Homeಕರ್ನಾಟಕಬಿಡದಿ ಭೂಮಿ ಲೂಟಿ ಹೊಡೆಯಲು ವರ್ಷಗಳಿಂದ ಚಾತಕ ಪಕ್ಷಿಯಂತೆ ಸಂಚು ಹೂಡಿದ್ದ ಡಿಕೆಶಿ: ಹೆಚ್‌ಡಿಕೆ ಆರೋಪ

ಬಿಡದಿ ಭೂಮಿ ಲೂಟಿ ಹೊಡೆಯಲು ವರ್ಷಗಳಿಂದ ಚಾತಕ ಪಕ್ಷಿಯಂತೆ ಸಂಚು ಹೂಡಿದ್ದ ಡಿಕೆಶಿ: ಹೆಚ್‌ಡಿಕೆ ಆರೋಪ

  • ಒಬ್ಬರೇ ರೈತರೊಂದಿಗೆ ಸಂವಾದ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ
  • ನನ್ನನ್ನು ಜೈಲಿಗೆ ಕಳಿಸಬೇಕಾದರೆ ಇನ್ನೂ ನೂರು ಜನ್ಮ ಹುಟ್ಟಿ ಬರಬೇಕು

ಬಿಡದಿ ಹೋಬಳಿಯ ಫಲವತ್ತಾದ ಕೃಷಿ ಭೂಮಿ ಲೂಟಿ ಹೊಡೆಯಲು ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನೇಕ ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾದು ಕುಳಿತು ಸಂಚು ರೂಪಿಸಿದ್ದರು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಬಿಡದಿಯ ಬೈರಮಂಗಲದಲ್ಲಿ ರೈತರ ಸಮ್ಮುಖದಲ್ಲಿ ಚರ್ಚೆಗೆ ಬರುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಕೇಂದ್ರ ಸಚಿವರು ಪತ್ರ ಬರೆದು ವಿನಂತಿ ಮಾಡಿದ್ದರು. ಆದರೆ ಚರ್ಚೆಗೆ ಮುಖ್ಯಮಂತ್ರಿಗಳು ಗೈರು ಹಾಜರಾಗಿದ್ದರು. ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಒಬ್ಬರೇ ನೊಂದ ರೈತರೊಂದಿಗೆ ಸಂವಾದ ನಡೆಸಿದರು.

“ಬಿಡದಿ ಸುತ್ತಮುತ್ತಲಿನ ಭೂಮಿಯನ್ನು ಕೊಳ್ಳೆ ಹೊಡೆಯುವ ಹಾಲಿ ಮುಖ್ಯಮಂತ್ರಿಗಳ ಸಂಚು ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ಅವರು ಈ ಭೂಮಿಯನ್ನು ಲೂಟಿ ಮಾಡುವ ಕನಸು ಹೊಂದಿದ್ದರು. ಅದಕ್ಕಾಗಿ ಜನತೆಗೆ ನೀವು ಬೆಂಗಳೂರಿನ ಜನ, ನಿಮ್ಮ ಭೂಮಿಗೆ ಚದರಡಿ ಬೆಲೆ ಬರುತ್ತದೆ, ಕೋಟ್ಯಂತರ ರೂಪಾಯಿ ಹಣವನ್ನು ಸಂಪಾದಿಸುತ್ತೀರಿ ಎಂದು ರೈತರ ಕಣ್ಣಿಗೆ ಮಂಕುಬೂದಿ ಎರಚಿದ್ದರು” ಎಂದು ಕೇಂದ್ರ ಸಚಿವರು ಆರೋಪಿಸಿದರು.

ಇದು ರಾಮನಗರ ಜಿಲ್ಲೆ, ಬೆಂಗಳೂರು ದಕ್ಷಿಣ ಅಲ್ಲ

“ಇದು ರಾಮನಗರ ಜಿಲ್ಲೆ. ನಾನು ಕೂತಿರುವ ಜಾಗ ರಾಮನಗರ ಜಿಲ್ಲೆಗೆ ಸೇರಿದ್ದು. ಬೆಂಗಳೂರು ದಕ್ಷಿಣ ಎಂದು ನಾನು ಯಾವ ಕಾರಣಕ್ಕೂ ಹೇಳಲ್ಲ. ಯಾವ ಜನ್ಮದಲ್ಲಿ ಈ ನೆಲದಲ್ಲಿ ಹುಟ್ಟಿದ್ದೆನೋ ಗೊತ್ತಿಲ್ಲ. ನಾನು ಹುಟ್ಟಿದ್ದು ಹಾಸನದಲ್ಲಿ, ಇಲ್ಲಿನ ತಾಯಂದಿರು, ಸಹೋದರಿಯರು ನನಗೆ ರಾಜಕೀಯ ಜನ್ಮ ಕೊಟ್ಟಿದ್ದೀರಿ. ಆದರೆ, ಕೆಲವರು ಈ ಬಿಡದಿ ಟೌನ್ ಶಿಪ್ ಕುಮಾರಸ್ವಾಮಿ ಕನಸಿನ ಕೂಸು ಎನ್ನುತ್ತಾರೆ. ಆದರೆ, ಅಂದು ನಾನು ಜಾರಿ ಮಾಡಲು ಉದ್ದೇಶಿಸಿದ್ದ ಯೋಜನೆಯನ್ನು ಕೈಬಿಟ್ಟು ವಿಧಾನಸಭೆಯ ಕಲಾಪದಲ್ಲಿಯೇ ಘೋಷಣೆ ಮಾಡಿದ್ದೆ. ಅಂದು ನಾನು ಬೇಡ ಎಂದು ಕೈಬಿಟ್ಟಿದ್ದ ಟೌನ್ ಶಿಪ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ, ಅದರಲ್ಲಿಯೂ ಹಾಲಿ ಮುಖ್ಯಮಂತ್ರಿ ಜಾರಿ ಮಾಡಲು ಹೊರಟಿದ್ದಾರೆ” ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

“ರೆಡ್ ಜೋನ್ ಅಂತ ಇದೇ ಗ್ರಾಮದ ಇನ್ನೊಂದು ಭಾಗದಲ್ಲಿ ನನ್ನ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಇಲ್ಲಿ ರೆಡ್, ಗ್ರೀನ್, ಬ್ಲೂ, ಯಲ್ಲೋ ಎಂಬುದು ನನಗಿಂತ ಅವರ ನಾಯಕರಿಗೆ ಚೆನ್ನಾಗಿ ಗೊತ್ತಿದೆ. ರೆಡ್ ಜೋನ್ ಎಂದು ಹೇಳುತ್ತಾ ಜನರ ತಲೆ ಕೆಡಿಸಿದ್ದಾರೆ. ಕುಮಾರಸ್ವಾಮಿ ರೆಡ್ ಜೋನ್ ಮಾಡಿದ್ದರಿಂದಲೇ ನನ್ನ ಹಳೆಯ ಸ್ನೇಹಿತ ಮಾತಾಡಿದ್ದಾರೆ. ಅವರು ಈ ಭಾಗದ ಹಾಲಿ ಶಾಸಕರು. ಅವರ ಬಗ್ಗೆ ಮಾತಾಡೋಕೆ ನನಗೆ ಅಸಹ್ಯ ಆಗುತ್ತದೆ” ಎಂದು ಟೀಕಾಪ್ರಹಾರ ನಡೆಸಿದರು.

“ವಿಧಾನಸೌಧಕ್ಕೆ ಬಂದು ಚರ್ಚೆ ಮಾಡಿ ಎಂದು ಮುಖ್ಯಮಂತ್ರಿಗಳು ನನಗೆ ಪತ್ರ ಬರೆದರು. ನಿಮ್ಮನ್ನು ಬಿಟ್ಟು ನಾನೇನು ವಿಧಾನಸೌಧಕ್ಕೆ ಹೋಗಿ ಏನು ಚರ್ಚೆ ನಡೆಸಲಿ? ನಾನು ವಿಧಾನಸೌಧಕ್ಕೆ ಬರಲ್ಲ, ರೈತರ ಸನ್ನಿದಾನದಲ್ಲಿ ಚರ್ಚೆ ಆಗಬೇಕೆಂದು ಅವರಿಗೆ ಪತ್ರ ಬರೆದೆ. ಆದರೆ ಅವರು ಬರೆದ ಪತ್ರದ ಬಗ್ಗೆ ನನಗೆ ನೋವಿದೆ. ನಿಮ್ಮ ತಂಡದೊಂದಿಗೆ ಬನ್ನಿ ಎಂದರೆ ಏನರ್ಥ? ನಾನು ನಾಲ್ಕು ಜನರ ತಂಡ ಇಟ್ಟುಕೊಂಡಿದ್ದೀನಾ? ಇಡೀ ರಾಜ್ಯದ ಜನರು ನನ್ನ ತಂಡ. ಅವರಂತೆ ನನಗೆ ಗ್ಯಾಂಗುಗಳು ಇಲ್ಲ. ತಾವರೆಕೆರೆಯಲ್ಲಿ ಭೂಮಿ ಹೊಡೆಯಲು ಒಂದು ತಂಡ ಇಟ್ಕುಕೊಳ್ತೀರಾ, ಇನ್ನೊಂದು ಕಡೆ ಜಮೀನು ಕಸಿಯಬೇಕಾದರೆ ಮತ್ತೊಂದು ತಂಡ ಇಟ್ಟುಕೊಳ್ಳುತ್ತೀರಾ!” ಎಂದು ಕುಟುಕಿದರು.

“ಸತ್ತವರ ಹೆಬ್ಬೆಟ್ಟು ಒತ್ತಿಸಿಕೊಂಡು ಭೂಮಿ ಹೊಡೆದವರು ನೀವು. ಕುಮಾರಸ್ವಾಮಿಯನ್ನು ಜೈಲಿಗೆ ಕಳುಹಿಸ್ತೀನಿ ಅನ್ನುತ್ತಿದ್ದಾರೆ. ನನ್ನನ್ನು ಜೈಲಿಗೆ ಕಳಿಸಬೇಕಾದರೆ ಇನ್ನೂ ನೂರು ಜನ್ಮ ಹುಟ್ಟಿ ಬರಬೇಕು. ಇವರೇನು ಸ್ವಾತಂತ್ರ್ಯ ಹೋರಾಟ ಮಾಡಿ ತಿಹಾರ್ ಜೈಲಿಗೆ ಹೋಗಿದ್ರಾ? ಎಲ್ಲೋ ನನ್ನ ಮಗನ ಪೋಸ್ಟರ್ ಹಾಕೊಂಡಿದ್ದಾರಲ್ಲ, ಅದೇ ಜಾಗದಲ್ಲಿ ಶಿವಕುಮಾರ್ ಜಮೀನು ಇದ್ದಿದ್ದರೆ, ಅಕ್ಕಪಕ್ಕದ ಜಮೀನು ಮಾಲೀಕರ ಕೈ ಕಾಲು ಮುರಿದು ಅವರೆಲ್ಲರ ಭೂಮಿ ಬರೆಸಿಕೊಳ್ತಿದ್ದರು.ನಾನು ನಿಮ್ಮ ಜೊತೆ ಇದ್ದೇನೆ, ಯಾರು ಕೂಡ ಹೆದರಬೇಡಿ. ಕಾನೂನಿನ ಹೋರಾಟಕ್ಕೆ ನೀವು ಒಂದು ರೂಪಾಯಿ ಕೊಡುವುದು ಬೇಡ” ಎಂದು ಕೇಂದ್ರ ಸಚಿವರು ಗುಡುಗಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments