- ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಹಿರಿಯ ಪತ್ರಕರ್ತರ ನಿಯೋಗ
ಕರ್ನಾಟಕ ರಾಜ್ಯ ಸರ್ಕಾರ ಮರ್ಯಾದಾಗೇಡು ಹತ್ಯೆಗಳನ್ನು ನಿಷೇಧಿಸಿ ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ, ಇವ ನಮ್ಮವ) ವಿಧೇಯಕ, ೨೦೨೬ ಅನುಮೋದಿಸಿರುವುದು ಅತ್ಯಂತ ಸ್ವಾಗತಾರ್ಹ ಮತ್ತು ಅಭಿನಂದನೀಯ ನಿರ್ಧಾರವಾಗಿದೆ ಎಂದು ಹಿರಿಯ ಪತ್ರಕರ್ತರ ನಿಯೋಗ ತಿಳಿಸಿದೆ.
ಮರ್ಯಾದಾಗೇಡುಹತ್ಯೆ ನಿಷೇಧ ವಿಧೇಯಕ ಅನುಮೋದನೆ ಮಾಡುವಂತೆ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪತ್ರಕರ್ತ ಎನ್.ರವಿಕುಮಾರ್ (ಟೆಲೆಕ್ಸ್), ಅಭಿಮನ್ಯು ಪತ್ರಿಕೆಯ ಸಂಪಾಕದ ಬಿ ಎನ್ ರಮೇಶ್ (ಅಭಿಮನ್ಯು ರಮೇಶ್) ಸೇರಿದಂತೆ ಇತರರು ಭೇಟಿಯಾಗಿ ಆಗ್ರಹಿಸಿದ್ದರು.
ಮರ್ಯಾದಾಗೇಡು ಹತ್ಯೆ ನಿಷೇಧ ವಿಧೇಯಕ ಅನುಮೋದನೆ ಸಮಸಮಾಜ ನಿರ‍್ಮಾಣಕ್ಕೆ ಇನ್ನಷ್ಟು ನೈತಿಕ ಮತ್ತು ಕಾನೂನು ಬಲ ತಂದಿದೆ. ಇಡೀ ದೇಶದಲ್ಲೇ ಜಾತಿ ಆಧಾರಿತ ದ್ವೇಷದಿಂದ ನಡೆಯುವ ಮರ್ಯಾದಾಗೇಡು ಹತ್ಯೆಗಳನ್ನು ನಿಷೇಧಿಸಿ ಕಾಯ್ದೆ ತಂದ ಮೊಟ್ಟ ಮೊದಲ ರಾಜ್ಯ ಕರ್ನಾಟಕವೇ ಆಗಿದೆ.ಈ ನಡೆ ಕರ್ನಾಟಕದ ವೈಚಾರಿಕ ಪರಂಪರೆ ಮತ್ತು ಸಮಾನತೆಯ ಸಂವಿಧಾನಿಕ ತತ್ವವನ್ನು ನೆಲೆಗೊಳಿಸುವ ಮತ್ತೊಂದು ಹೆಜ್ಜೆ ಎನ್ನಬಹುದು ಎಂದು ಪತ್ರಕರ್ತರ ನಿಯೋಗ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.
ಪ್ರಕಟಣೆಯಲ್ಲಿ ಏನಿದೆ?
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಆಧಾರಿತ ತಾರತಮ್ಯ, ಹಿಂಸೆ,ಕೊಲೆಯಂತಹ ಪಾಶವಿ ಕೃತ್ಯಗಳು (CASTE TERRORISM.) ಹೆಚ್ಚಾಗುತ್ತಿದ್ದು, ಅದರಲ್ಲೂ ಜಾತಿ ಕಟ್ಟಳೆಗಳನ್ನು ಮೀರಿ ನಡೆಯುವ ಅಂತರ್‌ಜಾತಿ ವಿವಾಹವಾದವರನ್ನು ಪೋಷಕರೆ ಜಾತಿ ಶ್ರೇಷ್ಠತೆಯ ಮರ್ಯಾದೆ ಎಂಬ “ಪರಿಕಲ್ಪಿತ ಸಾಮಾಜಿಕ ವಿಕೃತ ಭ್ರಮೆ” ಯನ್ನು ಉಳಿಸಿಕೊಳ್ಳಲು ಹಲ್ಲೆ – ಹತ್ಯೆಗಳನ್ನು ಮಾಡುತ್ತಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(NCRB) ವರದಿಗಳ ಪ್ರಕಾರ ದೇಶದಲ್ಲಿ ಮರ್ಯಾದಾಗೇಡು ಹತ್ಯೆಗಳು ಹೆಚ್ಚಳವಾಗಿರುವ ಮುಖ್ಯವಾದ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿರುವುದು ಅತ್ಯಂತ ಕಳವಳಕಾರಿ ಸಂಗತಿ.
