ಸಮುದಾಯದ ಹಿತಾಸಕ್ತಿಗಳ ರಕ್ಷಣೆಗಾಗಿ ಸೋಮವಾರ ರಾತ್ರಿ ಕಾಂಗ್ರೆಸ್ ಪಕ್ಷದ ಲಿಂಗಾಯತ ಶಾಸಕರ ಸಭೆ ನಡೆದಿರುವುದು ನಿಜ. ಇದರಲ್ಲಿ ನಾಯಕತ್ವದ ವಿಚಾರವಾಗಲಿ, ವೈಯಕ್ತಿಕ ಅಜೆಂಡಾಗಳಾಗಲಿ ಇರಲಿಲ್ಲ. ಎಲ್ಲಾ ಸಮುದಾಯಗಳ ಶಾಸಕರೂ ಹೀಗೆ ಆಗಿಂದಾಗ್ಗೆ ಸಭೆ ಸೇರುವುದು ಸರ್ವೇಸಾಮಾನ್ಯ ಎಂದು ಲಿಂಗಾಯತ ಸಮುದಾಯದ ಮುಖಂಡರೂ ಆಗಿರುವ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸೌಧದ ಆವರಣದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
ಲಿಂಗಾಯತ ಸಮುದಾಯವು ರಾಜ್ಯದ ಅತ್ಯಂತ ದೊಡ್ಡ ಸಮುದಾಯವಾಗಿದೆ. ಹೋದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 57 ಜನರಿಗೆ ಟಿಕೆಟ್ ಕೊಟ್ಟಿತ್ತು. ಇದರಲ್ಲಿ 34 ಜನ ಗೆದ್ದಿದ್ದಾರೆ. ಮೊನ್ನೆಯ ಸಭೆಗೆ ಇವರಲ್ಲಿ 28 ಜನ ಬಂದಿದ್ದರು. ಸಚಿವರ ಪೈಕಿ ಎಸ್ ಎಸ್ ಮಲ್ಲಿಕಾರ್ಜುನ ಮತ್ತು ಶರಣಬಸಪ್ಪ ದರ್ಶನಾಪುರ ಮಾತ್ರ ಅನಿವಾರ್ಯ ಕಾರಣಗಳಿಂದ ಬಂದಿರಲಿಲ್ಲ. ಉಳಿದ ಎಲ್ಲ ಲಿಂಗಾಯತ ಸಚಿವರೂ ಬಂದಿದ್ದರು ಎಂದು ಅವರು ಉತ್ತರಿಸಿದ್ದಾರೆ.
ನಮ್ಮ ಸಮುದಾಯಕ್ಕೆ ಸರಕಾರದ ನಾನಾ ಹಂತಗಳಲ್ಲಿ ಸಿಗಬೇಕಾದ ನ್ಯಾಯಬದ್ಧ ಪ್ರಾತಿನಿಧ್ಯ ಮುಂತಾದ ವಿಚಾರ ಕುರಿತು ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು. ನಮ್ಮ ಸಮುದಾಯವು ಹೊಂದಿರುವ ಶಾಸಕರ ಸಂಖ್ಯೆಯು ನಮ್ಮ ಸಮುದಾಯ ಎಷ್ಟು ದೊಡ್ದದು ಎನ್ನುವುದನ್ನು ತೋರಿಸುತ್ತದೆ. ಜನಪ್ರತಿನಿಧಿಗಳಾದ ಮೇಲೆ ಸಮುದಾಯದ ಹಿತವನ್ನೂ ನೋಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಕೂಡ ಹೋದ ಚುನಾವಣೆಯಲ್ಲಿ 70 ಲಿಂಗಾಯತರಿಗೆ ಟಿಕೆಟ್ ಕೊಟ್ಟಿತ್ತು. ಆ ಪಕ್ಷದಿಂದಲೂ 17 ಜನ ನಮ್ಮವರು ಶಾಸಕರಾಗಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.


