ವಿಪಕ್ಷ ನಾಯಕ ಆರ್ ಅಶೋಕ್ ಅವರಿಗೆ ಕೊತ್ವಾಲ್ ರಾಮಚಂದ್ರ ಅವರ ಶಿಷ್ಯ ಏಡ್ಸ್ ಇಂಜೆಕ್ಷನ್ ತಲಗುಲಿಸಿದ ಮೇಲೆ ಸ್ವಲ್ಪ ಬುದ್ದಿ ಭ್ರಮಣೆ ಆದಂತೆ ಕಾಣುತ್ತಿದೆ. ಅವರ ಭಾಷೆಯ ಪ್ರಯೋಗ ಹಳಿ ತಪ್ಪಿದೆ. ರಾಹುಲ್ ಗಾಂಧಿ ಅವರ ಬಗ್ಗೆ ಅಜ್ಜಿ, ಅಮ್ಮ ಎಂದು ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಇಂದಿರಾ ಗಾಂಧಿ ಅವರ ಬಗ್ಗೆ ಬಿಜೆಪಿ ನಾಯಕರು ಮಾತನಾಡಿರುವ ಅಣಿಮುತ್ತು ನೋಡಿದಾಗ ಇವರಿಗೆ ಬುದ್ಧಿಭ್ರಮಣೆಯಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಲೇವಡಿ ಮಾಡಿದರು.
ಜಾಲಹಳ್ಳಿಯ ಹೆಚ್ಎಂಟಿ ಕಾರ್ಖಾನೆ ಬಳಿಯ ಚಿತ್ರ ಮಂದಿರ ಬಳಿ ಬಿಜೆಪಿ ಹಾಗೂ ಆರ್ ಎಸ್ಎಸ್ ನಾಯಕರು ಅಲ್ಲಿ ಬ್ಲಾಕ್ ಟಿಕೆಟ್ ಮಾರುತ್ತಿದ್ದರು. ಈಗ ಅಂತಹವರೆಲ್ಲಾ ಬಿಜೆಪಿ ನಾಯಕರಾಗಿದ್ದಾರೆ. ಅವರ ಭಾಷೆಯನ್ನೇ ಇವರೂ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ನಮ್ಮನ್ನು ತುಕ್ಡೆ ತುಕ್ಡೆ ಗ್ಯಾಂಗಿನವರು ಎಂದು ಹೇಳುತ್ತಾರೆ. ಗಡಿಪಾರ್ ಅಮಿತ್ ಶಾ ಅವರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದೇಕೆ? ನಡ್ಡಾ ಅವರು ಈ ಗ್ಯಾಂಗಿನವರನ್ನು ಕರೆಸಿ ಮಾತನಾಡಿದ್ದು ಯಾಕೆ? ದೆಹಲಿ ಬಗ್ಗೆ ಚೆನ್ನಾಗಿ ಗೊತ್ತಿರುವವರ ರೀತಿ ಪ್ರಧಾನಮಂತ್ರಿಗಳ ಮನೆ ಸುತ್ತಮುತ್ತ ಸೂಕ್ಷ್ಮಪ್ರದೇಶ ಎಂದು ಹೇಳಿದ್ದಾರೆ ಎಂದು ಹರಿಹಾಯ್ದರು.
“ಸಂಜೆ ಮೇಲೆ ಸಿಸಿಟಿವಿ ಬಂದ್ ಮಾಡಿ ಆ ಮನೆಗೆ ಯಾರು ಹೋಗುತ್ತಾರೆ, ಯಾರು ಬರುತ್ತಾರೆ ಎಂದು ನಾನು ಹೇಳಲು ಹೋಗುವುದಿಲ್ಲ. ಅಷ್ಟೋಂದು ಸೂಕ್ಷ್ಮ ಪ್ರದೇಶವಾಗಿದ್ದರೆ 1975ರಲ್ಲಿ ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿ ಅವರ ಮನೆ ಘೇರಾವ್ ಮಾಡಬೇಕು ಎಂದಾಗ ಇಂದಿರಾ ಗಾಂಧಿ ಅವರು ಏನೂ ಮಾತನಾಡಿರಲಿಲ್ಲ” ಎಂದು ಹೇಳಿದರು.
“ವಿರೋಧ ಪಕ್ಷದ ನಾಯಕರಾದ ಅಶೋಕ್ ಅವರು ಮಾತನಾಡುವಾಗ ಕಾಂಗ್ರೆಸ್ ಪಕ್ಷದ ವಿರುದ್ದ ತಲವಾರ್, ಕತ್ತಿ, ಬಾಂಬು ಎಂದು ಏನೇನೋ ಹೇಳಿದ್ದಾರೆ. ಆರ್ ಎಸ್ಎಸ್ ಹಾಗೂ ಬಿಜೆಪಿಯವರ ಕಚೇರಿಯಲ್ಲಿ ಏನೇನಿದ್ದವು ಎಂಬುದರ ಬಗ್ಗೆ ಪಟ್ಟಿ ನೀಡುತ್ತೇನೆ. ಕಣ್ಣೂರಿನ ಬಿಜೆಪಿ ಕಚೇರಿಯಲ್ಲಿ ಬಾಂಬು, ನೂರಾರು ಮಾರಕಾಸ್ತ್ರಗಳು ಸಿಕ್ಕಿದ್ದವು. 2016 ನೇ ಇಸವಿಯಲ್ಲಿ ಚಕ್ರಕಲ್, ಕಣ್ಣೂರಿನಲ್ಲಿ ಬಿಜೆಪಿಯವರಿಂದ ನಾಡಬಾಂಬ್, ಕತ್ತಿ ಹೀಗೆ ಹಲವಾರು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ನೆಡುಂಗಾಡಿನ ಆರ್ ಎಸ್ ಎಸ್ ಕಚೇರಿಯಲ್ಲಿ ಬಾಂಬ್ ಕಚ್ಚಾ ವಸ್ತುಗಳು ಸಿಕ್ಕಿದ್ದವು. ಹೀಗೆ ನೂರಾರು ಪ್ರಕರಣಗಳನ್ನು ನೋಡಬಹುದು” ಎಂದು ಇತಿಹಾಸ ನೆನಪಿಸಿದರು.
“ಆರ್ ಎಸ್ಎಸ್ ಪದಾಧಿಕಾರಿ ಯಶ್ವಂತ್ ಶಿಂಧೆ ಎಂಬಾತ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ನಾವು ಬಿಜೆಪಿ ಗೆಲ್ಲಿಸಲು ಬಾಂಬ್ ಸ್ಫೋಟ ಮಾಡಿದ್ದೆವು ಎಂದು ಹೇಳಿದ್ದಾನೆ. ದೇಶ ವಿರೋಧಿ ಚಟುವಟಿಕೆ ನಡೆಸಿ ಚುನಾವಣೆ ಗೆಲ್ಲಲು ಹೋಗಿದ್ದೆವು ಎಂದಿದ್ದಾನೆ. ಇವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ” ಎಂದು ಪ್ರಶ್ನಿಸಿದ್ದಾರೆ.
“ಶಾಸಕರ ಮೇಲೆ ಮೊಟ್ಟೆ, ಚಪ್ಪಲಿ, ಕಲ್ಲು ಎಸೆಯುವ ಸಂಸ್ಕೃತಿ ಆರಂಭಿಸಿದ್ದೇ ಬಿಜೆಪಿಯವರು. ಸಿದ್ದರಾಮಯ್ಯನವರು ಮಡಿಕೇರಿಯಲ್ಲಿ ಪ್ರವಾಸ ಮಾಡುವಾಗ ಯಾರು ಮೊಟ್ಟೆ ಎಸೆದಿದ್ದು? ದಾವಣಗೆರೆಯಲ್ಲಿ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದಿದ್ದು ಯಾರು” ಎಂದು ಕೇಳಿದ್ದಾರೆ.
“ರಾಹುಲ್ ಗಾಂಧಿ ಅವರು ಪ್ರಧಾನಿ ಅವರ ನಿವಾಸದ ಎದುರು ಪ್ರತಿಭಟನೆ ಮಾಡಲು ಕಾರಣ ದೆಹಲಿಯಲ್ಲಿ ವಿದ್ಯಾರ್ಥಿಗಳಿಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಕೈ ಮಾಡಿದ್ದಾರೆ. ಇದಕ್ಕೆ ನಾಲಾಯಕ್ ನರೇಂದ್ರ ಮೋದಿ ಅವರು ಕಾರಣ ರಾಹುಲ್ ಗಾಂಧಿ ಅವರಲ್ಲ. ನಾವು ಸಹ ಭಾಷಾ ಪ್ರಯೋಗ ಮಾಡುತ್ತೇವೆ ಎಂಬುದನ್ನು ಅಶೋಕ್, ವಿಜಯೇಂದ್ರ, ನಾರಾಯಸ್ವಾಮಿ ಅರ್ಥ ಮಾಡಿಕೊಳ್ಳಬೇಕು. ನಾಲಾಯಕ್ ಸರ್ಕಾರ ಇರೋದಕ್ಕೆ 152 ಸಲ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು. ದೇಶದ ವ್ಯವಸ್ಥೆ ಹಾಳು ಮಾಡಿರುವ ನಾಲಾಯಕ್ ಗಳುಇವರು. ಇವರು ವಿಷಯಾಂತರ ಮಾಡಲು ಹೀಗೆ ಮಾತನಾಡುತ್ತಿದ್ದಾರೆ” ಎಂದರು.
ಇದುವರೆಗೂ ಒಮ್ಮೆಯೂ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ. ನಾವಿದ್ದಾಗ ಇದುವರೆಗೂ ಸಿಇಟಿ ಪ್ರಶ್ನೆ ಪತ್ರಿಕೆ ಒಮ್ಮೆಯೂ ಸೋರಿಕೆಯಾಗಿರಲಿಲ್ಲ. ಬಡವರಿಗೆ ಅನುಕೂಲ ಆಗಲಿ ಎಂದು ವೀರಪ್ಪ ಮೋಯ್ಲಿ ಅವರು ಸಿಇಟಿ ತಂದರು. ಇಡೀ ದೇಶದ ಶಿಕ್ಷಣ ವ್ಯವಸ್ಥೆ ಹಾಳು ಮಾಡಲು ನೀಟ್ ವ್ಯವಸ್ಥೆ ಜಾರಿಗೆ ತಂದಿದ್ದು ಬಿಜೆಪಿ. ಬಾಬ್ರಿ ಮಸೀದಿ ಬಿದ್ಧಾಗ ಅಲ್ಲಿಂದ ಒಂದು ಇಟ್ಟಿಗೆ ತಂದಿದ್ದಾರೆ ಅದೇ ಅವರ ದೊಡ್ಡ ಸಾಧನೆ. ಅಂತಹವರ ಬಳಿ ಏನು ಮಾತನಾಡುವುದು?” ಎಂದು ಆಕ್ರೋಶ ವ್ಯಕ್ತಪಡಿಸಿದರು.


