ಚಿಕ್ಕಮಗಳೂರು ತಾಲ್ಲೂಕು ಆಣೂರು ಗ್ರಾಮ ಪಂಚಾಯತಿ
ನೀರುಗಂಟಿ ರಮೇಶ್ ಹೆಚ್ ಡಿ ಅವರಿಗೆ ವೇತನ ಬಾಕಿ ಇರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೇಳಿದೆ
ಚಿಕ್ಕಮಗಳೂರು ತಾಲ್ಲೂಕು, ಆಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೀರುಗಂಟಿಯಾಗಿ ಕೆಲಸ ನಿರ್ವಹಿಸುತ್ತಿದ್ದ ರಮೇಶ್ ಹೆಚ್.ಡಿ ಅವರು ದಿನಾಂಕ: 15.03.2025ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಿಗೆ ಕಳೆದ 11 ತಿಂಗಳಿನಿಂದ ವೇತನ ಪಾವತಿಯಾಗಿರಲಿಲ್ಲವೆಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಲಾಗಿತ್ತೆಂದು ಪತ್ರಿಕಾ ವರದಿಗಳಲ್ಲಿ ಉಲ್ಲೇಖಿಸಿರುವ ಸಂಗತಿ ಸತ್ಯಕ್ಕೆ ದೂರವಾಗಿರುತ್ತದೆ ಎಂದು ಪಂಚಾಯತ್ ರಾಜ್ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ರಮೇಶ್ ಹೆಚ್.ಡಿ ಅವರಿಗೆ 2026ರ ಫೆಬ್ರವರಿ ತಿಂಗಳವರೆಗೆ ಸಂಪೂರ್ಣ ವೇತನವನ್ನು ಪಾವತಿ ಮಾಡಿದ್ದು, ಈ ಸಂಬಂಧ ಪಂಚತಂತ್ರ ತಂತ್ರಾಂಶದ ದಾಖಲೆಯನ್ನು ಲಗತ್ತಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿ ಚಿಕ್ಕಮಗಳೂರು ಅವರು ದಿನಾಂಕ: 15.03.2026ರಂದು ಪಂಚಾಯತ್ ರಾಜ್ ಆಯುಕ್ತರಿಗೆ ವರದಿಯನ್ನು ಸಲ್ಲಿಸಿರುತ್ತಾರೆ.
ಈ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲೆ, ಆಲ್ದೂರು ಪೋಲೀಸ್ ಠಾಣೆಯಲ್ಲಿ ದಿನಾಂಕ: 15.03.2026ರಂದು ಮೊಕದ್ದಮೆ ಸಂಖ್ಯೆ 0004/2026ರಂತೆ ದಾಖಲಾಗಿರುವ ಎಫ್ ಐ ಆರ್ ನಲ್ಲಿ “ ರಮೇಶ್ ಅವರ ಪತ್ನಿ ಶ್ರೀಮತಿ ಶಿವಮ್ಮ ಹೆಸರಿನಲ್ಲಿ ಧರ್ಮಸ್ಥಳದ ಸ್ವಸಹಾಯ ಸಂಘದಲ್ಲಿ ಗ್ರಾಮೀಣ ಕೂಟದ ಸಂಘದಲ್ಲಿ ಸಾಲ ಮಾಡಿದ್ದರಲ್ಲದೆ, ರಮೇಶ್ ಐ.ಡಿ.ಬಿ.ಐ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದು, ಸಾಲ ತೀರಿಸಲಾಗದೇ ಸಾಲದ ಬಾಧೆಯಿಂದ ರಮೇಶ್ ಬಿನ್ ದೊಡ್ಡಯ್ಯ, (47 ವರ್ಷ) ಇವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ” ಕಾರಣ ನಮೂದಿಸಿರುವುದು ಕಂಡುಬಂದಿರುತ್ತದೆ ಇದರಿಂದ, ಗ್ರಾಮ ಪಂಚಾಯತಿ ನೌಕರ ರಮೇಶ್ ಆತ್ಮಹತ್ಯೆಯು ವೇತನ ಪಾವತಿ ವಿಳಂಬದಿಂದ ಆಗಿರುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಪಂಚಾಯತ್ ರಾಜ್ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.


