ಕನ್ನಡ ಚಿತ್ರರಂಗದ ವೈಚಾರಿಕ ಹಿನ್ನೆಲೆಯ ಹಿರಿಯ ನಿರ್ದೇಶಕ, ಪತ್ರಕರ್ತ, ಸೃಜನಶೀಲ ಲೇಖಕ ಎನ್.ಎಸ್. ಶಂಕರ್ ಅವರು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಅವರ ನಿಧನದಿಂದ ಕನ್ನಡ ಸಿನಿಮಾ, ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಕೊಂಡಿಯೊಂದು ಕಳಚಿದಂತಾಗಿದೆ. ಮೂಲತಃ ಪತ್ರಕರ್ತರಾಗಿದ್ದ ಎನ್.ಎಸ್. ಶಂಕರ್ ಅವರು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರು. ಲಂಕೇಶ್ ಪತ್ರಿಕೆಯ ಒಡನಾಟದಲ್ಲಿ ಬೆಳೆದ ಅವರು ತೀಕ್ಷ್ಣ ಬರಹಗಳ ಮೂಲಕ ಗುರುತಿಸಿಕೊಂಡಿದ್ದರು. ಕೇವಲ ಪತ್ರಿಕೋದ್ಯಮಕ್ಕೆ ಸೀಮಿತವಾಗದ ಶಂಕರ್, ಸಾಂಸ್ಕೃತಿಕ ಚಳವಳಿಗಳು ಮತ್ತು ಬಂಡಾಯ ಸಾಹಿತ್ಯದ ತತ್ವಗಳಿಗೆ ಸದಾ ಧ್ವನಿಯಾಗಿದ್ದರು.
ಎನ್.ಎಸ್. ಶಂಕರ್ ಅವರು ತಮ್ಮ ಚೊಚ್ಚಲ ಸಿನಿಮಾ ‘ಉಲ್ಟಾ ಪಲ್ಟಾ’ (1997) ಮೂಲಕ ಇಡೀ ಸ್ಯಾಂಡಲ್‌ವುಡ್ ತಿರುಗಿ ನೋಡುವಂತೆ ಮಾಡಿದ್ದರು. ವಿಲಿಯಂ ಶೇಕ್ಸ್‌ಪಿಯರ್ ಅವರ ಪ್ರಸಿದ್ಧ ಕೃತಿ ‘ದಿ ಕಾಮಿಡಿ ಆಫ್ ಎರರ್ಸ್’ ಆಧಾರಿತ ಈ ಹಾಸ್ಯ ಪ್ರಧಾನ ಚಿತ್ರ ಕನ್ನಡ ಸಿನೆಮಾ ಇತಿಹಾಸದಲ್ಲಿ ಒಂದು ವಿಶಿಷ್ಟ ಮೈಲಿಗಲ್ಲಾಗಿ ಉಳಿದಿದೆ.
ಕಮರ್ಷಿಯಲ್ ಮತ್ತು ಕಲಾತ್ಮಕ ಚಲನಚಿತ್ರಗಳ ನಡುವಿನ ಗೋಡೆಯನ್ನು ಮುರಿದು ಹೊಸ ಮಾದರಿಯ ಚಿತ್ರಗಳಿಗೆ ಇದು ಪ್ರೇರಣೆಯೂ ಆಗಿತ್ತು. ತದನಂತರ ಅವರು ‘ಮಣಿ’ ಸೇರಿದಂತೆ ಕೆಲವು ಪ್ರಮುಖ ಚಿತ್ರಗಳನ್ನು ನಿರ್ದೇಶಿಸಿದ್ದರು.
ಬರಹಗಾರರಾಗಿದ್ದ ಎನ್.ಎಸ್. ಶಂಕರ್ ಅವರು ಕಲೆ, ಸಿನಿಮಾ, ರಾಜಕೀಯ ಮತ್ತು ಸಮಾಜದ ವಿವಿಧ ಆಯಾಮಗಳ ಕುರಿತು 20ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳನ್ನು ಬರೆದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ‘ಈಗ…’ ಎಂಬ ಮೂರು ಸಣ್ಣ ಕಥೆಗಳ ಆಂಥಾಲಜಿ ಸಿನಿಮಾ ಪ್ರೊಡಕ್ಷನ್ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು.
ಚಿತ್ರರಂಗ, ಮಾಧ್ಯಮ ಕ್ಷೇತ್ರ ಹಾಗೂ ಸಾಹಿತ್ಯ ವಲಯದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಎನ್.ಎಸ್. ಶಂಕರ್ ವ್ಯಕ್ತಿ ವಿಶೇಷ
ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ ಎನ್.ಎಸ್. ಶಂಕರ್ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ. ತಂದೆ ತಾಯಿ ಇಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ಕಂಡವರು. ಮಂಡ್ಯ ಜಿಲ್ಲೆಯ ಪಾಂಡವಪುರ ನಂತರ ಮೈಸೂರು, ಬೆಂಗಳೂರುಗಳಲ್ಲಿ ವ್ಯಾಸಂಗ. 79ರಿಂದ ಜನವಾಣಿ, ಪ್ರಜಾವಾಣಿ, ಲಂಕೇಶ್ ಪತ್ರಿಕೆ ಮುಂತಾಗಿ ಹಲವು ಸಂಸ್ಥೆಗಳಲ್ಲಿ ಪತ್ರಕರ್ತನಾಗಿ ದುಡಿಮೆ. ಮುಂಗಾರು ದಿನಪತ್ರಿಕೆ ಹಾಗೂ ಸುದ್ದಿ ಸಂಗಾತಿ ವಾರಪತ್ರಿಕೆಗಳ ಸಂಸ್ಥಾಪಕರಲ್ಲೊಬ್ಬರು. ಸಮಯ ಟಿವಿ ಆರಂಭಿಕ ದಿನಗಳಲ್ಲಿ ವಾಹಿನಿಯ ಸಲಹೆಗಾರರಾಗಿ, ನಂತರ ಎರಡು ವರ್ಷ ಸುದ್ದಿ ಟಿವಿಯ (ಎರಡನೇ ಮುಖ್ಯಸ್ಥ) ಸಂಪಾದಕೀಯ ಸಲಹೆಗಾರನಾಗಿ ಕಾರ್ಯ ನಿರ್ವಹಿಸಿದ್ದರು.
ಲಂಕೇಶರ ಸಣ್ಣಕತೆ ಆಧಾರಿತ ಮುಟ್ಟಿಸಿಕೊಂಡವರು ಕಿರುಚಿತ್ರದ ಮೂಲಕ ಬರಹಗಾರ, ನಿರ್ಮಾಪಕ, ನಿರ್ದೇಶಕನಾಗಿ ದೃಶ್ಯಮಾಧ್ಯಮಕ್ಕೆ ಪ್ರವೇಶ (1990). ನಾಲ್ಕು ಧಾರಾವಾಹಿಗಳು (ಬದುಕು ಜಟಕಾ ಬಂಡಿ, ಶೋಧ, ಪರಿಸರ, ಕ್ಷಮಯಾ ಧರಿತ್ರಿ); ಸುಮಾರು ಒಂದು ನೂರು ಸಾಕ್ಷ್ಯಚಿತ್ರ, ಕಿರುಚಿತ್ರ, ಟೆಲಿಚಿತ್ರ, ಜಾಹೀರಾತು ಚಿತ್ರಗಳು. ಎರಡು ರಾಜ್ಯಪ್ರಶಸ್ತಿಗಳೂ ಸೇರಿದಂತೆ ಹಲವು ಪುರಸ್ಕಾರಗಳನ್ನೂ, ಅಪಾರ ಜನಪ್ರೀತಿಯನ್ನೂ ಪಡೆದ ಉಲ್ಟಾ ಪಲ್ವಾ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ (1997). ಮುಂದಕ್ಕೆ ರಾಂಗ್ ನಂಬರ್ (2003) ಮತ್ತು ಜೂಟಾಟ (2005) ಚಿತ್ರಗಳ ನಿರ್ದೇಶನ ಮಾಡಿದ್ದಾರೆ.
ಸ್ವಾತಂತ್ರ್ಯದ ಆಮೃತ ಮಹೋತ್ಸವದ ಭಾಗವಾಗಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ರಾಜ್ಯ ವಾರ್ತಾ ಇಲಾಖೆಗಳ ಸಹಯೋಗದಲ್ಲಿ ಶಂಕರ್ ರೂಪಿಸಿದ ಅತ್ಯಪೂರ್ವ ಬಹುಮಾಧ್ಯಮ ರಂಗಪ್ರಸ್ತುತಿ ಬಾಪೂ, ಡಾ. ಚಂದ್ರಶೇಖರ ಕಂಬಾರರಿಂದ ‘ಡಾಕ್ಯುಮೆಂಟರಿ ಡ್ರಾಮಾ’ ಎಂಬ ಬಣ್ಣನೆಗೆ ಪಾತ್ರವಾದ ಪ್ರಯೋಗ. (ಇದರ ರಂಗಪಠ್ಯಕ್ಕೆ ಪ್ರಜಾವಾಣಿಯ ನಾಟಕ ರಚನಾ ಸ್ಪರ್ಧೆ 2025ರಲ್ಲಿ ಮೆಚ್ಚುಗೆ ಬಹುಮಾನ ದೊರೆತಿದೆ)
ಸಾಕ್ಷ್ಯಚಿತ್ರಗಳ ಪೈಕಿ ಕರ್ನಾಟಕದ ಐತಿಹಾಸಿಕ ದೇವಾಲಯ ವಾಸ್ತುವೈಭವವನ್ನು- ಖ್ಯಾತ ವಿದುಷಿ ಕಲಾಮಂಡಲಂ ಉಷಾ ದಾತಾರ್ ಮತ್ತು ಅವರ ತಂಡದ ನೃತ್ಯರೂಪಕಗಳೊಂದಿಗೆ ಪ್ರಸ್ತುತಪಡಿಸಿದ ಮಾನಸೋಲ್ಲಾಸ ಪ್ರತಿಷ್ಠಿತ ಮುಂಬಯಿ ಅಂತರಾಷ್ಟ್ರೀಯ (ಕಿರುಚಿತ್ರ/ ಸಾಕ್ಷ್ಯಚಿತ್ರ) ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನ (1996), ಉಲ್ಟಾ ಪಲ್ಟಾ ಚಲನಚಿತ್ರ, ಡಾ. ಚಂದ್ರಶೇಖರ ಕಂಬಾರರನ್ನು ಕುರಿತ That Wild Horse from Shivapura (2020) ಮತ್ತು ಕರ್ನಾಟಕದಲ್ಲಿ ಅಂಬೇಡ್ಕರ್ ಹೆಜ್ಜೆಗಳು… (2025) ಸಾಕ್ಷ್ಯಚಿತ್ರಗಳು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ.
ರೈತರ ಆತ್ಮಹತ್ಯೆ ಹಾಗೂ ಗ್ರಾಮೀಣ ಬಿಕ್ಕಟ್ಟುಗಳ ಅಧ್ಯಯನದ ಫಲವಾಗಿ ರೂಪುಗೊಂಡ ಭಾರತೀಯ ಸುದ್ದಿ ವಾಹಿನಿಗಳ ಇತಿಹಾಸದಲ್ಲೇ ಅಪೂರ್ವ ಪ್ರಯೋಗವೆನಿಸಿದ ರೈತಬಲಿ- 23 ಭಾಗಗಳ ಸಾಕ್ಷ್ಯಚಿತ್ರ ಸರಣಿ- ಸುದ್ದಿ ಟಿವಿಯಲ್ಲಿ ಪ್ರಸಾರ. ಪತ್ರಿಕಾ ವೃತ್ತಿಯಲ್ಲಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ದುಡಿದ ಅನುಭವಕ್ಕಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪುರಸ್ಕಾರದ ಮನ್ನಣೆ (2015). ಕಿರಂ ಪುರಸ್ಕಾರ (2017), ‘ಚಿತ್ರಕಥೆ-ಹಾಗೆಂದರೇನು?’ ಕೃತಿಗೆ ರಾಜ್ಯ ಸರ್ಕಾರದ ಚಿತ್ರಸಾಹಿತ್ಯ ವಾರ್ಷಿಕ ಪ್ರಶಸ್ತಿ (2018), ರಾಜಮೋಹನ ಗಾಂಧಿಯವರ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ (ಅಂಬೇಡ್ಕರ್ ಗಾಂಧಿ ವಾಗ್ವಾದ: ಒಂದು ಗ್ರಹಿಕೆ)- ಅನುವಾದಕ್ಕೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಜಯಶ್ರೀ ದತ್ತಿ ಪುರಸ್ಕಾರ, ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ (2019). ಮಾಧ್ಯಮಗಳಿಗೆ ನೀಡಿದ ಕೊಡುಗೆಗಾಗಿ 2024ರ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಇ- ಮಾಧ್ಯಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿತ್ರಕಥೆ ರಚನೆ ಹಾಗೂ ಸಾಕ್ಷ್ಯಚಿತ್ರ ನಿರ್ಮಾಣ ಕುರಿತು ನಾಲ್ಕು ವರ್ಷ ಅತಿಥಿ ಉಪನ್ಯಾಸಕರಾಗಿ ಬೋಧನೆ ಮಾಡಿದ್ದಾರೆ. ಕಿರುಚಿತ್ರ/ ಸಾಕ್ಷ್ಯಚಿತ್ರಗಳ ರಾಷ್ಟ್ರಪ್ರಶಸ್ತಿ ತೀರ್ಪುಗಾರ ಮಂಡಳಿ ಸದಸ್ಯರಾಗಿ (2004), ಕರ್ನಾಟಕ ರಾಜ್ಯ ಗುಣಮಟ್ಟದ ಚಿತ್ರಗಳ ಸಹಾಯಧನ ಸಮಿತಿ ಸದಸ್ಯರಾಗಿ (2007), ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ (2018), ಏಳು ವರ್ಷ ಪ್ರಾದೇಶಿಕ ಸೆನ್ಸಾರ್ ಮಂಡಳಿ ಸದಸ್ಯರಾಗಿ (2009- 16) ಕಾರ್ಯ ನಿರ್ವಹಿಸಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ; ಜೊತೆಗೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಸರ್ಕಾರದ ಸಹಯೋಗದಲ್ಲಿ ನಡೆದ ಎರಡು ದಿನಗಳ ಚಿತ್ರಕಥಾ ಕಾರ್ಯಾಗಾರದ ಸಂಚಾಲಕನ ಜವಾಬ್ದಾರಿ ನಿರ್ವಹಿಸಿದ್ದಾರೆ (2019), 2024ರ ಅಂತರಾಷ್ಟ್ರೀಯ ಚಿತ್ರೋತ್ಸವದ ಸಂದರ್ಭದಲ್ಲಿ ಏಷ್ಯಾ ವಿಭಾಗದ ಚಲನಚಿತ್ರ ಸ್ಪರ್ಧೆಯ ತೀರ್ಪುಗಾರರಲ್ಲೊಬ್ಬರು. ವ್ಯಂಗ್ಯಚಿತ್ರ ರಚನೆಗೆ ಎರಡು ಬಾರಿ (1986 ಮತ್ತು 87) ಹಿಂದೂಸ್ತಾನ್ ಟೈಮ್ಸ್ ಪ್ರಶಸ್ತಿ.
ಪ್ರಕಟಣೆಗಳು
ಚಂಚಲೆ, ಮಾಯಾಬಜಾರ್, ಮೇಲೋಗರ, ಆವರಣ ಅನಾವರಣ, ಫೂಲನ್ ದೇವಿ (ಜೀವನ ಕಥನ), ಗೋಹತ್ಯೆ ಪಾಪವೇ?, ಈಗ ಅಳುವವರೂ ಇಲ್ಲ (ದಲಿತ ರೈತ ಚಳವಳಿಗಳು: ಒಂದು ಮೆಲುಕು), ಹುಡುಕಾಟ (ಸಮಕಾಲೀನ ಬರಹಗಳು), ರೂಢಿ ಮತ್ತಿತರ ಕತೆಗಳು, ಲಂಕೇಶ್- ಇಂತಿ ಕೆಲ ಪ್ರಶ್ನೆಗಳು (ವಿಮರ್ಶೆ), ಅರಸು ಯುಗ (ದೇವರಾಜ ಅರಸು ಜೀವನ ಚರಿತ್ರೆ), ಚಿತ್ರಕಥೆ-ಹಾಗೆಂದರೇನು?, ಉಸಾಬರಿ ಮತ್ತಷ್ಟು ಸಮಕಾಲೀನ ಬರಹಗಳು, ಚಿತ್ರ ಸಲ್ಲಾಪ (ಸಿನಿಮಾ ಬರಹಗಳು) ಮತ್ತು ಆಜಾದಿ ಕನ್ನಯ್ಯ- ದಲಿತ ದನಿ ಜಿಗೇಶ್ (ಎರಡು ಸಂದರ್ಶನಗಳು). ಅರಸು ಯುಗ- ಎಂಟು ಭಾಷೆಗಳಿಗೆ (ಇಂಗ್ಲಿಷ್, ಹಿಂದಿ, ಉರ್ದು, ತಮಿಳು, ತೆಲುಗು, ಮಲಯಾಳಂ, ಮರಾಠಿ ಮತ್ತು ಬಂಗಾಳಿ) ಅನುವಾದವಾಗಿದೆ.
ಅನುವಾದ:
ಅಂಬೇಡ್ಕರ್ ಕೃತಿಗಳು: ರಾಮ ಕೃಷ್ಣ, ಮತಾಂತರ ಯಾಕೆ? ಮತ್ತು ಬ್ರಾಹ್ಮಣಧರ್ಮದ ದಿಗ್ವಿಜಯ.
ರಾಜಮೋಹನ ಗಾಂಧಿಯವರ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ (ಅಂಬೇಡ್ಕರ್ ಗಾಂಧಿ ವಾಗ್ವಾದ: ಒಂದು ಗ್ರಹಿಕೆ).


