Homeಕರ್ನಾಟಕ48 ವರ್ಷಗಳ ರಾಜಕೀಯ ಜೀವನ ನೆನೆದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ

48 ವರ್ಷಗಳ ರಾಜಕೀಯ ಜೀವನ ನೆನೆದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ

ಸುದೀರ್ಘ 48 ವರ್ಷಗಳ ರಾಜಕೀಯ ಜೀವನದಲ್ಲಿ ಸಾಗಿ ಬಂದ ಸಿದ್ದರಾಮಯ್ಯ ಅವರು ಗುರುವಾರ ನಿರೀಕ್ಷೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಂದಿನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಈ ವಾರದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಗುರುವಾರ ಬೆಳಿಗ್ಗೆ ಸಚಿವ ಸಂಪುಟ ಸದಸ್ಯರೊಂದಿಗೆ ಉಪಹಾರ ಸಭೆ ನಡೆಸಿದ ಸಿದ್ದರಾಮಯ್ಯ ಅವರು ತಾವು ರಾಜೀನಾಮೆ ನೀಡುತ್ತಿರುವುದನ್ನು ಖಚಿತ ಪಡಿಸಿದರು. ಮಧ‌್ಯಾಹ್ನ 2.30ಕ್ಕೆ ಲೋಕಭವನಕ್ಕೆ ತೆರಳಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋ‌ಷ್ಠಿ ಕರೆದು ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.

ಸಿಎಂ ಹೇಳಿದ್ದೇನು?

ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಘನತೆವೆತ್ತರಾಜ್ಯಪಾಲರಿಗೆ ನೀಡಿ ಬಂದಿದ್ದೇನೆ. ಸಾಂವಿಧಾನಿಕ ವಿಧಿ-ವಿಧಾನಗಳ ಮೂಲಕರಾಜ್ಯಪಾಲರು ಕ್ರಮಕೈಗೊಳ್ಳುತ್ತಾರೆ. ಶೀಘ್ರದಲ್ಲಿಯೇ ನೂತನ ಮುಖ್ಯಮಂತ್ರಿಯನ್ನುರಾಜ್ಯದ ಜನತೆ ಕಾಣಲಿದೆ.
ಮೇರು ನಟ ಡಾ.ರಾಜ್ ಕುಮಾರ್ ಅಭಿಮಾನಿಗಳನ್ನು ‘’ಅಭಿಮಾನಿ ದೇವರು’’ಎಂದು ಕರೆಯುತ್ತಿದ್ದರು, ನಾನೊಬ್ಬ ಸಂವಿಧಾನವನ್ನೇ ಧರ್ಮ ಎಂದುತಿಳಿದುಕೊಂಡಿರುವ ರಾಜಕಾರಣಿ. ನನ್ನ ಪಾಲಿಗೆ ಮತದಾರರು ‘’ ಮತದಾರದೇವರು. ಆ ದೇವರುಗಳ ಮುಂದೆ ನನ್ನ ಮನದಾಳದ ಕೆಲವು ಮಾತುಗಳನ್ನುಹಂಚಿಕೊಳ್ಳಬೇಕೆಂದು ಬಯಸಿದ್ದೇನೆ.
ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿರುವ ನನ್ನ ಬಗ್ಗೆ ರಾಜ್ಯದ ಜನತೆಗೆ ತಿಳಿದಿದೆ. ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಜಾಯಮಾನದವನಲ್ಲ. ಈ ರಾಜೀನಾಮೆ ಪತ್ರವನ್ನು ಕೂಡಾ ಅತ್ಯಂತ ಸಂತೋಷದಿಂದ ಮನಪೂರ್ವಕವಾಗಿನೀಡಿದ್ದೇನೆ.
ಹಳ್ಳಿಗಾಡಿನ ರೈತಾಪಿ ಕುಟುಂಬದಿಂದ ಬಂದ ನಾನು ರಾಜಕಾರಣಕ್ಕೆ ಪ್ರವೇಶಮಾಡುವಾಗ ಮುಂದೊಂದು ದಿನ ಶಾಸಕನಾಗುತ್ತೇನೆ, ಸಚಿವನಾಗುತ್ತೇನೆ, ನಾಡಿನಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸನ್ನೂ ಕಂಡವನಲ್ಲ. ಇಂತಹದ್ದೊಂದುದುಬಾರಿ ಕನಸನ್ನು ನನಸು ಮಾಡಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರುಬರೆದಿರುವ ಸಂವಿಧಾನ. ಸಂವಿಧಾನದ ಬಲ ಇಲ್ಲದೆ ಹೋಗಿದ್ದರೆ ನಾನು ಎಲ್ಲೋಕುರಿ ಮೇಯಿಸಿಕೊಂಡೋ, ಇನ್ನೇನೋ ಆಗಿ ಇರುತ್ತಿದ್ದೆ. ಈ ಕಾರಣಕ್ಕಾಗಿ ಮೊದಲಿಗೆನಮ್ಮ ಸಂವಿಧಾನ ಮತ್ತು ಸಂವಿಧಾನದ ಶಿಲ್ಪಿಯಾದ ಬಾಬಾ ಸಾಹೇಬ್ಅಂಬೇಡ್ಕರ್ ಅವರಿಗೆ ಸಂದರ್ಭದಲ್ಲಿ ತಲೆಬಾಗಿ ನಮಿಸುತ್ತೇನೆ.
ಎರಡನೆಯದಾಗಿ ರಾಜ್ಯದ ಜನತೆ. ಹೆಚ್ಚುಕಡಿಮೆ ನಾಲ್ಕುವರೆ ದಶಕಗಳ ಸುದೀರ್ಘರಾಜಕಾರಣದ ಪಯಣದಲ್ಲಿ ಜನ ನನ್ನನ್ನು ಶಾಸಕ, ಸಚಿವ, ಕೊನೆಗೆ ಎರಡುಬಾರಿಮುಖ್ಯಮಂತ್ರಿ ಸ್ಥಾನದ ಕಿರೀಟವನ್ನು ನನ್ನ ತಲೆ ಮೇಲೆ ಇಟ್ಟು ಹರಸಿ ಅವರ ಸೇವೆಮಾಡುವ ಭಾಗ್ಯವನ್ನು ನನಗೆ ಕರುಣಿಸಿದ್ದಾರೆ. ಮತದಾರ ದೇವರುಗಳಿಗೆ ನಾನುಆಭಾರಿಯಾಗಿದ್ದೇನೆ.
ಮೂರನೆಯದಾಗಿ, ನನ್ನ ಸೈದ್ಧಾಂತಿಕ ಬದ್ಧತೆ ಮತ್ತು ರಾಜಕೀಯ ಹೋರಾಟಕ್ಕೆ ಮನ್ನಣೆನೀಡಿದ ಕಾಂಗ್ರೆಸ್ಪಕ್ಷವು ನನ್ನ ಮೇಲೆ ವಿಶ್ವಾಸ ಇರಿಸಿ ನನ್ನನ್ನು ಬರಮಾಡಿಕೊಂಡುರಾಜಕೀಯ ಕ್ಷೇತ್ರದಲ್ಲಿ ಅವಕಾಶನೀಡಿದೆ. ಎರಡು ಬಾರಿ ಮುಖ್ಯಮಂತ್ರಿ ಮಾಡಿದೆ, ವಿರೋಧಪಕ್ಷದ ನಾಯಕನಾಗಿ ಕೆಲಸ ಮಾಡಲು ಅವಕಾಶ ನೀಡಿದೆ. ಆ ಮೂಲಕನಾಡಿನ ಜನತೆಗೆ ನಾನು ನಂಬಿರುವ ತತ್ವಾದರ್ಶಗಳ ಅನುಸಾರ ಸೇವೆ ಸಲ್ಲಿಸಲುಅವಕಾಶ ನೀಡಿದೆ. ಈ ಕಾರಣಕ್ಕಾಗಿ ಶ್ರೀಮತಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸದಾ ಆಭಾರಿಯಾಗಿರುತ್ತೇನೆ.

ನಾನೆಂದೂ ರಾಜಕಾರಣವನ್ನು ಅಧಿಕಾರದ ದಂಡ ಎಂದಾಗಲಿ, ವ್ಯಾಪಾರದ ಗಲ್ಲಾಪೆಟ್ಟಿಗೆ ಎಂದಾಗಲಿ ತಿಳಿದುಕೊಂಡವನಲ್ಲ, ಅದು ಬಡವರಿಗೆ, ಶೋಷಿತರಿಗೆ, ನೊಂದವರಿಗೆ ನೆರವಾಗುವ ಒಂದು ಅವಕಾಶ ಎಂದು ತಿಳಿದುಕೊಂಡವನು. ಸಮುದಾಯಗಳಿಗೆ ನೆರವಾಗುವ ಉದ್ದೇಶದಿಂದಲೇ ವಕೀಲನಾಗಿ ಸೇವೆ ಮಾಡುತ್ತಿದ್ದನಾನು ರಾಜಕಾರಣವನ್ನು ಪ್ರವೇಶ ಮಾಡಿದವನು.

ನನ್ನ 77 ವರ್ಷಗಳ ಜೀವನ ಪಯಣದಲ್ಲಿ ಹಲವಾರು ವ್ಯಕ್ತಿಗಳು ಪ್ರೀತಿ-ವಿಶ್ವಾಸದಿಂದಕೈಹಿಡಿದು ಮುನ್ನಡೆಸಿದ್ದಾರೆ. ನನ್ನ ಬದುಕು ಒಂದು ತೆರೆದ ಪುಸ್ತಕ. ಈ ಪುಸ್ತಕದಲ್ಲಿಮೊದಲ ಬರವಣಿಗೆ ಮಾಡಿದ್ದು ಮರಳಿನ ಮೇಲಿನ ಅಕ್ಷರಾಭ್ಯಾಸದ ಮೂಲಕ ವೀರಕುಣಿತವನ್ನು ಕಲಿಯುತ್ತಾ ಸಮಯ ಸಿಕ್ಕಾಗ ಮರಳಿನ ಮೇಲೆ ಅಕ್ಷರಾಭ್ಯಾಸಮಾಡುತ್ತಿದ್ದ ನನ್ನನ್ನು ಶಾಲೆಗೆ ಕರೆದೊಯ್ದು ವಿದ್ಯೆ ಕಲಿಯುವ ಅವಕಾಶ ನೀಡಿದವರು ರಾಜಪ್ಪ ಮಾಸ್ತರ್

ವಕೀಲನಾಗಿದ್ದ ನನ್ನಲ್ಲಿನ ಸೇವಾಕಾಂಕ್ಷೆಯನ್ನು ಗುರುತಿಸಿಸಿ ಸಮಾಜವಾದದ ಪಾಠಮಾಡಿ, ರಾಜಕಾರಣಿಗಳಿಗೆ ಇರಬೇಕಾದ ಸೈದ್ದಾಂತಿಕ ಬದ್ದತೆ, ಜನಪರ ಕಾಳಜಿ ಮತ್ತುಹೋರಾಟದ ಗುಣವನ್ನು ಕಲಿಸಿದವರು ರೈತನಾಯಕ ಎಂ.ಡಿ.ನಂಜುಂಡಸ್ವಾಮಿ

ಮೊದಲ ಬಾರಿ 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿಸ್ಪರ್ಧಿಸಿ ಗೆದ್ದ ನನ್ನನ್ನು ಗುರುತಿಸಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನನ್ನಾಗಿಮಾಡಿದ್ದಲ್ಲದೆ ಎರಡನೇ ಬಾರಿ ಶಾಸಕನಾದ ನನ್ನನ್ನು ಸಚಿವನನ್ನಾಗಿ ಮಾಡಿದವರು ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ
ಇವರೆಲ್ಲರ ನೆರವು, ಕಾಳಜಿ ಮತ್ತು ಮಾರ್ಗದರ್ಶನಗಳು ಇಲ್ಲದೆ ಹೋಗಿದ್ದರೆ ನಾನುಇಷ್ಟು ದೂರ ಸಾಗಿ ಬರುತ್ತಿರಲಿಲ್ಲ ಮತ್ತು ಇಷ್ಟು ಎತ್ತರಕ್ಕೆ ಏರಲು ಕೂಡಾಆಗುತ್ತಿರಲಿಲ್ಲ ಎನ್ನುವುದನ್ನು ವಿನಮ್ರವಾಗಿ ನಿವೇದಿಸಬಯಸುತ್ತೇನೆ.
ನಾನು ದುಡ್ಡು, ಆಸ್ತಿಪಾಸ್ತಿ ಮಾಡಲು ರಾಜಕಾರಣಿ ಆದವನಲ್ಲ. ಮತದಾರದೇವರುಗಳು ಅಧಿಕಾರ ಮೂಲಕ ಅವಕಾಶ ನೀಡಿದಾಗೆಲ್ಲ ಅವರ ಕಲ್ಯಾಣಕ್ಕಾಗಿಶ್ರಮಿಸಿದ್ದೇನೆ.ಸಂದರ್ಭದಲ್ಲಿ ನನ್ನ ಸಾಧನೆಗಳ ದಾಖಲೆಗಳನ್ನು ನಾನು ನಿಮ್ಮಮುಂದೆ ಇಟ್ಟ ನನ್ನನ್ನು ಸಾಬೀತುಪಡಿಸು ವ್ಯರ್ಥಪ್ರಯತ್ನವನನ್ನು ನಾನುಮಾಡುವುದಿಲ್ಲ., ಅವೆಲ್ಲವೂ ತೆರೆದ ಪುಸ್ತಕದ ರೀತಿಯಲ್ಲಿ ರಾಜ್ಯದ ಜನತೆಯಕಣ್ಣಮುಂದಿದೆ.
 
ಜಾತಿ,ದುಡ್ಡು ಮತ್ತು ತೋಳ್ಭಲಗಳ ನೆರವಿಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಹೆಜ್ಜೆ ಇಡಲುಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು ಜನಜನಿತವಾಗಿದೆ. ಇದು ಕಾಲದಸತ್ಯವೂ ಹೌದು. ಇಂತಹ ಪರಿಸ್ಥಿತಿಯಲ್ಲಿ  ಸಾಮಾಜಿಕ ನ್ಯಾಯ, ಜಾತ್ಯತೀತತೆ, ಭಾತೃತ್ವದಂತಹ ಸಂವಿಧಾನದ ಆಶಯಗಳಿಗೆ ಬದ್ದರಾಗಿ ರಾಜಕಾರಣ ಮಾಡುವುದುಎಷ್ಟೊಂದು ಕಷ್ಟದ ಕೆಲಸ ಎನ್ನುವ ಅನುಭವ  ನಾಲ್ಕುವರೆ ದಶಕಗಳ  ರಾಜಕೀಯಪಯಣದಲ್ಲಿ ನನಗಾಗಿದೆ.
ರಾಜಕೀಯ ಪಯಣದ ನನ್ನಹಾದಿಯಲ್ಲಿ ಹೆಜ್ಜೆಹೆಜ್ಜೆಗೂ ನಾನು ಪಟ್ಟಭದ್ರ ದ್ವೇಷಅಸೂಯೆಗೆ ಈಡಾಗಿ‍ದ್ದೇನೆ. ಹೊರಗಿನವರ ಮತ್ತು ಒಳಗಿನವರ ಮೋಸ-ವಂಚನೆ-ಪಿತೂರಿಗೆ ಒಳಗಾಗಿದ್ದೇನೆ. ಇದರಿಂದಾಗಿ ಹಲವಾರು ಬಾರಿ ಬಿದ್ದಿದ್ದೇನೆ, ಬಿದ್ದಲ್ಲಿಂದಲೇಎದ್ದಿದ್ದೇನೆ.
ನಾನು ಮಾತ್ರವಲ್ಲ ನನ್ನ ಕುಟುಂಬ ಕೂಡಾ ರಾಜಕೀಯ ದ್ವೇಷಕ್ಕೆ ಬಲಿಯಾಗಿದೆ, ನನ್ನರಾಜಕೀಯ ವಿರೋಧಿಗಳು ರಾಜಕಾರಣಕ್ಕಿಂತ ಬಹುದೂರ ಇದ್ದುಕೊಂಡುಕುಟುಂಬದ ಪಾಲನೆ-ಪೋಷಣೆಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡ ನನ್ನಪತ್ನಿಯ ವಿರುದ್ದವೂ ಸುಳ್ಳು ಆರೋಪಗಳನ್ನು ಮಾಡಿ ಮಾನಸಿಕ ಹಿಂಸೆ ನೀಡಿದ್ದರು. ಇವೆಲ್ಲವನ್ನೂ ಅನುಭವಿಸಿದಾಗ ರಾಜಕೀಯ ಸನ್ಯಾಸ ತೆಗೆದುಕೊಂಡು ಬಿಡುವಎನ್ನುವಷ್ಟು ಮನಸ್ಸು ನೊಂದಿತ್ತು. ಆದರೆ ಶತ್ರುಗಳ ದಾಳಿಗೆ ಹೆದರಿಪಲಾಯನವಾದಿಯಾಗ ಬೇಡ, ಜನಸೇವೆಯ ಪಥದಿಂದ ಹಿಂದಡಿ ಇಡಬೇಡ, ಎಂದು ನನ್ನ ಅಂತಾರಾತ್ಮ ಎಚ್ಚರಿಸಿತು. ಅನ್ಯಾಯದ ವಿರುದ್ದ ನ್ಯಾಯದಹೋರಾಟವನ್ನು ಮುಂದುವರಿಸಿ ಆರೋಪಿತ ಕಳಂಕವನ್ನು ನಿವಾರಿಸಿಕೊಂಡುನಿರಾಳನಾದೆ.
ನನ್ನ ನೋವು,ದು:ಖ-ದುಮ್ಮಾನಗಳನ್ನುಸಂದರ್ಭದಲ್ಲಿ ಪಟ್ಟಿಮಾಡಿ ನನ್ನಮನಸ್ಸನ್ನು ಕಹಿಮಾಡಿಕೊಳ್ಳುವುದಿಲ್ಲ.
ಆದರೆಸಂಘರ್ಷದ ಹಾದಿಯಲ್ಲಿ ನಾನೆಂದೂ ನಂಬಿದ ಮೌಲ್ಯಗಳ ಜೊತೆರಾಜಿಮಾಡಿಕೊಂಡಿಲ್ಲ. ನಂಬಿದ ಜನತೆಗೆ ದ್ರೋಹ ಬಗೆದಿಲ್ಲ, ನನ್ನ ಆತ್ಮಸಾಕ್ಷಿಗೆವಂಚನೆ ಮಾಡಿಕೊಂಡಿಲ್ಲ. ಹೋರಾಟವನ್ನೇ ಬದುಕಾಗಿಸಿ ಸ್ವೀಕರಿಸಿ ಇಷ್ಟು ದೂರಬಂದಿದ್ದೇನೆ.
ಇಂದಿನ ವರ್ತಮಾನ ನನ್ನನ್ನು ಎಷ್ಟು ಅರ್ಥಮಾಡಿಕೊಂಡಿದೆಯೋ ಗೊತ್ತಿಲ್ಲ, ಸಾಮಾನ್ಯವಾಗಿ ಸಾಮಾಜಿಕ ಪರಿವರ್ತನೆಯ ಹರಿಕಾರರನ್ನು ವರ್ತಮಾನಕ್ರೂರವಾಗಿ ನಡೆಸಿಕೊಳ್ಳುತ್ತದೆ. ಆದರೆ ಇತಿಹಾಸ ಮಾತ್ರ ಅವರನ್ನುನೆನಪಲ್ಲಿಟ್ಟುಕೊಂಡು ಸ್ಮರಿಸುತ್ತದೆ. ಹನ್ನೆರಡನೇ ಶತಮಾನದಬಸವಣ್ಣನವರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ವರೆಗೆ ಎಲ್ಲರಪಾಲಿನ ಸತ್ಯ ಇದು. ಭರವಸೆಯ ಆಸರೆಯೊಂದಿಗೆ ನನ್ನ ರಾಜಕೀಯಹೋರಾಟವನ್ನು ಮುಂದುವರಿಸಿಕೊಂಡು ಬಂದಿದ್ದೇನೆ, ಅಧಿಕಾರ ಇರಲಿ, ಇಲ್ಲದೆಇರಲಿಹೋರಾಟ ಮುಂದುವರಿಯಲಿದೆ.
ನಾನು ರಾಜಕಾರಣಕ್ಕೆ ಪ್ರವೇಶ ಮಾಡಿದಾಗ ನುಡಿದಂತೆ ನಡೆಯಬೇಕು, ಜನತೆಇಟ್ಟಿರುವ ವಿಶ್ವಾಸಕ್ಕೆ ಭಂಗ ಉಂಟು ಮಾಡಬಾರದೆಂಬ  ಪ್ರಮಾಣವನ್ನುಮನಸ್ಸಿನೊಳಗೆ ಮಾಡಿದ್ದೆ. ಜನರಿಗೆ ನೀಡಿದ  ವಚನಪಾಲನೆಯೇ ನಿಜವಾದರಾಜಧರ್ಮ ಎಂದು ನಂಬಿದವನು ನಾನು. ಅದನ್ನು ತ್ರಿಕರಣಪೂರ್ವಕವಾಗಿ ಪಾಲಿಸಿದ್ದೇನೆ ಎಂಬ ವಿಶ್ವಾಸ ನನಗಿದೆ. ನುಡಿದಂತೆಯೇ ನಡೆದಿರುವುದಕ್ಕೆ ಇತಿಹಾಸಸಾಕ್ಷಿಯಾಗಿದೆ.
ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಬದುಕಿನ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು. ಬಡವಬಲ್ಲಿದನೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತುಗೌರವರಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕೃಷಿ ಸಂಪತ್ತುಬೆಳೆಯಬೇಕು. ಉದ್ಯಮ ಕ್ಷೇತ್ರದಲ್ಲಿ ಪ್ರಗತಿಯಾಗಬೇಕು. ದುಡಿಯುವ ಕೈಗಳಿಗೆಉದ್ಯೋಗ ಸಿಗಬೇಕು. ಮೂಲಸೌಲಭ್ಯಗಳು ವೃದ್ಧಿಯಾಗಬೇಕು. ನೆಮ್ಮದಿಯಿಂದಬದುಕುವಷ್ಟು ಆದಾಯ ಪ್ರತಿ ಕುಟುಂಬದ ಪಾಲಿಗಿರಬೇಕು. ಸಂಪತ್ತು, ಅಧಿಕಾರಮತ್ತು ಅವಕಾಶ ಸಮಾನವಾಗಿ ಎಲ್ಲರಿಗೂ ಹಂಚಿಕೆಯಾಗಬೇಕುಇದು ರಾಜಕೀಯಕ್ಷೇತ್ರಕ್ಕೆ ಕಾಲಿಡುವಾಗ ನಾನು ಕಂಡ ಕನಸು.
ಕನಸು ನನಸಾಗುವ ದಾರಿಯಲ್ಲಿ ಕರ್ನಾಟಕ ಭರದಿಂದ ಮುನ್ನಡೆದಿದೆ. ಇಂದುಕರ್ನಾಟಕವು ದೇಶದಲ್ಲಿಯೇ ತಲಾದಾಯದಲ್ಲಿ ಮೊದಲನೆಯ ಸ್ಥಾನದಲ್ಲಿದೆ.ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಾವು ಮೇಲಕ್ಕೇರುತ್ತಿದ್ದೇವೆ, ಗ್ಯಾರಂಟಿಯೋಜನೆಗಳ ಅನುಷ್ಠಾನದ ಮೂಲಕ ಜನತೆಗೆ ಸಾಮಾಜಿಕ ಭದ್ರತೆಯನ್ನುಒದಗಿಸಿದ್ದೇವೆ. ಹಸಿವುಮುಕ್ತ ಕರ್ನಾಟಕ ನಿರ್ಮಾಣಗೊಳ್ಳುತ್ತಿದೆ, ಅಪೌಷ್ಠಿಕತೆಯಿಂದನರಳುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ, ಆರೋಗ್ಯ ಸೇವೆಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಅತಿವೃಷ್ಟಿ-ಅನಾವೃಷ್ಟಿಗಳುಎದುರಾದರೂ ಸಮರ್ಥವಾಗಿ ಎದುರಿಸಿದ್ದೇವೆ, ನೀರಾವರಿ ಯೋಜನೆಗಳ ತ್ವರಿತಅನುಷ್ಠಾನ ಮತ್ತು ಬೆಳೆದ ಬೆಳೆಗೆ ವೈಜ್ಞಾನಿಕವಾದ ಬೆಲೆ ನಿಗದಿಯಿಂದಾಗಿ ಸರ್ಕಾರದಬಗ್ಗೆ ರೈತರಲ್ಲಿ ಭರವಸೆ ಮೂಡಿದೆ. ನೀರಿನ ಹಕ್ಕಿನ ರಕ್ಷಣೆಗಾಗಿ ಸರ್ಕಾರ ನಡೆಸುತ್ತಿರುವಪ್ರಯತ್ನ ಅವರಿಗೆ ಸಮಾಧಾನ ತಂದಿದೆ. ನೆಲ-ಜಲ-ಭಾಷೆಯ ರಕ್ಷಣೆಯವಿಚಾರದಲ್ಲಿ ರಾಜಿ ಇಲ್ಲದ ನಮ್ಮ ನಿಲುವು ಕನ್ನಡಿಗರ ಮನ ಗೆದ್ದಿದೆ.
ನಾಡಿನ ಇತಿಹಾಸದಲ್ಲಿಯೇ ಅತಿಹೆಚ್ಚು ಬಜೆಟ್‌ಗಳನ್ನು ಮಂಡಿಸುವ ಅವಕಾಶಲಭ್ಯವಾಗಿದ್ದರ ಬಗ್ಗೆ ನನಗೆ ತೃಪ್ತಿ ಇದೆ. ನಾನು ಮಂಡಿಸಿದ ಹದಿನೇಳುಬಜೆಟ್‌ಗಳಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿಪರವಾದಯೋಜನೆಗಳಿಗೆ ಸಮಾನ ಪ್ರಾಶಸ್ತ್ಯವನ್ನು ನೀಡಿದ್ದೇನೆ.
ನಾಡು ಕಂಡ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂದು ಇತಿಹಾಸದಲ್ಲಿದಾಖಲಾಗುವುದಕ್ಕಿಂತ ಹೆಚ್ಚಾಗಿ ನಾಡಿನ ಅಭಿವೃದ್ಧಿಗೆ, ನಾಡಿನ ಜನತೆಯ ಏಳಿಗೆಗೆಕಾರಣವಾಗುವಂತಹ ಮಹತ್ವದ ಯೋಜನೆಗಳನ್ನು ನೀಡಿದ ಮುಖ್ಯಮಂತ್ರಿನಾನಾಗಬೇಕು ಎನ್ನುವ ಹಂಬಲದಿಂದ ಇಲ್ಲಿಯವರೆಗೆ ಶ್ರದ್ಧೆಯಿಂದ ಕೆಲಸಮಾಡಿದ್ದೇನೆ.
ಕರ್ನಾಟಕದ ಜನತೆ, ವಿಶೇಷವಾಗಿ ನಾಡಿನ ಮೂಲೆಮೂಲೆಗಳಲ್ಲಿರುವ ದೀನದಲಿತರು, ದಮನಿತರು, ದನಿಯಿಲ್ಲದವರು, ಅಶಕ್ತರು, ಸಾಮಾಜಿಕವಾಗಿ, ಆರ್ಥಿಕವಾಗಿಹಿಂದುಳಿದವರು ನನ್ನನ್ನು ತಮ್ಮ ದನಿಯಾಗಿಸಿಕೊಂಡಿದ್ದಕ್ಕೆ ನಾನುಚಿರಋಣಿಯಾಗಿರುತ್ತೇನೆ. ಅವರು ನನ್ನಲ್ಲಿ ತುಂಬಿದ ಶಕ್ತಿಯಿಂದಾಗಿಯೇ ನಾನುನಾಡಿನ ಜನತೆಯ ಸೇವೆಯನ್ನು ಇಷ್ಟು ದೀರ್ಘಕಾಲ ಮಾಡಲು ಸಾಧ್ಯವಾಗಿದೆ.
ನನ್ನನ್ನು ನಾಯಕನನ್ನಾಗಿ ಸ್ವೀಕರಿಸಿ ಬೆಂಬಲ ನೀಡಿದ ನನ್ನ ಎಲ್ಲ ಶಾಸಕ ಮಿತ್ರರಿಗೆ, ಸರ್ಕಾರದ ಯಂತ್ರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಹಕಾರ ನೀಡಿದಅಧಿಕಾರಿವರ್ಗಕ್ಕೆ ನಾನು ವಿಶೇಷವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ, ನಾನು ಚುನಾವಣಾ ರಾಜಕಾರಣದಿಂದ ದೂರಸರಿಯಬಹುದು, ಆದರೆ ರಾಜಕೀಯ ಕ್ಷೇತ್ರದಲ್ಲಿರುತ್ತೇನೆ. ಮುಂಬರುವ ದಿನಗಳಲ್ಲಿರಾಜ್ಯದ ಜನತೆ ಇಲ್ಲವೆ ಪಕ್ಷ ನೀಡುವ ಕರೆಗೆ ಓಗೊಟ್ಟು ಸಹಕಾರ ನೀಡುತ್ತೇನೆ..

 

ಮತ್ತೊಮ್ಮೆ ಎಲ್ಲರಿಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ, ವಂದನೆಗಳು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments