Homeಕರ್ನಾಟಕತಂಬಾಕು ಬೆಲೆ ಕುಸಿತ; ಅಧಿಕ ಬೆಲೆಗೆ ಖರೀದಿಸಲು ವರ್ತಕರ ಒಪ್ಪಿಗೆ: ಹೆಚ್ ಡಿ ಕುಮಾರಸ್ವಾಮಿ

ತಂಬಾಕು ಬೆಲೆ ಕುಸಿತ; ಅಧಿಕ ಬೆಲೆಗೆ ಖರೀದಿಸಲು ವರ್ತಕರ ಒಪ್ಪಿಗೆ: ಹೆಚ್ ಡಿ ಕುಮಾರಸ್ವಾಮಿ

  • ಅಧಿಕಾರಿಗಳು, ವರ್ತಕರು, ತಂಬಾಕು ಮಂಡಳಿ ಅಧಿಕಾರಿಗಳ ಜತೆ ಕುಮಾರಸ್ವಾಮಿ ಮಾತುಕತೆ
  • ಸುಂಕ ಸಮಸ್ಯೆ ಇದ್ದರೆ ಸರಿಪಡಿಸುತ್ತೇವೆ, ವಿತ್ತ ಸಚಿವರ ಜತೆ ಚರ್ಚಿಸಲಾಗುವುದು

ರಾಜ್ಯದಲ್ಲಿ ತಂಬಾಕು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಿದೆ ಎಂದು ಹೇಳಿದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಈಗಾಗಲೇ ಕೊಟ್ಟ ಮಾತಿನಂತೆ ರೈತರಿನಿಂದ ತಂಬಾಕು ಖರೀದಿ ಮಾಡಬೇಕು ಎಂದು ವರ್ತಕರಿಗೆ ತಾಕೀತು ಮಾಡಿದರು.

ಮೈಸೂರಿನಲ್ಲಿ ಸೋಮವಾರ ರಾಜ್ಯದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಎಫ್ ಸಿವಿ (FCV) ತಂಬಾಕು ಹರಾಜಿಗೆ ಸಂಬಂಧಿಸಿದಂತೆ ಇರುವ ಬಿಕ್ಕಟ್ಟಿನ ಬಗ್ಗೆ ತಂಬಾಕು ಬೆಳೆಯುವ ಪ್ರದೇಶಗಳ ಜನಪ್ರತಿನಿಧಿಗಳು, ಬೆಳೆಗಾರರು, ಖರೀದಿದಾರರು ಹಾಗೂ ತಂಬಾಕು ಮಂಡಳಿ ಉನ್ನತ ಅಧಿಕಾರಿಗಳ ಜತೆ ಸಚಿವರು ಮಹತ್ವದ ಸಭೆ ನಡೆಸಿದರು.

ರೈತರನ್ನು ಕಾಪಾಡಿಕೊಳ್ಳಬೇಕಿದೆ. ಅವರಿಗೆ ನೀವು ಮಾತು ಕೊಟ್ಟಂತೆಯೇ ನಡೆದುಕೊಳ್ಳಿ. ನೆರೆ ರಾಜ್ಯ ಆಂಧ್ರ ಪ್ರದೇಶದಂತೆಯೇ ಇಲ್ಲಿಯೂ ಉತ್ತಮ ದರವನ್ನು ಕೊಟ್ಟು ತಂಬಾಕು ಖರೀದಿ ಮಾಡಿ. ಸುಂಕ ಸೇರಿದಂತೆ ನಿಮಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಅದಕ್ಕೂ ಮೊದಲು ನಿಗದಿಯಂತೆ ತಂಬಾಕು ಖರೀದಿ ಮಾಡಿ ಎಂದು ಕೇಂದ್ರ ಸಚಿವರು ಹೇಳಿದರು.

ಕೇಂದ್ರ ಸರ್ಕಾರ ಸಿಗರೇಟಿನ ಸುಂಕ ಹಾಕಿದೆ ಎಂದು ಹೇಳುತ್ತೀರಿ. ಆದರೆ, ನೀವು ಸುಂಕ ಏರಿಕೆಯ ಭಾರವನ್ನು ಸಿಗರೇಟ್ ಸೇದುವ ಗ್ರಾಹಕನ ಮೇಲೆ ವಿಧಿಸುತ್ತೀರಿ. ಆದರೆ, ಇದಕ್ಕೆ ಸಂಬಂಧವೇ ಇಲ್ಲದ ಬೆಳೆಗಾರನ ಮೇಲೆ ಬರೆ ಏಕೆ ಎಳೆಯುತ್ತೀರಿ ಎಂದು ಕೇಂದ್ರ ಸಚಿವರು ವರ್ತಕರನ್ನು ಕಟುವಾಗಿ ಪ್ರಶ್ನಿಸಿದರು.

ನಿಮ್ಮ ಸಮಸ್ಯೆಗಳನ್ನು ಕೇಳಲು ನಾವು ಸಿದ್ಧರಿದ್ದೇವೆ. ನಾನು, ಮೈಸೂರು ಕೊಡಗು ಕ್ಷೇತ್ರದ ಲೋಕಸಭೆ ಸದಸ್ಯರಾದ ಯದುವೀರ್ ಅವರು ಸತತವಾಗಿ ಸಂಬಂಧಪಟ್ಟ ಎಲ್ಲರ ಜತೆ ಮಾತುಕತೆ ನಡೆಸಿದ್ದೇವೆ. ಸುಂಕ ಏರಿಕೆ ಬಗ್ಗೆ ನಾವು ಕೇಂದ್ರದ ವಿತ್ತ ಸಚಿವರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ. ಆದರೆ, ರೈತರಿಗೆ ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಸಚಿವ ಕುಮಾರಸ್ವಾಮಿ ಅವರು ವರ್ತಕರಿಗೆ ಹೇಳಿದರು.

ಹರಾಜು ಪ್ರಕ್ರಿಯೆಯಲ್ಲಿ ಯಾವ ಯಾವ ಖರೀದಿದಾರರು ಭಾಗಿಯಾಗುತ್ತಿದ್ದಾರೆ ಎಂದು ತಂಬಾಕು ಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು; ವಿದೇಶೀ ಕಂಪನಿಗಳು ಹರಾಜಿನಲ್ಲಿ ಭಾಗಿಯಾಗಲು ಏನಾದರೂ ನಿರ್ಬಂಧಗಳು ಇವೆಯೇ ಎಂದು ಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಅದಕ್ಕೆ ಅಧಿಕಾರಿಗಳು, ಯಾವುದೇ ನಿರ್ಬಂಧ ಇಲ್ಲ ಎಂಬ ಅಂಶವನ್ನು ಕೇಂದ್ರ ಸಚಿವರ ಗಮನಕ್ಕೆ ತಂದರು.

ಏಕಪಕ್ಷೀಯವಾಗಿ ಹರಾಜು ನಿಲ್ಲಿಸಲು ಸಾಧ್ಯವಿಲ್ಲ. ಅಂತಹ ಕ್ರಮಕ್ಕೆ ನೀವು ಮುಂದಾಗಬಾರದು. ತಂಬಾಕು ಮಂಡಳಿ ಮತ್ತು ಖರೀದಿದಾರರ ಬಗ್ಗೆ ಕರ್ನಾಟಕದ ರೈತರು ತಪ್ಪು ತಿಳಿದುಕೊಳ್ಳುವುದು ಬೇಡ. ಒಂದು ವೇಳೆ ಅಂತಹ ಅಭಿಪ್ರಾಯ ಬಂದರೆ ರೈತರು ಪರ್ಯಾಯ ಬೆಳೆ ತೆಗೆಯಲು ಮುಂದಾದರೆ ಆಗ ಏನು ಮಾಡುತ್ತೀರಿ? ಯಾವುದೇ ಕಾರಣಕ್ಕೂ ಬೆಳೆಗಾರರ ಹಿತಕ್ಕೆ ಧಕ್ಕೆ ಉಂಟು ಮಾಡಬೇಡಿ. ನಿಮ್ಮದೇನಾದರೂ ಬೇಡಿಕೆ ಇದ್ದರೆ ನವದೆಹಲಿಗೆ ಬನ್ನಿ. ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ಸಚಿವರು ವರ್ತಕರಿಗೆ ಭರವಸೆ ನೀಡಿದರು.

ರಾಜ್ಯದ ಪಶುಸಂಗೋಪನಾ ಖಾತೆ ಸಚಿವರಾದ ಕೆ. ವೆಂಕಟೇಶ್ ಅವರು, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್ ಅವರು, ಶಾಸಕರಾದ ಎ. ಮಂಜು, ಸಿ.ಎನ್. ಮಂಜೇಗೌಡ, ಜಿ.ಡಿ. ಹರೀಶ್ ಗೌಡ, ವಿವೇಕಾನಂದ ಅವರು ಸೇರಿ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಕಳೆದ ಸಂಕ್ರಾಂತಿ ಹಬ್ಬದ ನಂತರ ತಂಬಾಕು ಬೆಲೆಯಲ್ಲಿ ಕುಸಿತ ಉಂಟಾಗಿ ಬೆಳೆಗಾರರು ಕಂಗಾಲಾಗಿದ್ದರು. ಹೀಗಾಗಿ ಬೆಲೆ ಏರಿಳಿತ ಸರಿಪಡಿಸಿ ಸರಿಯಾದ ಬೆಲೆ ನೀಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಂಬಾಕು ಮಂಡಳಿ ಅಧಿಕಾರಿಗಳು ಹಾಗೂ ವರ್ತಕರಿಗೆ ಸೂಚನೆ ನೀಡಿದ್ದೇನೆ ಎಂದರು.

ಕಳೆದ ವರ್ಷ ನೀಡಿದ್ದ ಬೆಲೆಗಿಂತ ಅಧಿಕ ಬೆಲೆ ನೀಡುವ ಬಗ್ಗೆ ನೀವೆಲ್ಲರೂ ಕೂತು ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಬೇಕು ಎಂದು ಹೇಳಿದ್ದೇನೆ. ಅದಕ್ಕೆ ಅಧಿಕಾರಿಗಳು, ವರ್ತಕರು ಒಪ್ಪಿಗೆ ನೀಡಿದ್ದಾರೆ. ಹರಾಜು ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಬೆಲೆ ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿ ಅಷ್ಟೇ ಚರ್ಚೆ ನಡೆಸಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments