ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣದ ಮಹತ್ವವನ್ನು ರೈತರಿಗೆ ಪರಿಚಯಿಸುವ ಉದ್ದೇಶದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ ವತಿಯಿಂದ “ಕೃಷಿ ಯಂತ್ರೋಪಕರಣ ಮತ್ತು ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಮೇಳ – 2026” ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ ಇದರ ಗೌರವಾನ್ವಿತ ಕುಲಪತಿಗಳಾದ ಡಾ. ಕೆ. ಸಿ. ನಾರಾಯಣಸ್ವಾಮಿ ಅವರು, ಅಭಿವೃದ್ಧಿ ಹೊಂದಿದ ಪಶ್ಚಿಮ ರಾಷ್ಟ್ರಗಳಲ್ಲಿ ಕೃಷಿಯಲ್ಲಿ ಸುಮಾರು 80 ರಿಂದ 90 ಶೇಕಡಾ ಮಟ್ಟದಲ್ಲಿ ಯಂತ್ರೋಪಕರಣಗಳ ಬಳಕೆ ನಡೆಯುತ್ತಿದೆ ಎಂದು ತಿಳಿಸಿದರು. ನಮ್ಮ ದೇಶದ ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸುಮಾರು 40 ರಿಂದ 50 ಶೇಕಡಾ ಮಟ್ಟದಲ್ಲಿ ಕೃಷಿ ಯಾಂತ್ರೀಕರಣ ಬಳಕೆಯಲ್ಲಿದ್ದು, ಕರ್ನಾಟಕ ರಾಜ್ಯದ ರೈತರು ಸಹ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಉತ್ಪಾದಕತೆ ಮತ್ತು ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ಇಂದಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಯಾಂತ್ರೀಕರಣ ಅತ್ಯಂತ ಅಗತ್ಯವಾಗಿದೆ. ರೈತರು ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇದರೊಂದಿಗೆ ಕೃಷಿ ಯಂತ್ರೋಪಕರಣಗಳ ದುರಸ್ತಿ ವಿಧಾನಗಳು ಹಾಗೂ ಸುರಕ್ಷಿತ ಬಳಕೆ ಕುರಿತು ತರಬೇತಿ ನೀಡುವ ಸರ್ಟಿಫಿಕೇಟ್ ಕೋರ್ಸ್ಗಳನ್ನು ಮುಂದಿನ ವರ್ಷಗಳಲ್ಲಿ ಆರಂಭಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.
ಈ ಮೇಳದಲ್ಲಿ ಸುಮಾರು 50ಕ್ಕೂ ಹೆಚ್ಚು ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಿಸಿದ ಮಳಿಗೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಕಂಪನಿಗಳು ಹಾಗೂ ಸಂಸ್ಥೆಗಳು ತಮ್ಮ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಪ್ರದರ್ಶಿಸಿದ್ದು, ರೈತರಿಗೆ ಅವುಗಳ ಕಾರ್ಯವಿಧಾನ, ಬಳಕೆ ವಿಧಾನ ಹಾಗೂ ಕೃಷಿಯಲ್ಲಿ ದೊರೆಯುವ ಪ್ರಯೋಜನಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆ, ಅವುಗಳ ನಿರ್ವಹಣೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆ ಹೆಚ್ಚಿಸುವಲ್ಲಿ ಅವುಗಳ ಪಾತ್ರದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು, ಅವುಗಳ ಬಳಕೆಯಿಂದ ಸಮಯ ಮತ್ತು ಕಾರ್ಮಿಕ ವೆಚ್ಚವನ್ನು ಹೇಗೆ ಕಡಿಮೆ ಮಾಡಬಹುದು ಹಾಗೂ ಬೆಳೆ ಉತ್ಪಾದನೆಯನ್ನು ಹೇಗೆ ಹೆಚ್ಚಿಸಬಹುದು ಎಂಬ ಕುರಿತು ಸಂಪನ್ಮೂಲ ವ್ಯಕ್ತಿಗಳು ಪ್ರಾಯೋಗಿಕ ಉದಾಹರಣೆಗಳೊಂದಿಗೆ ವಿವರಿಸಿದರು.
ಡಾ. ಸಿ. ರಾಮಚಂದ್ರ, ವಿಸ್ತರಣಾ ನಿರ್ದೇಶಕರು ಇವರು ಮಾತನಾಡುತ್ತಾ ತಮ್ಮ ಭಾಷಣದಲ್ಲಿ ರೈತರಿಗೆ ಕೈಗೆಟಿಕುವ ದರದಲ್ಲಿ ಕೃಷಿ ಯಂತ್ರೋಪಕರಣಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಿ ಹೇಳಿದರು. ಜೊತೆಗೆ ರೈತರಿಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳ ಬಳಕೆ ಕುರಿತು ವಿಶ್ವವಿದ್ಯಾಲಯದಿಂದ ಹೆಚ್ಚಿನ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಎಚ್. ಎಚ್. ಶಿವರಾಮ, ಸಂಶೋಧನಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ಡಾ. ಸಿ. ರಾಮಚಂದ್ರ, ವಿಸ್ತರಣಾ ನಿರ್ದೇಶಕರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ, ಡಾ. ದೇವಗಿರಿ, ಸಂಶೋಧನಾ ನಿರ್ದೇಶಕರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ, ಡಾ. ಎನ್. ಶಿವಕುಮಾರ್, ಶಿಕ್ಷಣ ನಿರ್ದೇಶಕರು, ಡಾ. ದೊರೆಸ್ವಾಮಿ, ವಿಶೇಷಾಧಿಕಾರಿಗಳು, ಕೃಷಿ ಮಹಾವಿದ್ಯಾಲಯ, ಚಾಮರಾಜನಗರ, ಡಾ. ಕರೋಲಿನಿ, ವಿಜ್ಞಾನಿಗಳು, ಡಾ. ಬಸವರಾಜು, ಸಹ ಸಂಶೋಧನಾ ನಿರ್ದೇಶಕರು ಹಾಗೂ ಡಾ. ಶ್ರೀದೇವಿ ಎಂ.ಎಸ್., ಪ್ರಾಯೋಜನ ಮುಖ್ಯಸ್ಥರು (ಯಂತ್ರೋಪಕರಣ ವಿಭಾಗ) ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸುಮಾರು 500 ಕ್ಕೂ ಹೆಚ್ಚು ರೈತರು ಭಾಗವಹಿಸಿ ವಿವಿಧ ಕೃಷಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಜೊತೆಗೆ ವಿಶ್ವವಿದ್ಯಾಲಯದ ಅಧಿಕಾರಿಗಳು, ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


