ಕರ್ನಾಟಕದಿಂದ ರಾಜ್ಯಸಭೆಗೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಭಾನುವಾರ ರಾತ್ರಿ ಘೋಷಿಸಿದ್ದು, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರಿಗೆ ಟಿಕೆಟ್ ನಿರಾಕರಿಸಿದ್ದು, ಅವರ ಸಂಸದೀಯ ರಾಜಕೀಯ ಇನಿಂಗ್ಸ್ ಬಹುತೇಕ ಮಗಿದಂತೆ ಕಾಣುತ್ತಿದೆ.
ಮುಂಬರುವ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಕರ್ನಾಟಕ ಬಿಜೆಪಿಯು ಅಚ್ಚರಿಯ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕೆಪಿಎಸ್‌ಸಿ ಮಾಜಿ ಸದಸ್ಯ ಹಾಗೂ ಹಾಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಪ್ರೊ. ಎಂ. ನಾಗರಾಜ್ ಅವರನ್ನು ಕಣಕ್ಕಿಳಿಸಲಾಗಿದೆ. ಇನ್ನು ವಿಧಾನ ಪರಿಷತ್ ಚುನಾವಣೆಗೆ ಲಿಂಗರಾಜ್ ಪಾಟೀಲ್ ಹಾಗೂ ಮೈಸೂರಿನ ರಘು ಕೌಟಿಲ್ಯ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸುವ ಮೂಲಕ ಹೈಕಮಾಂಡ್ ತನ್ನ ಸಾಂಪ್ರದಾಯಿಕ ಅನಿರೀಕ್ಷಿತ ನಡೆಯನ್ನು ಮುಂದುವರಿಸಿದೆ.
ಪಕ್ಷದ ರಾಜ್ಯ ಘಟಕದಿಂದ ರಾಜ್ಯಸಭಾ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಹಾಗೂ ನಂತರ ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿತ್ತು. ಪರಿಷತ್ ಚುನಾವಣೆಗೆ ರಘು ಕೌಟಿಲ್ಯ, ಪ್ರಮೋದ್ ಮಧ್ವರಾಜ್, ನಳಿನ್ ಕುಮಾರ್ ಕಟೀಲ್, ಲಿಂಗರಾಜ ಪಾಟೀಲ್, ಮಂಜುಳಾ ಹಾಗೂ ಶರಣು ತಳ್ಳಿಕೇರಿ ಅವರ ಹೆಸರುಗಳನ್ನು ರವಾನಿಸಲಾಗಿತ್ತು.


