ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ, ಕನಿಷ್ಠ 10 ರೋಗಿಗಳು ಸಾವು
ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 10 ಮಂದಿ ರೋಗಿಗಳು ಮೃತಪಟ್ಟಿರುವ ದುರ್ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಈ ಘಟನೆ ಕಟಕ್ ನಗರದಲ್ಲಿರುವ ಆಸ್ಪತ್ರೆಯ ಟ್ರಾಮಾ ಕೇರ್ ಐಸಿಯು ವಿಭಾಗದಲ್ಲಿ ಸಂಭವಿಸಿದೆ. ಸೋಮವಾರ ಮುಂಜಾನೆ ಸುಮಾರು 2.59 ಗಂಟೆ ವೇಳೆಗೆ ಐಸಿಯುವಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಡೆದ ವೇಳೆಗೆ ಐಸಿಯುವಿನಲ್ಲಿ ಸುಮಾರು 15 ಮಂದಿ ರೋಗಿಗಳು ದಾಖಲಾಗಿದ್ದರು.
ಇವರಲ್ಲಿ ಹೆಚ್ಚಿನವರು ವೆಂಟಿಲೇಟರ್ ಹಾಗೂ ಆಕ್ಸಿಜನ್ ಸಹಾಯದೊಂದಿಗೆ ಇದ್ದುದರಿಂದ ಅವರನ್ನು ತಕ್ಷಣವೇ ಸ್ಥಳಾಂತರಿಸುವುದು ಕಷ್ಟವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ನಡುವೆ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಭುವನೇಶ್ವರ-ಕಟಕ್ ಪೊಲೀಸ್ ಆಯುಕ್ತ ಎಸ್ ದೇವ್ ದತ್ತ ಸಿಂಗ್ ಅವರು ಮಾತನಾಡಿ, ಈ ದುರಂತದಲ್ಲಿ 10 ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಸಾವಿಗೀಡಾದವರಲ್ಲಿ ಮಕ್ಕಳು ಯಾರೂ ಇಲ್ಲ ಎಂದು ತಿಳಿಸಿದ್ದಾರೆ.
ಘಟನೆ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಆಸ್ಪತ್ರೆಯಲ್ಲಿದ್ದ ಅಗ್ನಿಶಾಮಕ ಘಟಕದ ಜೊತೆಗೆ ಕಟಕ್ ಅಗ್ನಿಶಾಮಕ ಠಾಣೆಯಿಂದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಸಹಕರಿಸಿದರು. ಕನಿಷ್ಠ ಮೂರು ಅಗ್ನಿಶಾಮಕ ವಾಹನಗಳು ಹಾಗೂ 30ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.


