Homeಕರ್ನಾಟಕಹೆಬ್ಬಾಳದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 292 ರಸ್ತೆ ಅಭಿವೃದ್ಧಿ: ಸಚಿವ ಬೈರತಿ ಸುರೇಶ್

ಹೆಬ್ಬಾಳದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 292 ರಸ್ತೆ ಅಭಿವೃದ್ಧಿ: ಸಚಿವ ಬೈರತಿ ಸುರೇಶ್

• ಕಾಮಗಾರಿಗೆ ಚಾಲನೆ ನೀಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್

ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಬಾರಿಗೆ 100 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ 292 ಕ್ಕೂ ಹೆಚ್ಚು ರಸ್ತೆಗಳ ಅಭಿವೃದ್ಧಿ, ಕಾಂಕ್ರಿಟೀಕರಣ, ವಿವಿಧ ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

ಕ್ಷೇತ್ರದ ಶಾಸಕರೂ ಆಗಿರುವ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರು
ಬುಧವಾರ ಕ್ಷೇತ್ರದ ಅಶ್ವಥಕಟ್ಟೆ ರಸ್ತೆ, ಆನಂದಗಿರಿಯ ಎಸ್ಎಸ್ಎ ರಸ್ತೆ, ಸುಬ್ರಮಣ್ಯ ಕಾಲೋನಿಯ 3 ನೇ ಮುಖ್ಯರಸ್ತೆ, ಅಯ್ಯಪ್ಪ ಬಡಾವಣೆಯ ರಸ್ತೆ, ಏಳು ಮಂದಮ್ಮ ದೇವಾಲಯ ಸಮೀಪದ 7 ನೇ ಅಡ್ಡರಸ್ತೆ ಸೇರಿದಂತೆ ವಿವಿಧ ಮುಖ್ಯ ಮತ್ತು ಅಡ್ಡರಸ್ತೆಗಳ ಡಾಂಬರೀಕರಣ, ಕಾಂಕ್ರೀಟ್ ರಸ್ತೆ ನಿರ್ಮಾಣ ಮತ್ತು ಒಳಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೈರತಿ ಸುರೇಶ್, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗಿವೆ. ಕ್ಷೇತ್ರದ ಪ್ರತಿಯೊಬ್ಬ ನಾಗರಿಕರಿಗೂ ಮೂಲಸೌಕರ್ಯಗಳನ್ನು ಕಲ್ಪಿಸುವುದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಬದ್ಧತೆಯಾಗಿದೆ. ಅದರಂತೆ ನಾನು ಪ್ರತಿನಿಧಿಸುತ್ತಿರುವ ಹೆಬ್ಬಾಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

3 ತಿಂಗಳಲ್ಲಿ ಸುಸಜ್ಜಿತ ರಸ್ತೆಗಳು

ಹೆಬ್ಬಾಳವನ್ನು ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ವಿಶೇಷ ಅನುದಾನಗಳನ್ನು ತರಲಾಗುತ್ತಿದ್ದು, ಇದೀಗ ಬರೋಬ್ಬರಿ 100 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕ್ಷೇತ್ರದ 292 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟು 41 ಕಿಲೋಮೀಟರ್ ಉದ್ದದ ಕಾಮಗಾರಿ ಇದಾಗಿದ್ದು, ನಾಗರಿಕರಿಗೆ ಹೆಚ್ಚಿನ ಅನಾನುಕೂಲ ಆಗಬಾರದು ಎಂಬ ದೃಷ್ಟಿಯಿಂದ ಪ್ಯಾಕೇಜ್ ಗಳನ್ನು ಮಾಡಿ ಎಲ್ಲಾ ಕಡೆ ಏಕಕಾಲಕ್ಕೆ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ಕ್ಷೇತ್ರದ ಮುಖ್ಯರಸ್ತೆಗಳು ಉತ್ತಮ ರೀತಿಯಲ್ಲಿದ್ದು, ತುಂಬಾ ಹಳೆಯದಾದ ಮತ್ತು ಹಾಳಾಗಿದ್ದ ರಸ್ತೆಗಳಿಗೆ ಡಾಂಬರೀಕರಣ, ಕಾಂಕ್ರಿಟ್ ರಸ್ತೆಗಳ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಕ್ಷೇತ್ರದ ಜನತೆಗಷ್ಟೇ ಅಲ್ಲ, ಇಲ್ಲಿ ಸಂಚರಿಸುವ ವಾಹನಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ ಎಂದರು.

ಇದರ ಜೊತೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗಳು, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾಮಗಾರಿಗಳನ್ನೂ ಸಹ ಕೈಗೊಳ್ಳಲಾಗಿದೆ. ಮತ್ತೊಂದೆಡೆ, ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ ಹಲವು ಪಾರ್ಕುಗಳ ಅಭಿವೃದ್ಧಿ ಕಾರ್ಯವನ್ನು ಹಂತಹಂತವಾಗಿ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments