Homeಕರ್ನಾಟಕಬೆಟ್ಟ ಅಗೆದು ಇಲಿ ಹುಡುಕಿದಂತೆ ಒಳ ಮೀಸಲಾತಿ ಕುರಿತ ನಿರ್ಧಾರ: ಗೋವಿಂದ ಕಾರಜೋಳ 

ಬೆಟ್ಟ ಅಗೆದು ಇಲಿ ಹುಡುಕಿದಂತೆ ಒಳ ಮೀಸಲಾತಿ ಕುರಿತ ನಿರ್ಧಾರ: ಗೋವಿಂದ ಕಾರಜೋಳ 

ಸಿದ್ದರಾಮಯ್ಯನವರೇ, ನೀವೇ ನೇಮಿಸಿದ ನ್ಯಾ.ನಾಗಮೋಹನ್‍ದಾಸ್ ಅವರ ವರದಿ ಅವೈಜ್ಞಾನಿಕ ಎಂಬ ಕಾರಣಕ್ಕೆ ತಿರಸ್ಕರಿಸಿದ್ದೀರಾ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವೇ ರಚಿಸಿದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವರದಿ ವೈಜ್ಞಾನಿಕ ಎಂದು ಒಪ್ಪಿಕೊಂಡಿದ್ದೀರಾ ಎಂದು ಸ್ಪಷ್ಟಪಡಿಸಲು ಒತ್ತಾಯಿಸಿದರು. ನಾಗಮೋಹನ್‍ದಾಸ್ ಅವರ ವರದಿಯಲ್ಲಿ ಶೇ 17 ಎಂದಿದ್ದರೂ ಶೇ 15ಕ್ಕೆ ಸೀಮಿತ ಮಾಡಿ ಕೊಡಬಹುದಾಗಿತ್ತು. ಯಾಕೆ ಕೊಟ್ಟಿಲ್ಲ ಎಂದು ಕೇಳಿದರು. ನಿನ್ನೆ ದಿನ ಬೆಟ್ಟ ಅಗೆದು ಇಲಿ ಹುಡುಕಿದಂತೆ ಸಿದ್ದರಾಮಯ್ಯನವರು ಒಳ ಮೀಸಲಾತಿಯನ್ನು ಜಾರಿ ನಿರ್ಧಾರ ಪ್ರಕಟಿಸಿ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು, ಸಮಬಾಳು ಎಂದು ನಿರಂತರ ಭಾಷಣ ಮಾಡಿದಿರಲ್ಲವೇ? ಇದು ಕೇವಲ ಭಾಷಣದ ಸರಕೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿದ್ದರಾಮಯ್ಯನವರೇ, ಅಹಿಂದ ವರ್ಗದ ಕುರಿತು ನಿಮಗೇನಾದರೂ ಬದ್ಧತೆ ಇದೆಯೇ? ಬದ್ಧತೆ ಇದ್ದರೆ ನೀವು ಸಾವಿರಾರು ಕೋಟಿ ಖರ್ಚು ಮಾಡಿ ವರದಿ ತರಿಸಿದ್ದೀರಿ. ಕೆಂಪರಾಜ್ ವರದಿ ಮೂಲೆಗುಂಪು ಮಾಡಿದ್ದೀರಿ. ಅದಾದ ಬಳಿಕ ಜಯಪ್ರಕಾಶ್ ಹೆಗ್ಡೆ ಅವರ ವರದಿ ಮೂಲೆಗುಂಪಾಗಿದೆ. ಮಧುಸೂದನ ನಾಯಕ್ ವರದಿ ಹೊರಗೆ ಬರಲೇ ಇಲ್ಲ ಎಂದು ಆಕ್ಷೇಪಿಸಿದರು.

ಸಿದ್ದರಾಮಯ್ಯನವರು ಮಹಾ ಮೋಸಗಾರ

ಸಿದ್ದರಾಮಯ್ಯನವರೇ, ನಿಮಗೆ ಬದ್ಧತೆ ಎಲ್ಲಿದೆ? ಜನರಿಗೆ ಮೋಸ ಮಾಡಿ, ಬಡವರನ್ನು ದಾರಿ ತಪ್ಪಿಸಿ ಬಡವರಿಗೆ ಅಹಿಂದ ನಾಯಕ ಎಂದು ಹೇಳಿ ಅಧಿಕಾರಕ್ಕೆ ಬರುವುದೊಂದೇ ನಿಮ್ಮ ಗುರಿ. ಕುರ್ಚಿ ಉಳಿಸಿಕೊಳ್ಳಲು ನೀವು ಮಾಡುವುದನ್ನು ನೋಡಿದರೆ ಇದಕ್ಕಿಂತ ಹೆಚ್ಚಿನ ಮೋಸವನ್ನು ಪ್ರಪಂಚದಲ್ಲಿ ಬೇರೆ ಯಾರೂ ಮಾಡಲು ಸಾಧ್ಯ ಇಲ್ಲ ಅನಿಸುವುದಾಗಿ ತಿಳಿಸಿದರು. ಸಿದ್ದರಾಮಯ್ಯನವರು ಮಹಾ ಮೋಸಗಾರ ಎಂದು ಗೋವಿಂದ ಕಾರಜೋಳ ಅವರು ಟೀಕಿಸಿದರು.
ಸಿದ್ದರಾಮಯ್ಯನವರು ಈಚೆಗೆ ಕೇವಲ ಹೊಂದಾಣಿಕೆಯ ರಾಜಕಾರಣಿ ಆಗಿದ್ದಾರೆಂದು ಅವರ ಸಂಪುಟದ ಸಚಿವ ಸತೀಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಅದು ಅಸತ್ಯವೇ ಸತ್ಯವೇ ಎಂದು ಮುಖ್ಯಮಂತ್ರಿಗಳೇ ಹೇಳಲಿ ಎಂದು ಒತ್ತಾಯಿಸಿದರು. ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು, ಸಿದ್ದರಾಮಯ್ಯನವರಿಗೆ ಬದ್ಧತೆ ಇಲ್ಲ ಎನ್ನುತ್ತಿದ್ದಾರೆ ಎಂದರು.

ಯಾವುದನ್ನೂ ಪರಿಗಣಿಸದೇ ಖಾಜಿ ನ್ಯಾಯ

ಸಿದ್ದರಾಮಯ್ಯನವರ ಸರಕಾರ ಯಾವುದೇ ಆಯೋಗಕ್ಕೆ ನೇಮಿಸಿದರೆ ದಯವಿಟ್ಟು ಒಪ್ಪಿಕೊಳ್ಳಬೇಡಿ. ನಿಮಗೆ ಅವಮಾನ ಮಾಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಾರೆ ಎಂದು ಮನವಿ ಮಾಡಿದರು. ಮೀಸಲಾತಿ ವಿಷಯದಲ್ಲಿ ನಿನ್ನೆಯ ಅವರ ನಿರ್ಧಾರವನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು. ಸದಾಶಿವಯ್ಯ ವರದಿ, ನಾಗಮೋಹನ್‍ದಾಸ್ ವರದಿ, ನಮ್ಮದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಂಪುಟ ಉಪ ಸಮಿತಿ ವರದಿ ಇತ್ತು. ಸುಪ್ರೀಂ ಕೋರ್ಟ್ ಆದೇಶ ಇತ್ತು. ಯಾವುದನ್ನೂ ಪರಿಗಣಿಸದೇ ಖಾಜಿ ನ್ಯಾಯ ಮಾಡಿದ್ದಾರೆ. ಸಿದ್ದರಾಮಯ್ಯನವರು ಕೆಲವರನ್ನು ಸಾಕಿದ್ದಾರೆ ಎಂದು ತಿಳಿಸಿದರು.

ನಾವು ವೈಜ್ಞಾನಿಕವಾಗಿ ಮೀಸಲಾತಿ ಕೊಟ್ಟಿದ್ದೆವು

ನಾವು ವೈಜ್ಞಾನಿಕವಾಗಿ ಶೇ 17ಕ್ಕೆ ಹೆಚ್ಚಿಸಿ ಮೀಸಲಾತಿ ಕೊಟ್ಟಿದ್ದೆವು. ಅಂದಿನ ಕಾನೂನು ಸಚಿವ ಮಾಧುಸ್ವಾಮಿ ಅವರ ವರದಿ ಪಡೆದು ವೈಜ್ಞಾನಿಕವಾಗಿ ಹಂಚಿದ್ದೆವು. ಎ- ಶೇ 6, ಬಿ- ಶೇ 5.5, 4.5, ಶೇ 1 ಅಲೆಮಾರಿಗಳಿಗೆ ಕೊಟ್ಟಿದ್ದೆವು. 2013ರ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರ ಸಿಕ್ಕಿದರೆ ಒಳ ಮೀಸಲಾತಿ ಜಾರಿ ಮಾಡುವುದಾಗಿ ಸಿದ್ದರಾಮಯ್ಯನವರು ಹೇಳಿದ್ದರು. ಬಳಿಕ ಸಿದ್ದರಾಮಯ್ಯನವರು ಬೀದಿಯಲ್ಲಿ ಜನರನ್ನು ಬಡಿದಾಡಲು ಬಿಟ್ಟು ಅವರು ಆನಂದವಾಗಿ ವಿಧಾನಸೌಧದಲ್ಲಿ ಕಾಲ ಕಳೆದಿದ್ದರು ಎಂದು ಟೀಕಿಸಿದರು.

3 ವರ್ಷ ಹಾಗೇ ಬಿಟ್ಟರು

2018ರಲ್ಲಿ ಸೋತಾಗ ಒಳ ಮೀಸಲಾತಿ ಕೊಡದ ಕಾರಣ ಎಡಗೈಯವರು ಮತ ಹಾಕದ ಕಾರಣ ಸೋತಿದ್ದಾಗಿ ಸೋನಿಯಾ ಗಾಂಧಿಯವರಿಗೆ ವರದಿ ನೀಡಿದ್ದರು. 2023ರಲ್ಲಿ ಅಧಿಕಾರಕ್ಕೆ ಬಂದರೆ ಮೊದಲನೇ ಅಧಿವೇಶನದಲ್ಲೇ ಒಳ ಮೀಸಲಾತಿ ಜಾರಿ ಬಗ್ಗೆ ಆಶ್ವಾಸನೆ ನೀಡಿದ್ದರು. ಅದನ್ನು ಮಾಡಿಲ್ಲ; ಈಗ 3 ವರ್ಷವಾಗಿದೆ. ಹಿಂದಿನ ಅಧಿವೇಶನದಲ್ಲಿ 6, 6, 5 ಎಂದು 3 ಕೆಟಗರಿ ಮಾಡಲಾಗಿತ್ತು. ಮಸೂದೆ ಅನುಮೋದಿಸಿ, ಮಾನ್ಯ ರಾಜ್ಯಪಾಲರ ಬಳಿ ಕಾಡಿಬೇಡಿ ನೀವು ಅನುಮೋದನೆ ಮಾಡಿಸಿದ್ದೀರಿ. ಅದನ್ನು ಹಾಗೇ ಬಿಟ್ಟಿದ್ದಾಗಿ ಆಕ್ಷೇಪಿಸಿದರು.

ಸಿದ್ದರಾಮಯ್ಯನವರೇ ಮೋಸದಾಟ ಬಿಡಿ

ಎಸ್‍ಸಿ ಉಪ ಜಾತಿಗಳಲ್ಲಿ ಹೊಡೆÀದಾಟ ಹಚ್ಚುವುದು, ಕೋರ್ಟಿನಲ್ಲಿ ಬಿದ್ದು ಹೋಗಬೇಕೆಂಬ ಉದ್ದೇಶ ನಿಮ್ಮದು ಎಂದು ಟೀಕಿಸಿದರು. ನಾನು ಮಾಡಿದ್ದೆ; ಕೋರ್ಟಿನಲ್ಲಿ ನಿಲ್ಲಲಿಲ್ಲ ಮುನಿಯಪ್ಪ; ಮಹದೇವಪ್ಪ ಎನ್ನುವುದು. ಇಂಥ ಮೋಸದಾಟವನ್ನು ಸಿದ್ದರಾಮಯ್ಯನವರು ಬಿಡಲಿ ಎಂದು ಒತ್ತಾಯಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಶಾಸಕ ಮಾನಪ್ಪ ಡಿ ವಜ್ಜಲ್, ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ ಅವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments