Homeಕರ್ನಾಟಕಹೆಚ್ಎಂಟಿ ಜಾಗದ ಮೇಲೆ ರಾಜ್ಯ ಸರಕಾರಕ್ಕೆ ಹಕ್ಕಿಲ್ಲ ಕೇಂದ್ರ ಸಚಿವ ಕುಮಾರಸ್ವಾಮಿ

ಹೆಚ್ಎಂಟಿ ಜಾಗದ ಮೇಲೆ ರಾಜ್ಯ ಸರಕಾರಕ್ಕೆ ಹಕ್ಕಿಲ್ಲ ಕೇಂದ್ರ ಸಚಿವ ಕುಮಾರಸ್ವಾಮಿ

ಹೆಚ್ಎಂಟಿ ಜಾಗಕ್ಕೂ ಅರಣ್ಯ ಇಲಾಖೆಗೂ ಯಾವುದೇ ಸಂಬಂಧ ಇಲ್ಲ. ಆ ಜಮೀನನ ಮೇಲೆ ಅರಣ್ಯ ಇಲಾಖೆಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಬೇಕಿದ್ದರೆ ಈ ಬಗ್ಗೆ ಮಾತನಾಡುತ್ತಿರುವವರು ದಾಖಲೆಗಳನ್ನು ಪರಿಶೀಲನೆ ಮಾಡಲಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಹೆಚ್ಎಂಟಿ ಭೂಮಿ ವಶಕ್ಕೆ ಸಂಬಂಧಿಸಿ ಅರಣ್ಯಾಧಿಕಾರಿ ಒಬ್ಬರು ನೀಡಿರುವ ನೋಟಿಸ್ ವಿಚಾರದಲ್ಲಿ ಸಚಿವ ಈಶ್ವರ ಖಂಡ್ರೆ ನೀಡಿರುವ ಹೇಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಚಿವರು; ಹೆಚ್ಎಂಟಿ ಭೂಮಿಯ ಮೇಲೆ ಹಿಂದಿನ ಅರಣ್ಯ ಸಚಿವರಿಗೆ ಯಾಕೋ ವಿಪರೀತ ಆಸಕ್ತಿ ಇದೆ. ಯಾವ ಕಾರಣಕ್ಕೆ ಅವರು ಈ ಪರಿಯ ಆಸಕ್ತಿ ತೋರುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ಹೆಚ್‌ಎಂಟಿ ಭೂಮಿಗೆ ಸಂಬಂಧಿಸಿದಂತೆ ಹಿಂದಿನ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

1960ರಲ್ಲೇ ಕಾನೂನುಬದ್ಧವಾಗಿ ‘ಡೀಫಾರೆಸ್ಟ್’ ಮಾಡಿ, ಡಿಎಫ್‌ಒ ಅವರಿಂದ ನಿರಪೇಕ್ಷಣ ಪತ್ರ (NOC) ಪಡೆದು ಹೆಚ್ಎಂಟಿಗೆ ನೀಡಲಾದ ಭೂಮಿಯನ್ನು “ಒತ್ತುವರಿ” ಎಂದು ಬಿಂಬಿಸುತ್ತಿರುವ ಈಶ್ವರ್ ಖಂಡ್ರೆ ಅವರ ವರ್ತನೆ ಸರಿಯಲ್ಲ ಎಂದ ಕೇಂದ್ರ ಸಚಿವರು; 1960ರ ನವೆಂಬರ್ 25ರ ಹೆಚ್‌ಎಂಟಿ ಸಂಸ್ಥೆಯ ಒಪ್ಪಂದ ಕುರಿತಂತೆ ಅಧಿಕೃತ ಸರ್ಕಾರಿ ಆದೇಶದ ದಾಖಲೆಗಳನ್ನೇ ಬಿಡುಗಡೆ ಮಾಡಿದ್ದಾರೆ. ಆರೋಪ ಮಾಡುವ ಮುನ್ನ ದಾಖಲೆ ಕೊಟ್ಟು ಮಾತನಾಡಿ ಖಂಡ್ರೆಯವರೇ ಎಂದು ಗುಡುಗಿದರು.

ಹೆಚ್‌ಎಂಟಿ ಭೂಮಿಯ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಖಂಡ್ರೆ, ಹೆಚ್‌ಎಂಟಿ ಜಮೀನಿನ ಪಕ್ಕದಲ್ಲಿಯೇ ಜಕ್ಕೂರು ವಿಮಾನ ಚಾಲನಾ ತರಬೇತಿ ಕೇಂದ್ರವಿದೆ. ಅದರ ಎದುರಿಗೆ ಇರುವ ಜಕ್ಕೂರು ಪ್ಲಾಂಟೇಶನ್ ನಲ್ಲಿ ಅನೇಕರು ಮನೆಗಳನ್ನು ಕಟ್ಟಿದ್ದಾರೆ ಕೊಂಡಿದ್ದಾರೆ. ಅಲ್ಲಿ ಸಾಕಷ್ಟು ಅರಣ್ಯ ಭೂಮಿ ಗುಳುಂ ಆಗಿದೆ. 444 ಎಕರೆ ಭೂಮಿಯಲ್ಲಿ ಜೈವಿಕ ಉದ್ಯಾನ ಮಾಡುವುದು ನಮ್ಮ ಗುರಿ ಎಂದು ಹೇಳಿದ್ದೀರಿ. ಅರಮನೆ ಜಾಗವನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೆ ಹೇಳಿದ್ದು. ಅಲ್ಲಿ ನೋಡಿದರೆ ಉದ್ದಕ್ಕೂ ಕಲ್ಯಾಣಿ ಮಂಟಪಗಳು ತಲೆ ಎತ್ತಿ ನಿಂತಿವೆ. ಆ ಕಲ್ಯಾಣ ಮಂಟಪಗಳಿಗೆ ಯಾವ ಆಧಾರದ ಮೇಲೆ ಅನುಮತಿ ಕೊಟ್ಟಿದ್ದೀರಿ? ಜೈವಿಕ ಉದ್ಯಾನವನ ಮಾಡುವುದು ಅಂದರೆ ಇದೇನಾ ಖಂಡ್ರೆ ಅವರೇ? ಇಂದು ಕೇಂದ್ರ ಸಚಿವರು ಕೇಳಿದರು.

ಹೆಚ್‌ಎಂಟಿ ಜಾಗದ ಬಗ್ಗೆ ರಾಜ್ಯ ಸರ್ಕಾರದ ನಡುವೆ ವ್ಯಾಜ್ಯವಿದೆ. ಅದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಅದರ ಜತೆಗೆ ರಾಷ್ಟ್ರದ ಹೆಮ್ಮೆಯಾಗಿದ್ದ ಹೆಚ್ಎಂಟಿ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಣೆ ಆಗುವ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಅರಣ್ಯ ಇಲಾಖೆ ಭೂಮಿ ತೆರವು ಮಾಡಿ ಎಂದು ಆದೇಶ ನೀಡಿದೆ. ಸರಕಾರಿ ಸೇವೆಯಿಂದ ನಿವೃತ್ತಿ ಆಗುವುದಕ್ಕೆ ಕೇವಲ 15 ದಿನಗಳ ಹಿಂದೆ ಭೂಮಿ ಬಿಟ್ಟುಕೊಡುವಂತೆ ಕಾನೂನುಬಾಹಿರವಾಗಿ ಆದೇಶ ಹೊರಡಿಸಿದ್ದಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಹಾಗೆಯೇ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ (KIOCL) ಸಂಸ್ಥೆಯಿಂದ ₹546 ಕೋಟಿಗೂ ಅಧಿಕ ಹಣ ಪಡೆದಿರುವ ರಾಜ್ಯ ಸರಕಾರವು, ಕಳೆದ 2 ವರ್ಷಗಳಿಂದ ಅದಿರು ತೆಗೆಯಲು ಅನುಮತಿ ನೀಡದೆ ಸತಾಯಿಸುತ್ತಿರುವುದು ಯಾಕೆ? ಸಾವಿರಾರು ಕನ್ನಡಿಗರ ಉದ್ಯೋಗ ಕಸಿಯುವುದೇ ನಿಮ್ಮ ಸಾಧನೆಯೇ? ಈ ಕಂಪನಿ ಆರಂಭ ಆದಾಗಿನಿಂದ ಸಾವಿರಾರು ಕೋಟಿ ಹಣವನ್ನು ರಾಜ್ಯದ ಖಜಾನೆಗೆ ತುಂಬಿಸಿದೆ. ಅಲ್ಲದೆ ಸಾವಿರಾರು ಕುಟುಂಬಗಳಿಗೆ ಜೀವನೋಪಾಯ ಕಲ್ಪಿಸಿದೆ. ಇಂಥ ಸಂಸ್ಥೆಯ ಕತ್ತು ಕುಯ್ಯಲು ರಾಜ್ಯ ಸರ್ಕಾರ ಹೊರಟಿದೆ ಎಂದು ಹರಿಹಾಯ್ದರು.

