ತಮಿಳುನಾಡು ರಾಜ್ಯದ ಬಿಜೆಪಿ ಮುಖ್ಯಸ್ಥರಾಗಿದ್ದ ಕೆ ಅಣ್ಣಾಮಲೈ ಕೊನೆಗೂ ಬಿಜೆಪಿಯನ್ನು ತೊರೆದಿದ್ದು, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಮಂಗಳವಾರ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಐದು ಪುಟಗಳ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಆದರೆ ಅವರ ರಾಜೀನಾಮೆಯನ್ನು ಪಕ್ಷದ ನಾಯಕತ್ವ ಅಂಗೀಕರಿಸಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮೂಲಗಳ ಪ್ರಕಾರ, ಅಣ್ಣಾಮಲೈ ಅವರು ಮುಂದಿನ ಕೆಲವು ತಿಂಗಳಲ್ಲಿ ತಮ್ಮದೇ ಆದ ಜನಾಂದೋಲನ ಅಥವಾ ಹೊಸ ರಾಜಕೀಯ ಪಕ್ಷವನ್ನು ಆರಂಭಿಸುವ ಸಾಧ್ಯತೆ ಇದೆ. ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸ್ಥಾಪನೆಯ ಬಳಿಕ ತಮಿಳುನಾಡಿನಲ್ಲಿ ಇದು ಮತ್ತೊಂದು ಪ್ರಮುಖ ರಾಜಕೀಯ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
ಬಿಜೆಪಿ ನಾಯಕತ್ವದೊಂದಿಗೆ ಕಳೆದ ಕೆಲವು ತಿಂಗಳುಗಳಿಂದ ಅಣ್ಣಾಮಲೈ ಅವರ ಸಂಬಂಧ ಅಷ್ಟಾಗಿ ಸೌಹಾರ್ದಯುತವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಯಶಸ್ಸಿನ ಬಳಿಕ ರಾಜ್ಯದಲ್ಲಿ ಮತ್ತೊಂದು ಹೊಸ ರಾಜಕೀಯ ಪಕ್ಷಕ್ಕೆ ಅವಕಾಶವಿದೆ ಎಂಬ ವಿಶ್ವಾಸ ಅಣ್ಣಾಮಲೈ ಅವರಿಗೆ ಮೂಡಿತ್ತು ಎನ್ನಲಾಗಿದೆ.
ಜೂನ್ 4 ಕ್ಕೆ ಅವರ ಹಟ್ಟುಹಬ್ಬ ಇದ್ದು, ಅಂದೆ ಮುಂದಿನ ನಿರ್ಧಾರ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಪ್ರಾದೇಶಿಕವಾಗಿ ಅಹಿಂದ ಮಾದರಿಯಲ್ಲಿ ಹೊಸ ಪಕ್ಷ ಕಟ್ಟುವ ಸಾಧ್ಯತೆ ಇದೆ.
ಎಐಎಡಿಎಂಕೆ ಪಕ್ಷದ ನಾಯಕ ಪಳನಿಸ್ವಾಮಿ ಜೊತೆ ನಿರಂತರ ಸಂಘರ್ಷಕ್ಕಿಳಿದ ಪರಿಣಾಮ ಎನ್‌ಡಿಎ ಜೊತೆ ಬಿರುಕು ಮೂಡಿತು ಎಂಬ ಕಾರಣಕ್ಕೆ ಅಣ್ಣಾಮಲೈ ಅವರನ್ನು ಸೈಡ್‌ಲೈನ್ ಮಾಡಲಾಗಿತ್ತು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ತಮ್ಮ ತಂದೆಯ ಅನಾರೋಗ್ಯದ ಕಾರಣ ನೀಡಿ ಚುನಾವಣಾ ಉಸ್ತುವಾರಿಯಿಂದ ಹಿಂದೆ ಸರಿದಿದ್ದರು ಮತ್ತು ಸ್ಪರ್ಧಿಸಲು ನಿರಾಕರಿಸಿದ್ದರು.


