ಅಧಿಕಾರದ ಅಹಂಕಾರಕ್ಕಿಂತ ಪ್ರಜಾಪ್ರಭುತ್ವದ ಧ್ವನಿಗೆ ಬೆಲೆ ನೀಡುವುದು ಸರ್ಕಾರದ ಕರ್ತವ್ಯವಾಗಬೇಕು. ಸೋನಂ ವಾಂಗ್ಚುಕ್ ಅವರ ಅಚಲ ಬದ್ಧತೆ, ಪ್ರಜಾಸತ್ತಾತ್ಮಕ ಹೋರಾಟ, ಅಹಿಂಸಾತ್ಮಕ ಸತ್ಯಾಗ್ರಹದ ಮನೋಭಾವಕ್ಕೆ ನನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ನೀಟ್ ಪರೀಕ್ಷೆಯ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪರಿಸರವಾದಿ ಹೋರಾಟಗಾರ “ಸೋನಂ ವಾಂಗ್ಚುಕ್” ಅವರು ಕೈಗೊಂಡಿರುವ ಉಪವಾಸ ಸತ್ಯಾಗ್ರಹವು ದೇಶದ ಯುವಜನರ ಆತಂಕ ಮತ್ತು ಆಕ್ರೋಶದ ಪ್ರತೀಕವಾಗಿದೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಇಂತಹ ಗಂಭೀರ ಪ್ರಶ್ನೆಗಳ ಎದುರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೋರಿಸುತ್ತಿರುವ ಮೌನ ಮತ್ತು ನಿರ್ಲಕ್ಷ್ಯ ಅತ್ಯಂತ ಖಂಡನೀಯ. ದೇಶದ ಯುವಜನರು ನ್ಯಾಯ ಕೇಳುತ್ತಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರದ ಮೌನ ಮತ್ತು ನಿರ್ಲಕ್ಷ್ಯವು ಆತಂಕಕಾರಿ. ಪ್ರಶ್ನೆಪತ್ರಿಕೆ ಸೋರಿಕೆಯಂತಹ ಗಂಭೀರ ಪ್ರಕರಣಗಳಲ್ಲಿ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವ ಬದಲು ಸತ್ಯವನ್ನು ಮುಚ್ಚಿಹಾಕುವ ಪ್ರಯತ್ನಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಪ್ರಶ್ನಿಸುವಂತಿವೆ ಎಂದಿದ್ದಾರೆ.
ಒಬ್ಬ ಪರಿಸರವಾದಿ ಹೋರಾಟಗಾರ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಉಪವಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ದೇಶದ ಆಡಳಿತ ವ್ಯವಸ್ಥೆಗೆ ದೊಡ್ಡ ಎಚ್ಚರಿಕೆಯ ಗಂಟೆ. ಅಧಿಕಾರದಲ್ಲಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಇದು. ಪ್ರಜಾಪ್ರಭುತ್ವದಲ್ಲಿ ಭಿನ್ನಮತವನ್ನು ಆಲಿಸುವುದು ಸರ್ಕಾರದ ದೌರ್ಬಲ್ಯವಲ್ಲ, ಅದು ಅದರ ನೈತಿಕ ಹೊಣೆಗಾರಿಕೆ.
ಕೇಂದ್ರ ಸರ್ಕಾರ ಕೂಡಲೇ ಸಂವಾದಕ್ಕೆ ಮುಂದಾಗಿ, ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು, ಅವರ ಉಪವಾಸ ಸತ್ಯಾಗ್ರಹವನ್ನು ಗೌರವಯುತವಾಗಿ ಅಂತ್ಯಗೊಳಿಸುವ ಪರಿಸ್ಥಿತಿಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.


