ರಾಜ್ಯದ ಬಹುತೇಕ ಪಂಚಾಯ್ತಿಗಳ ಆಡಳಿತಾವಧಿ ಮುಗಿದಿದ್ದು, ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಪಂಚಾಯತಿಗಳ ಮೇಲ್ದರ್ಜೆಯಿಂದಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕಾಗಿ ಬಂದಿದ್ದು, ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಸಿ, ಮೀಸಲಾತಿ ನಿರ್ಧರಿಸಿ ರಾಜ್ಯ ಚುನಾವಣೆ ಆಯೋಗಕ್ಕೆ ಸಲ್ಲಿಸಲಾಗುವುದು. ಆಯೋಗ 45 ದಿನಗಳಲ್ಲಿ ಚುನಾವಣೆ ನಡೆಸುತ್ತದೆ ಎಂದರು.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಸಿಬ್ಬಂದಿ ಆ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಕಾಲಾವಕಾಶ ಕೇಳಲಾಗಿದೆ ಎಂದು ತಿಳಿಸಿದರು.
ಮಹಾತ್ಮಾ ಗಾಂಧೀ ಅವರು ಗ್ರಾಮ ಸ್ವರಾಜ್ಯದ ಕಲ್ಪನೆ ಹುಟ್ಟುಹಾಕಿದ್ದರು. ಕರ್ನಾಟಕದಲ್ಲಿ 1980ರಲ್ಲಿ ನಸೀರ್ ಸಾಬ್ ಅವರು ಅಧಿಕಾರ ವಿಕೇಂದ್ರೀಕರಣಕ್ಕೆ ನಾಂದಿ ಹಾಡಿದರೆ, ದಿವಂಗತ ಪ್ರಧಾನಿ ರಾಜೀವ್ ಗಾಂಧೀ ಅವರು ದೇಶದಾದ್ಯಂತ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲು 1989ರಲ್ಲಿ 64ನೇ ಸಂವಿಧಾನಿಕ ತಿದ್ದುಪಡಿಗೆ ಪ್ರಯತ್ನ ಮಾಡಿದ್ದರು. ನಂತರ 1992ರಲ್ಲಿ 73ನೇ ಸಾಂವಿಧಾನಿಕ ತಿದ್ದುಪಡಿ ಮಾಡಿ,1993ರ ಏಪ್ರಿಲ್ 24 ರಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. ಅಂದರೆ ಗ್ರಾಮಗಳ ಆಡಳಿತವನ್ನು ಅದೇ ಗ್ರಾಮದವರು ನಿರ್ವಹಿಸಬೇಕು ಎಂಬುದೇ ಇದರ ಉದ್ದೇಶ ಎಂದು ತಿಳಿಸಿದರು.
ಮನೆ ಮನೆಗೆ ಇ-ಸ್ವತ್ತು:
ಇನ್ನು ಇ- ಸ್ವತ್ತಿಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆ ಇದ್ದು, ಸಾಕಷ್ಟು ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಮುಗಿದ ನಂತರ, ಈ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಿಸಿ, ಎಲ್ಲ ಗ್ರಾಮೀಣ ಪ್ರದೇಶದ ಆಸ್ತಿ ಮಾಲಿಕರಿಗೆ ಯಾವುದೇ ತೊಡಕಾಗದಂತೆ ಮನೆ ಬಾಗಿಲಿಗೇ ಇ-ಸ್ವತ್ತು ನೀಡಲು ಕ್ರಮ ವಹಿಸಲಾಗುವುದು ಎಂದರು.
ಬಿ ಖರಾಬು ಜಮೀನು ಬಳಸಿಕೊಂಡು ಲೇಔಟ್ ನಿರ್ಮಿಸಿದ್ದರೆ ಅಲ್ಲಿ ಇ-ಸ್ವತ್ತು ನೀಡಲಾಗುವುದಿಲ್ಲ. ಇದಕ್ಕೆ ಕಂದಾಯ ಇಲಾಖೆಯ ಸಚಿವರೊಂದಿಗೆ ಸಭೆ ನಡೆಸಬೇಕಾಗುತ್ತದೆ ಎಂದರು.
ತಾಂತ್ರಿಕ ಕಾರಣ ನೆಪಒಡ್ಡಿ 2186 ಕೋಟಿ ಕೊಡದ ಕೇಂದ್ರ ಸರ್ಕಾರ
ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬರಬೇಕಾದ 2186.20 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಈಶ್ವರ ಖಂಡ್ರೆ ತಿಳಿಸಿದರು.
ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಹಣ ಬಿಡುಗಡೆ ಮಾಡುವುದಿಲ್ಲ ಎನ್ನುವುದು ಸರಿಯಲ್ಲ. ರಾಜ್ಯದ ಸಂಸತ್ ಸದಸ್ಯರು ಒಕ್ಕೂರಲಿನಿಂದ ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಹೇಳಿದರು.
ಗುಳೆ ಹೋಗದಂತೆ ಮನವಿ:
ಮನ್ರೇಗಾದ ಬದಲಾದ ರೂಪ ವಿ.ಬಿ.ಜಿ ರಾಮ್ ಜೀ ಯನ್ನು ರಾಜ್ಯ ಸರ್ಕಾರ ಆರ್ಥಿಕ ಹೊರೆಯ ನಡುವೆಯೂ ಬಡವರು, ದಲಿತರು, ವಂಚಿತರು, ಗ್ರಾಮೀಣ ಬಡವರ ಹಿತದೃಷ್ಟಿಯಿಂದ ಜಾರಿಗೆ ತಂದಿದ್ದು, ಗ್ರಾಮೀಣ ಜನರಿಗೆ ಉದ್ಯೋಗದ ಖಾತ್ರಿ ನೀಡಲಾಗಿದೆ. ಹೀಗಾಗಿ ಯಾರೂ ಗುಳೆ ಹೋಗುವ ಅಗತ್ಯವಿಲ್ಲ ಎಂದರು.
2029ರ ವೇಳೆಗೆ ಒಂದು ದೇಶ ಒಂದು ಚುನಾವಣೆ ನಡೆಸುತ್ತೇವೆ ಎಂಬ ಸಲಹಾ ಸಮಿತಿಯ ಅಧ್ಯಕ್ಷರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರ ಖಂಡ್ರೆ, ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆ ಹೊಂದಿದೆ. ದೇಶವೇ ತಮ್ಮ ಕೈಗೊಂಬೆ ಆಗಿರಬೇಕು ಎಂದು ಬಯಸುತ್ತಾರೆ. ಈ ವಿಚಾರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನು ತಿಳಿಸಿದೆ. ಪಕ್ಷದ ನಿಲುವೇ ನನ್ನ ನಿಲುವು ಎಂದರು.