ಈಶ್ವರ ಖಂಡ್ರೆ ಎಷ್ಟು ಅರಣ್ಯ ಭೂಮಿಯನ್ನು ಉಳಿಸಿದ್ದಾರೆ?

ಹೆಚ್ಎಂಟಿ ಜಾಗದ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಯಾವುದೇ ಕಾರಣಕ್ಕೂ ಹೆಚ್‌ಎಂಟಿ ಭೂಮಿಯನ್ನು ಮುಟ್ಟಲು ಆಗುವುದಿಲ್ಲ. ನ್ಯಾಯಾಲಯದ ತಡೆಯಾಜ್ಞೆ ಕೂಡ ನೀಡಿದೆ. ಇಷ್ಟೆಲ್ಲಾ ಮಾತನಾಡುವ ಈಶ್ವರ್ ಖಂಡ್ರೆ ಅವರು ಅರಣ್ಯ ಸಚಿವರಾಗಿದ್ದಾಗ ಎರಡು ವರ್ಷಗಳಿಂದ ಎಲ್ಲೆಲ್ಲಿ ಭೂಮಿ ಉಳಿಸಿದ್ದಾರೆ? ಅರಣ್ಯ ಭೂಮಿ ದೊಡ್ಡ ಮಟ್ಟದಲ್ಲಿ ಅರಣ್ಯ ಭೂಮಿಯನ್ನು ಲೂಟಿ ಮಾಡಿದ್ದಾರೆ. ಅದನ್ನೆಲ್ಲಾ ವಾಪಸ್ ಪಡೆಯುವುದು ಯಾವಾಗ ಎಂದು ಸ್ವಲ್ಪ ಹೇಳುವಿರಾ ಖಂಡ್ರೆ ಅವರೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಒಕ್ಕೂಟ ವ್ಯವಸ್ಥೆ ಬಗ್ಗೆ ಕಿಂಚಿತ್ತೂ ಪರಿಜ್ಞಾನ ಇಲ್ಲದ ಇವರು ಕೇವಲ ಹೆಚ್‌ಎಂಟಿ ಮತ್ತು ಕುದುರೆಮುಖ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತಿದ್ದಾರೆ? ಬೇರೆಯವರಿಗೆ ಕೊಟ್ಟ ಜಮೀನನ್ನು ವಾಪಸ್ ಪಡೆಯುವ ಕೆಲಸವನ್ನು ಮೊದಲು ರಾಜ್ಯ ಸರ್ಕಾರ ಮಾಡಲಿ ಎಂದು ಸವಾಲು ಹಾಕಿದರು.

ಪದೇಪದೇ ಈಗಿನ ಪಂಚಾಯತ್ ರಾಜ್ ಸಚಿವರು ನನಗೆ ಸಲಹೆ ಕೊಡುತ್ತಿದ್ದಾರೆ. ಅವರು ಸಲಹೆ ಕೊಡುತ್ತಾರೆ. ಆದರೆ, ಹೆಚ್ಎಂಟಿ ಉಳಿಸಲು ನನಗೆ ಸಹಕಾರ ಕೊಡಲಿಲ್ಲ. ಆದರೆ ಮಾಧ್ಯಮಗಳ ಮೂಲಕ ಪುಕ್ಕಟೆ ಸಲಹೆಗಳನ್ನು ಕೊಡುತ್ತಿದ್ದಾರೆ. ಉಕ್ಕಿನ ಕಾರ್ಖಾನೆ ಪುನಶ್ಚೇತನ ಮಾಡಲು ಹೇಳಿದ್ದಾರೆ. ರಾಜ್ಯ, ದೇಶಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎಂದು ಕೇಳಿದ್ದಾರೆ! ಆ ಮಾಹಿತಿ ಇಲ್ಲ. ನನ್ನ ಪ್ರವಾಸದ ವೇಳಾಪಟ್ಟಿ, ದೆಹಲಿಯಲ್ಲಿ ನಾನು ಮಾಡಿರುವ ಸಭೆಗಳ ಬಗ್ಗೆ ಮಾಹಿತಿ ಪಡೆದುಕೊಂಡರೆ ಹೆಚ್ಎಂಟಿ ಮತ್ತು ಭದ್ರಾವತಿ ಉಕ್ಕು ಕಾರ್ಖಾನೆ ಪುನಶ್ಚೇನಕ್ಕೆ ನಾನು ಮಾಡಿರುವ ಪ್ರಯತ್ನಗಳು ಏನೇನು ಎಂಬುದು ಅರ್ಥವಾಗುತ್ತದೆ. ಮಾತೆತ್ತಿದರೆ ಹೆಚ್ಎಂಟಿ ಕಾರ್ಖಾನೆ ಬಗ್ಗೆ ಮಾತನಾಡುತ್ತಾರೆ. ಅದು ಕನ್ನಡಿಗರ ಆಸ್ತಿ ಎನ್ನುತ್ತಾರೆ. ಅದು ನನ್ನ ಆಸ್ತಿಯೂ ಅಲ್ಲ. ಖಂಡ್ರೆ ಆಸ್ತಿಯೂ ಇಲ್ಲ. ಅದು ಕನ್ನಡಿಗರ ಆಸ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೇ ಕನ್ನಡಿಗರ ಆಸ್ತಿಯಲ್ಲಿ ಸುಮಾರು 175 ಎಕರೆ ನುಂಗಿದ್ದಾರೆ. ಅದನ್ನು ವಾಪಸ್ ಪಡೆಯೋದಕ್ಕೆ ಮೂರು ವರ್ಷ ಅರಣ್ಯ ಸಚಿವರಾಗಿ ನೀವು ಮಾಡಿದ ಕೆಲಸವೇನು ಖಂಡ್ರೆ ಅವರೇ? ಎಂದು ಸಚಿವ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನೆ ಮಾಡಿದರು.

ಮೂರು ವರ್ಷ ಅರಣ್ಯ ಮಂತ್ರಿಯಾಗಿ ಕೆಲಸ ಮಾಡಿದ್ದೀರಿ. ಆ ಸಂದರ್ಭದಲ್ಲಿ ಏನು ಕಡೆದು ಕಟ್ಟಿ ಹಾಕಿದ್ದೀರಿ? ನೀವು ಅರಣ್ಯ ಮಂತ್ರಿಯಾಗಿ ಎಷ್ಟು ಅರಣ್ಯ ಭೂಮಿಯನ್ನು ವಾಪಸ್ ಪಡೆದು ಉಳಿಸಿದ್ದೀರಿ? ಕಾನ್ ಕಾರ್ಡ್ ಇಂಡಿಯಾ ಕೇಸ್ ಇನ್ನು ಕೋರ್ಟ್’ನಲ್ಲಿ ನಡೆಯುತ್ತಿದೆ. ಇದು ಗೊತ್ತಿಲ್ಲವಾ ನಿಮಗೆ? ಹೆಚ್ಎಂಟಿ ಒಟ್ಟು ಜಾಗದಲ್ಲಿ ಸ್ವಲ್ಪ ಜಾಗವನ್ನು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೊಗೆ ಕೊಡಲಾಗಿದೆ. ರಾಷ್ಟ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿರುವ ಇಸ್ರೋಗೆ ಜಾಗ ನೀಡಿರುವುದರಲ್ಲಿ ಅರ್ಥವಿದೆ. ರಾಷ್ಟ್ರಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಏನೇ ಕಾರ್ಯಕ್ರಮ ಇದ್ದರೂ ನಾನು ಸ್ವಾಗತಿಸುತ್ತೇನೆ. ಆದರೆ ಸರ್ಕಾರವೇ ರಿಯಲ್ ಎಸ್ಟೇಟ್ ಮಾಡಲು ಬಂದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಬೆಂಗಳೂರು ನಗರಕ್ಕೆ 1.5 ಲಕ್ಷ ಕೋಟಿ ಎಲ್ಲಿಂದ ಬರುತ್ತೆ?

ಬೆಂಗಳೂರು ಅಭಿವೃದ್ಧಿಗೆ ₹1.5 ಲಕ್ಷ ಕೋಟಿ ಹಂಚಿಕೆ ಮಾಡುತ್ತೇವೆ ಎಂದು ಸಿಎಂ ಡಿಕೆಶಿ ಘೋಷಣೆ ಮಾಡಿದ್ದಾರೆ. ಆದರೆ, ಈ ಸರ್ಕಾರದಲ್ಲಿ ಹಣ ಎಲ್ಲಿದೆ? ಯಾರ ತಲೆ ಮೇಲೆ ಸಾಲ ಹೇರುತ್ತೀರಿ? ಜನರ ಮೇಲೆ ಸಾಲದ ಹೊರೆ ಹಾಕಿ ಬೆಂಗಳೂರು ಉದ್ದಾರ ಮಾಡುತ್ತೀರಾ? 15 ಲಕ್ಷ ಸಸಿ ನೆಟ್ಟು ಗಿನ್ನೆಸ್ ದಾಖಲೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. 15 ಲಕ್ಷ ಸಸಿ ನೆಟ್ಟು ಚೊಂಬಿನಲ್ಲಿ ನೀರು ಬಿಡುತ್ತಿದ್ದಾರೆ. ಗಿನ್ನೆಸ್ ದಾಖಲೆ ಮಾಡುವುದಕ್ಕೆ ಭತ್ತ ನಾಟಿ ಮಾಡುವವರನ್ನು ಕರೆದುಕೊಂಡು ಬಂದು ಸಸಿಗಳನ್ನು ನೆಡಿಸಿದ್ದಾರೆ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.

ಹಿರಿಯೂರು ಉಪ ಚುನಾವಣೆಗೆ ಜೆಡಿಎಸ್ ಸಿದ್ಧತೆ

ಹಿರಿಯೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ನಮ್ಮ ಪಕ್ಷದಲ್ಲಿ ಒತ್ತಡ ಇದೆ. ಈ ಬಗ್ಗೆ ಬಿಜೆಪಿ ಉನ್ನತ ನಾಯಕರ ಜತೆ ಚರ್ಚೆ ನಡೆಸಿದ್ದೇನೆ. ಹಿರಿಯೂರು ಕ್ಷೇತ್ರದ ಮುಖಂಡರ ಜತೆ ಎರಡು ಮೂರು ಸಭೆಗಳನ್ನು ನಡೆಸಿದ್ದೇನೆ. ಸಮಯ ಇದೆ, ನೋಡೋಣ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಶಾಸಕ ಎಂ.ಟಿ. ಕೃಷ್ಣಪ್ಪ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಶಾಸಕ ಚೌಡರೆಡ್ಡಿ ತೂಪಲ್ಲಿ, ಮುಖಂಡ ಶಾಂತಕುಮಾರ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments