Homeಕರ್ನಾಟಕಇವತ್ತಿನ‌ ಸಮಾಜಕ್ಕೆ ಕತ್ತರಿಗಳಲ್ಲ, ಸೂಜಿಗಳ ಅಗತ್ಯವಿದೆ: ಕೆ.ವಿ.ಪ್ರಭಾಕರ್ ಅಭಿಮತ

ಇವತ್ತಿನ‌ ಸಮಾಜಕ್ಕೆ ಕತ್ತರಿಗಳಲ್ಲ, ಸೂಜಿಗಳ ಅಗತ್ಯವಿದೆ: ಕೆ.ವಿ.ಪ್ರಭಾಕರ್ ಅಭಿಮತ

ಇಂದು ಸಾಮಾಜಿಕ ಬೆಸುಗೆಯನ್ನು ಕತ್ತರಿಸುವ ಕತ್ತರಿಗಳು ಜನ‌ಸಮುದಾಯದ ಪ್ರಜ್ಞೆಯನ್ನು ರೂಪಿಸುತ್ತಿವೆ. ಇಂತಹ ಹೊತ್ತಲ್ಲಿ ಸಮಾಜವನ್ನು ಪರಸ್ಪರ ಹೊಲಿಯುವ ಸೂಜಿಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ‌ ಇಲಾಖೆ, ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವ ವಿದ್ಯಾನಿಲಯ ಆಯೋಜಿಸಿದ್ದ “ಮಾಧ್ಯಮ ಹಬ್ಬ-2026” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಅರಳುವ ಹೂವಿನ ಒಳಗೆ ಮಕರಂದ ಬೆರೆತಿರುವ ಹಾಗೆ ಅರಳುವ ಪತ್ರಕರ್ತ, ಪತ್ರಕರ್ತೆಯ ಒಳಗೆ ಸಾಮಾಜಿಕ ಪ್ರಜ್ಞೆ ಮತ್ತು ನೈತಿಕ ಪ್ರಜ್ಞೆ ಬೆರೆತಿರಬೇಕು ಎಂದರು.

“ಜನ ಸಮುದಾಯದ ಪ್ರಜ್ಞೆಯನ್ನು ರೂಪಿಸುವುದು ಪತ್ರಕರ್ತರಾದವರ ಹೊಣೆ. ಜನ‌ ಸಮುದಾಯದ, ಸಮಾಜದ ಪ್ರಜ್ಞೆಯನ್ನು ರೂಪಿಸುವ ನಿಮ್ಮ‌ ಪ್ರಜ್ಞೆಯನ್ನು ಯಾರು ರೂಪಿಸುತ್ತಿದ್ದಾರೆ, ಯಾವುದು ರೂಪಿಸುತ್ತಿದೆ ಎನ್ನುವ ಸ್ಪಷ್ಟ ಎಚ್ಚರ ಇರಬೇಕಾಗುತ್ತದೆ.
ಈ ಎಚ್ಚರ ಇದ್ದಾಗ ತಾನು ಬರೆದ ಪ್ರತೀ ವರದಿ, ತಾನು ತೋರಿಸಿದ ಪ್ರತೀ ಸುದ್ದಿ, ಕ್ಯಾಮೆರಾ ಮುಂದೆ ತಾನು ಆಡಿದ ಪ್ರತೀ ಮಾತಿಗೂ ಉತ್ತರದಾಯಿತ್ವ ಹೊಂದಿರುವ ಹೊಣೆಗಾರಿ ಪತ್ರಕರ್ತರು ರೂಪುಗೊಳ್ಳುತ್ತಾರೆ.ಈ ಸಾಮಾಜಿಕ ಎಚ್ಚರ ಬರುವುದು ನಮ್ಮ ನೋಟದಿಂದ. ಸಮಾಜವನ್ನು ನೋಡುವ ಕಣ್ಣುಗಳಿಂದ” ಎಂದರು.

“ಯಾರ ಕಣ್ಣುಗಳಿಂದ ಹಾಗೂ ಯಾವ ಕಣ್ಣುಗಳಿಂದ ನಾವು ನೋಡುತ್ತಿದ್ದೇವೆ ಎನ್ನುವುದರ ಮೇಲೆ ನಮ್ಮ ನೋಟ, ನಮ್ಮ ಗ್ರಹಿಕೆ ರೂಪುಗೊಳ್ಳುತ್ತದೆ. ಹುಟ್ಟಿದ ಮಗು ಮಾತಿಗೆ ಮೊದಲು ನೋಡಿ ಕಲಿಯುತ್ತದೆ. ನೋಟದ ಮೂಲಕವೇ ತನ್ನ ಸುತ್ತಲನ್ನು ಗ್ರಹಿಸುತ್ತದೆ. ಸಮಾಜದ ಬಗ್ಗೆ ಸ್ಪಷ್ಟ ನೋಟ-ಗ್ರಹಿಕೆ ಇದ್ದಾಗ ಪರಿಣಾಮಕಾರಿ ಪತ್ರಕರ್ತ ಹುಟ್ಟುತ್ತಾನೆ. ಪತ್ರಕರ್ತರಾಗುವವರು ಪೂರ್ವಗ್ರಹ ಮುಕ್ತ ಮಗುವಿನ ಮನಸ್ಸಿನಿಂದ ಸಾಮಾಜಿಕ ವ್ಯವಸ್ಥೆಯನ್ನು, ಸಾಮಾಜಿಕ ತಾರತಮ್ಯಗಳನ್ನು “ಇರುವುದನ್ನು ಇರುವ ಹಾಗೆ ಗಮನಿಸಬೇಕು”. ಹೀಗಾದಾಗ ಮಾತ್ರ ಸಾಮಾಜಿಕ ಸಮಸ್ಯೆಗಳು ಮತ್ತು ಈ ಸಮಸ್ಯೆಗಳಿಗೆ ಕಾರಣವಾದ ಸಂಗತಿಗಳ ಬಗ್ಗೆ ಸ್ಪಷ್ಟ ಗ್ರಹಿಕೆ ಬರುತ್ತದೆ. ಈ ಸ್ಪಷ್ಟತೆಯೇ ಪರಿಣಾಮಕಾರಿ ಪತ್ರಕರ್ತನನ್ನು ರೂಪಿಸುತ್ತದೆ” ಎಂದು ವಿವರಿಸಿದರು.

ವೇದಿಕೆ ಮೇಲಿರುವ ದಿನೇಶ್‌ ಅಮೀನ್ ಮಟ್ಟು ಅವರು ಸೇರಿದಂತೆ ವಡ್ಡರ್ಸೆ ರಘುರಾಮ್ ಶೆಟ್ಟರು, ಪಿ.ಲಂಕೇಶ್, ಖಾದ್ರಿ ಶಾಮಣ್ಣ, ವೈಎನ್ ಕೆ, ಮೊಹರೆ ಹನುಮಂತರಾಯರು, ಡಿವಿಜಿ, ಟಿಎಸ್ ಆರ್ ರೀತಿಯ ಹಲವು ಹಿರಿಯರು ಸೂಜಿಗಳಾಗಿ, ದರ್ಜಿಗಳಾಗಿ, ನೇಕಾರರಾಗಿ ಪತ್ರಿಕಾ ವೃತ್ತಿಯ ಪ್ರಜ್ಞೆಯನ್ನು ರೂಪಿಸುವುದರ ಜೊತೆಗೆ ಸಾಮಾಜಿಕ‌ ಪ್ರಜ್ಞೆಯನ್ನೂ ರೂಪಿಸಿದ್ದಾರೆ. ಸಮಾಜವನ್ನು ಬೆಸೆಯುವ ಬೆಸುಗೆಗಳಾಗಿದ್ದಾರೆ ಎಂದು ಎಲ್ಲರಿಗೂ ಧನ್ಯತೆ ಅರ್ಪಿಸಿದರು.

ಹಿರಿಯ ಸಮಾಜವಾದಿ ಚಿಂತಕರೂ, ಪತ್ರಕರ್ತರೂ ಆದ ದಿನೇಶ್ ಅಮೀನ್ ಮಟ್ಟು ಅವರು ಮಾತನಾಡಿ, ” ಬರೆಯುವುದಕ್ಕಿಂತ ಹೆಚ್ಚಾಗಿ ಓದಬೇಕು. ಪತ್ರಕರ್ತರಾಗುವವರಿಗೆ ಓದಿನ‌ ಹಸಿವು ಮತ್ತು ಸಾಮಾಜಿಕ ಜವಾಬ್ದಾರಿ ಇರಬೇಕು. ಸಾಮಾಜಿಕ ಜವಾಬ್ದಾರಿ ಇಲ್ಲದ ಯಾವುದೇ ವೃತ್ತಿ ಸಾಮಾಜಿಕ ಪಾಪ. ಪಾತಕ, ಮೂಡನಂಬಿಕೆಗಳನ್ನು ವಿಜ್ರಂಭಿಸುವವರು ಒಳ್ಳೆ ಪತ್ರಕರ್ತ ಇರಲಿ, ಒಬ್ಬ ಜವಾಬ್ದಾರಿಯುತ ನಾಗರಿಕ ಕೂಡ ಆಗಿರಲು ಸಾಧ್ಯವಿಲ್ಲ. ಅಜ್ಞಾನ, ಅಸೂಕ್ಷ್ಮ ಆಗಿರುವವರು ಪತ್ರಕರ್ತ ಎನ್ನಿಸಲು ಸಾಧ್ಯವೇ ಇಲ್ಲ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಮಾಧ್ಯಮ‌ ಅಕಾಡೆಮಿ‌ ಅಧ್ಯಕ್ಷೆ ಆಯೆಷಾ ಖಾನುಂ, ಕುಲಪತಿ ಪ್ರೊ.ರಮೇಶ್ ಬಿ, ಕುಲಸಚಿವ ನೀವೀನ್ ಜೋಸೆಫ್, ವಾರ್ತಾ ಇಲಾಖೆ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments