Homeಕರ್ನಾಟಕನಿರುದ್ಯೋಗಿಗಳ ಭವ್ಯ ಭವಿಷ್ಯವನ್ನು ಅತಂತ್ರ ಸ್ಥಿತಿಗೆ ತಳ್ಳಿದ ಕೆಪಿಎಸ್‌ಸಿ: ಬಿ ವೈ ವಿಜಯೇಂದ್ರ 

ನಿರುದ್ಯೋಗಿಗಳ ಭವ್ಯ ಭವಿಷ್ಯವನ್ನು ಅತಂತ್ರ ಸ್ಥಿತಿಗೆ ತಳ್ಳಿದ ಕೆಪಿಎಸ್‌ಸಿ: ಬಿ ವೈ ವಿಜಯೇಂದ್ರ 

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಅರ್ಹ ಪ್ರತಿಭಾವಂತ ನಿರುದ್ಯೋಗಿಗಳ ಪಾಲಿಗೆ ಕಲ್ಪವೃಕ್ಷವಾಗುವ ಬದಲು ಪಾಪಾಸುಕಳ್ಳಿಯಾಗಿ ಲಕ್ಷಾಂತರ ನಿರುದ್ಯೋಗಿಗಳ ಭವ್ಯ ಭವಿಷ್ಯವನ್ನು ಅತಂತ್ರ ಸ್ಥಿತಿಗೆ ಸಿಲುಕಿಸಿದ ಕರಾಳ ಇತಿಹಾಸವನ್ನು ಅಂಟಿಸಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಿರುದ್ಯೋಗಿ ಯುವಜನರ ಬೃಹತ್‌ ಪ್ರತಿಭಟನೆಗೆ ಮಣಿದು 56,432 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಆದರೆ ಈ ಸಂಬಂಧ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಸರ್ಕಾರಿ ಯಂತ್ರವನ್ನು ಸಮರ್ಥವಾಗಿ ನಿಭಾಯಿಸಲು ಅರ್ಹ ಅಧಿಕಾರಿಗಳನ್ನು ನೇಮಿಸುವ ಸಂವಿಧಾನಿಕ ಹೊಣೆ ಹೊತ್ತಿರುವ ಲೋಕಸೇವಾ ಆಯೋಗ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದರಲ್ಲಿ ವಿಫಲವಾಗಿ ಬ್ರಹ್ಮಾಂಡ ಭ್ರಷ್ಟಾಚಾರ, ಅಕ್ರಮ ಹಾಗೂ ದೋಷಪೂರಿತ ಪ್ರಕ್ರಿಯೆಗಳಿಂದ ಕುಖ್ಯಾತಿ ಪಡೆದಿದೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಆಯೋಗದ ಈ ದುರವಸ್ಥೆಗೆ ಅಂಕುಶ ಹಾಕಲು ಆಯೋಗದ ವಿರುದ್ಧದ ನ್ಯಾಯಾಲಯದ ಅನೇಕ ತೀರ್ಪುಗಳು ಭ್ರಷ್ಟ ವ್ಯವಸ್ಥೆಯನ್ನು ಬಯಲು ಮಾಡಿದೆ, ಕೆಲ ತಪ್ಪಿತಸ್ಥರ ಮುಖವಾಡಗಳು ಕೂಡ ಕಳಚಿ ಬಿದ್ದಿವೆ. ಇಷ್ಟಾಗಿಯೂ ಆಯೋಗದ ವ್ಯವಸ್ಥೆಗೆ ಕಾಯಕಲ್ಪ ನೀಡುವ ಪ್ರಯತ್ನ ಈವರೆವಿಗೂ ಸಾಧ್ಯವಾಗಿಲ್ಲ, ಸದ್ಯ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಭ್ಯರ್ಥಿಗಳ ಆಯ್ಕೆಗೆ ಸುಧಾರಣೆಗಳನ್ನು ತರುವುದಾಗಿ ಆಯೋಗದ ಮೂಲಗಳು ತಿಳಿಸಿವೆ. ಆದರೆ ಇದನ್ನು ನಂಬುವ ಮನಸ್ಥಿತಿಯನ್ನು ಉದ್ಯೋಗಾಕಾಂಕ್ಷಿಗಳು ಕಳೆದುಕೊಂಡಿದ್ದಾರೆ. ಆದಾಗ್ಯೂ ಈ ನಿಟ್ಟಿನಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ ಇನ್ನಾದರೂ ಪಾರದರ್ಶಕತೆ ಕಾಯ್ದುಕೊಂಡು ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಿಕೊಂಡು ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಸುಭದ್ರ ವ್ಯವಸ್ಥೆ ರೂಪಿಸಿಕೊಳ್ಳದೇಹೋದರೆ ಮುಂದಿನ ದಿನಗಳಲ್ಲಿ ಆಯೋಗದ ಅಸ್ತಿತ್ವವನ್ನು ಪ್ರಶ್ನಿಸುವ ಪರಿಸ್ಥಿತಿ ಉದ್ಭವವಾಗಲಿದೆ ಎಂದಿದ್ದಾರೆ.

ಸರ್ಕಾರ ಈ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿ 56,432 ಹುದ್ದೆಗಳ ಭರ್ತಿಗೆ ಮೀನಾಮೇಷ ಎಣಿಸದೇ ಅಧಿಸೂಚನೆ ಹೊರಡಿಸಿ ಅತೀ ಶೀಘ್ರದಲ್ಲಿ ನ್ಯಾಯೋಚಿತವಾಗಿ ಅಭ್ಯರ್ಥಿಗಳ ಆಯ್ಕೆ ಆಗುವಂತೆ ಕಾಳಜಿ ಪ್ರದರ್ಶಿಸಲಿ. ಇಲ್ಲವಾದರೆ ಸದ್ಯ ಈಗಾಗಲೇ ಹತಾಶೆಯ ಅಂಚಿನಲ್ಲಿರುವ ಲಕ್ಷಾಂತರ ನಿರುದ್ಯೋಗಿಗಳ ಆಕ್ರೋಶ ಆಸ್ಪೋಟವಾಗಲಿದೆ ಎಂಬ ಎಚ್ಚರವಿರಲಿ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments