Homeಕರ್ನಾಟಕಬರ ಪರಿಸ್ಥಿತಿ ನಿರ್ವಹಿಸಲು ಮತ್ತು ಪರಿಹಾರ ಕ್ರಮಕ್ಕೆ ಆಗ್ರಹಿಸಿ  ಸಿಎಂ ಶಿವಕುಮಾರ್‌ಗೆ ಪತ್ರ ಬರೆದ ಆರ್‌.ಅಶೋಕ್

ಬರ ಪರಿಸ್ಥಿತಿ ನಿರ್ವಹಿಸಲು ಮತ್ತು ಪರಿಹಾರ ಕ್ರಮಕ್ಕೆ ಆಗ್ರಹಿಸಿ  ಸಿಎಂ ಶಿವಕುಮಾರ್‌ಗೆ ಪತ್ರ ಬರೆದ ಆರ್‌.ಅಶೋಕ್

  • ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿ, ತುರ್ತು ಪರಿಸ್ಥಿತಿಯ ಯೋಜನೆ ಜಾರಿ ಮಾಡಿ
  • ಬೆಳೆಹಾನಿ ಸಮೀಕ್ಷೆ ಆರಂಭಿಸಿ: ರಾಜ್ಯ ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಒತ್ತಾಯ

ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಯುದ್ಧೋಪಾದಿಯಲ್ಲಿ ಮುನ್ನೆಚ್ಚರಿಕೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಬಿತ್ತನೆ ಕಾರ್ಯಗಳು ಹಿನ್ನಡೆ ಕಂಡಿದ್ದು, ಬೆಳೆಗಳು ಒಣಗುವ ಭೀತಿ ಎದುರಾಗಿದೆ. ಜಲಾಶಯಗಳ ನೀರಿನ ಮಟ್ಟವೂ ನಿರಂತರವಾಗಿ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರ ಸ್ವರೂಪ ಪಡೆಯುವ ಆತಂಕ ಎದುರಾಗಿದೆ. ಸದ್ಯದ ಮಾಹಿತಿ ಪ್ರಕಾರ 150 ಕ್ಕೂ ಅಧಿಕ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಹಲವೆಡೆ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಈಗಾಗಲೇ ಬಿತ್ತನೆಯಾದ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುವ ಸ್ಥಿತಿಗೆ ತಲುಪಿದೆ. ಇದು ಕೃಷಿ ಉತ್ಪಾದನೆಯ ಮೇಲೆ ಹಾಗೂ ಉದ್ಯೋಗದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಕೃಷಿ ಕಾರ್ಮಿಕರು ನಗರಗಳತ್ತ ಹಾಗೂ ನೆರೆ ರಾಜ್ಯಗಳತ್ತ ವಲಸೆ ಹೋಗುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜಲಾಶಯಗಳ ನೀರಿನ ಮಟ್ಟ ಅಪಾಯಕಾರಿಯಾಗಿ ಕುಸಿದಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಇದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೇಲೂ ಪರಿಣಾಮ ಬೀರಿದೆ. ಮುಂದೆ ಕುಡಿಯುವ ನೀರಿನ ಸಮಸ್ಯೆ ಯಾವ ಮಟ್ಟಿಗೆ ತೀವ್ರವಾಗಬಹುದು ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಬಹುತೇಕ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಕುರಿತು ಸಮಗ್ರ ಪರಿಶೀಲನಾ ಸಭೆ ನಡೆಸಿಲ್ಲ, ತಾಲೂಕುಗಳಿಗೆ ಭೇಟಿ ನೀಡಿಲ್ಲ ಎಂಬುದು ದುರದೃಷ್ಟಕರ. ಕೃಷಿ ಇಲಾಖೆಗೆ ಪೂರ್ಣಾವಧಿ ಸಚಿವರೇ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಲಕ್ಷಾಂತರ ರೈತರ ಬದುಕಿನ ಪ್ರಶ್ನೆ ಎದುರಾಗಿರುವಾಗ, ಕೃಷಿ ಇಲಾಖೆಗೆ ನಾಯಕತ್ವ ಇಲ್ಲವಾಗಿರುವುದು ಆಡಳಿತದ ಆದ್ಯತೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ದೂರಿದ್ದಾರೆ.

ಸಂಕಷ್ಟ ಉಲ್ಬಣಿಸುವ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಆಡಳಿತದ ಲಕ್ಷಣ. ಬರ ಪೀಡಿತ ಪ್ರದೇಶಗಳ ಘೋಷಣೆ ಮಾಡುವಲ್ಲಿ ವಿಳಂಬ ಮಾಡಿದಷ್ಟೂ ರೈತರಿಗೆ ಪರಿಹಾರ, ಬೆಳೆಹಾನಿ ಸಮೀಕ್ಷೆ, ಜಾನುವಾರುಗಳಿಗೆ ಮೇವು, ಕುಡಿಯುವ ನೀರು, ಕೇಂದ್ರ ಸರ್ಕಾರದಿಂದ ಪಡೆಯಬೇಕಾದ ನೆರವು ಮೊದಲಾದ ಪ್ರಕ್ರಿಯೆಗಳು ತಡವಾಗುತ್ತವೆ. ಈ ವಿಳಂಬದ ಬೆಲೆಯನ್ನು ಕಟ್ಟುವುದು ಸರ್ಕಾರವಲ್ಲ, ರೈತರು ಮತ್ತು ಗ್ರಾಮೀಣ ಬಡ ಜನತೆ ಎಂದು ಅವರು ಹೇಳಿದ್ದಾರೆ.

ಬರ ಎಂದರೆ ಯಾವುದೇ ಪಕ್ಷದ ಸಮಸ್ಯೆಯಲ್ಲ. ಅದು ರಾಜ್ಯದ ಸಮಸ್ಯೆ. ರೈತರ ಬದುಕು ಮತ್ತು ಗ್ರಾಮೀಣ ಆರ್ಥಿಕತೆಯ ಪ್ರಶ್ನೆಯಲ್ಲಿ ರಾಜಕೀಯಕ್ಕಿಂತ ಜನಹಿತವೇ ಮುಖ್ಯವಾಗಬೇಕು. ಈಗಲಾದರೂ ಪರಿಸ್ಥಿತಿ ಗಂಭೀರತೆ ಅರ್ಥ ಮಾಡಿಕೊಂಡು ತ್ವರಿತ, ಪರಿಣಾಮಕಾರಿ ಹಾಗೂ ಸಮನ್ವಯದ ಕ್ರಮ ಕೈಗೊಂಡರೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಮಾನವೀಯ ಹಾಗೂ ಆರ್ಥಿಕ ಸಂಕಷ್ಟವನ್ನು ತಡೆಯಲು ಸಾಧ್ಯ ಎಂದು ಅವರು ಸಲಹೆ ನೀಡಿದ್ದಾರೆ.

ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ವಹಿಸಬೇಕಾದ ಕ್ರಮಗಳನ್ನು ಪ್ರತಿಪಕ್ಷ ನಾಯಕ ಆರ್‌.ಅಶೋಕ ಪತ್ರದಲ್ಲಿ ತಿಳಿಸಿದ್ದಾರೆ.

1. ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಜಿಲ್ಲಾವಾರು ಮತ್ತು ತಾಲ್ಲೂಕುವಾರು ಪರಿಶೀಲಿಸಿ, ತಕ್ಷಣ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು.

2. ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಉಸ್ತುವಾರಿ ಕಾರ್ಯದರ್ಶಿಗಳು ತಕ್ಷಣ ಜಿಲ್ಲಾವಾರು ಬರ ಪರಿಶೀಲನಾ ಸಭೆ ನಡೆಸುವಂತೆ ಸೂಚಿಸಿ, ವಾರವಾರದ ಪ್ರಗತಿ ಪರಿಶೀಲನೆ ನಡೆಸಬೇಕು.

3. ರಾಜ್ಯವ್ಯಾಪಿ ತುರ್ತು ಪರಿಸ್ಥಿತಿಯ ಯೋಜನೆ ಪ್ರಕಟಿಸಿ, ಪರ್ಯಾಯ ಬೆಳೆ, ಬಿತ್ತನೆ ಸಲಹೆ, ಬೀಜ, ಮೇವು, ಜಾನುವಾರುಗಳ ಸಂರಕ್ಷಣೆ, ಕುಡಿಯುವ ನೀರು ಹಾಗೂ ತುರ್ತು ಉದ್ಯೋಗ ಸೃಷ್ಟಿಗೆ ಸಮಗ್ರ ಕಾರ್ಯಯೋಜನೆ ರೂಪಿಸಬೇಕು.

4. ವಿಬಿ ಜಿರಾಮ್‌ಜಿ ಯೋಜನೆಯನ್ನು ಜಾರಿಗೊಳಿಸಿ, ಗ್ರಾಮೀಣ ಪ್ರದೇಶಗಳಲ್ಲಿ ತಕ್ಷಣ ಕಾಮಗಾರಿಗಳನ್ನು ಆರಂಭಿಸಬೇಕು. ಕೃಷಿ ಕಾರ್ಮಿಕರು ಬದುಕಿಗಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ.

5. ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗುವ ಗ್ರಾಮಗಳನ್ನು ಈಗಲೇ ಗುರುತಿಸಿ, ಟ್ಯಾಂಕರ್‌, ಬೋರ್‌ವೆಲ್‌ ಪುನಶ್ಚೇತನ, ಪರ್ಯಾಯ ನೀರು ಪೂರೈಕೆ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ತುರ್ತು ಅನುದಾನ ಬಿಡುಗಡೆ ಮಾಡಬೇಕು.

6. ಬೆಳೆಹಾನಿಯ ವೈಜ್ಞಾನಿಕ ಸಮೀಕ್ಷೆಯನ್ನು ತಕ್ಷಣ ಆರಂಭಿಸಿ, ರೈತರಿಗೆ ಮಧ್ಯಂತರ ಪರಿಹಾರ, ಬೆಳೆ ವಿಮೆ ಹಾಗೂ ಅಗತ್ಯ ಕೃಷಿ ಸಾಧನಗಳ ನೆರವನ್ನು ವಿಳಂಬವಿಲ್ಲದೆ ಒದಗಿಸಬೇಕು.

7. ಕೃಷಿ ಇಲಾಖೆಗೆ ತಕ್ಷಣ ಪೂರ್ಣಾವಧಿ ಕೃಷಿ ಸಚಿವರನ್ನು ನೇಮಿಸಿ, ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಾಜ್ಯಮಟ್ಟದ ವಿಶೇಷ ಬರ ನಿರ್ವಹಣಾ ಕಾರ್ಯಪಡೆಯನ್ನು ರಚಿಸಬೇಕು. ಹಾಲಿ ಸಚಿವರೊಬ್ಬರಿಗೆ ಹೆಚ್ಚುವರಿಯಾಗಿ ಕೃಷಿ ಇಲಾಖೆ ಉಸ್ತುವಾರಿ ಕೊಡಬೇಕು.

8. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಅಗತ್ಯ ದಾಖಲೆಗಳನ್ನು ಸಕಾಲದಲ್ಲಿ ಸಿದ್ಧಪಡಿಸಿ, ರಾಜ್ಯಕ್ಕೆ ದೊರೆಯಬೇಕಾದ ಎಲ್ಲ ನೆರವು ಮತ್ತು ಪರಿಹಾರವನ್ನು ಪಡೆಯಲು ತುರ್ತು ಕ್ರಮ ಕೈಗೊಳ್ಳಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments