ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲರೋಜಾ ಗ್ರಾಮದ ಸ್ವಯಂ ಘೋಷಿತ ದೇವ ಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಇದೀಗ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದೆ.
ಬುಧವಾರ (ಫೆಬ್ರವರಿ 25) ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸುಂಬೆ ದಾಖಲಿಸಿಕೊಂಡ ದೂರಿನ ಅನ್ವಯ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಪತ್ರ ಸುದ್ದಿಯಾಗಿತ್ತು. ಇದೀಗ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಸಿಡಿಪಿಒ ಅವರ ದೂರಿನ ಮೇರೆಗೆ ಮುತ್ಯಾನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
ಮಲ್ಲಿಕಾರ್ಜುನ ಮುತ್ಯಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ʼʼಅಪ್ಪಾಜಿ ಮಗಳು ಎಂಬ ಭಾವನೆಯಲ್ಲಿ ಆ ಬಾಲಕಿಯೊಡನೆ ಪ್ರೀತಿಯಿಂದ ನಡೆದುಕೊಂಡಿದ್ದೇನೆ. ಯಾವುದೇ ಕೆಟ್ಟ ಉದ್ದೇಶ ಖಂಡಿತವಾಗಿ ಇಲ್ಲ. ಕಾನೂನು ಹೋರಾಟದಲ್ಲಿ ನನಗೆ ಖಂಡಿತ ಜಯ ದೊರೆಯಲಿದೆ. ಇದು ನನ್ನದೇ ಗೆಲುವು, ನಾನೇ ಗೆಲ್ಲುವೆ, ಭಕ್ತರು ಯಾರೂ ಆತಂಕಕ್ಕೆ ಒಳಗಾಗಬೇಡಿ. ನಾನು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದೇನೆʼʼ ಎಂದು ಹೇಳಿದ್ದಾನೆ.
ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ ತಾಲೂಕಿನ ಗೋಗಿ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಮಹಲ್ ರೋಜಾದಲ್ಲಿರುವ ಆತನ ಮಠದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸಮ್ಮುಖದಲ್ಲಿ ಮುತ್ಯಾ ಎಲ್ಲ ಕೋಣೆಗಳನ್ನು ಪರಿಶೀಲಿಸಲಾಗಿದೆ. ಪ್ರಕರಣದ ತನಿಖೆಗೆ ಶಹಾಪುರ ಸಿಪಿಐ ಶರಣಗೌಡ ನ್ಯಾಮಣ್ಣ ಅವರನ್ನು ನೇಮಕ ಮಾಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಮಲ್ಲಿಕಾರ್ಜುನ ಮುತ್ಯಾಗೆ ನೊಟೀಸ್ ನೀಡುವ ಸಾಧ್ಯತೆ ಇದೆ.
ಕಳೆದ ನಾಲ್ಕು ವರ್ಷಗಳಿಂದ ಸಾಮಾಜಿಕ ಜಾಲತಾಣದ ಮೂಲಕ ಮುನ್ನೆಲೆಗೆ ಬಂದ 26ರಿಂದ 27 ವರ್ಷದ ಮಲ್ಲಿಕಾರ್ಜುನ ಸ್ವಯಂ ಘೋಷಿತ ದೇವಮಾನವನಾಗಿ ಸದ್ದು ಮಾಡಿದ್ದಾನೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲರೋಜಾ ಗ್ರಾಮದವನಾದ ಮಲ್ಲಿಕಾರ್ಜುನ ಮುತ್ಯಾ ಹೇಳಿದ್ದೇ ಇವರ ಭಕ್ತರಿಗೆ ವೇದವಾಕ್ಯ.


