Homeಕರ್ನಾಟಕರೈತರ ನೆರವಿಗೆ ಧಾವಿಸಿ, 50 ಸಾವಿರ ರೂ. ವರೆಗೆ ಸಾಲ ಮನ್ನಾ ಮಾಡಿ : ಪ್ರತಿಪಕ್ಷ...

ರೈತರ ನೆರವಿಗೆ ಧಾವಿಸಿ, 50 ಸಾವಿರ ರೂ. ವರೆಗೆ ಸಾಲ ಮನ್ನಾ ಮಾಡಿ : ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ

ಬರಗಾಲ ಮತ್ತು ಪ್ರವಾಹದಿಂದ ಸಂತ್ರಸ್ತರಾಗಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಕೂಡಲೇ ಧಾವಿಸಬೇಕೆಂದು ಆಗ್ರಹಿಸಿರುವ ಪ್ರತಿಪಕ್ಷ ನಾಯಕ ಆರ್‌.ಅಶೋಕ, ತುರ್ತು ಪರಿಹಾರದ ಜೊತೆಗೆ ತಲಾ 50,000 ರೂ.ವರೆಗೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳು ತೀವ್ರ ಬರಗಾಲದಿಂದ ತತ್ತರಿಸುತ್ತಿದ್ದರೆ, ಮತ್ತೊಂದೆಡೆ ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹದ ಆತಂಕ ಎದುರಾಗಿದೆ. ಲಕ್ಷಾಂತರ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಕುಟುಂಬಗಳು ಸಂಕಷ್ಟದಲ್ಲಿದ್ದು, ಸರ್ಕಾರದ ತುರ್ತು ನೆರವು ನಿರೀಕ್ಷಿಸುತ್ತಿದ್ದಾರೆ” ಎಂದಿದ್ದಾರೆ.

“ಇತ್ತೀಚೆಗೆ ತಾವು ಬರಪೀಡಿತ ರೈತರ ಸಾಲಮನ್ನಾ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿಕೆ ನೀಡಿದ್ದೀರಿ. ಆದರೆ ರೈತರಿಗೆ ಈಗ ಬೇಕಾಗಿರುವುದು ಪರಿಶೀಲನೆ ಅಲ್ಲ, ತಕ್ಷಣದ ನಿರ್ಧಾರ. ಆದ್ದರಿಂದ ವಿಳಂಬ ಮಾಡದೆ ಬರ ಮತ್ತು ಪ್ರವಾಹದಿಂದ
ಸಂತ್ರಸ್ತರಾಗಿರುವ ಎಲ್ಲ ರೈತರಿಗೆ ₹50,000 ವರೆಗೆ ಸಾಲಮನ್ನಾ ಘೋಷಿಸಿ ಅವರ ಸಂಕಷ್ಟಕ್ಕೆ ಸೃ೦ದಿಸಬೇಕು” ಎಂದು ಆಗ್ರಹ ಮಾಡಿದ್ದಾರೆ.

ಕೇಂದ್ರದ ವಿರುದ್ಧದ ನಿರ್ಣಯ ಖಂಡನೀಯ

“ಕೆಪಿಸಿಸಿ ಸರ್ವಸದಸ್ಯರ ಸಭೆಯಲ್ಲಿ ಬರ ಪರಿಹಾರ ಕಾರ್ಯಕ್ಕಾಗಿ 10 ಸಾವಿರ ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಮಾಡಿರುವ ನಿರ್ಣಯ ಬೇಜವಾಬ್ದಾರಿಯುತ ಮತ್ತು ದುರದೃಷ್ಟಕರ. ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಹಾಕಲು ಹಾಗೂ ರೈತರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ನಿರ್ಣಯ ಅಂಗೀಕರಿಸಿರುವುದು ಖಂಡನೀಯ. ಪ್ರಕೃತಿ ವಿಕೋಪವನ್ನು ಎದುರಿಸುವ ಸಂದರ್ಭದಲ್ಲೂ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಮಾಡುವ ಮನಸ್ಥಿತಿ ಈ ನಿರ್ಣಯದಲ್ಲಿ ಪ್ರತಿಫಲಿಸಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ 2 ಅಧಿಕಾರಕ್ಕೆ ಬಂದ ನಂತರ ಕರ್ನಾಟಕವು ವಿಪತ್ತು ನಿರ್ವಹಣೆ ಮತ್ತು ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ದಾಖಲೆ ಪ್ರಮಾಣದ ನೆರವು ಪಡೆದಿದೆ. ಕಳೆದ 12 ವರ್ಷಗಳಲ್ಲಿ ಎನ್‌ಡಿಆರ್‌ಎಫ್‌ ಅಡಿಯಲ್ಲಿ ಮಾತ್ರ 12,542.97 ಕೋಟಿಗೂ ಅಧಿಕ ನೆರವು ರಾಜ್ಯಕ್ಕೆ ಬಿಡುಗಡೆಯಾಗಿದೆ. ಇದರ ಜೊತೆಗೆ ಎಸ್‌ಡಿಆರ್‌ಎಫ್‌ ಅಡಿಯಲ್ಲಿ ಕೇಂದ್ರದ ಪಾಲಿನ 3,806.30 ಕೋಟಿಗಳನ್ನು ನಿಯಮಾನುಸಾರ ನಿರಂತರವಾಗಿ ಬಿಡುಗಡೆ ಮಾಡಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ನೆರವು ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕವನ್ನು ನಿರ್ಲಕ್ಷಿಸಿದೆ ಎಂದು ಕೆಪಿಸಿಸಿ ನಿರ್ಣಯದಲ್ಲಿ ಬಿಂಬಿಸಿರುವುದು ಅಧಿಕೃತ ಅಂಕಿ-ಅಂಶಗಳನ್ನೇ ನಿರಾಕರಿಸುವ ಪ್ರಯತ್ನವಾಗಿದೆ” ಎಂದು ಅವರು ಹೇಳಿದ್ದಾರೆ.

“2019 ರಲ್ಲಿ ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿತ್ತು. ಆಗ ಯಡಿಯೂರಪ್ಪನವರೇ ಸ್ವತಃ ಪ್ರವಾಸ ಕೈಗೊಂಡು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಎಸ್‌ಡಿಆರ್‌ಎಫ್‌ ಅನ್ವಯ ನೀಡುವ ಬೆಳೆಹಾನಿ ಪರಿಹಾರವನ್ನು ದುಪ್ಪಟ್ಟುಗೊಳಿಸಲಾಯಿತು. ನಾನು ಕಂದಾಯ ಸಚಿವನಾಗಿದ್ದಾಗ 2022 ನೇ ಸಾಲಿನಲ್ಲಿ 139,421 ಹೆಕ್ಟೇರ್‌ ಬೆಳೆ ಹಾನಿಯಾಗಿತ್ತು. ಆಗ 14,62,841 ರೈತರ ಬ್ಯಾಂಕ್‌ ಖಾತೆಗೆ 2031.15 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ನೀಡಲಾಯಿತು. ಮಳೆಯಾಶ್ರಿತ ಜಮೀನಿಗೆ ಹೆಕ್ಟೇರ್‌ಗೆ 6,800 ರೂ. ಮಾರ್ಗಸೂಚಿ ದರವಿದ್ದು, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 6,800 ರೂ. ಸೇರಿಸಿ, ಒಟ್ಟು 13,600 ರೂ. ನೀಡಲಾಯಿತು” ಎಂದು ತಿಳಿಸಿದ್ದಾರೆ.

“ನೀರಾವರಿ ಜಮೀನಿಗೆ ಹೆಕ್ಟೇರ್‌ಗೆ 13,500 ರೂ. ಮಾರ್ಗಸೂಚಿ ದರವಿದ್ದು, ಅದಕ್ಕೆ ರಾಜ್ಯ ಸರ್ಕಾರದಿಂದ 11,500 ರೂ. ಸೇರಿಸಿ ಒಟ್ಟು 25,000 ರೂ. ನೀಡಲಾಯಿತು. ಬಹುವಾರ್ಷಿಕ ಬೆಳೆ ಜಮೀನಿಗೆ 18,000 ರೂ. ಮಾರ್ಗಸೂಚಿ ದರವಿದ್ದು, ರಾಜ್ಯ ಸರ್ಕಾರದಿಂದ 10,000 ರೂ. ಸೇರಿಸಿ ಒಟ್ಟು 28,000 ರೂ. ನೀಡಲಾಯಿತು. ಕೇಂದ್ರದ ಮಾರ್ಗಸೂಚಿಗಿಂತ ಹೆಚ್ಚಿನ ಪರಿಹಾರವನ್ನು ರಾಜ್ಯ ಸರ್ಕಾರದ ಹೆಚ್ಚುವರಿ ಅನುದಾನದ ಮೂಲಕ ನೀಡಿ ರೈತರ ಬೆನ್ನಿಗೆ ನಿಲ್ಲಲಾಗಿತ್ತು. ಅಂದರೆ ಅಂದಿನ ಬಿಜೆಪಿ ಸರ್ಕಾರದ ಅದ್ಯತೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಲ್ಲ, ಬದಲಾಗಿ ರೈತರ ಕಣ್ಣೀರು ಒರೆಸುವುದಾಗಿತ್ತು” ಎಂದು ವಿವರಿಸಿದ್ದಾರೆ.

“ಪ್ರಕೃತಿ ವಿಕೋಪದಂತಹ ಸೂಕ್ಷ್ಮ ವಿಚಾರಗಳಲ್ಲಿಯೂ ರಾಜಕೀಯ ನಿರ್ಣಯಗಳನ್ನು ಅಂಗೀಕರಿಸಿ ಜನರನ್ನು ದಿಕ್ಕು ತಪ್ಪಿಸುವುದು ಯಾವುದೇ ಜವಾಬ್ದಾರಿಯುತ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ರೈತರಿಗೆ ಈಗ ಬೇಕಾಗಿರುವುದು ಆರೋಪಗಳಲ್ಲ, ಆಶ್ರಯ; ಪ್ರಚಾರವಲ್ಲ, ಪರಿಹಾರ. ಆದ್ದರಿಂದ ಕೇಂದ್ರ ಸರ್ಕಾರದ ವಿರುದ್ಧ ನಿರಾಧಾರ ಆರೋಪಗಳನ್ನು ಕೈಬಿಟ್ಟು, ರಾಜ್ಯ ಸರ್ಕಾರ ತನ್ನ ಕರ್ತವ್ಯವನ್ನು ನಿರ್ವಹಿಸಿ, ತಾವು ನೀಡಿರುವ ಸಾಲ ಮನ್ನಾ ಭರವಸೆಯನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕು” ಎಂದು  ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments