Homeಅಭಿಮನ್ಯುಖುಷಿಯಲ್ಲಿರುವ ಡಿಕೆಶಿ, ಸಿಎಂ ಬಣದ ಶಾಸಕರಿಗೆ ಫಾರಿನ್‌ ಟೂರ್ ಭಾಗ್ಯ! ಏನಿದು ಅಸಲಿ ಆಟ?

ಖುಷಿಯಲ್ಲಿರುವ ಡಿಕೆಶಿ, ಸಿಎಂ ಬಣದ ಶಾಸಕರಿಗೆ ಫಾರಿನ್‌ ಟೂರ್ ಭಾಗ್ಯ! ಏನಿದು ಅಸಲಿ ಆಟ?

ಕಾಂಗ್ರೆಸ್‌ನಲ್ಲಿ ಸಾಕಷ್ಟು ಕುತೂಹಲಕರ ಬೆಳವಣಿಗೆಗಳು ನಡಿಯುತ್ತಿವೆ. ಸಿಎಂ ಕನಸನ್ನು ನನಸಾಗಿಸಿಕೊಳ್ಳಲು ದೆಹಲಿಯಲ್ಲಿ ಬೀಡು ಬಿಟ್ಟ ಡಿ ಕೆ ಶಿವಕುಮಾರ್, ಕೊನೆಗೂ ತಮ್ಮ ವರಿಷ್ಠರನ್ನು ಭೇಟಿಯಾಗಿ ಬೆಂಗಳೂರಿಗೆ ಮರಳಿದ್ದಾರೆ. ಅದು ನಗುಮೊಗ ಹೊತ್ತು. ಹಾಗಾದ್ರೆ ಡಿ ಕೆ ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನದ ಅಭಯ ಸಿಕ್ಕಿದೆಯಾ?

 

ದೆಹಲಿ ವರಿಷ್ಠರನ್ನು ಭೇಟಿ ಮಾಡಿಕೊಂಡು ಬಂದಿರುವ ಡಿಸಿಎಂ ಡಿ ಕೆ ಶಿವಕುಮಾರ್ ಈಗ ಫುಲ್‌ ಖುಷಿ ಖುಷಿಯಾಗಿದ್ದಾರೆ. ಹಾಗಿದ್ದರೆ ಡಿಕೆಶಿಗೆ ಸಿಎಂ ಸ್ಥಾನ ಒಲಿಯುತ್ತಾ? ಈ ಮಧ್ಯೆ ಸಿದ್ದರಾಮಯ್ಯ ಬಣದ ಶಾಸಕರಿಗೆ ಫಾರಿನ್‌ ಟೂರ್ ಭಾಗ್ಯ ಸಿಕ್ಕಿದ್ದು, ಸಿಎಂ ಕುರ್ಚಿ ಕದನ ವಿದೇಶಕ್ಕೂ ಶಿಪ್ಟ್‌ ಆಗುತ್ತಾ?

ಸದ್ಯಕ್ಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಸಾಕಷ್ಟು ಕುತೂಹಲಕರ ಬೆಳವಣಿಗೆಗಳು ನಡಿಯುತ್ತಿವೆ. ಸಿಎಂ ಕನಸನ್ನು ನನಸಾಗಿಸಿಕೊಳ್ಳಲು ದೆಹಲಿಯಲ್ಲಿ ಬೀಡು ಬಿಟ್ಟ ಡಿ ಕೆ ಶಿವಕುಮಾರ್, ಕೊನೆಗೂ ತಮ್ಮ ವರಿಷ್ಠರನ್ನು ಭೇಟಿಯಾಗಿ ಬೆಂಗಳೂರಿಗೆ ಮರಳಿದ್ದಾರೆ. ಅದು ನಗುಮೊಗ ಹೊತ್ತು. ಹಾಗಿದ್ದರೆ ಡಿ ಕೆ ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನದ ಅಭಯ ಸಿಕ್ಕಿದೆಯಾ?

ಕಾಂಗ್ರೆಸ್‌ ಹೈಕಮಾಂಡ್‌ ತಲೆಯಲ್ಲಿ ಸದ್ಯಕ್ಕೆ ಓಡ್ತಾಯಿರೋದೇನು? ಯತೀಂದ್ರ ಸಿದ್ದರಾಮಯ್ಯ ಯಾಕೆ ಪದೇ ಪದೆ ಸಿಎಂ ಕುರ್ಚಿ ಬಗ್ಗೆ ಮಾತಾಡ್ತಿದ್ದಾರೆ? ಕಾಂಗ್ರೆಸ್ ಒಳಗೆ ಉಂಟಾಗಿರುವ ನಾಯಕತ್ವ ಬದಲಾವಣೆಯ ಬಿಕಟ್ಟು ಹೀಗೆ ಮುಂದುವರಿದರೆ ‌ಪಕ್ಷದಲ್ಲಿ ಮುಂದೇನಾಗುತ್ತೆ?

ಈಗಾಗಲೇ 16 ಬಜೆಟ್‌ ಮಂಡಿಸಿ ದಾಖಲೆ ನಿರ್ಮಿಸಿರುವ ಸಿದ್ದರಾಮಯ್ಯ ಅವರು ಮಾರ್ಚ್‌ನಲ್ಲಿ 17ನೇ ಬಜೆಟ್‌ ಮಂಡಿಸುವ ತಯಾರಿಲ್ಲಿದ್ದಾರೆ. ಈ ಸಂಬಂಧ ಇಲಾಖೆವಾರು ಪೂರ್ವಭಾವಿ ಸರಣಿ ಸಭೆಗಳನ್ನೂ ಸಿಎಂ ಮಾಡುತ್ತಿದ್ದಾರೆ. ಇತ್ತ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮತ್ತು ಅವರ ಸಹೋದರ ಡಿ ಕೆ ಸುರೇಶ್‌ ದೆಹಲಿಗೆ ದೌಡಾಯಿಸಿ ಸಿಎಂ ಕುರ್ಚಿ ಕನಸನ್ನು ಸಕಾರಗೊಳಿಸಿಕೊಳ್ಳಲು ಅವಿರತ ಪ್ರಯತ್ನ ನಡೆಸಿ ಬಂದಿದ್ದಾರೆ.

ಹೈಕಮಾಂಡ್‌ ಪ್ರವೇಶ

ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಬಹಳಷ್ಟು ಕಾಡುತ್ತಿರುವ ನಾಯಕತ್ವ ಗೊಂದಲ ವಿಚಾರ ಈಗ ಹಿಂದಿಗಿಂತಲೂ ಹೆಚ್ಚು ರಭಸವಾಗಿ ಹೈಕಮಾಂಡ್‌ ಅಂಗಳಕ್ಕೆ ಕಾಲಿಟ್ಟಂತಾಗಿದೆ. ಇಷ್ಟು ದಿನ ಮೌನವಾಗಿದ್ದ ಹೈಕಮಾಂಡ್‌ ಈಗ ನಾಯಕತ್ವ ಗೊಂದಲಕ್ಕೆ ತೆರೆ ಎಳೆಯುವ ನಿರೀಕ್ಷೆ ಮೂಡಿದೆ. ಈ ನಡುವೆ ಆಡಳಿತ ಪಕ್ಷ ಕಾಂಗ್ರೆಸ್‌ನ ಶಾಸಕರು ಎರಡು ತಂಡಗಳಲ್ಲಿ ಫಾರಿನ್‌ ಟೂರ್‌ ಹೊರಟಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಸಿಎಂ ಬಣದಲ್ಲಿ ಗುರುತಿಸಿಕೊಂಡಿರುವ 22 ಶಾಸಕರು ಮತ್ತು 6 ವಿಧಾನ ಪರಿಷತ್‌ ಸದಸ್ಯರ ಮೊದಲ ತಂಡ ಅಧ್ಯಯನ ಹೆಸರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನತ್ತ ಹೊರಟಿದೆ. ಫೆಬ್ರವರಿ 16ರಿಂದ ಮಾರ್ಚ್‌ 3ರ ತನಕ ಈ ತಂಡ ಪ್ರವಾಸದಲ್ಲಿರಲಿದೆ. ಜೊತೆಗೆ ಮತ್ತೊಂದು ತಂಡದ ಪ್ರವಾಸ ಯೋಜನೆ ಕೂಡ ಸಿದ್ಧವಾಗುತ್ತಿದೆ. ಆ ಬಗ್ಗೆ ಖಚಿತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಪ್ರವಾಸದ ಮಾಹಿತಿ ರಾಹುಲ್‌ ಗಾಂಧಿ ಅವರಿಗೂ ತಲುಪಿದ್ದು, ಇದಕ್ಕೆ ಬ್ರೇಕ್‌ ಹಾಕುವ ತೆರೆ ಮರೆಯ ಪ್ರಯತ್ನಗಳು ಸಹ ನಡೆಯುತ್ತಿವೆ.

ಇನ್ನೊಂದೆಡೆ ಡಿ ಕೆ ಶಿವಕುಮಾರ್‌ ಬಣದ ಶಾಸಕರ ತಂಡ ಈಗಲ್‌ಟನ್‌ ರೆಸಾರ್ಟ್‌ನತ್ತ ವಾಸ್ತವ್ಯ ಹೂಡಲಿದ್ದಾರೆ ಎನ್ನುವ ಮಾಹಿತಿ ಸಹ ಹರಿದಾಡುತ್ತಿದೆ. ಇದನ್ನೆಲ್ಲ ನೋಡಿದರೆ ಸಿಎಂ ಮತ್ತು ಡಿಸಿಎಂ ಬಣದ ಈ ಬೆಳವಣಿಗೆ ನಾಯಕತ್ವ ಬದಲಾವಣೆಯ ದಿಕ್ಕನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವುದಂತು ಗ್ಯಾರಂಟಿ.

cm-dcm

ರಾಹುಲ್‌ ಗಾಂಧಿ ಡಿಕೆಶಿಗೆ ಅಭಯ?

ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷ ಪೂರೈಸಿದಾಗಿನಿಂದ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ‌ ಅವರ ಭೇಟಿಗೆ ಸತತ ಪ್ರಯತ್ನಪಟ್ಟು ವಿಫಲರಾಗಿದ್ದರು. ಈ ಬಾರಿಯ ದೆಹಲಿ ಭೇಟಿಯಲ್ಲಿ ಸೋನಿಯಾ ಗಾಂಧಿ ನಿವಾಸದಲ್ಲಿ ಡಿಕೆಶಿ ಅವರು ಪ್ರಿಯಾಂಕಾ ಗಾಂಧಿ, ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಹೇಳಬೇಕಾದ ಸಂಗತಿಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರು ಡಿಕೆಶಿಗೆ ಅಭಯ ನೀಡಿದ್ದಾರೆ ಎನ್ನಲಾಗ್ತಿದೆ? ಆ ಅಭಯ ಸಿಎಂ ಸ್ಥಾನ ಕೊಡುವುದೇ ಆಗಿದೆಯಾ? ಸದ್ಯಕ್ಕೆ ಖಚಿತವಿಲ್ಲ.

ವರಿಷ್ಠರ ಭೇಟಿ ಬಳಿಕ ಮಾತನಾಡಿದ ಡಿ ಕೆ ಶಿವಕುಮಾರ್‌, “ಸೋನಿಯಾ ನಿವಾಸದ ಒಳಗೆ ಏನು ಮಾತನಾಡಿದೆ ಎಂಬುದನ್ನು ಯಾರ ಬಳಿ ಹೇಳುವ ಅಗತ್ಯವಿಲ್ಲ. ಬೀದಿಯಲ್ಲಿ ನಿಂತು ಎಲ್ಲ ಮಾತನಾಡುವ ವ್ಯಕ್ತಿ ನಾನಲ್ಲ. ಇಲ್ಲಿಗೆ ಬಂದ ಮೇಲೆ ಏನು ಮಾತನಾಡಬೇಕೋ ಎಲ್ಲ ಮಾತನಾಡಿರುವೆ. ದೆಹಲಿಗೆ ಬಂದಿದ್ದೇ ರಾಜಕೀಯ ಮಾಡಲು. ಎಲ್ಲ ವಿಚಾರ ಮಾತನಾಡದೆ ಸುಮ್ನೇ ಹೋಗ್ತೀನಾ? ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ. ತಾಳ್ಮೆ ಸಾಕಷ್ಟು ಫಲ ಕೊಡಲಿದೆ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

“ಬೀದಿಯಲ್ಲಿ ನಿಂತು ಎಲ್ಲ ಮಾತನಾಡುವ ಅಗತ್ಯವಿಲ್ಲ” ಅಂತ ಡಿಕೆಶಿ ಹೇಳಿದ್ದಾದರೂ ಯಾಕೆ? ಅದು ಯತೀಂದ್ರ ಸಿದ್ದರಾಮಯ್ಯ ಅವರಿಗೆ ಡಿಕೆಶಿ ಪರೋಕ್ಷವಾಗಿ ಕೊಟ್ಟಿರುವ ತಿರುಗೇಟಾ?

ಹಿಂದೆ ಸಿಎಂ ಬದಲಾವಣೆ ಸುತ್ತ ಕೆ ಎನ್‌ ರಾಜಣ್ಣ, ಸತೀಶ್‌ ಜಾರಕಿಹೊಳಿ, ಜಮೀರ್‌ ಅಹಮದ್‌ ಸೇರಿದಂತೆ ಕೆಲವರು ಬಹಿರಂಗವಾಗಿ ಮಾತನಾಡುತ್ತಿದ್ದರು. ಕೆ ಎನ್‌ ರಾಜಣ್ಣ ಯಾವಾಗ ಸಂಪುಟದಿಂದ ಹೊರ ಬಿದ್ದರೋ ನಂತರ ಉಳಿದವರು ಸೈಲೆಂಟ್‌ ಆದರು.

ಯತೀಂದ್ರ ವಿರುದ್ಧ ಲೇವಡಿ

ಈಗ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಹೆಚ್ಚು ಮಾಧ್ಯಮಗಳ ಮುಂದೆ ಮಾತನಾಡುತ್ತಿರುವುದು ಯತೀಂದ್ರ ಸಿದ್ದರಾಮಯ್ಯ ಮಾತ್ರ. ಅದರಲ್ಲೂ ಅವರ ಮಾತಿನ ದಾಟಿ ಗಮನಿಸಿದರೆ ನಾಯಕತ್ವ ಬದಲಾವಣೆ ಇಲ್ಲ ಎನ್ನುವುದೇ ಆಗಿದೆ. ಇದು ಸಹಜವಾಗಿ ಡಿ ಕೆ ಶಿವಕುಮಾರ್‌ ಸಹೋದರರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಯತೀಂದ್ರ ಅವರ ಬಗ್ಗೆ ಬಂದ ಆಕ್ರೋಶವನ್ನು ಹತ್ತಿಕ್ಕಿಕೊಂಡೇ “ಯತೀಂದ್ರ ಅವರೇ ನಮ್ಮ ಹೈಕಮಾಂಡ್‌. ಅವರು ಹೇಳಿದ ಮೇಲೆ ಎಲ್ಲಾ ಮುಗೀತು. ಅವರ ಮಾತನ್ನು ಗೌರವದಿಂದ ಪಾಲಿಸುತ್ತೇವೆ” ಎಂದು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್‌ ಮತ್ತು ಬಮೂಲ್‌ ಅಧ್ಯಕ್ಷ ಡಿ ಕೆ ಸುರೇಶ್‌ ವ್ಯಂಗ್ಯವಾಗಿ ಮಾತನಾಡುತ್ತಿರುವುದು.

ಯಾಕೆ ಯತೀಂದ್ರ ಸಿದ್ದರಾಮಯ್ಯ ಅವರೇ ಹೆಚ್ಚು ಸಿಎಂ ಬದಲಾವಣೆ ಸುತ್ತ ಹೇಳಿಕೆ ಕೊಡ್ತಿರೋದು? ಇಲ್ಲೇ ಇರೋದು ಅಸಲಿ ಆಟ ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು. ಸಿಎಂ ಬಣದ ನಾಯಕರು ಮಾತನಾಡಿದರೆ ಆ ಕಡೆಯಿಂದ, ಡಿ ಕೆ ಬಣದ ನಾಯಕರು ಶುರು ಹಚ್ಕೋಂತಾರೆ. ಅಲ್ಲಿಗೆ ಮಾತಿನ ಕೆಸರೆರಚಾಟ್ಟಕ್ಕೆ ಅದು ದಾರಿ ಮಾಡಿಕೊಡಬಹುದು.

ಆದರೆ, ಈಗ ಸಿಎಂ ಬಣದ ನಾಯಕರು ಸಿಎಂ ಪುತ್ರ ಯತೀಂದ್ರ ಅವರನ್ನೇ ತಮ್ಮೆಲ್ಲರ ಮೌತ್‌ ಪೀಸ್‌ ಆಗಿ ಮುಂದೆ ಬಿಟ್ಟಿದ್ದಾರೆ. ಇದಕ್ಕೆ ಹೈಕಮಾಂಡ್‌ ಸಮ್ಮತಿ ಸಹ ಇದೆ ಎನ್ನಲಾಗ್ತಿದೆ. ಈ ಕಾರಣಕ್ಕೆ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಅಷ್ಟು ಆಕ್ರೋಶ ಎಲ್ಲೂ ವ್ಯಕ್ತವಾಗಿಲ್ಲ. ಹೈಕಮಾಂಡ್‌ನ ಸಂದೇಶವನ್ನು ಸಹ ಯತೀಂದ್ರ ತಮ್ಮ ಮಾತಿನ ಮೂಲಕ ದಾಟಿಸುತ್ತಿದ್ದಾರೆ ಎನ್ನಲಾಗ್ತಿದೆ.

ಈ ಕಾರಣಕ್ಕೆ ಬಜೆಟ್‌ ಪೂರ್ವಭಾವಿ ಸಭೆಗೂ ಹಾಜರಾಗದೇ ಡಿ ಕೆ ಶಿವಕುಮಾರ್‌ ದೆಹಲಿಗೆ ದೌಡಾಯಿಸಿ ಕೊನೆಗೂ ಭೇಟಿಯಾಗಬೇಕಾದ ನಾಯಕರನ್ನು ಭೇಟಿಯಾಗಿದ್ದಾರೆ. ಯತೀಂದ್ರ ಬಗ್ಗೆ ಸಾಕಷ್ಟು ಆಕ್ರೋಶ ಡಿಕೆ ಸಹೋದರರಿಗೆ ಬಂದಿರಬಹುದು. ಆದರೆ ಅದನ್ನು ಅವರು ಎಲ್ಲೂ ವ್ಯಕ್ತಪಡಿಸಿಲ್ಲ. ಪಕ್ಷಕ್ಕೆ ಮುಜುಗರ ತರುವ ಹಾಗೇ ನಡೆದುಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಸಿದ್ದರಾಮಯ್ಯ ಅವರ ಜೊತೆ ಸಂಬಂಧವನ್ನು ಕೆಡಿಸಿಕೊಳ್ಳಬಾರದು ಎಂಬುದು. ಯತೀಂದ್ರ ವಿರುದ್ಧ ಏನಾದ್ರೂ ಮಾತನಾಡಿದರೆ ಎಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತೆ ಎನ್ನುವ ಆತಂಕ ಸಹ ಡಿಕೆ ಸಹೋದರರಿಗಿದೆ. ಹೀಗಾಗಿ ಜಾಣ ಹೆಜ್ಜೆಗಳನ್ನು ಡಿಕೆ ಬ್ರದರ್ಸ್‌ ಇಡುತ್ತಿದ್ದಾರೆ.