ಡಿಸಂಬರ್ ೨೧, ೨೦೨೫ ರಂದು ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಾದಿಗ ಸಮುದಾಯದ ಹುಡುಗನನ್ನು ಮದುವೆಯಾಗಿದ್ದ ಗರ್ಭಿಣಿ ಮಗಳನ್ನೆ ತಂದೆಯೊಬ್ಬ ಮರ್ಯಾದೆ ಹಸರಿನಲ್ಲಿ ಕೊಂದು ಹಾಕಿರುವುದು , ಹುಡುಗನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಮಸಮಾಜದ ಕ್ರಾಂತಿಪುರುಷ ಬಸವಣ್ಣನವರ ಈ ನಾಡಿಗೆ ದೊಡ್ಡ ಕಳಂಕ.
ನಾಗರೀಕ ಸಮಾಜವನ್ನು ಕಾಪಾಡುವಲ್ಲಿ ರೂಪಿಸಲಾದ ಕಾನೂನು ಕಟ್ಟಳೆಗಳ ಭಯವೇ ಇಲ್ಲದೆ ಪೋಷಕರೇ ಸ್ವಂತ ಮಗಳನ್ನೆ ಕೊಂಡು ಹಾಕುವಷ್ಟು ಕ್ರೌರ್ಯಕ್ಕೆ ಇಳಿಯುತ್ತಾರೆ ಎಂದರೆ ಇದರ ಹಿಂದೆ ಸ್ಥಾಪಿತ ಜಾತಿಪ್ರತಿಷ್ಠೆ, ಮನೋವಿಕೃತಿ ಅಡಗಿರುವುದನ್ನು ನಿಚ್ಚಳವಾಗಿ ಕಾಣುತ್ತದೆ. ಇಂತಹ ಕ್ರೌರ್ಯಗಳನ್ನು ನಿಗ್ರಹಿಸಲು ಕಠಿಣ ಕಾನೂನು ರೂಪಿಸಬೇಕಾಗಿದೆ ಎಂಬ ಆಗ್ರಹದೊಂದಿಗೆ ಅಭಿಯಾನ ಮಾಡಲಾಗಿತ್ತು.
ಅನೇಕ ಸಾರ್ವಜನಿಕ ಸಂಘಟನೆಗಳು ಹುಬ್ಬಳ್ಳಿಯ ಇನಾಂ ವೀರಾಪುರದ ಮಾನ್ಯಳ ಮರ್ಯಾದಾಹತ್ಯೆ ಘಟನೆಯನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದವು, ಪ್ರತ್ಯೇಕ ಕಾಯ್ದೆಗೆ ಆಗ್ರಹಿಸಿದ್ದವು.
ಮರ್ಯಾದಾಗೇಡು ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ನಡೆದ ಈ ಅಭಿಯಾನಕ್ಕೆ ನಾಡಿನ ಎಲ್ಲಾ ವರ್ಗದ ಮಾನವೀಯ ಸಂವೇದನೆಯುಳ್ಳ ಸಾವಿರಾರು ಜನ ಬೆಂಬಲ ವ್ಯಕ್ತಪಡಿಸಿದ್ದರು.
ಜನವರಿ ೧ ,೨೦೨೬ ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಮರ್ಯಾದಾಗೇಡು ಹತ್ಯೆ ನಿಷೇಧಿಸಿ ಕಾನೂನನ್ನು ರೂಪಿಸಬೇಕೆಂಬ ಲಿಖಿತ ಮನವಿ ಪತ್ರವನ್ನು ನೀಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದರು. ಕಾನೂನು ತರುವ ಭರವಸೆ ನೀಡಿದ್ದರು.
ರಾಜ್ಯ ಕಾನೂನು ಸಚಿವರಾದ ಹೆಚ್. ಕೆ ಪಾಟೀಲ್ ,ಗೃಹ ಸಚಿವ ಡಾ ಜಿ ಪರಮೇಶ್ವರ್, ಸಮಾಜಕಲ್ಯಾಣ ಸಚಿವ ಡಾ.ಹೆಚ್ ಸಿ ಮಹಾದೇವಪ್ಪ ಅವರಿಗೂ ಕೂಡ ಮರ್ಯಾದಾಗೇಡು ಹತ್ಯೆ ನಿಷೇಧಿಸಿ ಕಾಯ್ದೆಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಡಲಾಯಿತು.
ಹುಬ್ಬಳಿಯ ಇನಾಂ ವೀರಾಪುರದಲ್ಲಿ ನಡೆದ ಮರ್ಯಾದಾಗೇಡು ಹತ್ಯೆಯಲ್ಲಿ ತಂದೆಯಿಂದಲೆ ಹತ್ಯೆಗೊಳಗಾದ ಗರ್ಭೀಣಿ ಹೆಣ್ಣು ಮಗಳು ಮಾನ್ಯ ಳ ಹೆಸರಿನಲ್ಲೇ ಮರ್ಯಾದಾಗೇಡು ಹತ್ಯೆ ನಿಷೇಧ ಕಾಯ್ದೆರೂಪಿಸಬೇಕೆಂದು ಸರ್ಕಾರವನ್ನು ಮನವಿ ಮಾಡಿಕೊಳ್ಳಲಾಗಿತ್ತು.
ಸಚಿವ ಸಂಪುಟ ಸಭೆಯಲ್ಲಿ ಮರ್ಯಾದಾಗೇಡು ಹತ್ಯೆ ನಿಷೇಧಿಸಿ ವಿಧೇಯಕ ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ( ಇವ ನಮ್ಮವ, ಇವ ನಮ್ಮವ) ವಿಧೇಯಕ, ೨೦೨೬ ವಿಧೇಯಕವನ್ನು ತರಲು ನಿರ್ಧರಿಸಿದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಯನ್ನು ಇಟ್ಟಿತು.
ಇದೀಗ ಬಜೆಟ್ ಅಧಿವೇಶನದಲ್ಲಿ ಮರ್ಯಾದಾಗೇಡು ಹತ್ಯೆ ನಿಷೇಧಿಸಿ ವಿಧೇಯಕ ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ( ಇವ ನಮ್ಮವ, ಇವ ನಮ್ಮವ) ವಿಧೇಯಕ, ೨೦೨೬ ನ್ನು ಮಂಡಿಸಿ ಅನುಮೋದನೆ ಪಡೆಯುವ ಮೂಲಕ ಸರ್ಕಾರ ಐತಿಹಾಸಿಕ ತೀರ‍್ಮಾನವನ್ನು ಕೈಗೊಂಡಿದೆ.
ಜಾತಿ ವಿನಾಶಕ್ಕೆ ಅಥವಾ ಜಾತಿ ಆಧಾರಿತ ತಾರತಮ್ಯ, ಹಿಂಸೆಗಳಿಗೆ ಅಂತರ್‌ಜಾತಿ ವಿವಾಹಗಳು ಪರಿಹಾರ ಎಂದು ಹೋರಾಡಿದ, ಅದಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಮಹಾಮಾನವತಾವಾದಿಗಳಾದ ಬಸವಣ್ಣ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಂದ ಗೌರವ ಇದಾಗಿದೆ. ಹಾಗೂ ದೇಶದಲ್ಲಿ ಮರ್ಯಾದಾಗೇಡು ಹತ್ಯೆಗಳಿಗೆ ತುತ್ತಾದ ಎಲ್ಲ ಜೀವಗಳಿಗೆ ತಾತ್ವಿಕ ನ್ಯಾಯವನ್ನು ಒದಗಿಸಿದಂತಾಗಿದೆ.
ರಾಜ್ಯ ಸರ್ಕಾರದ ಈ ಮಹತ್ವದ ಕ್ರಮದಿಂದ ಸಮಸಮಾಜ ನಿರ‍್ಮಾಣ ಮಾಡುವ ಸಂಕಲ್ಪಗಳಿಗೆ, ಹೋರಾಟಗಳಿಗೆ ಕಾನೂನು ಮತ್ತು ನೈತಿಕ ಬಲ ಬಂದಂತಾಗಿದೆ. ಆದರೆ ಜಾತಿ ಆಧಾರಿತ ಕ್ರೌರ್ಯಗಳನ್ನು ಕೇವಲ ಕಠಿಣ ಕಾನೂನುಗಳಿಂದ ತಡೆಯಲು ಸಾಧ್ಯವಿಲ್ಲ , ಸಾಮಾಜಿಕ ಮನಃಪರಿವರ್ತನೆ, ಮಾನವೀಯ ಮೌಲ್ಯಗಳ ಅರಿವನ್ನು ಮೂಡಿಸುವತ್ತಲೂ ಕಾರ್ಯಯೋಜನೆ ರೂಪಿಸಬೇಕಿದೆ.
ಮರ್ಯಾದಾಗೇಡು ಹತ್ಯೆಗಳ ನಿಷೇಧಿಸಿ ನಡೆದ ಜನಾಭಿಯಾನಕ್ಕೆ ಸ್ಪಂದಿಸಿ ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ( ಇವ ನಮ್ಮವ, ಇವ ನಮ್ಮವ) ವಿಧೇಯಕ, ೨೦೨೬ ನ್ನು ರೂಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್. ಕೆ ಪಾಟೀಲ್, ಗೃಹ ಸಚಿವ ಡಾ ಜಿ. ಪರಮೇಶ್ವರ್, ಸಮಾಜಕಲ್ಯಾಣ ಸಚಿವ ಡಾ ಹೆಚ್.ಸಿ ಮಹಾದೇವಪ್ಪ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಪತ್ರಕರ್ತರ ನಿಯೋಗ ಧನ್ಯವಾದ ತಿಳಿಸಿದೆ.


