- ಕಾರ್ಯದರ್ಶಿ ನೇತೃತ್ವದಲ್ಲಿ 4 ಸಿಇಓಗಳ ಸಮಿತಿ ರಚಿಸಲು ಸೂಚನೆ
ಇ-ಸ್ವತ್ತು ಪಡೆಯಲು ಪಂಚಾಯ್ತಿ ಕಚೇರಿಗೆ ಗ್ರಾಮಸ್ಥರು ಅಲೆಯುವುದನ್ನು ತಪ್ಪಿಸಲು ಮನೆಬಾಗಿಲಿಗೇ ಇ-ಸ್ವತ್ತು ನೀಡಲು ತೀರ್ಮಾನಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ, ಇ-ಸ್ವತ್ತು ಪ್ರಕ್ರಿಯೆಯಲ್ಲಿನ ತೊಡಕುಗಳ ನಿವಾರಣೆಗೆ ಪಂಚ ಸದಸ್ಯರ ಸಮಿತಿ ರಚಿಸಲು ಸೂಚನೆ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯವರಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಅವರು, ತಂತ್ರಾಂಶ ಮತ್ತು ಸರ್ವರ್ ಸಮಸ್ಯೆಯಿಂದಾಗಿ ಸಾವಿರಾರು ಇ-ಸ್ವತ್ತು ಅರ್ಜಿಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಕಾರ್ಯದರ್ಶಿ ಡಿ.ರಂದೀಪ್ ಅಧ್ಯಕ್ಷತೆಯಲ್ಲಿ ಬೆಂಗಳೂರು, ಮಂಗಳೂರು, ಕಲ್ಬುರ್ಗಿ ಮತ್ತು ಬೆಳಗಾವಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ, 10 ದಿನಗಳ ಒಳಗಾಗಿ ನಿಯಮಗಳಿಗೆ ಯಾವ ಯಾವ ಬದಲಾವಣೆಗಳನ್ನು ಮಾಡಬಹುದು ಎಂಬ ಸ್ಪಷ್ಟ ವರದಿ ನೀಡಲು ಸೂಚಿಸಿದ್ದಾರೆ.
ದಾಖಲೆ ಇಲ್ಲದ ಗ್ರಾಮಠಾಣಾ ಆಸ್ತಿಗೂ ಇ-ಸ್ವತ್ತು:
ರಾಜ್ಯದ ಗ್ರಾಮಠಾಣಾ ಪ್ರದೇಶದಲ್ಲಿ ಹಲವು ದಶಕ ಹಾಗೂ ತಲೆಮಾರುಗಳಿಂದ ವಾಸಿಸುತ್ತಿರುವ ಬಹುತೇಕ ನಿವಾಸಿಗಳ ಬಳಿ ತಮ್ಮ ಸ್ವತ್ತಿನ ದಾಖಲಾತಿಗಳಿಲ್ಲದ ಕಾರಣದಿಂದ ಅವರಿಗೆ ಇ-ಸ್ವತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಬ್ಯಾಂಕ್ ಸಾಲ ದೊರೆಯುತ್ತಿಲ್ಲ, ಮನೆ ದುರಸ್ತಿ, ಪುನರ್ ನಿರ್ಮಾಣ, ಕಟ್ಟಡ ನಕ್ಷೆ ಪಡೆಯಲು, ಸ್ವತ್ತು ಮಾರಾಟ ಮಾಡಲೂ ಅವರಿಗೆ ಸಾಧ್ಯವಾಗುತ್ತಿಲ್ಲ ಈ ನಿಟ್ಟಿನಲ್ಲಿ ಮನೆ ಸಮೀಕ್ಷೆ ಮಾಡಿ ಸಮಸ್ಯೆ ಪರಿಹರಿಸಲೂ ಮಾರ್ಗೋಪಾಯ ಸೂಚಿಸುವಂತೆ ತಿಳಿಸಿದ್ದಾರೆ.
ಬಿ ಖಾತೆ ನೀಡಿಕೆಗೂ ಚಿಂತನೆ:
ಗ್ರಾಮಠಾಣಾ ವ್ಯಾಪ್ತಿಯ ಹೊರಗೆ ಭೂಪರಿವರ್ತಿತ ಮತ್ತು ಭೂಪರಿವರ್ತನೆ ಆಗದ ಕಂದಾಯ ಭೂಮಿಯಲ್ಲಿಯೂ ಬಡಾವಣೆ, ಕಟ್ಟಡಗಳು ತಲೆ ಎತ್ತಿದ್ದು, ಬಿ ಖರಾಬು ಮತ್ತು ಗೋಮಾಳದಂತಹ ಸರ್ಕಾರಿ ಭೂಮಿಯನ್ನೂ ಸೇರಿಸಿಕೊಂಡು ಬಡಾವಣೆ ಮಾಡಿರುವ ನಿಟ್ಟಿನಲ್ಲಿ ನಮೂನೆ 11ಬಿ ನೀಡಲೂ ಸಾಧ್ಯವಾಗಿರುವುದಿಲ್ಲ. ಜೊತೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಚರಂಡಿ, ಬೀದಿ ದೀಪ ಇತ್ಯಾದಿ ಸೌಲಭ್ಯಗಳನ್ನು ಗ್ರಾಮ ಪಂಚಾಯತಿಗಳು ಒದಗಿಸಿದ್ದರೂ ತೆರಿಗೆಯನ್ನೂ ಪಡೆಯಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮೇಲಿನ ಎಲ್ಲ ಸಮಸ್ಯೆ ನಿವಾರಿಸಿ, ಎಲ್ಲ ಗ್ರಾಮೀಣ ಸ್ವತ್ತುಗಳಿಗೂ ಸುಗಮವಾಗಿ ಇ-ಸ್ವತ್ತು ನೀಡುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.


