣ ಇದನ್ನು ಖುದ್ದು ಭೇಟಿ ನೀಡಿ ಬಗೆಹರಿಸಬೇಕು. ಇದರಿಂದ ಬೆಳಗಾವಿಗೆ ಪ್ರಯಾಣ ಅವಧಿ ಕಡಿಮೆ ಆಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಪರಿಸರಕ್ಕೆ ಸಂಬಂಧಿಸಿದ ಒಂದು ಪ್ರಕರಣ ಆರು ತಿಂಗಳಿನಿಂದಲೂ ಬಾಕಿ ಇದ್ದು, ಅದರ ಅಂತಿಮ ತೀರ್ಪಿಗೆ ಕಾಯಲಾಗುತ್ತಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ವಕೀಲರ ಜತೆಗೂ ಸಭೆ ನಡೆಸಲು ಅವರು ಸೂಚಿಸಿದರು. ತೀರ್ಪು ನಮ್ಮ ಪರವಾಗಿ ಬಂದಲ್ಲಿ, ತಕ್ಷಣವೇ ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಇದಕ್ಕೆ ಇನ್ನೂ ಚುರುಕು ಮುಟ್ಟಿಸಬೇಕಾಗಿದೆ. ಹಾಗೆಯೇ ಕಾರವಾರದಲ್ಲಿ ನೌಕಾನೆಲೆಯ ರನ್ ವೇ ಮತ್ತು ಸಂಪರ್ಕ ರಸ್ತೆ ನಿರ್ಮಾಣ ಕುರಿತೂ ಅವರು ಚರ್ಚಿಸಿದರು.


