Homeಕರ್ನಾಟಕಸಬ್ಸಿಡಿಯನ್ನು ತುಚ್ಛಗೊಳಿಸುವ, ಅಪರಾಧೀಕರಿಸುವುದನ್ನು ನಿಲ್ಲಿಸಿ: ಕೃಷ್ಣ ಬೈರೇಗೌಡ

ಸಬ್ಸಿಡಿಯನ್ನು ತುಚ್ಛಗೊಳಿಸುವ, ಅಪರಾಧೀಕರಿಸುವುದನ್ನು ನಿಲ್ಲಿಸಿ: ಕೃಷ್ಣ ಬೈರೇಗೌಡ

ಸಮಾಜದಲ್ಲಿ ತೀರಾ ಕೆಳ ಹಂತದಲ್ಲಿರುವ ಬಡ ಜನರಿಗೆ ನೀಡುವ ಸಬ್ಸಿಡಿಯನ್ನು ತುಚ್ಛಗೊಳಿಸುವ, ಅಪರಾಧೀಕರಿಸುವ ಕೃತ್ಯವನ್ನು ನಿಲ್ಲಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಪಕ್ಷ ನಾಯಕರಲ್ಲಿ ಮನವಿ ಮಾಡಿದರು.

ಸೋಮವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಶಾಸಕರಾದ ವಿ. ಸುನೀಲ್ ಕುಮಾರ್ ಅವರ ಮಾತಿನ ನಡುವೆ ಆಕ್ಷೇಪ ವ್ಯಕ್ತಪಡಿಸಿದರ ಅವರು, “ಬಡವರಿಗೆ ನೀಡುವ ಸಬ್ಸಿಡಿಯನ್ನು ಭಾರತದಂತೆ ಬೇರೆ ದೇಶದಲ್ಲೂ ತುಚ್ಚವಾಗಿ ಕಾಣಲಾಗುತ್ತೆ. ಆದರೆ, ಕಳೆದ 150 ವರ್ಷಗಳ ಆರ್ಥಿಕ ಚಿಂತನೆಗಳ ಕಡೆಗೆ ಒಮ್ಮೆ ಗಮನ ಹರಿಸಿದರೆ ದೇಶವೊಂದನ್ನು ಆರ್ಥಿಕ ಹಿಂಜರಿತದಿಂದ ಪ್ರಗತಿಪಥದತ್ತ ಮುನ್ನಡೆಸಲು ಬಡವರಿಗೆ ಸಬ್ಸಿಡಿ ನೀಡುವ ಮೂಲಕ ಬೇಡಿಕೆಯ ವಲಯವನ್ನು ಬಲಪಡಿಸುವುದೊಂದೇ ಪರಿಹಾರವಾಗಿ ಕಂಡುಬಂದಿದೆ” ಎಂದು ವ್ಯಾಖ್ಯಾನಿಸಿದರು.

ಈ ಬಗ್ಗೆ ಮತ್ತಷ್ಟು ವಿವರಣೆ ನೀಡಿದ ಅವರು, “ಸ್ವಾಭಾವಿಕವಾಗ ಎರಡು ರೀತಿಯ ಆರ್ಥಿಕ ಚಿಂತನೆಗಳು ಕಾಣಿಸುತ್ತವೆ. ಮೊದಲನೇಯದು ಉತ್ಪಾದಕ ವಲಯದ ಅಭಿವೃದ್ಧಿಗೆ ಸಹಾಯ ಮಾಡುವುದು, ಮತ್ತೊಂದು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲು ಜನಸಾಮಾನ್ಯರ ಆರ್ಥಿಕ ಸ್ಥಿತಿ, ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದು. ಉತ್ಪಾದನ ವಲಯಕ್ಕೆ ತೆರಿಗೆ ಕಡಿತ ಮಾಡುವ ಮೂಲಕ ನೇರವಾಗಿ ಸಹಾಯ ಮಾಡಬಹುದು. ಹೀಗೆ ಮಾಡಿದಲ್ಲಿ ಅವರ ಉಳಿತಾಯ ಹೆಚ್ಚಾಗಿ ಆ ಹಣವನ್ನು ಅವರು ಮತ್ತೆ ಉತ್ಪಾದನಾ ವಲಯದಲ್ಲಿ ಹೂಡಿಕೆ ಮಾಡಲು ಅನುಕೂಲವಾಗುತ್ತದೆ. ಅದೇ ರೀತಿ ಜನರಿಗೆ ಕನಿಷ್ಟ ಆದಾಯ ಲಭ್ಯವಾಗುವುದನ್ನು ಖಾತರಿಪಡಿಸಿ, ಅವರೂ ಸಹ ಜೀವನ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಆರ್ಥಿಕತೆಯನ್ನು ವೃದ್ಧಿಸಬಹುದಾಗಿದೆ” ಎಂದು ವಿವರಿಸಿದರು.

“ಒಬ್ಬ ವ್ಯಕ್ತಿ ಕೈಗೆ ಒಂದು ರೂಪಾಯಿ ಕೊಟ್ಟರೆ ಆ ಹಣ ಮಾರುಕಟ್ಟೆಯಲ್ಲಿ ಕನಿಷ್ಠ ಐದು ಬಾರಿ ಮರು ಚಲಾವಣೆಯಾಗುತ್ತದೆ. ಈ ಮೂಲಕ ಐದರಷ್ಟು ಆರ್ಥಿಕತೆಯನ್ನು ಸೃಷ್ಠಿಸುತ್ತದೆ. ಪರಿಣಾಮ ಆರ್ಥಿಕತೆಯೂ ವೃದ್ಧಿಸುತ್ತದೆ. ಬೇಡಿಕೆ ಜಾಸ್ತಿಯಾದಾಗ ಉತ್ಪಾದನಾ ವಲಯಕ್ಕೂ ಅನುಕೂಲವಾಗುತ್ತದೆ. ಉತ್ಪಾದನಾ ವಲಯವನ್ನು ಬಲಪಡಿಸಿ ಬೇಡಿಕೆ ಇಲ್ಲದೆ ಹೋದರೆ ಆರ್ಥಿಕ ಅಭಿವೃದ್ಧಿಯೂ ಕುಂಠಿತಗೊಳ್ಳುತ್ತದೆ. ಅಸಲಿಗೆ ಬೇಡಿಕೆ ಇಲ್ಲದೆ ಹೂಡಿಕೆ ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.

“ಸಮಾಜದ ಕೆಳ ಹಂತದಲ್ಲಿರುವವರು, ಬಡವರಿಗೆ ನೀಡುವ ಸಬ್ಸಿಡಿ ಅವರ ಉಳಿತಾಯ ಖಾತೆಯಲ್ಲಿ ಜಮೆಯಾಗುವುದಿಲ್ಲ. ಬದಲಾಗಿ ನಾವು ನೀಡುವ ಪ್ರತಿಯೊಂದು ರೂಪಾಯಿಯೂ ಪುನಃ ಮಾರುಕಟ್ಟೆಗೆ ಹಿಂತಿರುಗುತ್ತದೆ. ಆ ಮೂಲಕ ಆರ್ಥಿಕತೆ ಮತ್ತಷ್ಟು ಬೆಳೆಯುತ್ತದೆ. ಇದು ನೂರಾರು ವರ್ಷಗಳ ಇತಿಹಾಸವಿರುವ ಜಾನ್ ಮೇನಾರ್ಡ್ ಕೇನ್ಸ್ ಪ್ರತಿಪಾದಿಸಿದ ಆರ್ಥಿಕತೆ. ಯಾವ್ಯಾವ ದೇಶಗಳು ಆರ್ಥಿವಾಗಿ ಹಿಂದುಳಿದ್ದವೋ ಆ ಎಲ್ಲಾ ಈ ದೇಶಗಳು ಈ ಸಿದ್ದಾಂತವನ್ನೇ ಅಳವಡಿಸಿಕೊಂಡು ಬೇಡಿಕಾ ವಲಯದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸುವ ಮೂಲಕ ಆರ್ಥಿಕ ಹಿಂಜರಿತದಿಂದ ಪ್ರಗತಿಯ ಪಥದತ್ತ ಹೆಜ್ಜೆ ಇಟ್ಟಿವೆ. ಹೀಗಾಗಿ ಸಬ್ಸಿಡಿ ಎಂಬ ವಿಚಾರವನ್ನು ತುಚ್ಛಗೊಳಿಸುವ, ಅಪರಾಧೀಕರಿಸುವುದನ್ನು ನಿಲ್ಲಿಸಿ” ಎಂದು ಮನವಿ ಮಾಡಿದರು.

ಮುಂದುವರೆದು, “ಕರ್ನಾಟಕ ರಾಜ್ಯ ತಲಾ ಆದಾಯದಲ್ಲಿ ಹಾಗೂ ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರಲು ಸಬ್ಸಿಡಿಗಳೇ ಕಾರಣ. ಕೇಂದ್ರ ಸರ್ಕಾರ ಇತ್ತೀಚೆಗೆ ಜಿಎಸ್ಟಿ ತೆರಿಗೆಯನ್ನು ಸರಳೀಕರಣಗೊಳಿಸಿದಾಗ ಇತರೆ ಎಲ್ಲಾ ರಾಜ್ಯಗಳಿಗೂ ಹೋಲಿಸಿದರೆ ಕರ್ನಾಟಕದಲ್ಲಿ ಜಿಎಸ್ಟಿ ತೆರಿಗೆ ಸಂಗ್ರಹ ಅಷ್ಟೇನೂ ಕೊರತೆಯಾಗಿಲ್ಲ. ಗ್ಯಾರಂಟಿ ಯೋಜನೆಗಳು ಅಷ್ಟರ ಮಟ್ಟಿಗೆ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿವೆ” ಎಂದು ಅಭಿಪ್ರಾಯಪಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments