Homeಕರ್ನಾಟಕಪ್ರಧಾನಿ ಮೋದಿಯಿಂದ ಮಕ್ಕಳ ವಿರೋಧಿ ಹೇಳಿಕೆ: ವಿ ಪಿ ನಿರಂಜನಾರಾಧ್ಯ

ಪ್ರಧಾನಿ ಮೋದಿಯಿಂದ ಮಕ್ಕಳ ವಿರೋಧಿ ಹೇಳಿಕೆ: ವಿ ಪಿ ನಿರಂಜನಾರಾಧ್ಯ

ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನಿನ್ನೆ ಗುಜರಾತಿನ ವಡೋದರದಲ್ಲಿ ಮಾತನಾಡುತ್ತಾ ಕೋವಿಡ್‌ ಕಾಲದ ತುರ್ತು ಪರಿಸ್ಥಿತಿ ಮಾದರಿಯಲ್ಲಿ ಶಾಲಾ–ಕಾಲೇಜುಗಳು ಶಿಕ್ಷಣವನ್ನು ಆನ್‌ಲೈನ್‌ ಮಾದರಿಯಲ್ಲಿ ನಡೆಸಬೇಕೆಂದು ಹೇಳಿರುವ ಹೇಳಿಕೆಯನ್ನು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಬಲವಾಗಿ ಖಂಡಿಸುತ್ತದೆ . ಇದು ಅತ್ಯಂತ ಆತಂಕಕಾರಿ ಹಾಗು ಮಕ್ಕಳ ವಿರೋಧಿ ಹೇಳಿಕೆಯಾಗಿದೆ ಎಂದು ಶಿಕ್ಷಣ ತಜ್ಞ ವಿ ಪಿ ನಿರಂಜನಾರಾಧ್ಯ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು,  “ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕದಲ್ಲಿನ ಮಾಹಿತೆಯನ್ನು ಆನ್‌ಲೈನ್‌ ಪರದೆಯ ಮೂಲಕ ತಲುಪಿಸುವ ನಿಷ್ಕ್ರಿಯ ಪ್ರಕ್ರಿಯೆಯಲ್ಲ. ಬದಲಿಗೆ, ಶಿಕ್ಷಣ ಶಾಂತಿಯುತ ಸಹಬಾಳ್ವೆಗೆ ಅಗತ್ಯವಾದ ಸಾಮಾಜೀಕರಣ , ನಾಗರೀಕ ಮೌಲ್ಯಗಳು ಹಾಗು ಮಾನವ ಸಂಬಂಧಗಳನ್ನು ಬೆಳೆಸುವ-ಬೆಸೆಯುವ ಜೀವಂತ ಪ್ರಕ್ರಿಯೆ. ಶಿಕ್ಷಣ ಮಕ್ಕಳ ಸಾಮಾಜಿಕ ಬೆಳವಣಿಗೆ, ಆಟ–ಪಾಠ, ಸಹಪಾಠಿಗಳ ಜೊತೆಗಿನ ಸಂವಹನ, ಭಾವನಾತ್ಮಕ ಸಮತೋಲನ, ಸೃಜನಶೀಲತೆ ಮತ್ತು ಮಾನವೀಯ ಮೌಲ್ಯಗಳ ನಿರ್ಮಾಣದ ಸಮಗ್ರ ಪ್ರಕ್ರಿಯೆಯಾಗಿದೆ ಎಂದು ಪಾಫ್ರೆ ಬಲವಾಗಿ ನಂಬಿದೆ” ಎಂದಿದ್ದಾರೆ.

“ಜೊತೆಗೆ , ಕೋವಿಡ್‌ ಅವಧಿಯ ಆನ್‌ಲೈನ್‌ ಶಿಕ್ಷಣದಿಂದಾದ ದುಷ್ಪರಿಣಾಮದಿಂದ ಇಂದಿಗೂ ಲಕ್ಷಾಂತರ ಮಕ್ಕಳು ಮಾನಸಿಕ ಒತ್ತಡ, ಏಕಾಂಗಿತನ, ಕಲಿಕಾ ಹಿನ್ನಡೆ, ದೃಷ್ಟಿದೋಷ, ಮೊಬೈಲ್‌ ವ್ಯಸನ ಮತ್ತು ಸಾಮಾಜಿಕ ಸಂಬಂಧ ಕಡಿತಗೊಳಿಸುವಂಥಹ ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ . ಈ ಬಗ್ಗೆ ನಡೆದ ಸಾವಿರಾರು ಅಧ್ಯಯನಗಳು ಈ ಎಲ್ಲಾ ಅಂಶಗಳನ್ನು ದಾಖಲಿಸಿವೆ ಶೀಘ್ರ ಪರಿಹಾರ ಕಂಡುಕೊಳ್ಳಲು ಸೂಚಿಸಿವೆ . ನಾವು ಇಂದಿಗೂ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಮಕ್ಕಳ ಮಾನಸಿಕ ಹಾಗು ಆರೋಗ್ಯಕರ ಬೆಳವಣಿಗೆ ದೃಷ್ಟಿಯಿಂದ ಶಿಕ್ಷಣದಲ್ಲಿ ಡಿಜಿಟಲ್‌ ತಂತ್ರಜ್ಞಾನ ಬಳಸುವುದನ್ನು ಅನೇಕ ದೇಶಗಳು ನಿಷೇಧಿಸಿ ನಿಯಂತ್ರಿಸಿವೆ” ಎಂದು ವಿವರಿಸಿದ್ದಾರೆ.

“ಇಂತಹ ನಕಾರಾತ್ಮಕ ಗಂಭೀರ ಅನಾಹುತಗಳ ಅನುಭವದ ನಂತರವೂ , ಇದಾವುದರ ಪರಿವಿಯೇ ಇಲ್ಲದೆ ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಇಂಧನ ಬೆಲೆ ಏರಿಕೆಯ ನೆಪದಲ್ಲಿ ಮತ್ತೆ ಕೋವಿಡ್‌ ಕಾಲದ ಮಾದರಿಯಲ್ಲಿ ಶಾಲಾ–ಕಾಲೇಜುಗಳಲ್ಲಿ ಆನ್‌ಲೈನ್‌ ತರಗತಿಗಳನ್ನು ನಡೆಸಬೇಕೆಂದು ಕರೆ ನೀಡುವ ಮೂಲಕ ಪ್ರಧಾನಿಯವರು ಶಿಕ್ಷಣದ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುವ ದೂರದೃಷ್ಟಿಯಿಲ್ಲದ ಅಪಾಯಕಾರಿ ಸಲಹೆ ನೀಡಿದ್ದಾರೆ. ಇದು ಮಕ್ಕಳ ಹಕ್ಕುಗಳ ಗಂಭೀರ ನಿರ್ಲಕ್ಷ್ಯವಾಗಿದ್ದು, ಶಾಲೆಗಳಲ್ಲಿ ಎಲ್ಲರ ಜೊತೆ ಬೆರೆತು ಲವಲವಿಕೆಯಿಂದ ಕಲಿಯುವ ಮಕ್ಕಳ ಅದರಲ್ಲೂ ವಿಶೇಷವಾಗಿ ನಗರ-ಗ್ರಾಮೀಣದಲ್ಲಿನ ಬಡಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯುವ ಹುನ್ನಾರವಾಗಿದೆ ಎಂದು ಪಾಫ್ರೆ ಅಭಿಪ್ರಾಯಪಡುತ್ತದೆ” ಎಂದು ತಿಳಿಸಿದ್ದಾರೆ.

“ದೇಶದ ವಾಸ್ತವ ಪರಿಸ್ಥಿತಿಯನ್ನು ಗಮನಿಸಿದರೆ ಈ ಹೇಳಿಕೆ ಸಂಪೂರ್ಣ ಹಾಸ್ಯಾಸ್ಪದವಾಗಿದೆ. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ( NFHS ಹಾಗೂ ಯುಡೈಸ್‌ ( UDISE) ವರದಿಗಳ ಅನ್ವಯ ನಗರ ಹಾಗು ಗ್ರಾಮೀಣ ಪ್ರದೇಶಗಳ ಅನೇಕ ಕುಟುಂಬಗಳಿಗೆ ಇನ್ನೂ ಸ್ಥಿರ ಇಂಟರ್‌ನೆಟ್‌ ಸಂಪರ್ಕ, ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಅಥವಾ ಡಿಜಿಟಲ್‌ ಮೂಲಸೌಕರ್ಯವೇ ಲಭ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಸಾವಿರಾರು ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳೇ ಅಪೂರ್ಣವಾಗಿರುವಾಗ, ವಿದ್ಯುತ್‌ ಮತ್ತು ಜಾಲತಾಣ ಸಂಪರ್ಕವೂ ಸಮರ್ಪಕವಾಗಿಲ್ಲದ ಹಳ್ಳಿಗಳ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣವನ್ನು ಪ್ರಸ್ತಾಪಿಸುವುದು ಬೇಜವಾಬ್ದಾರಿ ಮತ್ತು ವಾಸ್ತವಕ್ಕೆ ದೂರವಾದ ಸಲಹೆಯಾಗಿದೆ . ಇದು ಶಿಕ್ಷಣದಲ್ಲಿನ ಅಸಮಾನತೆಯನ್ನು ಇನ್ನಷ್ಟು ಗಾಢಗೊಳಿಸುವ ಕ್ರಮವಾಗಿದೆ. ಪ್ರಧಾನಿಯವರು ಕೆಲವೇ ಬೆರಳೆಣಿಕೆಯ ಖಾಸಗಿ ಶಾಲೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾಪಿಸಿದಂತಿದೆ” ಎಂದಿದ್ದಾರೆ.

“ನಮ್ಮ ಶಿಕ್ಷಣ ನೀತಿಗಳು ಹಾಗೂ ಅಂತರರಾಷ್ಟ್ರೀಯ ಶಿಕ್ಷಣ ಹಕ್ಕು ಘೋಷಣೆಗಳೂ ಶಿಕ್ಷಣ ಮಕ್ಕಳ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಖಚಿತಪಡಿಸಬೇಕೆಂದು ಹಾಗು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಸಮಗ್ರ ಪ್ರಕ್ರಿಯೆ ಆಗಿರಬೇಕೆಂದು ಒತ್ತಿ ಹೇಳುತ್ತವೆ.ಈ ಎಲ್ಲಾ ವಾಸ್ತವಗಳನ್ನು ಗಾಳಿಗೆ ತೂರಿ ಆನ್‌ ಲೈನ್‌ ಶಿಕ್ಷಣದ ಬಗ್ಗೆ ಪ್ರಸ್ತಾಪಿಸುವ ಮೂಲಕ ಪ್ರಧಾನಿಯವರು ಕೇಂದ್ರ ಸರ್ಕಾರ ಶಿಕ್ಷಣದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದಂತಿದೆ.ಇದು ಮಕ್ಕಳನ್ನು ಮತ್ತೆ ಮೊಬೈಲ್‌ ಮತ್ತು ಪರದೆಗಳಿಗೆ ಸೀಮಿತಗೊಳಿಸುವ ಮೂಲಕ ಅವರ ಮಾನಸಿಕ, ದೈಹಿಕ ಆರೋಗ್ಯ ಹಾಗು ಕ್ಷೇಮವನ್ನೇ ಹಾಳು ಮಾಡುವ ನಕಾರಾತ್ಮಕ ಸಲಹೆಯಾಗಿದೆ . ಮಕ್ಕಳು , ಪಾಲಕರು ಮತ್ತು ಶಿಕ್ಷಕರಲ್ಲಾಗಿರುವ ಗೊಂದಲ ಹಾಗೂ ಆತಂಕ ನಿವಾರಿಸಲು,. ಮಾನ್ಯ ಪ್ರಧಾನಿಗಳು ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಪಾಫ್ರೆ ಒತ್ತಾಯಿಸುತ್ತದೆ’ ಎಂದು ಹೇಳಿದ್ದಾರೆ.

“ಕಳೆದ 10-15 ವರ್ಷಗಳಿಂದ ಶಿಕ್ಷಣ ಹಕ್ಕು ಕಾಯಿದೆ ಆಶಯದಂತೆ ಮಕ್ಕಳು ತಮ್ಮ ನೆರೆಹೊರೆಯಲ್ಲಿ ನಡೆದುವ ಹೋಗುವ ದೂರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಸಮಾನ ಶಾಲೆಯನ್ನು ಕಟ್ಟಿಕೊಡಲು ಕೇಂದ್ರ ಸರ್ಕಾರ ಕ್ರಮವಹಿಸಿದ್ದರೆ , ಎಂಥಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ಮಕ್ಕಳ ಶಿಕ್ಷಣದ ಹಕ್ಕು ಉಲ್ಲಂಘನೆಯಾಗುವ ಸಂಭವ ಎದುರಾಗುತ್ತಿರಲಿಲ್ಲ. ಈಗಲಾದರು ಮಾನ್ಯ ಪ್ರಧಾನಿಯವರು ಈವರೆಗಿನ ಎಲ್ಲಾ ಶಿಕ್ಷಣ ನೀತಿಗಳ ಆಶಯದಂತೆ ದೇಶದ ಜಿಡಿಪಿಯ ಶೇಕಡ 6 ರಷ್ಟನ್ನು ಶಿಕ್ಷಣಕ್ಕೆ ಹೂಡುವ ಮೂಲಕ ಕೊಥಾರಿ ಆಯೋಗದ ಆಶಯದಂತೆ ಸಮಾನ ಶಾಲಾ ಶಿಕ್ಷಣದ ನೆಲೆಯಲ್ಲಿ ಬಲಿಷ್ಠ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಮುಂದಾಗಬೇಕು” ಎಂದು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments