Homeಕರ್ನಾಟಕಎನ್‌ಸಿಇಆರ್‌ಟಿಗೆ ಸಚಿವ ಭೋಸರಾಜು ಪತ್ರ, ಪಠ್ಯಕ್ರಮದಲ್ಲಿ 'ಅಂತರ್ಜಲ' ಕುರಿತ ಪ್ರತ್ಯೇಕ ಅಧ್ಯಾಯ ಅಳವಡಿಕೆಗೆ ಆಗ್ರಹ

ಎನ್‌ಸಿಇಆರ್‌ಟಿಗೆ ಸಚಿವ ಭೋಸರಾಜು ಪತ್ರ, ಪಠ್ಯಕ್ರಮದಲ್ಲಿ ‘ಅಂತರ್ಜಲ’ ಕುರಿತ ಪ್ರತ್ಯೇಕ ಅಧ್ಯಾಯ ಅಳವಡಿಕೆಗೆ ಆಗ್ರಹ

– ಪ್ರಸ್ತುತ 10ನೇ ತರಗತಿ ಪಠ್ಯದಲ್ಲಿ ಮೇಲ್ಮೈ ಜಲಕ್ಕೆ ಮಾತ್ರ ಒತ್ತು: ಭವಿಷ್ಯದ ಪೀಳಿಗೆಗೆ ಅಂತರ್ಜಲದ ಅರಿವು ಮೂಡಿಸಲು ರಾಜ್ಯದ ಮಹತ್ವದ ಹೆಜ್ಜೆ
– ಎನ್‌ಇಪಿ (NEP) 2020ರ ಅಡಿಯಲ್ಲಿ 2027-28ನೇ ಸಾಲಿನ ಹೊಸ ಪಠ್ಯದಲ್ಲಿ ಸೇರ್ಪಡೆಗೆ ಮನವಿ

ಹವಾಮಾನ ಬದಲಾವಣೆ ಮತ್ತು ಅಂತರ್ಜಲದ ಅತಿಯಾದ ಬಳಕೆಯಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಜಲಕ್ಷಾಮವನ್ನು ತಪ್ಪಿಸಲು ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) ಪಠ್ಯಕ್ರಮದಲ್ಲಿ ‘ಅಂತರ್ಜಲ’ (Groundwater) ಕುರಿತ ಪ್ರತ್ಯೇಕ ಅಧ್ಯಾಯವನ್ನು ಅಳವಡಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಪ್ರಸ್ತುತ ಎನ್‌ಸಿಇಆರ್‌ಟಿ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ (Contemporary India II) ‘ಜಲ ಸಂಪನ್ಮೂಲಗಳು’ ಎಂಬ ಅಧ್ಯಾಯವಿದ್ದರೂ, ಅದರಲ್ಲಿ ಕೇವಲ ಮೇಲ್ಮೈ ಜಲಕ್ಕೆ (Surface Water) ಮಾತ್ರ ಹೆಚ್ಚಿನ ಒತ್ತು ನೀಡಲಾಗಿದೆ ಎಂದಿದ್ದಾರೆ.

