– ಜಿಲ್ಲಾಧ್ಯಕ್ಷರು ಸೇರಿ ನೂತನ ಪದಾಧಿಕಾರಿಗಳ ನೇಮಕ ಕುರಿತು ವಿಸ್ತೃತ ಚರ್ಚೆ
– ಸಂಘಟನೆ, SIR ಬಗ್ಗೆ ಮಾಹಿತಿ ಪಡೆಕೊಂಡ ಸಚಿವರು; ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ
ಪಕ್ಷದ ಸಂಘಟನೆ, ನೂತನ ಪದಾಧಿಕಾರಿಗಳ ನೇಮಕ ಹಾಗೂ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತಂತೆ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಸೇರಿದಂತೆ ಮಧುಗಿರಿ, ನೆಲಮಂಗಲ ವಿಧಾಸಭೆ ಕ್ಷೇತ್ರಗಳ ಮುಖಂಡರ ಜತೆ ವಿಸ್ತೃತ ಸಮಾಲೋಚನೆ ನಡೆಸಿದರು.
ಎರಡು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ತಾಲೂಕು ಘಟಕಗಳು ಅಧ್ಯಕ್ಷರು ಸೇರಿದಂತೆ ಜಿಲ್ಲೆಯ ಪ್ರಮುಖರ ಜೊತೆ ಸಭೆ ನಡೆಸಿದ ಕೇಂದ್ರ ಸಚಿವರು; ಪಕ್ಷ ಸಂಘಟನೆ ವಿಚಾರದಲ್ಲಿ *ಕಾರ್ಯಕರ್ತರೇ ಮೊದಲು* ಎನ್ನುವ ಸ್ಪಷ್ಟ ಸಂದೇಶ ನೀಡಿದರು.
ಎರಡೂ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಯ ಸ್ಥಿತಿಗತಿಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆದುಕೊಂಡ ಕೇಂದ್ರ ಸಚಿವರು, ಮುಂದಿನ ಎರಡು ವರ್ಷಗಳಲ್ಲಿ ಪಕ್ಷವನ್ನು ಬಲಪಡಿಸುವುದು ಹಾಗೂ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತಳಮಟ್ಟದಿಂದ ಸಂಘಟನೆಯನ್ನು ಗಟ್ಟಿಗೊಳಿಸುವ ಬಗ್ಗೆ ಮುಖಂಡರಿಗೆ ಕಠಿಣ ಸೂಚನೆಗಳನ್ನು ನೀಡಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ನಮ್ಮ ಪಕ್ಷಕ್ಕೆ ಬಲಿಷ್ಠ ನೆಲೆಗಳಾಗಿದ್ದವು. ಆದರೆ ಸಂಘಟನೆ ಸೊರಗಿದೆ ಎಂಬ ಬಗ್ಗೆ ಕಾರ್ಯಕರ್ತರು ನಿರಂತರವಾಗಿ ಬೇಸರ ತೋಡಿಕೊಳ್ಳುತ್ತಿದ್ದಾರೆ. ಜಿಲ್ಲೆಗಳಲ್ಲಿ ಮುಖಂಡರು ಇದ್ದೀರಿ. ಮೂವರು ಶಾಸಕರಿದ್ದಾರೆ, ಒಬ್ಬರು ಸಂಸದರು ಕೂಡಾ ಇದ್ದಾರೆ. ಪಕ್ಷವನ್ನು ಬಲಪಡಿಸಲು ಸಮಸ್ಯೆ ಏನು ಎಂದು ಕೇಂದ್ರ ಸಚಿವರು ಕಟುವಾಗಿ ಪ್ರಶ್ನಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಸೃಷ್ಟಿಯಾಗಿದೆ. ಜನರ ಜತೆ ಸದಾ ಕೆಲಸ ಮಾಡಿ. ಅವರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸಿ. ಯುವ ಜನರನ್ನು ಹೆಚ್ಚು ಹೆಚ್ಚಾಗಿ ಪಕ್ಷಕ್ಕೆ ತನ್ನಿ ಎಂದು ಮುಖಂಡರಿಗೆ ತಾಕೀತು ಮಾಡಿದ ಕುಮಾರಸ್ವಾಮಿ ಅವರು; ಮುಂದಿನ ಚುನಾವಣೆಯಲ್ಲಿ ಎಲ್ಲರೂ ಬಹಳ ಜವಾಬ್ದಾರಿ ಹೊತ್ತು ಹೊತ್ತು ಕೆಲಸ ಮಾಡಬೇಕು. ಈಗಿನಿಂದ ನಿಮಗೆ ವಿಶ್ರಾಂತಿ ಎನ್ನುವುದು ಇಲ್ಲ. ಅದಷ್ಟು ಬೇಗ ಜಿಲ್ಲೆ, ತಾಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.
ನಮ್ಮ ಪಕ್ಷಕ್ಕೆ ಕಾರ್ಯಕರ್ತರೇ ಮೊದಲು. ಅಗ್ರ ಮನ್ನಣೆ ಕಾರ್ಯಕರ್ತರಿಗೆ ಸಲ್ಲುತ್ತದೆ. ಮುಖಂಡರು ಕಾರ್ಯಕರ್ತರನ್ನು ವಿಶ್ವಾಸ ತೆಗೆದುಕೊಂಡು ಪ್ರತಿದಿನವೂ ಅವರೊಂದಿಗೆ ಬೆರೆತು ಕೆಲಸ ಮಾಡಬೇಕು. ಪ್ರಮುಖ ಮತ್ತು ಸೂಕ್ಷ್ಮ ವಿಚಾರಗಳು ಬಂದಾಗ ಮುಖಂಡರು ಕಾರ್ಯಕರ್ತರಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು. ಸಂಘಟನೆಯನ್ನು ಆ ಮೂಲಕ ಹಳ್ಳಿ ಹಳ್ಳಿಗೂ ವಿಸ್ತರಣೆ ಮಾಡಬೇಕು ಎಂದು ಸಚಿವರು ಸ್ಪಷ್ಟ ಮಾತುಗಳಲ್ಲಿ ಸೂಚನೆ ನೀಡಿದರು.
ಪಕ್ಷದ ಸಂಘಟನೆ ಜೊತೆಗೆ ಸದ್ಯಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಇವರ ಪರಿಷ್ಕರಣೆ (ಎಸ್ ಐ ಆರ್) ಪ್ರಕ್ರಿಯೆಯನ್ನು ಕಾರ್ಯಕರ್ತರು ಮತ್ತು ಮುಖಂಡರು ಎಚ್ಚರಿಕೆಯಿಂದ ಗಮನಿಸಬೇಕು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಕೊಡುವುದಿಲ್ಲ ಎಂದು ಭೀತಿ ಸೃಷ್ಟಿಸಿ ಜನರಲ್ಲಿ ಭಯದ ವಾತಾವರಣ ಉಂಟು ಮಾಡಿದೆ. ಈ ಸಂದರ್ಭದಲ್ಲಿ ಸರಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ನಾವು ಕಣ್ಣಲ್ಲಿ ಕಣ್ಣಿಟ್ಟು ಗಮನಿಸಬೇಕಾಗಿದೆ ಎಂದು ಸಚಿವರು ಹೇಳಿದರು.
ಈ ಸಭೆಗಳು ಕೇವಲ ಸಂಘಟನೆ ಮತ್ತು ನೂತನ ಪದಾಧಿಕಾರಿಗಳನ್ನು ನೇಮಕ ಮಾಡುವ ಚರ್ಚೆಗಷ್ಟೇ ಸೀಮಿತ. ಆದಷ್ಟು ಬೇಗ ಕೋಲಾರ ಜಿಲ್ಲೆಗೆ ಹೊಸ ಜಿಲ್ಲಾಧ್ಯಕ್ಷರನ್ನು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೆಲ ಮುಖಂಡರ ಅಭಿಪ್ರಾಯ, ಸಲಹೆಗಳನ್ನು ಸಚಿವರು ಆಲಿಸಿದರು.
ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋಲಾರ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ, ಸಂಸತ್ ಸದಸ್ಯ ಮಲ್ಲೇಶ್ ಬಾಬು, ಶಾಸಕ ಮೇಲೂರು ರವಿ, ಮಾಜಿ ಶಾಸಕರಾದ ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ಇಂಚರ ಗೋವಿಂದರಾಜು, ರಾಜ್ಯದ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ರಾಮೇಗೌಡ, ಹೂಡಿ ವಿಜಯ್ ಕುಮಾರ್, ಸಿಎಂಆರ್ ಶ್ರೀನಾಥ್, ವಡಗೂರು ಹರೀಶ್, ವಕ್ಕಲೇರಿ ರಾಮು ಸೇರಿದಂತೆ ಅನೇಕ ಹಿರಿಯ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.
ಚಿಕ್ಕಬಳ್ಳಾಪುರ ಜಿಲ್ಲಾ ಮುಖಂಡರೊಂದಿಗೆ ಸಭೆ
ಕೋಲಾರ ಜಿಲ್ಲೆ ಸಭೆಯ ನಂತರ ಪಕ್ಷದ ರಾಜ್ಯ ಅಧ್ಯಕ್ಷರು ಚಿಕ್ಕಬಳ್ಳಾಪುರ ಜಿಲ್ಲೆಯ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.
ಈ ಸಭೆಯಲ್ಲಿ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಸಂಸತ್ ಸದಸ್ಯ ಮಲ್ಲೇಶ್ ಬಾಬು, ಶಾಸಕ ಮೇಲೂರು ರವಿ, ಮಾಜಿ ಶಾಸಕರಾದ ತಿಪ್ಪೇಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ರಾಮೇಗೌಡ, ಜಿಲ್ಲಾಧ್ಯಕ್ಷ ಮುನಿಯಪ್ಪ, ನರಸಿಂಹಮೂರ್ತಿ ಮುಂತಾದವರು ಭಾಗಿಯಾಗಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗೆ ಕಟುನಿಟಿನ ಸೂಚನೆಗಳನ್ನು ಕೊಟ್ಟ ಸಚಿವರು, ನಾನು ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದ್ದೇನೆ. ಅಲ್ಲಿ ಸಂಘಟನೆ ದುರ್ಬಲ ಆಗಿದ್ದಕ್ಕೆ ಕೆಲವರು ಮೆರೆಯುತ್ತಿದ್ದಾರೆ. ಈಗಿನಿಂದಲೇ ಸಂಘಟನೆ ಆರಂಭಿಸಿ. ವಾರಕ್ಕೊಂದು ಸಭೆ ಮಾಡಿ. ಜಿಲ್ಲೆಗೆ ನಾನೇ ಬರುತ್ತೇನೆ, ಎಲ್ಲರೂ ಸೇರಿ ಪಕ್ಷ ಕಟ್ಟೋಣ ಎಂದು ಹೇಳಿದರು.
ನೆಲಮಂಗಲ ಕ್ಷೇತ್ರದ ಸಭೆಯಲ್ಲಿ ಮಾಜಿ ಶಾಸಕರಾದ ಇ. ಕೃಷ್ಣಪ್ಪ, ಡಾ. ಶ್ರೀನಿವಾಸಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಹಾಗೂ ಮಧುಗಿರಿ ಕ್ಷೇತ್ರದ ಸಭೆಯಲ್ಲಿ ಮಾಜಿ ಶಾಸಕ ತಿಮ್ಮರಾಯಪ್ಪ, ಕೆ.ಎ. ತಿಪ್ಪೇಸ್ವಾಮಿ, ನಿಂಗಪ್ಪ ಮುಂತಾದವರು ಭಾಗಿಯಾಗಿದ್ದರು.


