ಸತ್ಯದ ಮುಂದೆ ಕುತಂತ್ರಗಳು ಸೋಲುತ್ತವೆ; ಜನಾದೇಶದ ಮುಂದೆ ದುರುದ್ದೇಶಗಳು ತಲೆಬಾಗಲೇಬೇಕು. ವಿಧಾನಪರಿಷತ್ತಿನ ಸದಸ್ಯತ್ವ ಸ್ಥಾನದಿಂದಲೇ ಎಂ .ಕೆ.ಪ್ರಾಣೇಶ ಅವರನ್ನು ವಜಾಗೊಳಿಸಿ ನೀಡಿರುವ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಜನರು ನೀಡಿದ ಸ್ಪಷ್ಟ ಜನಾದೇಶವನ್ನು ಕಾನೂನು ಪ್ರಕ್ರಿಯೆಯ ದುರ್ಬಳಕೆಯ ಮೂಲಕ ವಿಕೃತಗೊಳಿಸುವ ಎಲ್ಲ ಪ್ರಯತ್ನಗಳಿಗೆ ಸ್ಪಷ್ಟ ಉತ್ತರ ಸಿಕ್ಕಂತಾಗಿದೆ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪೇ ಸರ್ವೋಚ್ಚ. ಅದನ್ನು ರಾಜಕೀಯ ಕುತಂತ್ರಗಳಿಂದಲೋ, ನ್ಯಾಯಾಂಗವನ್ನು ರಾಜಕೀಯ ಹೋರಾಟದ ವೇದಿಕೆಯನ್ನಾಗಿ ಬಳಸುವುದರ ಮೂಲಕವೋ ಬದಲಾಯಿಸಲು ಸಾಧ್ಯವಿಲ್ಲ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸಂವಿಧಾನ ಮತ್ತು ನ್ಯಾಯಾಂಗವು ಮತ್ತೊಮ್ಮೆ ಜನರ ವಿಶ್ವಾಸವನ್ನೇ ಎತ್ತಿಹಿಡಿದಿವೆ. ಈ ತೀರ್ಪು ಪ್ರಜಾಪ್ರಭುತ್ವದ ಮೌಲ್ಯಗಳ ಗೆಲುವು, ಜನಾದೇಶದ ಗೆಲುವು ಮತ್ತು ಸತ್ಯದ ಗೆಲುವು ಎಂದು ಹೇಳಿದ್ದಾರೆ.
ಈ ನ್ಯಾಯಸಮ್ಮತ ಹೋರಾಟದಲ್ಲಿ ದೃಢವಾಗಿ ನಿಂತು ಜನರ ವಿಶ್ವಾಸವನ್ನು ಉಳಿಸಿಕೊಂಡಿರುವ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದ “ಗಾಯತ್ರಿ ಶಾಂತೇಗೌಡ” ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಜನಸೇವೆಯ ಅವರ ಪಯಣ ಇನ್ನಷ್ಟು ಅರ್ಥಪೂರ್ಣವಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.