CM-DCM

ಬದಲಾದ ಸಿಎಂ ನಡೆ

ನಾಯಕತ್ವ ಬದಲಾವಣೆ ವಿಚಾರ ಸುತ್ತ ಈವರೆಗಿನ ಡಿಕೆಶಿ ಮತ್ತು ಸಿದ್ದು ನಡುವಿನ ಮಾತಿನ ಸಮರ ಗಮನಿಸಿದರೆ ಡಿಕೆಶಿ ಮಾತಿನಲ್ಲಿ ಅಷ್ಟು ಬದಲಾವಣೆಗಳು ಯಾವತ್ತಿಗೂ ಕಂಡಿಲ್ಲ. ಆದರೆ ಸಿದ್ದರಾಮಯ್ಯ ಮಾತಿನಲ್ಲೇ ಸಾಕಷ್ಟು ಬದಲಾವಣೆಗಳಾಗಿದ್ದಾವೆ. ಹಿಂದೆ ದೆಹಲಿಯಲ್ಲಿ ನಿಂತು ನಾನೇ ಐದು ವರ್ಷ ಸಿಎಂ ಎಂದು ಸಾರಿದ್ದ ಸಿದ್ದರಾಮಯ್ಯ ಬಳಿಕ ಮಾತು ಬದಲಿಸಿ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಅವರ ಈ ದಾಟಿ ಮತ್ತೇನೋ ಧ್ವನಿಸುತ್ತಿದೆ. ಅವರ ಈ ಮಾತಿನಲ್ಲೇ ಅಸಲಿ ಆಟ ಸಹ ನಿಂತಿದೆ.

ಡಿಕೆಶಿ ಮತ್ತು ನನ್ನ ನಡುವೆ ಮಾತುಕಥೆಯೇ ನಡೆದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರೆ, ಅತ್ತ ಡಿಕೆಶಿ ಅವರು ಸಿದ್ದರಾಮಯ್ಯ ಜೊತೆಗೆ ಮಾತುಕಥೆ ನಡೆದಿರುವುದು ನಿಜ ಎನ್ನುತ್ತಿದ್ದಾರೆ. ಸಮಯ ನೋಡಿಕೊಂಡು ಒಂದೊಂದೆ ಮಾತಿನ ಅಸ್ತ್ರಗಳನ್ನು ಡಿಕೆಶಿ ಹೊರಹಾಕುತ್ತಿದ್ದಾರೆ. ಈ ಆಟ ಹೀಗೆ ಮುಂದುವರಿದ್ರೆ ಡಿಕೆಶಿ ಒಂದು ಹೆಜ್ಜೆ ಮುಂದೆ ಹೋಗಿ, ನಮ್ಮ ಮಾತುಕತೆಯಲ್ಲಿ ಪ್ರಿಯಾಂಕ್‌ ಖರ್ಗೆ, ಮಲ್ಲಿಕಾರ್ಜುನ ಖರ್ಗೆ, ಕೆ ಸಿ ವೇಣುಗೋಪಾಲ್‌ ಅಥವಾ ಸುರ್ಜೇವಾಲಾ ಇದ್ದರೂ ಅಂತ ಹೇಳಿಬಿಡಬಹುದೇನೋ?

ಹೈಕಮಾಂಡ್‌ ಆಶೀರ್ವಾದದಿಂದಲೇ ಸಿಎಂ ಆಗಬೇಕು ಎಂಬುದು ಡಿಕೆಶಿ ಅವರ ತಂತ್ರ. ಅವರ ಈವರೆಗಿನ ಮಾತುಗಳ ಅರ್ಥವೂ ಅದನ್ನೇ ಹೇಳುತ್ತಿವೆ. ಆದ್ರೆ ಈ ಇಬ್ಬರು ನಾಯಕರ ಬಗ್ಗೆ ಎಷ್ಟೇ ಅಳೆದು ತೂಗಿ ಮಾತನಾಡಿದ್ರೂ ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಬಿಟ್ಟು ಕಾಂಗ್ರೆಸ್‌ ಪಕ್ಷವನ್ನು ಸದ್ಯಕ್ಕೆ ಊಹಿಸಿಕೊಳ್ಳಲು ಆಗುತ್ತಾ? ಸಾಧ್ಯವೇ ಇಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಅಗೌರವದಿಂದ ನಿರ್ಗಮಿಸುವಂತೆ ಮಾಡಿದರೆ ಅಲ್ಲಿಗೆ ಕಾಂಗ್ರೆಸ್‌ ಕಥೆ ಮುಗೀತು ಅಂತನೇ ಅರ್ಥ!

ಸಿದ್ದರಾಮಯ್ಯ ಅವರ ಶಕ್ತಿ ಏನು ಎಂಬುದನ್ನು ಹೈಕಮಾಂಡ್‌ ಅರ್ಥಮಾಡಿಕೊಂಡೇ ಅವರಿಗೆ ರಡು ಅವಧಗೆ ಸಿಎಂ ಸ್ಥಾನ ನೀಡಿದ್ದು. ಅದರಲ್ಲೂ ರಾಹುಲ್‌ ಗಾಂಧಿ ಅವರು ರಾಷ್ಟ್ರರಾಜಕಾರಣದಲ್ಲಿ ಕಟ್ಟುತ್ತಿರುವ ರಾಜಕೀಯ ನರೇಷನ್‌ ಏನಿದೆ? ಅದು ಅಹಿಂದವೇ ಆಗಿದೆ. ಜನನಾಯಕ ಪರಂಪರಯೆ ಕೊನೆಯ ಕೊಂಡಿಯಂತಿರುವ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅಹಿಂದದ ಮೇರು ನಾಯಕರಾಗಿ ಹೊರಹೊಮ್ಮಿದ್ದಾರೆ. ಸಿದ್ದರಾಮಯ್ಯ ಅವರ ಉಪಸ್ಥಿತಿ ಡಿಕೆಶಿಗಿಂತಲೂ ಹೆಚ್ಚಿದೆ.

ಅಸಮಾಧಾನ ಸ್ಫೋಟಗೊಳ್ಳಬಹುದೇ?

ನಾಯಕತ್ವ ಗೊಂದಲ ವಿಚಾರ ಹೀಗೆ ಮುಂದುವರಿದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಮಹಾ ಬಿರುಕು ಸೃಷ್ಟಿಯಾಗಬಹುದು. ಕಾಂಗ್ರೆಸ್‌ಗೆ ಡಿಕೆಶಿ ಅನಿವಾರ್ಯವೇ? ಅಥವಾ ಸಿದ್ದು ಅನಿವಾರ್ಯವೇ ಎನ್ನುವ ಹಂತಕ್ಕೂ ಈ ಬೆಳವಣಿಗೆ ತಲುಪಬಹುದು. ಪರಿಣಾಮ ಇಬ್ಬರ ನಾಯಕರಲ್ಲೂ ಅಸಮಾಧಾನ ಸ್ಫೋಟಗೊಳ್ಳಬುದು. ಹೈಕಮಾಂಡ್‌ ಇದನ್ನು ಸಹ ಯೋಚಿಸಿರುತ್ತೆ. ಡಿ ಕೆ ಶಿವಕುಮಾರ್‌ ಸ್ಪೋಟ್‌ ಪಕ್ಷಕ್ಕೆ ಕುಕ್ಕರ್‌ ರೀತಿ ಇದ್ದರೆ, ಅದೇ ಸಿದ್ದರಾಮಯ್ಯ ಅವರ ಸ್ಫೋಟ ಸಿಲೆಂಡರ್‌ ರೀತಿ ಇರುತ್ತೆ!

ನೀವೇ ಊಹಿಸಿಕೊಳ್ಳಿ ಅನಾಹುತ ಯಾವುದರಿಂದ ಹೆಚ್ಚು ಅಂತ. ಇಲ್ಲಿಗೆ ಯಾರು ಕಾಂಗ್ರೆಸ್‌ಗೆ ಹೆಚ್ಚು ಮುಖ್ಯ, ಯಾರಿಗೆ ಮಣೆ ಹಾಕಬೇಕು ಎಂಬುದು ಅಂಥ ಅರ್ಥವಾಗುತ್ತೆ.

ಈ ಸೂಕ್ಷ್ಮತೆಯನ್ನು ಡಿ ಕೆ ಶಿವಕುಮಾರ್‌ ಅರ್ಥ ಮಾಡಿಕೊಂಡಿಲ್ವಾ? ಖಂಡಿತ ಅರ್ಥಮಾಡಿಕೊಂಡಿರ್ತಾರೆ. ಆದರೆ ಅವರೊಳಗಿರುವ ಬಂಡ ಧೈರ್ಯ ಮತ್ತು ಇದೇ ಅವಧಿಯಲ್ಲಿ ಸಿಎಂ ಕನಸನ್ನು ಸಾಕಾರಗೊಳಿಸಿಕೊಳ್ಳಲು ಹೆಚ್ಚು ಪ್ರೇರಿಪಿಸುತ್ತಿದೆ. ಹೀಗಾಗಿಯೇ ಅವರು ನಾಯಕತ್ವ ಬದಲಾವಣೆ ವಿಚಾರವನ್ನು ಸದಾ ಜೀವಂತವಾಗಿಟ್ಟಿದ್ದು. ಇದಕ್ಕೆ ಮಾಧ್ಯಮಗಳ ಸಹಕಾರವು ಇದೆ.

ಬರುವ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಬಿಎ ಚುನಾವಣೆ ನಡೆಯಲಿದೆ. ಇದು ಮುಗಿಯುತ್ತಿದ್ದಂತೆ ವಿಧಾನಸಭಾ ಚುನಾವಣೆಗೆ ಮೂಡ ಶಿಫ್ಟ್‌ ಆಗಲಿದೆ. ಹೀಗಾಗಿ ನಾಯಕತ್ವ ಗೊಂದಲಕ್ಕೆ ತೆರೆ ಎಳೆಯುವ ತುರ್ತು ಅನಿವಾರ್ಯತೆ ಈಗ ಹೈಕಮಾಂಡ್‌ ಮುಂದೆ ಸೃಷ್ಟಿಯಾಗಿದೆ. ಬಜೆಟ್‌ ಅಧಿವೇಶನಕ್ಕೂ ಮುನ್ನವೇ ಸಿದ್ದು ಮತ್ತು ಡಿಕೆಶಿಗೆ ಹೈಕಮಾಂಡ್‌ ಬುಲಾವ್‌ ನೀಡಬಹುದು.

ಇನ್ನು, ಕಾಂಗ್ರೆಸ್‌ ಒಳಗಿನ ಸಮೀಕರಣ ಬೇರೆಯೇ ಕಥೆ ಹೇಳುತ್ತಿದೆ. ಡಿಕೆಶಿಗಿಂತ ಹೆಚ್ಚು ಸಿದ್ದರಾಮಯ್ಯ ಕಡೆಯೇ ಕಾಂಗ್ರೆಸ್‌ ಒಳಗಿನ ಸಮೀಕರಣ ವಾಲುತ್ತಿದೆ. ಸಿದ್ದರಾಮಯ್ಯ ಅವರನ್ನೇ ಐದು ವರ್ಷ ಸಿಎಂ ಆಗಿ ಮುಂದುವರಿಸಬೇಕು ಎನ್ನುವ ಒಕ್ಕೊರಲಿನ ಅಭಿಮತವೂ ಪಕ್ಷದೊಳಗೆ ಸಿದ್ದವಾಗಿದೆ. ಅದನ್ನು ಹೈಕಮಾಂಡ್‌ಗೂ ತಲುಪಿಸಬೇಕಾದವರು ತಲುಪಿಸಿದ್ದಾರೆ.

CM-DCM-1

ಸಿಎಂ ಬಣದ ನಾಯಕರಿಗೆ ಡಿಕೆಶಿ ಸಿಎಂ ಆಗುವುದು ಇಷ್ಟವಿಲ್ಲ!

ಸಿಎಂ ಬಣದಲ್ಲಿ ಗುರುತಿಸಿಕೊಂಡ ಕೆಲವು ನಾಯಕರಿಗೆ ಡಿ ಕೆ ಶಿವಕುಮಾರ್‌ ಸಿಎಂ ಆಗುವುದು ಸುತಾರಾಮ್‌ ಇಷ್ಟವಿಲ್ಲ. ಒಂದು ವೇಳೆ ಡಿಕೆಶಿಗೆ ಸಿಎಂ ಸ್ಥಾನ ಸಿಗುತ್ತದೆ ಎಂದ್ರೆ ಮತ್ತೆ ಹೊಸ ಆಟಗಳು ರಂಗದಲ್ಲಿ ತೆರೆದುಕೊಳ್ಳಲಿವೆ. ಈ ಅಪಾಯ ಸಹ ಕಾಂಗ್ರೆಸ್‌ ಹೈಕಮಾಂಡ್‌ ಮುಂದಿದೆ.

ಕಾಂಗ್ರೆಸ್‌ ಒಳಗಿನ ಸಮೀಕರಣದ ಭಾಗವಾಗಿಯೇ ಫಾರಿನ್‌ ಟೂರ್‌ ಎಂಬುದು ದಿಢೀರ್‌ ಆಗಿ ಕಾಣಿಸಿಕೊಂಡಿದೆ. ಒಂದು ವೇಳೆ ಡಿ ಕೆ ಶಿವಕುಮಾರ್‌ಗೆ ಶಾಸಕರ ಬಹುಮತ ಸಾಬೀತು ಪಡಿಸಿ ಎಂದು ಹೈಕಮಾಂಡ್‌ ಹೇಳಿದ್ರೆ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿಯೇ ಸಿಎಂ ತನ್ನ ಬಣದ ಶಾಸಕರಿಗೆ ಟೂರ್‌ ಭಾಗ್ಯ ಕಲ್ಪಿಸಿದ್ದಾರೆ ಎಂದು ನೇರವಾಗಿ ಬಿಜೆಪಿ ರಾಜ್ಯ ಘಟಕದ ನಾಯಕ ಬಿ ವೈ ವಿಜಯೇಂದ್ರ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಆರೋಪಿಸುತ್ತಿರುವುದು.

ಸಿಎಂ ಸ್ಥಾನಕ್ಕೆ ಟವಲ್‌ ಹಾಕಿ ಹಿಂದೆ ಸರಿಯಬಾರದು ಎಂಬ ಧೋರಣೆ ಡಿ ಕೆ ಶಿವಕುಮಾರ್‌ ಮನಸಲ್ಲಿ ಆಳವಾಗಿ ಬೇರೂರಿದೆ. ಆದರೆ ಪರಿಸ್ಥಿತಿ ಅವರ ಪರವಾಗಿದೆಯೇ? ಖಂಡಿತ ಇಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಎಂಬ ಮಹಾ ಗೋಡೆಯನ್ನು ದಾಟಿ ಡಿ ಕೆ ಶಿವಕುಮಾರ್‌ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಅಸಾಧ್ಯ. ಸಿದ್ದರಾಮಯ್ಯ ಅವರೇ ಸ್ವತಃ ಒಪ್ಪಿದರೆ ಮಾತ್ರ ಡಿಕೆಶಿಗೆ ಸಿಎಂ ಭಾಗ್ಯ ಸಿಗಬಹುದು. ಇದಂತು ಸತ್ಯ.

ಸಿದ್ದರಾಮಯ್ಯ ಅವರಂತಹ ನಾಯಕರ ಒಳ ಏಟುಗಳ ನಡುವೆಯೂ ಡಿ ಕೆ ಶಿವಕುಮಾರ್‌ ನಿರೀಕ್ಷೆ ಮೀರಿ ಪಕ್ಷದಲ್ಲಿ ಬೆಳೆದಿದ್ದಾರೆ ಎಂಬುದು ಗಮನಾರ್ಹ. ಈಗಾಗಲೇ ಹೈಕಾಂಡ್‌ ಡಿಕೆಶಿಗೆ ಸಕಲ ಗೌರವ ಕೊಟ್ಟಿದೆ. ಪಕ್ಷದ ಅಧ್ಯಕ್ಷರಾಗಿ ಅವರನ್ನು ಮುಂದುವರಿಸುತ್ತಲೇ ಡಿಸಿಎಂ ಸೇರಿ ಪ್ರಮುಖ ಆದಾಯದ ಖಾತೆಗಳನ್ನು ಸಹ ನೀಡಿದೆ. ಇದು ಡಿ ಕೆ ಶಿವಕುಮಾರ್‌ ಶಕ್ತಿಗೆ ಒಲಿದ ಗೆಲುವು. ಒಕ್ಕಲಿಗರ ಸಮುದಾಯದಲ್ಲೂ ಪ್ರಮುಖ ನಾಯಕರಾಗಿ ಡಿಕೆಶಿ ಈಗ ಗುರುತಿಸಿಕೊಂಡಿದ್ದಾರೆ. ಈಗ ಬಂದಿರುವ ಕೀರ್ತಿ, ಘನತೆಯನ್ನು ಉಳಿಸಿಕೊಳ್ಳುವುದು ಸಹ ಡಿಕೆಶಿ ಮುಂದಿರುವ ಸವಾಲು.

ಹೈಕಮಾಂಡ್‌ ಅಂಗಳದತ್ತವೇ ಈಗ ಎಲ್ಲರ ಚಿತ್ತ ನೆಟ್ಟಿದೆ. ಮೂರು ವರ್ಷ ಪೂರ್ಣಗೊಳಿಸಿ ಸಿದ್ದರಾಮಯ್ಯ ಅವರು 2 ವರ್ಷ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡುತ್ತಾರಾ? ಅಥವಾ ನಾಲ್ಕು ವರ್ಷ ಸಿದ್ದರಾಮಯ್ಯ ಅವರೇ ಇದ್ದು, ಕೊನೆಗೆ ಚುನಾವಣೆ ವರ್ಷದಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬಾ ಎಂದು ಸವಾಲಿನ ರೀತಿ 1 ವರ್ಷ ಸಿಎಂ ಸ್ಥಾನವನ್ನು ಡಿಕೆಶಿ ಹೆಗಲಿಗೆ ಹಾಕುತ್ತಾರಾ ಕಾದು ನೋಡಬೇಕು. ಒಟ್ಟಾರೆ ನಾಯಕತ್ವ ಗೊಂದಲ ಮತ್ತಷ್ಟು ಬಿಗಡಾಯಿಸಿರುವುದು ನೋಡಿದರೆ ಬರುವ ದಿನಗಳಲ್ಲಿ ಇನ್ನೂ ರೋಚಕ ತಿರುವುಗಳನ್ನು ಪಡೆಯುವುದು ಸತ್ಯ.

ಬರೆಹ: ಶರಣು ಚಕ್ರಸಾಲಿ, ಪತ್ರಕರ್ತ
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments