ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾಗಿದ್ದ ಸೂರಜ್ ಹೆಗ್ಡೆ ಅವರು ಸೋಮವಾರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಮೊಮ್ಮಗರಾಗಿದ್ದು, ಕಾಂಗ್ರೆಸ್ ಪಕ್ಷದ ಯುವ ಹಾಗೂ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು.
ಹೃದಯಾಘಾತಕ್ಕೆ ಒಳಗಾದ ಸೂರಜ್ ಹೆಗ್ಡೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.
ಸೂರಜ್ ಹೆಗ್ಡೆ ಅವರು ಎಐಸಿಸಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದುದರ ಜೊತೆಗೆ ತಮಿಳುನಾಡು ಹಾಗೂ ಪುದುಚೇರಿ ಕಾಂಗ್ರೆಸ್ ಘಟಕಗಳ ಉಸ್ತುವಾರಿಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು.
ಎಐಸಿಸಿ ಕಾರ್ಯದರ್ಶಿಗಳು ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ ಅವರ ನಿಧನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
“ಸೂರಜ್ ಹೆಗ್ಡೆ ಅವರ ಅಗಲಿಕೆ ಸುದ್ದಿ ಕೇಳಿ ನನ್ನ ಮನಸ್ಸಿಗೆ ಆಘಾತವಾಗಿದೆ. ಚಿಕ್ಕ ವಯಸ್ಸಿಗೆ ಅವರು ನಮ್ಮನ್ನು ಅಗಲಿದ್ದಾರೆ ಎಂಬುದನ್ನು ನಂಬಲೇ ಆಗುತ್ತಿಲ್ಲ. ಸೂರಜ್ ಅವರು ಎಐಸಿಸಿ ಕಾರ್ಯದರ್ಶಿಯಾಗಿ ತಮಿಳುನಾಡು ಹಾಗೂ ಪುದುಚೆರಿ ರಾಜ್ಯದ ಉಸ್ತುವಾರಿಯಾಗಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ” ಎಂದಿದ್ದಾರೆ.
ಬಿ ಕೆ ಹರಿಪ್ರಸಾದ್ ಸಂತಾಪ
ಸೂರಜ್ ಹೆಗ್ಡೆ ಅವರ ಅಕಾಲಿಕ ನಿಧನದ ಹಿನ್ನಲೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ ಕೆ ಹರಿಪ್ರಸಾದ್ ಅವರು ಅಂತಿಮ ನಮನ ಸಲ್ಲಿಸಿದರು.
“ಸೂರಜ್ ಹೆಗ್ಡೆ ಅವರನ್ನು ಸಣ್ಣ ವಯಸ್ಸಿನಿಂದಲೂ ನೋಡಿದ್ದೇನೆ. ಅವರ ತಂದೆಯ ಒಡನಾಟ ಹಾಗೂ ಅವರ ತಾತ ಅರಸು ಅವರ ಒಡನಾಟ ಸಹ ನನಗೆ ಇತ್ತು. ಅವರ ತಾತ(ಅರಸು) ಅವರು ರಾಜ್ಯ ಹಾಗು ದೇಶದಲ್ಲೇ ಲೆಜೆಂಡರಿ ವ್ಯಕ್ತಿಯಾಗಿದ್ದರು. ಅರಸು ಅವರ ಮೊಮ್ಮಗನಾಗಿದ್ದರು ಕೂಡ ಯಾವುದೇ ಅಹಂ ಸೂರಜ್ ಹೆಗ್ಡೆ ಅವರಿಗೆ ಇರಲಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ, ಎಐಸಿಸಿ ಮಟ್ಟದಲ್ಲಿ ಕಾರ್ಯದರ್ಶಿಯಾಗಿ ಕಲಸ ಮಾಡಿದ್ದಾರೆ” ಎಂದು ಸಂತಾಪ ನುಡಿಯಲ್ಲಿ ಹೆಳಿದ್ದಾರೆ.


