ಸರ್ಕಾರಿ ನೇಮಕಾತಿಗಾಗಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ತಾಕಿದ್ದು, ಮೊದಲ ಹಂತದಲ್ಲಿ 56,432 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಗುರುವಾರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಧಾರವಾಡ ಪ್ರತಿಭಟನೆ ಬಗ್ಗೆ ಸಾಕಷ್ಟು ಚರ್ಚೆಯಾಗಿ ಈ ನಿರ್ಧಾರಕ್ಕೆ ಬರಲಾಗಿದೆ.
ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಶಕ್ತಿ ನಡೆಸಿದ ಉಗ್ರ ಹೋರಾಟಕ್ಕೆ ಕೊನೆಗೂ ಒಂದು ಹಂತದ ಜಯ ಸಿಕ್ಕಿದೆ. ಮೊದಲ ಹಂತದಲ್ಲಿ 56,432 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲು ಕ್ಯಾಬಿನೆಟ್ (Cabinet) ತೀರ್ಮಾನಿಸಿದೆ. ಅಲ್ಲದೆ, ಸರ್ಕಾರಿ ಹೊಸ ನೇಮಕಾತಿಗಳಲ್ಲಿ ಸದ್ಯಕ್ಕೆ ಒಳಮೀಸಲಾತಿ ಜಾರಿ ಅಸಾಧ್ಯ ಎಂದು ಕ್ಯಾಬಿನೆಟ್ ತೀರ್ಮಾನಿಸಿದೆ. ಹಳೇ ಮೀಸಲಾತಿಯಲ್ಲೇ ನೇಮಕಾತಿಗೆ ತೀರ್ಮಾನಿಸಿದೆ.
ಸಚಿವ ಸಂಪುಟ ಬಳಿಕ ಕಾನೂನು ಸಚಿವ ಎಚ್ಕೆ ಪಾಟೀಲ್ ಮಾತನಾಡಿ, “ನೇಮಕಾತಿ ಪ್ರಕ್ರಿಯೆ ತಕ್ಷಣ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಯಾಗಲಿದೆ. ಪರಿಶಿಷ್ಟ ಜಾತಿ ಒಳಮೀಸಲಾತಿಯ ವಿಚಾರ ಹೈಕೋರ್ಟ್ನಲ್ಲಿದೆ. ಹೆಚ್ಚುವರಿ ಮೀಸಲಾತಿ ವಿಚಾರವಾಗಿ ಹೈಕೋರ್ಟ್ ತಡೆ ನೀಡಿರುತ್ತದೆ. ಹೀಗಾಗಿ ಮೀಸಲಾತಿ 50% ಮೀರದಂತೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗುತ್ತೆ. ಸದ್ಯ ಎಸ್ಸಿ 15% ಮೀಸಲಾತಿ ಅನ್ವಯವೇ ನೇಮಕಾತಿ ನಡೆಯಲಿದೆ” ಎಂದು ಮಾಹಿತಿ ನೀಡಿದರು.