ಭೂಮಿಯ ಮೇಲಿರುವ ಒಟ್ಟು ದ್ರವರೂಪದ ಸಿಹಿನೀರಿನಲ್ಲಿ ಶೇ. 97ರಷ್ಟು ಪಾಲು ಅಂತರ್ಜಲದ ರೂಪದಲ್ಲಿದೆ. ದೇಶದ ಶೇ. 50ರಷ್ಟು ಗೃಹಬಳಕೆ ಹಾಗೂ ಶೇ. 25ರಷ್ಟು ಕೃಷಿಯು ನೀರಿಗಾಗಿ ಅಂತರ್ಜಲವನ್ನೇ ಅವಲಂಬಿಸಿದೆ. ಪ್ರತಿ ವರ್ಷ ನೀರಿನ ಬಳಕೆಯು ಶೇ. 1ರಷ್ಟು ಹೆಚ್ಚಾಗುತ್ತಿದ್ದು, ಹವಾಮಾನ ಬದಲಾವಣೆಯಿಂದಾಗಿ ಮೇಲ್ಮೈ ಜಲದ ಲಭ್ಯತೆ ಕಡಿಮೆಯಾಗುತ್ತಿರುವುದರಿಂದ ಅಂತರ್ಜಲದ ಮೇಲಿನ ಅವಲಂಬನೆ ಇನ್ನಷ್ಟು ತೀವ್ರವಾಗಲಿದೆ. ಅಲ್ಲದೇ, ಕಳೆದ ಎರಡು ದಶಕಗಳಲ್ಲಿ ಅತಿ-ಬಳಕೆಯ (Over-Exploited) ಮತ್ತು ಅಪಾಯಕಾರಿ ಮಟ್ಟದಲ್ಲಿರುವ (Critical & Semi-Critical) ಅಂತರ್ಜಲ ಪ್ರದೇಶಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜೊತೆಗೆ, ಅಂತರ್ಜಲ ಕಲುಷಿತಗೊಳ್ಳುತ್ತಿರುವ ಬೆನ್ನಲ್ಲೇ ಅಂತರ್ಜಲದ ಗುಣಮಟ್ಟವೂ ನಿರಂತರವಾಗಿ ಕುಸಿಯುತ್ತಿದೆ ಎಂದು ವಿವರಿಸಿದ್ದಾರೆ.

ವಿಶ್ವಸಂಸ್ಥೆಯ 169 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ (SDGs) 53 ಗುರಿಗಳು ನೇರವಾಗಿ ಅಂತರ್ಜಲಕ್ಕೆ ಸಂಬಂಧಿಸಿದಂತಾಗಿವೆ (ವಿಶೇಷವಾಗಿ ಗುರಿ 6 ಮತ್ತು 13). ಅಮೆರಿಕದ ಶಾಲಾ ಪಠ್ಯದಲ್ಲಿಯೇ ಅಂತರ್ಜಲ, ಅದರ ಇಂಗುವಿಕೆ (Porosity), ಪೆರ್ಮಿಯಬಲಿಟಿ (Permeability), ಅಂತರ್ಜಲ ಹರಿವು ಹಾಗೂ ಕಲುಷಿತಗೊಳ್ಳುವಿಕೆ ಕುರಿತು ವಿವರಿಸುವ ಪ್ರತ್ಯೇಕ ಅಧ್ಯಾಯವನ್ನು ಅಳವಡಿಸಲಾಗಿದೆ. ಇದೇ ಮಾದರಿಯಲ್ಲಿ ನಮ್ಮ ದೇಶದಲ್ಲೂ ಭವಿಷ್ಯದ ಪೀಳಿಗೆಗೆ ಅಂತರ್ಜಲ ಸಂಪನ್ಮೂಲದ ಲಭ್ಯತೆ ಹಾಗೂ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಪ್ರೌಢಶಾಲಾ ಹಂತದಲ್ಲಿಯೇ ಈ ವಿಷಯಗಳ ಸೇರ್ಪಡೆ ಅತ್ಯಗತ್ಯವಾಗಿದೆ ಎಂದು ಪತ್ರದಲ್ಲಿ ಮನವರಿಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪಠ್ಯದಲ್ಲಿ ಏನೇನು ಇರಬೇಕು?

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCFSE 2023) ಅಡಿಯಲ್ಲಿ ಎನ್‌ಸಿಇಆರ್‌ಟಿ 2027-28ನೇ ಸಾಲಿಗೆ 10ನೇ ತರಗತಿಯ ಹೊಸ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುತ್ತಿದೆ. ಈ ಹೊಸ ಪಠ್ಯದಲ್ಲಿ ಈ ಕೆಳಗಿನ ಪ್ರಮುಖ ವಿಷಯಗಳನ್ನು ಒಳಗೊಂಡ ‘ಅಂತರ್ಜಲ’ ಅಧ್ಯಾಯವನ್ನು ಸೇರಿಸಲು ಎನ್‌ಸಿಇಆರ್‌ಟಿ ಜೊತೆ ವ್ಯವಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ:

– ಮಳೆನೀರು ಕೊಯ್ಲು (Rainwater Harvesting) ಮತ್ತು ಕೃತಕ ಅಂತರ್ಜಲ ಮರುಪೂರಣ (Managed Aquifer Recharge) ತಂತ್ರಜ್ಞಾನಗಳು.
– ಪ್ರಕೃತಿ ಆಧಾರಿತ ಪರಿಹಾರಗಳು (ನಿರ್ಮಿತ ಜೌಗು ಪ್ರದೇಶಗಳು, ಹಸಿರು ಮೇಲ್ಛಾವಣಿ ಇತ್ಯಾದಿ).
– ಅಂತರ್ಜಲ ನಕ್ಷೆ (Aquifer Mapping) ಮತ್ತು ಮಾಡೆಲಿಂಗ್.
– ಅತ್ಯಾಧುನಿಕ ನಿಗಾ ತಂತ್ರಜ್ಞಾನಗಳಾದ ಐಒಟಿ (IoT) ಮತ್ತು ರಿಮೋಟ್ ಸೆನ್ಸಿಂಗ್ ಬಳಕೆ.
– ಕೇಂದ್ರ ಜಲಶಕ್ತಿ ಸಚಿವಾಲಯ, ಕೇಂದ್ರ ಅಂತರ್ಜಲ ಮಂಡಳಿ ಹಾಗೂ ನೀತಿ ಆಯೋಗದ ವಿವಿಧ ಜಲ ಸಂರಕ್ಷಣಾ ಯೋಜನೆಗಳು.

“ಭವಿಷ್ಯದ ಜಲಕ್ಷಾಮವನ್ನು ಪರಿಣಾಮಕಾರಿಯಾಗಿ ಎದುರಿಸಲು ಕೇವಲ ಯೋಜನೆಗಳನ್ನು ರೂಪಿಸಿದರೆ ಸಾಲದು, ನಮ್ಮ ಮುಂದಿನ ಪೀಳಿಗೆಗೆ ಜಲ ಸಂರಕ್ಷಣೆಯ ನೈಜ ಮಹತ್ವವನ್ನು ಶಾಲಾ ಹಂತದಲ್ಲಿಯೇ ತಿಳಿಸಿಕೊಡಬೇಕಿದೆ. ಹವಾಮಾನ ಬದಲಾವಣೆಯಿಂದಾಗಿ ಮೇಲ್ಮೈ ಜಲಮೂಲಗಳು ಬತ್ತಿಹೋಗುತ್ತಿದ್ದು, ನಾವಿಂದು ಬಹುತೇಕ ಅಂತರ್ಜಲವನ್ನೇ ಅವಲಂಬಿಸುವಂತಾಗಿದೆ. ಈ ನಿಟ್ಟಿನಲ್ಲಿ, ಜಾಗತಿಕ ಮಾದರಿಯಲ್ಲಿ ನಮ್ಮ ದೇಶದ ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮದಲ್ಲಿ ‘ಅಂತರ್ಜಲ’ ಕುರಿತ ಪ್ರತ್ಯೇಕ ಹಾಗೂ ವಿಸ್ತೃತ ಅಧ್ಯಾಯವನ್ನು ಅಳವಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ರಾಜ್ಯ ಸರ್ಕಾರದ ಈ ಮಹತ್ವದ ಹಾಗೂ ದೂರದೃಷ್ಟಿಯ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಸಂಪೂರ್ಣ ವಿಶ್ವಾಸ ನಮಗಿದೆ.”
– ಎನ್.ಎಸ್. ಬೋಸರಾಜು, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments